ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಡಿಜಿಟಲ್‌ ಪಾವತಿ: ಜಾಗೃತಿ ಮೂಡಿಸಲು ಆರ್‌ಬಿಐ ನಿರ್ದೇಶನ

Last Updated 22 ಜೂನ್ 2020, 17:24 IST
ಅಕ್ಷರ ಗಾತ್ರ

ಮುಂಬೈ: ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸುರಕ್ಷಿತವಾಗಿ ಡಿಜಿಟಲ್ ಪಾವತಿ ಮಾಡುವ ಬಗ್ಗೆ ಗ್ರಾಹಕರಿಗೆ ತಿಳವಳಿಕೆ ನೀಡುವಂತೆ ಪಾವತಿ ಸೇವೆಗಳನ್ನು ನಿರ್ವಹಿಸುತ್ತಿರುವ ಕಂಪನಿಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ.

ಎಸ್‌ಎಂಎಸ್‌ ಮತ್ತು ಜಾಹೀರಾತುಗಳ ಮೂಲಕ ಬಹುಭಾಷೆಗಳಲ್ಲಿ ಬಳಕೆದಾರರಲ್ಲಿ ತಿಳವಳಿಕೆ ನೀಡುವಂತೆ ಹೇಳಿದೆ.

ಡಿಜಿಟಲ್‌ ಪಾವತಿಗೆ ಸಂಬಂಧಿಸಿದಂತೆ ಪಿನ್‌, ಒಟಿಪಿ ಮತ್ತು ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಇರುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕ್ರಮಗಳು ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಆರ್‌ಬಿಐ ತಿಳಿಸಿದೆ.

ಎಷ್ಟೇ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದರೂ, ಎಸ್ಎಂಎಸ್‌ ಮತ್ತು ಇ–ಮೇಲ್‌ಗಳಿಗೆ ಬರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಜನರು ವಂಚನೆಗೆ ಒಳಗಾಗುವುದು ಹೆಚ್ಚುತ್ತಲೇ ಇದೆ. ಕೆಲವು ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವ ಮೂಲಕ ಮೊಬೈಲ್‌ನಲ್ಲಿ ಇರುವ ವೈಯಕ್ತಿಕ ಮಾಹಿತಿಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಈ ಕಾರಣಗಳಿಗಾಗಿ, ಬ್ಯಾಂಕ್‌ಗಳು, ಬ್ಯಾಂಕೇತರ ಸಂಸ್ಥೆಗಳು, ಪಾವತಿ ಸೇವೆಗಳನ್ನು ಒದಗಿಸುತ್ತಿರುವ ಕಂಪನಿಗಳು ಡಿಜಿಟಲ್‌ ಸುರಕ್ಷತೆಯ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಮಾಡುವ ಅಗತ್ಯವಿದೆ ಎಂದು ಹೇಳಿದೆ.

ಸಾರ್ವಜನಿಕವಾಗಿ ಲಭ್ಯವಿರುವ ಉಚಿತ ವೈಫೈ ಅಥವಾ ಇನ್ಯಾವುದೇ ರೀತಿಯ ಅಂತರ್ಜಾಲ ಸಂಪರ್ಕದಲ್ಲಿ ಹಣಕಾಸು ವರ್ಗಾವಣೆ ನಡೆಸದಂತೆ ಹಾಗೂ ಮೊಬೈಲ್‌, ಇ–ಮೇಲ್‌, ಇ– ವಾಲೆಟ್‌ಗಳಲ್ಲಿ ಬ್ಯಾಂಕಿಂಗ್‌ ವಹಿವಾಟಿಗೆ ಸಂಬಂಧಿಸಿದ ಮಾಹಿತಿಗಳನ್ನು ಇಡದಂತೆ ಎಚ್ಚರಿಕೆ ನೀಡಿದೆ.

ಬ್ಯಾಂಕ್‌ಗಳು ಮತ್ತು ಬೇರಾವುದೇ ಪಾವತಿ ಸೌಲಭ್ಯ ನೀಡುತ್ತಿರುವ ಕಂಪನಿಗಳು ಪಿನ್‌, ಒಟಿಪಿ ಮತ್ತು ಡೆಬಿಟ್‌ ಕಾರ್ಡ್‌ಗಳ ಸಿವಿವಿ ಸಂಖ್ಯೆಯನ್ನು ಕೇಳುವುದಿಲ್ಲ ಎನ್ನುವುದನ್ನು ಗ್ರಾಹಕರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT