ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಆಡಳಿತ ಸ್ವರೂಪ ಪರಾಮರ್ಶೆಗೆ ನಿರ್ಧಾರ

ಶಕ್ತಿಕಾಂತ್‌ ದಾಸ್‌ಗೆ ದೊರೆತ ಸಮಯಾವಕಾಶ
Last Updated 14 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆಡಳಿತಾತ್ಮಕ ಸ್ವರೂಪ ಬದಲಿಸುವ ವಿಷಯವನ್ನು ಇನ್ನಷ್ಟು ವಿವರವಾಗಿ ಪರಾಮರ್ಶಿಸಲು ಶುಕ್ರವಾರ ಇಲ್ಲಿ ನಡೆದ ಕೇಂದ್ರೀಯ ಮಂಡಳಿ ಸಭೆಯು ನಿರ್ಧರಿಸಿದೆ.

ಹೊಸ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅಧ್ಯಕ್ಷತೆಯಲ್ಲಿ ಇದೇ ಮೊದಲ ಬಾರಿಗೆ ನಡೆದ ಸಭೆಯು ಈ ಮಹತ್ವದ ತೀರ್ಮಾನಕ್ಕೆ ಬಂದಿದೆ.

ಕೇಂದ್ರೀಯ ಬ್ಯಾಂಕ್‌ನ ಕಾರ್ಯನಿರ್ವಹಣೆಯಲ್ಲಿ ತನ್ನ ಮಾತಿಗೆ ಮನ್ನಣೆ ಸಿಗಬೇಕು ಎನ್ನುವ ಕೇಂದ್ರ ಸರ್ಕಾರದ ಹಕ್ಕೊತ್ತಾಯ ಪರಿಶೀಲಿಸಲು ಇದರಿಂದ ಮಂಡಳಿಗೆ ಇನ್ನಷ್ಟು ಸಮಯಾವಕಾಶ ಸಿಕ್ಕಿದಂತಾಗಿದೆ. ಸದ್ಯಕ್ಕೆ ಯಥಾಸ್ಥಿತಿ ಮುಂದುವರೆದಿರುವುದರಿಂದ ಆರ್‌ಬಿಐನ ಸ್ವಾಯತ್ತತೆಗೆ ಬೆದರಿಕೆ ಇಲ್ಲ ಎನ್ನುವ ಸಂದೇಶವೂ ರವಾನೆಯಾಗಿದೆ.

ನಾಲ್ಕು ಗಂಟೆಯವರೆಗೆ ನಡೆದ ಸಭೆಯಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜಾಗತಿಕ ಮತ್ತು ಸ್ಥಳೀಯ ಸವಾಲುಗಳು, ನಗದು ಕೊರತೆ, ಸಾಲ ಮಂಜೂರಾತಿ, ಕರೆನ್ಸಿ ನಿರ್ವಹಣೆ ಮತ್ತು ಹಣಕಾಸು ಸಾಕ್ಷರತೆ ವಿಷಯಗಳು ಚರ್ಚೆಗೆ ಬಂದವು ಎಂದು ಬ್ಯಾಂಕ್‌ ತಿಳಿಸಿದೆ.

18 ಸದಸ್ಯರ ನಿರ್ದೇಶಕ ಮಂಡ
ಳಿಯು, ದೇಶಿ ಬ್ಯಾಂಕಿಂಗ್‌ ವಲಯದ 2017–18ನೆ ಸಾಲಿನ ಪ್ರಗತಿಯ ಕರಡು ವರದಿಯನ್ನೂ ಚರ್ಚಿಸಿತು.

ಅಸ್ತಿತ್ವಕ್ಕೆ ಬರದ ಪರಿಣತರ ಸಮಿತಿ: ನವೆಂಬರ್‌ 19ರಂದು ನಡೆದಿದ್ದ ಸಭೆ 10ಗಂಟೆಗಳ ಕಾಲ ಸುದೀರ್ಘವಾಗಿ ನಡೆದಿತ್ತು. ಕೇಂದ್ರೀಯ ಬ್ಯಾಂಕ್‌ನ ಮೀಸಲು ನಿಧಿಯ ಪ್ರಮಾಣವನ್ನು ಹೊಸದಾಗಿ ನಿಗದಿಪಡಿಸಿ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸುವ ಕುರಿತು ಹೊಸ ನಿಯಮಾವಳಿ ರೂಪಿಸಲು ಪರಿಣತರ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಸಂಬಂಧ ಅಧಿಕೃತವಾಗಿ ಯಾವುದೇ ಪ್ರಗತಿಯಾಗಿಲ್ಲ. 6 ಮಂದಿ ಸದಸ್ಯರ ಸಮಿತಿಯ ಅಧ್ಯಕ್ಷರು ಯಾರಾಗಬೇಕು ಎನ್ನುವುದರ ಕುರಿತು ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಇದುವರೆಗೂ ಒಮ್ಮತಾಭಿಪ್ರಾಯ ಕಂಡು ಬಂದಿಲ್ಲ.

ಆರ್‌ಬಿಐ ಮೀಸಲು ನಿಧಿಯಲ್ಲಿ ಈ ವರ್ಷದ ಜೂನ್‌ ತಿಂಗಳ ಹೊತ್ತಿಗೆ ಇದ್ದ ₹ 9.43 ಲಕ್ಷ ಕೋಟಿಯಲ್ಲಿನ ಹೆಚ್ಚುವರಿ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ವರ್ಗಾಯಿಸಬೇಕು ಎನ್ನುವ ಬೇಡಿಕೆಯು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಉರ್ಜಿತ್‌ ಪಟೇಲ್‌ ಅವರು ಹಠಾತ್ತಾಗಿ ಗವರ್ನರ್‌ ಹುದ್ದೆ ತೊರೆಯಲು ಇದೂ ಒಂದು ಕಾರಣವಾಗಿದೆ.

ಸರ್ಕಾರಿ ಸ್ವಾಮ್ಯದ 11 ಬ್ಯಾಂಕ್‌ಗಳಿಗೆ ವಿಧಿಸಿರುವ ಕಠಿಣ ಸ್ವರೂಪದ ನಿರ್ಬಂಧ ಕ್ರಮಗಳನ್ನು ಸಡಿಲುಗೊಳಿಸಲೂ ಹಿಂದಿನ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಆರ್‌ಬಿಐ ನಿರ್ದೇಶಕ ಮಂಡಳಿಗೆ ಸರ್ಕಾರ ನಾಮ ನಿರ್ದೇಶನ ಮಾಡಿರುವ ಕೆಲ ನಿರ್ದೇಶಕರು, ಕೇಂದ್ರೀಯ ಬ್ಯಾಂಕ್‌ನ ಆಡಳಿತ ನಿರ್ವಹಣೆಯ ಹೊಣೆಗಾರಿಕೆಯು ಕೇಂದ್ರೀಯ ಮಂಡಳಿಯ ಬಳಿಯಲ್ಲಿಯೇ ಇರಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಆರ್‌ಬಿಐನ ಆಡಳಿತ ನಿರ್ವಹಣೆ
ಯನ್ನು ಕೇಂದ್ರೀಯ ಮಂಡಳಿಯೇ ನಿರ್ವಹಿಸಬೇಕು ಎಂದು ಸಂಘ ಪರಿ
ವಾರದ ಆರ್ಥಿಕ ಸಿದ್ಧಾಂತ ಪ್ರತಿಪಾದಿ
ಸುವ ಚಿಂತಕ ಎಸ್‌. ಗುರುಮೂರ್ತಿ ಮತ್ತು ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಅವರು ಪ್ರತಿಪಾದಿಸುತ್ತಿದ್ದಾರೆ.

ಆರ್‌ಬಿಐ ಗವರ್ನರ್‌ ಮತ್ತು ನಾಲ್ವರು ಡೆಪ್ಯುಟಿ ಗವರ್ನರ್‌ಗಳು ನಿರ್ದೇಶಕ ಮಂಡಳಿಯನ್ನು ಕತ್ತಲಲ್ಲಿಟ್ಟು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಕಲ್ಲಿದ್ದಲು ಸಚಿವ ಪೀಯೂಷ್‌ ಗೋಯೆಲ್‌ ಅವರೂ ಟೀಕಿಸಿದ್ದಾರೆ.

ಒಂದು ವೇಳೆ, ತನ್ನ ನಿರ್ದೇಶನದಂತೆಯೇ ಆರ್‌ಬಿಐ ನಡೆದುಕೊಳ್ಳಬೇಕು ಎಂದು ನಿರ್ದೇಶಕ ಮಂಡಳಿಯು ಬಹುಮತದ ತೀರ್ಮಾನಕ್ಕೆ ಬಂದರೆ, ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆಗೆ ತೀವ್ರ ಹೊಡೆದ ಬೀಳಲಿದೆ ಎಂದು ಅನೇಕ ಆರ್ಥಿಕ ತಜ್ಞರು ಪ್ರತಿಪಾದಿ
ಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT