ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸ್ತ್ರಿ: ಎನ್‌ಸಿಎಲ್‌ಎಟಿ ಆದೇಶ ರದ್ದುಪಡಿಸಲು ರತನ್‌ ಮನವಿ

ಸುಪ್ರೀಂಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಕೆ
Last Updated 4 ಜನವರಿ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಪದಚ್ಯುತ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅವರನ್ನು ಮರು ನೇಮಕ ಮಾಡಿಕೊಳ್ಳಬೇಕೆಂಬ ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಆದೇಶ ರದ್ದುಪಡಿಸಲು ಕೋರಿ ರತನ್‌ ಟಾಟಾ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮಂಡಳಿ ಆದೇಶವು ದೋಷಪೂರಿತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಾಭಾಸಗಳಿಂದ ಕೂಡಿದೆ ಎಂದು ಟಾಟಾ ಸನ್ಸ್‌ನ ವಿಶ್ರಾಂತ ಅಧ್ಯಕ್ಷರಾಗಿರುವ ರತನ್‌ ಟಾಟಾ ಅವರು ಕೋರ್ಟ್‌ಗೆ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯಲ್ಲಿ ತಿಳಿಸಿದ್ದಾರೆ.

ನ್ಯಾಯಮಂಡಳಿಯು ಟಾಟಾ ಸನ್ಸ್‌ ಎರಡು ಪ್ರತ್ಯೇಕ ಸಮೂಹಗಳ ಕಂಪನಿಯೆಂದು ತಪ್ಪಾಗಿ ಪರಿಗಣಿಸಿದೆ. ವೃತ್ತಿಪರತೆ ಸಾಮರ್ಥ್ಯ ಪರಿಗಣಿಸಿ ಸೈರಸ್‌ ಮಿಸ್ತ್ರಿ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತೆ ಹೊರತು, ಶಪೂರ್ಜಿ ಪಲ್ಲೊಂಜಿ ಗ್ರೂಪ್‌ನ ಪ್ರತಿನಿಧಿಯನ್ನಾಗಿ ಅಲ್ಲ ಎಂದು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ಶಪೂರ್ಜಿ ಪಲ್ಲೊಂಜಿ ಸಮೂಹವು ಟಾಟಾ ಸನ್ಸ್‌ನಲ್ಲಿ ಶೇ 18.4ರಷ್ಟು ಪಾಲು ಬಂಡವಾಳ ಹೊಂದಿದೆ.

ಶಪೂರ್ಜಿ ಪಲ್ಲೊಂಜಿ ಸಮೂಹಕ್ಕೆ ಸೇರಿದವರು ಸಂಪ್ರದಾಯದಂತೆ ಟಾಟಾ ಸನ್ಸ್‌ನ ನಿರ್ದೇಶಕರಾಗುತ್ತಾರೆ ಎಂದು ನ್ಯಾಯಮಂಡಳಿಯು ತ‍ಪ್ಪು ಸಲಹೆ ನೀಡಿದೆ. ಇದು ನಿಜವಲ್ಲ. ಟಾಟಾ ಸನ್ಸ್‌ನ ನಿಯಮಗಳಿಗೆ ಇದು ವಿರುದ್ಧವಾಗಿದೆ.

‘ಸೈರಸ್‌ ಅವರು ಟಾಟಾ ಸನ್ಸ್‌ನ ಅಧ್ಯಕ್ಷರಾಗುತ್ತಿದ್ದಂತೆ ಕಾಲಮಿತಿಯೊಳಗೆ ತಮ್ಮ ಕುಟುಂಬದ ವಹಿವಾಟಿನಿಂದ ದೂರ ಸರಿಯಲಿಲ್ಲ. ಕುಟುಂಬದ ವಹಿವಾಟಿನಿಂದ ದೂರ ಇರಬೇಕು ಎನ್ನುವುದು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಷರತ್ತುಗಳಲ್ಲಿ ಸೇರ್ಪಡೆಗೊಂಡಿತ್ತು’ ಎಂದು ರತನ್‌ ಅವರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಕಾಯ್ದಿರಿಸಿದ ಆದೇಶ: ಟಾಟಾ ಸನ್ಸ್‌ನ ಸ್ಥಾನಮಾನವನ್ನು ಸಾರ್ವಜನಿಕ ಕಂಪನಿಯಿಂದ ಖಾಸಗಿ ಕಂಪನಿಯಾಗಿ ಪರಿವರ್ತನೆಗೊಳ್ಳಲು ಅನುಮತಿ ನೀಡುವಲ್ಲಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಕಂಪನಿ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಸೈರಸ್‌ ಮಿಸ್ತ್ರಿ ಅವರನ್ನು ಮರುನೇಮಕ ಮಾಡಬೇಕೆಂಬ ತನ್ನ ಆದೇಶದಲ್ಲಿ ಕಂಪನಿ ರಿಜಿಸ್ಟ್ರಾರ್‌ (ಆರ್‌ಒಸಿ) ತಳೆದ ನಿಲುವನ್ನು ಮೇಲ್ಮನವಿ ನ್ಯಾಯಮಂಡಳಿಯು ಟೀಕಿಸಿತ್ತು. ಟಾಟಾ ಸನ್ಸ್‌ ಅನ್ನು ಖಾಸಗಿ ಕಂಪನಿ ಎಂದು ಬದಲಿಸಲು ಆರ್‌ಒಸಿ ಅನುಮತಿ ನೀಡಿರುವುದನ್ನು ರದ್ದುಪಡಿಸಿತ್ತು. ಈ ಆದೇಶ ಮಾರ್ಪಾಡು ಮಾಡಬೇಕೆಂದು ಆರ್‌ಒಸಿ ಮನವಿ ಮಾಡಿಕೊಂಡಿತ್ತು. ಅಹವಾಲು ಆಲಿಸಿರುವ ನ್ಯಾಯಮಂಡಳಿಯು ಈಗ ತನ್ನ ಆದೇಶವನ್ನು ಕಾಯ್ದಿರಿಸಿದೆ.

*65.89 %: ಟಾಟಾ ಸನ್ಸ್‌ನಲ್ಲಿನ ರತನ್‌ ಟಾಟಾ ಅವರ ಪಾಲು

* 18.4: ಶಪೂರ್ಜಿ ಪಲ್ಲೊಂಜಿ ಸಮೂಹದ ಪಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT