ನಿವೇಶನ ಹಾಗೂ ಫ್ಲ್ಯಾಟ್‌ ಮಾರಾಟ ಮಾಡಿ ಬರುವ ಹಣಕ್ಕೆ ತೆರಿಗೆ ಇದೆಯೇ?

7
ಪ್ರಶ್ನೋತ್ತರ

ನಿವೇಶನ ಹಾಗೂ ಫ್ಲ್ಯಾಟ್‌ ಮಾರಾಟ ಮಾಡಿ ಬರುವ ಹಣಕ್ಕೆ ತೆರಿಗೆ ಇದೆಯೇ?

Published:
Updated:
Deccan Herald

–ವಿನಯ. ಸಿ. ಗೌಡ, ಮಂಡ್ಯ

ನಾನು ಬ್ಯಾಂಕಿನ ಸಾಮಾನ್ಯ ಉಳಿತಾಯ ಖಾತೆಯಲ್ಲಿ ₹ 2.50 ಲಕ್ಷ ಠೇವಣಿ ಇರಿಸಿದ್ದೇನೆ. ನಾನು ತೆರಿಗೆ ಸಲ್ಲಿಸಬೇಕಾ ಹೇಗೆ. ಈ ಮೊತ್ತ ವಿಂಗಡಿಸಿ ಬೇರೆ, ಬೇರೆ ಬ್ಯಾಂಕಿನಲ್ಲಿ ಇಟ್ಟರೆ ಏನಾದರೂ ಉಪಯೋಗ ಇದೆಯಾ ತಿಳಿಸಿರಿ.

ಉತ್ತರ: ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಅಥವಾ ಅವಧಿ ಠೇವಣಿ ಇರಿಸುವಾಗ ಆದಾಯ ತೆರಿಗೆ ಬರುವುದಿಲ್ಲ. ಇದೇ ವೇಳೆ ಅಲ್ಲಿ ಬರುವ ಬಡ್ಡಿಗೆ ತೆರಿಗೆ ಬರುತ್ತದೆ. ಅಂತಹ ತೆರಿಗೆ ಅವರವರ ವಯಸ್ಸಿಗನುಣವಾಗಿ, ವಾರ್ಷಿಕ ಒಟ್ಟು ಆದಾಯವು ತೆರಿಗೆ ಇಲಾಖೆ ತಿಳಿಸುವ ಮಿತಿಯೊಳಗಿರುವಲ್ಲಿ ಕೂಡಾ ತೆರಿಗೆ ಬರುವುದಿಲ್ಲ.

ತೆರಿಗೆ ಮುರಿಯದಂತೆ 15G-15H ಫಾರಂ ಬ್ಯಾಂಕಿಗೆ ಸಲ್ಲಿಸಬಹುದು. ನಿಮ್ಮ ಪ್ರಶ್ನೆ ಉಳಿತಾಯ ಖಾತೆಗೆ ಸೀಮಿತವಾಗಿದ್ದು, ಈ ಖಾತೆಯಲ್ಲಿ ವಾರ್ಷಿಕ ಬರುವ ಬಡ್ಡಿ ₹ 10,000 ದೊಳಗಿರುವಲ್ಲಿ ಸೆಕ್ಷನ್ 80TTA ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಪಡೆಯಬಹುದು.

ತೆರಿಗೆ ಉಳಿಸುವ ದೃಷ್ಟಿಯಿಂದ ನೀವು ₹ 2.50 ಲಕ್ಷ ವಿಂಗಡಿಸಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ತೆರೆಯಲು ಬರುವುದಿಲ್ಲ. ಎಲ್ಲಾ ಖಾತೆಗಳಲ್ಲಿ ಬರುವ ಬಡ್ಡಿ ಸೇರಿಸಿ ₹ 10,000 ದಾಟಿದಲ್ಲಿ ಆ ಮೊತ್ತಕ್ಕೆ ತೆರಿಗೆ ಕೊಡಬೇಕಾಗುತ್ತದೆ. ಅವಧಿ ಠೇವಣಿಯಲ್ಲಿ ಇರಿಸಿದರೆ ತೆರಿಗೆ ಬರುತ್ತದೆ ಎಂದು ತಿಳಿದು, ದೊಡ್ಡ ಮೊತ್ತವನ್ನು ಉಳಿತಾಯ ಖಾತೆಯಲ್ಲಿ ಜಮಾ ಇರಿಸುವುದು ಜಾಣತನವಲ್ಲ.

ಜೊತೆಗೆ ಈ ಉಳಿತಾಯ ಖಾತೆ ಯಾವಾಗ ಬೇಕಾದರೂ ಹಣ ವಾಪಸ್ ಪಡೆಯಬಹುದಾದ್ದರಿಂದ, ಬಹುಬೇಗ ಖರ್ಚಾಗುವ ಸಂಭವವಿದೆ. ಎಲ್ಲಕ್ಕೂ ಮುಖ್ಯವಾಗಿ ಬಂಧು ಮಿತ್ರರಿಗೆ ತಿಳಿದಲ್ಲಿ ಕೈಗಡ ಪಡೆದು ಮುಂದೆ ಹಿಂತಿರುಗಿಸಲಾಗದೆ, ನೀವು ಅಸಲು ಕಳೆದು ಕೊಳ್ಳುವ ಸಾಧ್ಯತೆ ಇದೆ. ತಕ್ಷಣ ಸ್ವಲ್ಪ ಹಣ ಇಲ್ಲಿ ಇರಿಸಿ. ಉಳಿದ ಹಣ ಅವಧಿ ಠೇವಣಿಗೆ ವರ್ಗಾಯಿಸಿರಿ.

**

–ಅರುಣ, ಶಿಗ್ಗಾಂವ

ಊರಿನಲ್ಲಿ ನನ್ನದೊಂದು ಸಣ್ಣ ವ್ಯಾಪಾರ ಇದೆ. ಎಲ್ಲಾ ಖರ್ಚು ಕಳೆದು ₹ 15,000 ಉಳಿಯಬಹುದು. ನನಗೆ ಒಂದು ವರ್ಷದ ಹೆಣ್ಣು ಮಗು ಇದೆ. ಭವಿಷ್ಯದಲ್ಲಿ ಅವಳಿಗಾಗಿ ಹೇಗೆ ಹಣ ಉಳಿಸಬಹುದು. ಈಗ ನಾನು ನನ್ನ ತಂದೆಯವರ ಸ್ವಂತ ಮನೆಯಲ್ಲಿದ್ದೇನೆ. ಒಂದು ಸ್ವಂತ ನಿವೇಶನ ಇದೆ. ಅಲ್ಲಿ ಮನೆ ಕಟ್ಟಬೇಕೆಂದಿದ್ದೇನೆ. ಯಾವ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಬಹುದು. ಪ್ರಧಾನಮಂತ್ರಿ ಆವಾಜ್ ಯೋಜನೆ ಅಡಿಯಲ್ಲಿ ನನಗೆ ಸಾಲ ಸಿಗಬಹುದೇ. ನನ್ನ ಬಹುದಿನದ ಕನಸು ಮನೆ ಕಟ್ಟುವುದು. ನನ್ನ ವಯಸ್ಸು 33. I.T. Return, GSTN ಕೂಡಾ ಮಾಡಿದ್ದೇನೆ.

ಉತ್ತರ: ನಿಮ್ಮ ಮಗಳ ಸಲುವಾಗಿ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ ₹ 2000 ತುಂಬಿರಿ. ಮಗು ದೊಡ್ಡದಾಗಿ ವಿದ್ಯಾಭ್ಯಾಸ, ಮದುವೆ ಇವೆರಡಕ್ಕೂ ಅನುಕೂಲವಾಗುತ್ತದೆ. ನಿಮ್ಮೊಡನೆ ಸ್ವಂತ ನಿವೇಶನ ಇರುವುದರಿಂದ ಬ್ಯಾಂಕ್‌ನಲ್ಲಿ ಗೃಹಸಾಲ ಪಡೆದು ಮನೆಕಟ್ಟಿಸಬಹುದು. ಆದರೆ, ನೀವು ಬಯಸುವ ಸಾಲದ ಮೊತ್ತ ಮರು ಪಾವತಿಸುವ ಸಾಮರ್ಥ್ಯ ನಿಮ್ಮೊಡನಿರಬೇಕು. ನೀವು I.T. Retun ತುಂಬುತ್ತಿದ್ದು, ನಿಮ್ಮ ಆದಾಯ ಪರಿಗಣಿಸಿ ಬ್ಯಾಂಕಿನಲ್ಲಿ ಸಾಲ ವಿತರಿಸುತ್ತಾರೆ.

ಬಡ್ಡಿ ದರದಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಿದ್ದರೂ ಬಹಳಷ್ಟು ವ್ಯತ್ಯಾಸವಿರುವುದಿಲ್ಲ. ಈ ವಿಚಾರ ನಿಮ್ಮೂರ ಬ್ಯಾಂಕುಗಳಲ್ಲಿ ವಿಚಾರಿಸಿರಿ. ಇನ್ನು ಪ್ರಧಾನ ಮಂತ್ರಿ ಆವಾಜ್ ಯೋಜನೆ ‘PMAY’ ಈ ಯೋಜನೆ ಪಟ್ಟಣದಲ್ಲಿ ವಾಸಿಸುವ ಹಾಗೂ ಕಟ್ಟುವ ಮನೆಗಳಿಗೆ ಮಾತ್ರ ಸೀಮಿತವಾಗಿದ್ದು, ನಿಮ್ಮ ಊರಿಗೆ ಅನ್ವಯವಾಗುದೇ ಎಂದು ನಿಮ್ಮ ಊರಿನ ಬ್ಯಾಂಕುಗಳಲ್ಲಿ ವಿಚಾರಿಸಿ.

**

–ನಾಜಿರಾಬಿ.ಎಸ್, ಹೆರವಟ್ಟಾ (ಕುಮಟಾ ತಾ. ಉ.ಕ.)

ನಾವು ವಾಸವಾಗಿರುವ ಮನೆಗೆ ತಾಗಿ, 5 ಗುಂಟೆ ಶೇತಕಿ ಜಮೀನು ಇದ್ದು ಅದರಲ್ಲಿ ತೆಂಗಿನ ಮರಗಳಿವೆ. ಪ್ರತೀ ತಿಂಗಳೂ ₹ 2000 ಬರುತ್ತದೆ. ಮನೆ ವೆಚ್ಚಕ್ಕೆ ನನ್ನ ಹೆಂಡತಿಯ ನಿವೃತ್ತಿ ವೇತನ ಇದೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಉಳಿತಾಯ ಮಾಡಲು ಇನ್ನೊಂದು ಪ್ರತ್ಯೇಕ ಖಾತೆ ಬೇಕೇ ಅಥವಾ ಈಗ ಇರುವ ಉಳಿತಾಯ ಖಾತೆ ಸಾಕೇ ತಿಳಿಸಿರಿ.

ಉತ್ತರ: ನೀವು ಪ್ರತೀ ತಿಂಗಳೂ ಪಡೆಯುವ ತೆಂಗಿನ ಕೃಷಿ ಆದಾಯವನ್ನು ಬ್ಯಾಂಕಿನಲ್ಲಿ ಉಳಿತಾಯವಾಗಿಡಲು, ಬೇರೊಂದು ಖಾತೆ ತೆರೆಯುವ ಅವಶ್ಯವಿಲ್ಲ. ಜೊತೆಗೆ ಕೃಷಿ ಆದಾಯಕ್ಕೆ ಸೆಕ್ಷನ್ 10 (1) ಆಧಾರದ ಮೇಲೆ ತೆರಿಗೆಯೂ ಇಲ್ಲ. ನಿಮ್ಮ ಉಳಿತಾಯ ಖಾತೆ ಇರುವ ಬ್ಯಾಂಕಿನಲ್ಲಿ ಜಮಾ ಮಾಡುತ್ತಾ ಬನ್ನಿ.

ನಿಮಗೊಂದು ಸಲಹೆ– ನೀವು ₹ 2000 ಉಳಿಸಬಹುದಾದರೆ, ಈ ಹಣ ಉಳಿತಾಯ ಖಾತೆಯಲ್ಲಿ ಇರಿಸುವ ಬದಲಾಗಿ ಅದೇ ಬ್ಯಾಂಕಿನಲ್ಲಿ ₹ 2000 ಆರ್.ಡಿ. ಮಾಡಿರಿ. ಅವಧಿ 5 ವರ್ಷಗಳಾಗಿರಲಿ. ಇಲ್ಲಿ ಕಡ್ಡಾಯವಾಗಿ ಹಣ ಉಳಿಯುತ್ತದೆ. ಜೊತೆಗೆ ಹೆಚ್ಚಿನ ಬಡ್ಡಿ ಕೂಡಾ ಬರುತ್ತದೆ. ನಿಮ್ಮ ಉಳಿತಾಯದ ಕನಸು ನನಸಾಗುತ್ತದೆ. ತಕ್ಷಣ ಆರ್.ಡಿ. ಮಾಡಿರಿ.

**

–ಪ್ರವೀಣ್ ಆರಾಧ್ಯ, ಬೆಂಗಳೂರು

ತಂದೆ ಕೆಎಸ್ಆರ್ಟಿಸಿ ನಿವೃತ್ತ ನೌಕರರು. ಅವರು Post office savings certificate Deposit ನಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇಟ್ಟಿದ್ದಾರೆ. ಅವರ ಗೆಳೆಯರು, ಇಲ್ಲಿ ಠೇವಣಿ ಇರಿಸುವುದಕ್ಕಿಂತ ಸಹಕಾರ ಸೊಸೈಟಿಯಲ್ಲಿ ಇಡಿ, ಅಲ್ಲಿ ಹೆಚ್ಚಿನ ಬಡ್ಡಿ ಬರುತ್ತದೆ ಎನ್ನುತ್ತಾರೆ. ನಾವು ಹೀಗೆ  ಮಾಡಲು ಧೈರ್ಯವಾಗುತ್ತಿಲ್ಲ. ನಿಮ್ಮ ಅಭಿಪ್ರಾಯ ತಿಳಿಸಿರಿ.

ಉತ್ತರ: ಕರ್ನಾಟಕದಲ್ಲಿ ಬಹಳಷ್ಟು ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕುಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದು, ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ಹಾಗೂ ಹೆಚ್ಚಿನ ಬಡ್ಡಿ ಕೊಡುತ್ತಿವೆ. ಈ ಮಾತನ್ನು ಯಾವುದಾದರೂ ಒಂದು ಸಹಕಾರ ಸಂಘ ಅಥವಾ ನಿರ್ದಿಷ್ಟ ಸೊಸೈಟಿಗೆ ಅನ್ವಯಿಲು ಬರುವುದಿಲ್ಲ. ನಿಮ್ಮ ತಂದೆಯವರ ಗೆಳೆಯರು ಹೇಳಿದ ಮಾರ್ಗ ಸದ್ಯದ ವಿಚಾರದಲ್ಲಿ ಸತ್ಯಕ್ಕೆ ದೂರವಲ್ಲ. ಹಣ ಇಡುವಾಗ ಅಂತಹ ಸಂಘದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ.

**

–ಕೆ. ವಿಜಯ್, ಬೆಂಗಳೂರು

ನನಗೆ ಎರಡು ಗೃಹ ಸಾಲಗಳಿವೆ. ಎರಡನೇ ಸಾಲಕ್ಕೆ ತೆರಿಗೆ ವಿನಾಯ್ತಿ ಇದೆಯೇ. ಬಡ್ಡಿ ಹಾಗೂ ಅಸಲು ಇವುಗಳ ತೆರಿಗೆ ವಿಚಾರದಲ್ಲಿ ತಿಳಿಸಿರಿ. ನಿವೇಶನ ಹಾಗೂ ಫ್ಲ್ಯಾಟ್‌ ಮಾರಾಟ ಮಾಡಿ ಬರುವ ಹಣಕ್ಕೆ ತೆರಿಗೆ ಇದೆಯೇ. ಬಂಗಾರ ಮಾರಾಟ ಮಾಡಿ ಉಳಿತಾಯ ಖಾತೆಯಲ್ಲಿ ಇಟ್ಟಿದ್ದಕ್ಕೆ ತೆರಿಗೆ ಇದೆಯೇ?.

ಉತ್ತರ: ಓರ್ವ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಗೃಹ ಸಾಲ ಇರುವಲ್ಲಿ ಸೆಕ್ಷನ್ 80ಸಿ ಅಡಿಯಲ್ಲಿ ಗರಿಷ್ಠ  ₹ 1.50 ಲಕ್ಷ, ಸೆಕ್ಷನ್ 24 (B) ಆಧಾರದ ಮೇಲೆ ₹ 2ಲಕ್ಷ ತೆರಿಗೆ ವಿನಾಯ್ತಿ ಪಡೆಯಬಹುದು. ಬೇರೆ ಬೇರೆ ಸಾಲಗಳಿದ್ದರೂ ಗರಿಷ್ಠ ಮಿತಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಬಹುದು. ನಿವೇಶನ–ಫ್ಲ್ಯಾಟ್ ಮಾರಾಟ ಮಾಡಿ ಬಂದ ಲಾಭಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಬರುತ್ತದೆ.

ವೈಯಕ್ತಿಕ ಬಳಕೆಗೆ ಚಿನ್ನವನ್ನು ಬಳಿಯಲ್ಲಿ ಇಟ್ಟುಕೊಳ್ಳುವುದು ಕೂಡ ಸಂಪತ್ತು ಎಂದೇ ಪರಿಗಣಿಸಲಾಗುತ್ತದೆ.  ಈ ಕಾರಣಕ್ಕೆ ಬಂಗಾರ ಮಾರಾಟ ಮಾಡಿ ಬರುವ ಲಾಭಕ್ಕೂ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಬರುತ್ತದೆ. ನಿಮ್ಮ ಹೂಡಿಕೆ ಮುಖ್ಯವಾಗಿ ಸ್ಥಿರ ಆಸ್ತಿಯಲ್ಲಿದ್ದು, ಇದೊಂದು ಉತ್ತಮ ಹೂಡಿಕೆಯಾಗಿದೆ. ತೆರಿಗೆ ಉಳಿಸಲು ನಿಮ್ಮ ಹೂಡಿಕೆಗೆ ಸಂಬಂಧಿಸಿದಂತೆ ಈ ಉತ್ತರದಲ್ಲಿ ವಿವರಿಸಿದ ವಿಚಾರ ಬಿಟ್ಟು ಬೇರಾವ ಮಾರ್ಗಗಳು ಕಾಣುತ್ತಿಲ್ಲ.

**

–ಜಯರಾಮೇಗೌಡ, ಹೊಳೆನರಸೀಪುರ

ನಾನು ಸಣ್ಣ ಭೂ ಹಿಡುವಳಿದಾರ. ನನ್ನ ವಾರ್ಷಿಕ ಆದಾಯ ₹ 50,000. ನನ್ನ ಮಕ್ಕಳು ಇಬ್ಬರೂ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಮಾಸಿಕ ಕ್ರಮವಾಗಿ ₹ 20,000 ಉಳಿತಾಯ ಮಾಡುತ್ತಾರೆ. ನನ್ನ ಹಾಗೂ ನನ್ನ ಮಕ್ಕಳ ಉಳಿತಾಯದಿಂದ ಕೆ.ಆರ್. ನಗರದಲ್ಲಿ 40X50 ನಿವೇಶನ ಕೊಂಡಿದ್ದೇನೆ. ಮನೆ ನಿರ್ಮಾಣಕ್ಕೆ ₹ 30 ಲಕ್ಷ ಸಾಲ ಬೇಕಾಗಿದೆ. ಸಾಲ ಪಡೆಯುವ ಅರ್ಹತೆ, ಮರುಪಾವತಿ, ವಿಚಾರದಲ್ಲಿ ನಮಗೆ ಮಾರ್ಗದರ್ಶನ ಮಾಡಿರಿ.

ಉತ್ತರ: ನಿವೇಶನ ಯಾರ ಹೆಸರಿನಲ್ಲಿ ಇದೆ ಎನ್ನುವುದು ಮುಖ್ಯವಾಗುತ್ತದೆ. ನಿವೇಶನ ಇರುವವರ ಹೆಸರಿನಲ್ಲಿ ಗೃಹ ಸಾಲ ಪಡೆದು, ಉಳಿದವರು ಸಾಲಕ್ಕೆ ಜಾಮೀನು ಅಥವಾ ಸಹ ಸಾಲಗಾರ ಆಗಬಹುದು. ಇಂತಹ ಸಂದರ್ಭದಲ್ಲಿ, ಗೃಹ ಸಾಲದ ಮೇಲಿನ ಕಂತು ಬಡ್ಡಿಯಲ್ಲಿ ದೊರೆಯುವ ವಿನಾಯ್ತಿ ಕೂಡಾ ಸಾಲ ಪಡೆದವರಿಗೆ ಮಾತ್ರ ಸೀಮಿತವಾಗಿರುತ್ತದೆ.

₹ 30 ಲಕ್ಷ ಸಾಲ ಪಡೆಯುವವರು ತಾವು ಸಂಬಳ ‍ಪಡೆಯುವ ಬ್ಯಾಂಕಿನ ಮುಖಾಂತರ ಪಡೆಯಬಹುದು. ಗರಿಷ್ಠ 30 ವರ್ಷಗಳ ಕಂತು (360 ತಿಂಗಳು) ಹಣ ಮರುಪಾವತಿಸಲು ದೊರೆಯುತ್ತದೆ.

ಮಾಸಿಕ ಸಮಾನ ಕಂತು  ₹ 25,000 ಆಸುಪಾಸಿನಲ್ಲಿ ಇರಲಿದೆ. ನಿಮ್ಮ ವಯಸ್ಸಿಗನುಗುಣವಾಗಿ ನಿಮಗೆ ಸಾಲ ದೊರೆಯುವುದಿಲ್ಲ. ನಿವೇಶನ ನಿಮ್ಮ ಹೆಸರಿನಲ್ಲಿದ್ದರೆ, ಮಕ್ಕಳು ಸಹ ಸಾಲಗಾರರು ಎನ್ನುವುದರ ಆಧಾರದ ಮೇಲೆ ಬ್ಯಾಂಕ್‌ನಿಂದ ಸಾಲ ಪಡೆಯಬಹುದು.

**

–ಫಾಲಾಕ್ಷ. ಕೆ.ಟಿ., ಹಾಸನ

ನಾನು ನನ್ನ ಹೆಂಡತಿ ಈರ್ವರೂ ಶಿಕ್ಷಕರು. ಇಬ್ಬರಿಂದಲೂ  ಪ್ರತಿ ತಿಂಗಳೂ ₹ 20,000 ಉಳಿಸಬಹುದು. ನಮಗೆ ಪಿಂಚಣಿ ಸೌಲತ್ತು ಇರುವುದಿಲ್ಲ. ನಾವೀರ್ವರು ₹ 4,000 ಪ್ರತೀ ತಿಂಗಳು ವಿಮೆಗೆ ತುಂಬುತ್ತೇವೆ. ನಮಗೆ ಒಬ್ಬ ಹೆಣ್ಣು ಮಗಳು. ನಾವು ಹಾಸನದಲ್ಲಿ ನಿವೇಶನ ಕೊಳ್ಳಲು ಹಾಗೂ ಮಗಳ ಭವಿಷ್ಯಕ್ಕೆ ಮಾರ್ಗದರ್ಶನ ಮಾಡಿ.

ಉತ್ತರ: ಸ್ಥಿರ ಆಸ್ತಿ ಹೂಡಿಕೆಗೆ ಮಿಗಿಲಾದ ಹೂಡಿಕೆ ಇಲ್ಲ. ಹಾಸನದಲ್ಲಿ ನಿವೇಶನ ಕೊಳ್ಳಲು ನೀವು ಇಬ್ಬರೂ ಸಂಬಳ ಪಡೆಯುವ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಹಾಕಿರಿ. ಕಂತು ಮತ್ತು ಬಡ್ಡಿ ತಿಂಗಳಿಗೆ ₹ 20,000 ತುಂಬುವುದಾಗಿ ತಿಳಿಸಿರಿ. ಇದು ನಿಮಗೆ ಸಾಧ್ಯ. ಪ್ರಾರಂಭದಿಂದಲೇ ಉತ್ತಮ ಹೂಡಿಕೆ ಮಾಡಬೇಕು.

ಸ್ಥಿರ ಆಸ್ತಿ ಬೆಲೆ ಏರುತ್ತಿರುವುದರಿಂದ ಮುಂದೆ ಸಾಧ್ಯವಾಗಲಾರದು. ನಿಮ್ಮ ಚಿಕ್ಕ ಮಗಳ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ ₹ 1,000 ತೊಡಗಿಸಿರಿ. ನಿಮಗೊಂದು ಕಿವಿ ಮಾತು. ನಿವೇಶನ ಕೊಳ್ಳುವುದು ತಡವಾದಲ್ಲಿ ನೀವು ನಿಮ್ಮ ಹೆಂಡತಿ ಕ್ರಮವಾಗಿ ₹ 10,000ಗಳನ್ನು ಸಂಬಳ ಪಡೆಯುವ ಬ್ಯಾಂಕಿನಲ್ಲಿ ಆರ್.ಡಿ. ಮಾಡಿರಿ. ಮಗಳ ನಾಮ ನಿರ್ದೇಶನ ಮಾಡಿರಿ.

**

–ಅಗಸ್ತ್ಯ, ಚನ್ನಪಟ್ಟಣ

ನಾನು ನಿಮ್ಮ ಅಭಿಮಾನಿ. ನಿಮ್ಮ ಸಲಹೆ ನಮ್ಮಂತಹ ಯುವಕರಿಗೆ ದಾರಿ ದೀಪವಾಗಿರುತ್ತದೆ. ನಿಮಗೆ ಧನ್ಯವಾದಗಳು. ನನ್ನ ಪ್ರಶ್ನೆ– ನನ್ನ ಒಟ್ಟು ವೇತನ ₹ 36,000. ಕಡಿತ: KGID ₹ 2950, NPS ₹ 3227, LIC  485 ಇತರೆ ಕಡಿತ ₹ 640. ಕೈಗೆ ₹ 28,500 ಸಿಗುತ್ತದೆ. ನನಗೆ ₹ 1 ಲಕ್ಷ ಪಾಲಿಸಿ ಇದೆ. ಮನೆ ಖರ್ಚು ₹ 10,000. ಮನೆಯಲ್ಲಿ ಅಪ್ಪ, ಅಮ್ಮ, ತಮ್ಮ ಇದ್ದಾರೆ. ನನ್ನ ತಂದೆ ಹೆಸರಿನಲ್ಲಿ ಹಂಚಿನ ಹಳೆ ಮನೆ ಇಲ್ಲಿಂದ 5 ಕಿ.ಮೀ. ದೂರದಲ್ಲಿದೆ. ನನ್ನ ಮುಂದಿನ ಉಳಿತಾಯ ಹಾಗೂ ಮನೆ ನಿರ್ಮಾಣದ ಬಗ್ಗೆ ಸಲಹೆ ನೀಡಿರಿ. ನಾನು SBI Mutual Fundನಲ್ಲಿ ₹ 1000, SIP ಮಾಡುವ ಬಗ್ಗೆ ಸಲಹೆ ನೀಡಿರಿ.

ಉತ್ತರ: ನಿಮ್ಮ ಸಂಬಳ–ಕಡಿತ ನೋಡುವಾಗ ನೀವು ₹ 25,000 ತನಕ ಉಳಿತಾಯ ಮಾಡಬಹುದು. ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ಎಂದಿಗೂ ಮಾರಾಟ ಮಾಡಬೇಡಿ. 5 ಕಿ.ಮೀ. ಚನ್ನಪಟ್ಟಣದಿಂದ ಇದ್ದರೂ ಕಾಲಕ್ರಮೇಣ ಚನ್ನಪಟ್ಟಣಕ್ಕೆ ಸೇರುತ್ತದೆ. ನೀವು ಅವಿವಾಹಿತರು. ಒಂಡೆರೆಡು ವರ್ಷಗಳಲ್ಲಿ ಮದುವೆಯಾಗುವ ಸಾಧ್ಯತೆ ಇದೆ. ನೀವು ಉಳಿಸಬಹುದಾದ ₹ 25,000 ವಿಂಗಡಿಸಿ ₹ 10,000ದ ಒಂದು ವರ್ಷದ ಆರ್.ಡಿ. ಮಾಡಿ. ಅಲ್ಲಿ ಬರುವ ಹಣದಿಂದ ಬಂಗಾರಕೊಳ್ಳಿರಿ. ಉಳಿದ ₹ 15,000,ಒಂದು ವರ್ಷದ ಆರ್.ಡಿ. ಮಾಡಿ ಮದುವೆ ಖರ್ಚಿಗೆ ಇಟ್ಟುಕೊಳ್ಳಿ.

ನಿಮಗೆ ಕಂಕಣಬಲ ಕೂಡಿ ಬಂದು ಜೀವನ ಪ್ರಾರಂಭಿಸಿ. ಮುಂದೆ ಸಾಧ್ಯವಾದರೆ ಸಾಲ ಮಾಡಿಯಾದರೂ ಕನಿಷ್ಠ 30X40 ನಿವೇಶನ ಕೊಂಡುಕೊಳ್ಳಿ. ಇನ್ನೂ ಏನಾದರೂ ಹಣ ಉಳಿಸಲು ಸಾಧ್ಯವಾದರೆ ಆ ಮೊತ್ತವನ್ನು ದೀರ್ಘಾವಧಿ ಆರ್.ಡಿ. ಮಾಡಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ. ನೀವು SIPನಲ್ಲಿ ₹ 1,000 ತೊಡಗಿಸಿರಿ. ಇಲ್ಲಿ ಲಾಭ ಬಂದರೆ ಇನ್ನೊಂದು ವರ್ಷ ಮುಂದುವರೆಸಿರಿ.

**

–ನವೀನ ಗೌಡ, ಬೆಂಗಳೂರು

ಸ್ನೇಹಿತರೊಬ್ಬರು 2017 ಏಪ್ರಿಲ್‌ನಲ್ಲಿ  ಷೇರು ಮಾರಾಟದಿಂದ ₹ 17,06,912 ಆದಾಯ ಪಡೆದಿದ್ದಾರೆ. ಈ ಷೇರುಕೊಂಡು 12 ತಿಂಗಳು ಮುಗಿದಿದ್ದವು. ಇದಕ್ಕೆ ತೆರಿಗೆ ಇದೆಯೇ.

ಉತ್ತರ: ದೀರ್ಘಾವಧಿ ಬಂಡವಾಳದ ಗಳಿಕೆ ಮೇಲಿನ ತೆರಿಗೆ ಒಳಗೊಂಡು 2018–19ನೇ ಸಾಲಿನ ಬಜೆಟ್ಟಿನಲ್ಲಿ ಪ್ರಸ್ತಾಪಿಸಿದ ವಿಚಾರಗಳು ಏಪ್ರಿಲ್ 1, 2018 ರಿಂದಲೇ ಜಾರಿಗೆ ಬಂದಿದೆ. ಏಪ್ರಿಲ್ ಒಂದರಿಂದ ಖರೀದಿಸಿದ ಒಂದು ವರ್ಷದ ನಂತರ ಮಾರಾಟ ಮಾಡುವ ಷೇರುಗಳಿಂದ ಬರುವ ಲಾಭ ₹ 1 ಲಕ್ಷಕ್ಕೂ ಹೆಚ್ಚಿಗೆ ಇದ್ದರೆ, ಶೇ 10 ತೆರಿಗೆ ಸಲ್ಲಿಸಬೇಕು. ನಿಮ್ಮ ಗೆಳೆಯ ಈ ಅವಧಿಗೆ ಮುನ್ನವೇ ಮಾರಾಟ ಮಾಡಿ ಲಾಭ ಗಳಿಸಿರುವುದರಿಂದ ಹಿಂದಿನ ಕಾನೂನಿನಂತೆ, ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ, ಸಂಪೂರ್ಣ ವಿನಾಯಿತಿ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !