ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 31 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ರಾಮಚಂದ್ರಪ್ಪ. ಆರ್. ಬೆಂಗಳೂರು

ನಾನು ಷೇರು ಮಾರುಕಟ್ಟೆಯಲ್ಲಿ ₹ 5 ಲಕ್ಷ ತೊಡಗಿಲು ನಿರ್ಧರಿಸಿದ್ದೇನೆ. ಉಳಿದ ಎಲ್ಲಾ ಹೂಡಿಕೆಗಳಿಗಿಂತ ಇಲ್ಲಿ ಹಣ ತೊಡಗಿಸುವುದು ತುಂಬಾ ಲಾಭದಾಯಕ ಎಂದು ಕೇಳಿದ್ದೇನೆ. ನಾನು ವೃತ್ತಿಯಲ್ಲಿ ಸರ್ಕಾರಿ ನೌಕರ. ನಾನು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಸರ್ಕಾರದ ಪರವಾನಿಗೆ ಅಗತ್ಯವೇ.

ಉತ್ತರ: ನೀವು ಸರ್ಕಾರಿ ನೌಕರರಾಗಿದ್ದು, ಷೇರುಮಾರುಕಟ್ಟೆಯಲ್ಲಿ ಹಣ ಹೂಡಲು ಸರ್ಕಾರದಿಂದಾಗಲಿ, ಕಾನೂನಿನಿಂದಾಗಲಿ ಯಾವ ತೊಡಕು ಇರುವುದಿಲ್ಲ. ಷೇರುಮಾರುಕಟ್ಟೆ ವ್ಯವಹಾರ ಮಾಡಲು ಡಿಮ್ಯಾಟ್ ಅಕೌಂಟ್ ತೆರೆಯಬೇಕು. ನೀವು KYC Norm ಪ್ರಕಾರ ಅಗತ್ಯ ದಾಖಲೆಗಳನ್ನು ಷೇರು ಬ್ರೋಕರ್‌ಗೆ ಕೊಟ್ಟರೆ, ಅವರು ನಿಮ್ಮ ಬ್ಯಾಂಕ್‌ ಖಾತೆಗೆ Link ಮಾಡಿ ಡಿಮ್ಯಾಟ್ ಖಾತೆ ತೆರೆಯುತ್ತಾರೆ. ಬೆಂಗಳೂರಿನಲ್ಲಿ ಬಹಳಷ್ಟು ಷೇರ್ ಬ್ರೋಕರ್ಸ್ ಇರುವುದರಿಂದ ನಿಮಗೆ ತೊಂದರೆ ಆಗಲಾರದು. ನೀವೇ ನಿಮ್ಮ ಖಾತೆಯಲ್ಲಿ ಡಿಮ್ಯಾಟ್‌ ಖಾತೆ ಆರಂಭಿಸಬಹುದು. ಈ ವಹಿವಾಟಿನಲ್ಲಿ ನಿಮಗೆ ಏನೂ ಅನುಭವವಿಲ್ಲ ಎಂದು ತಿಳಿಸಿದ್ದೀರಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದರಿಂದ, ವ್ಯಕ್ತಿಯು ಕೊಂಡ ಷೇರು ಕೆಲವು ದಿವಸಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಆಗಬಹುದು. ಇದರಿಂದ ಹೂಡಿಕೆದಾರರಿಗೆ ಲಾಭವಾಗುತ್ತದೆ. ಇದೇ ವೇಳೆ, ಕೊಂಡ ಷೇರಿನ ಬೆಲೆ ಇಳಿಮುಖವಾದಲ್ಲಿ, ಹೂಡಿದ ಹಣದ ಒಂದು ಭಾಗ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಲಾಭ–ನಷ್ಟ ಸಹಿಸಲು ಸಾಧ್ಯವಾಗುವವರು ಮಾತ್ರ ಈ ವ್ಯವಸ್ಥೆಯಲ್ಲಿ ಹಣ ಹೂಡುವುದು ಸೂಕ್ತ.

ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ (NSC Nifty) 50 ಅಧಿಕೃತ ಕಂಪನಿಗಳಿವೆ. ಈ ವರ್ಷ ‘ನಿಫ್ಟಿ’ ಹೆಚ್ಚಳಕ್ಕೆ ಎಚ್‌ಡಿಎಫ್‌ಸಿ, ರಿಲಯನ್ಸ್‌, ಐಸಿಐಸಿಐ ಬ್ಯಾಂಕ್‌, ಟಿಸಿಎಸ್‌, ಇನ್ಫೊಸಿಸ್‌ ಮತ್ತು ಕೋಟಕ್‌ ಬ್ಯಾಂಕ್‌ಗಳ ಕೊಡುಗೆ ಗಮನಾರ್ಹವಾಗಿದೆ. ಉಳಿದ 44 ಕಂಪನಿಗಳಲ್ಲಿ ಹೂಡಿದ ಷೇರಿನ ಬೆಲೆ ಮೇಲಕ್ಕೆ ಏರದಿರುವುದು ಕಂಡು ಬಂದಿದೆ. ಈ ಒಂದು ಉದಾಹರಣೆ ಆಧಾರದ ಮೇಲೆ ಮೇಲಕ್ಕೆ ಜಿಗಿದ ಈ ಆರು ಕಂಪನಿಗಳ ಷೇರನ್ನೇ ಕೊಳ್ಳಬಹುದಲ್ಲಾ ಎಂತ ಯೋಚಿಸಿದರೆ, ಈಗಾಗಲೇ ಬೆಲೆ ಗಗನಕ್ಕೇರಿದ್ದು, ಇದೇ ರೀತಿ ಮುಂದೆ ಕೂಡಾ ಹೆಚ್ಚಿಗೆ ಲಾಭ ಬರಬಹುದು ಎಂದು ಯಾರಿಂದಲೂ ತಿಳಿಸಲು ಸಾಧ್ಯವಿಲ್ಲ. ನೀವು ಒಮ್ಮೆ ₹ 5 ಲಕ್ಷ ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ಹೂಡುವ ಬದಲಾಗಿ ಸದ್ಯಕ್ಕೆ ₹ 1 ಲಕ್ಷ ಹೂಡಿರಿ. ಅನುಭವದಿಂದ ಹೆಚ್ಚಿನ ವ್ಯವಹಾರ ಮಾಡಿರಿ.

****

ಹೆಸರು ಬೇಡ, ಕಾರವಾರ

ಮನೆಯನ್ನು₹ 80 ಲಕ್ಷಕ್ಕೆ ಮಾರಾಟ ಮಾಡಲು ನಿರ್ಧರಿಸಿದ್ದೇನೆ. ಈ ಹಣದಿಂದ₹ 40 ಲಕ್ಷಕ್ಕೆ ಇನ್ನೊಂದು ಮನೆಯನ್ನು ಕೊಳ್ಳಬೇಕೆಂದಿದ್ದೇನೆ ಹಾಗೂ₹ 15 ಲಕ್ಷ ಸಾಲ ತೀರಿಸಬೇಕಾಗಿದೆ. ಉಳಿದ ಹಣ ಹೆಂಡತಿ ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಬಹುದೇ ತಿಳಿಸಿರಿ.

ಉತ್ತರ: ನೀವು₹ 80 ಲಕ್ಷ ಮನೆ ಮಾರಾಟದಿಂದ ಬರುವ ಹಣ ಪಡೆದರೆ, ನೀವು ಬಯಸಿದಂತೆ₹ 40 ಲಕ್ಷದ ಇನ್ನೊಂದು ಮನೆ ಕೊಂಡರೆ ಈ₹ 40 ಲಕ್ಷ, ಮನೆ ಮೊದಲು ಖರೀದಿಸುವಾಗ ಕೊಟ್ಟ ಹಣ, ನೋಂದಣಿ ಖರ್ಚು ಹಾಗೂ ಕೊಂಡ ವರ್ಷದಿಂದ ಇಲ್ಲಿಯವರೆಗಿನ Cost Of Inflation Index ಲೆಕ್ಕ ಹಾಕಿ ಬರುವ ಮೊತ್ತವನ್ನು ₹ 80 ಲಕ್ಷದಲ್ಲಿ ಕಳೆದು ಉಳಿದ ಹಣಕ್ಕೆ ಮಾತ್ರ ಶೇ 20ರಷ್ಟು ಕ್ಯಾಪಿಟಲ್‌ಗೇನ್ ಟ್ಯಾಕ್ಸ್ ತುಂಬಬೇಕಾಗುತ್ತದೆ. ಇದೇ ವೇಳೆ ಉಳಿದ ಹಣ NHIA ಅಥವಾ REC ಬಾಂಡ್‌ಗಳಲ್ಲಿ ತೊಡಗಿಸಿ ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಬಹುದು. ಇಲ್ಲಿ ವಾರ್ಷಿಕ ಶೇ 5.75ರಷ್ಟು ಬಡ್ಡಿ ಬರುತ್ತದೆ. ಈ ಠೇವಣಿ 5 ವರ್ಷಗಳ ಕಾಲ ಹಿಂದೆ ಪಡೆಯುವಂತಿಲ್ಲ. ನಿಮ್ಮ ₹ 15 ಲಕ್ಷವನ್ನು ಮನೆ ಮಾರಿ ಬಂದಿರುವ ಲಾಭದಲ್ಲಿ ಕಳೆದು ತೆರಿಗೆ ಉಳಿಸುವಂತಿಲ್ಲ. ಕ್ಯಾಪಿಟಲ್‌ಗೇನ್ ಬಾಂಡ್‌ನಲ್ಲಿ ಹಣ ಇರಿಸಿ ತೆರಿಗೆ ಉಳಿಸಬಹುದು. ಸಾಧ್ಯವಾಗದಿದ್ದರೆ ಶೇ 20ರಷ್ಟು ತೆರಿಗೆ ಕೊಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT