ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿದರ ಬದಲಿಸದ ಆರ್‌ಬಿಐ

ಹಣದುಬ್ಬರದ ಮೇಲೆ ಆಹಾರ ವಸ್ತುಗಳ ದರ ಏರಿಕೆಯ ಪರಿಣಾಮ ಸಾಧ್ಯತೆ: ದಾಸ್‌
Published 8 ಡಿಸೆಂಬರ್ 2023, 16:13 IST
Last Updated 8 ಡಿಸೆಂಬರ್ 2023, 16:13 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ತಜ್ಞರು, ಮಾರುಕಟ್ಟೆಯ ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಐದನೇ ಬಾರಿಯೂ ಯಥಾಸ್ಥಿತಿ ಕಾಯ್ದುಕೊಂಡಿದೆ.

‘ಹಣದುಬ್ಬರವನ್ನು ನಿಯಂತ್ರಿಸುವುದೇ ಆದ್ಯತೆ. ಕೆಲವು ತಿಂಗಳುಗಳ ಉತ್ತಮ ಅಂಕಿ–ಅಂಶಗಳಿಂದ ತೃಪ್ತಿಪಟ್ಟುಕೊಳ್ಳಲು ಆಗುವುದಿಲ್ಲ’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಈ ಮೂಲಕ ಬಡ್ಡಿದರ ಕಡಿತ ಮಾಡದೇ ಇರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ‌ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸದಸ್ಯರು ರೆಪೊ ದರವನ್ನು ಶೇ 6.5ರಲ್ಲಿಯೇ ಉಳಿಸಿಕೊಳ್ಳಲು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಣದುಬ್ಬರವನ್ನು ಶೇ 4ರಲ್ಲಿ ಕಾಯ್ದುಕೊಳ್ಳುವ ಮೂಲಕ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದೇ ಮೂಲ ಉದ್ದೇಶ ಎಂದು ಹೇಳಿದ್ದಾರೆ. ‘ನಮ್ಮ ನಿರ್ಧಾರಗಳು ಪ್ರಮುಖವಾಗಿ ಹಣದುಬ್ಬರ ಮತ್ತು ಆರ್ಥಿಕ ಪ್ರಗತಿಯ ಮೇಲೆ ಅವಲಂಬಿತವಾಗಿರುತ್ತವೆ. ಸದ್ಯದ ಮಟ್ಟಿಗೆ ಹಣದುಬ್ಬರ ನಿಯಂತ್ರಕ್ಕೆ ಆದ್ಯತೆ ನೀಡಿದ್ದು, ಶೇ 4ರ ಮಟ್ಟಕ್ಕೆ ತಲುಪಲು ಇನ್ನೂ ಸಾಕಷ್ಟು ದೂರ ಸಾಗಬೇಕಿದೆ’ ಎಂದಿದ್ದಾರೆ.

ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ 2022ರ ಮೇ ತಿಂಗಳಿನಿಂದ 2023ರ ಫೆಬ್ರುವರಿ ವರೆಗೆ ಬಡ್ಡಿದರವನ್ನು ಒಟ್ಟು ಶೇ 2.50ರಷ್ಟು ಹೆಚ್ಚಳ ಮಾಡಿದೆ.

ಹಣದುಬ್ಬರವು ಇಳಿಮುಖವಾಗಿ ಇದೆಯಾದರೂ ಅಲ್ಪಾವಧಿಯಲ್ಲಿ ಆಹಾರ ವಸ್ತುಗಳ ದರ ಏರಿಕೆಯು ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಲು ಕಾರಣ ಆಗುವ ಸಾಧ್ಯತೆ ಇದೆ. ಇದನ್ನು ಗಮನಿಸಬೇಕಿದೆ ಎಂದು ದಾಸ್‌ ತಿಳಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ದರ ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಬಡ್ಡಿದರ ಕಡಿತ ಮಾಡಿದ್ದರೆ ದೇಶದ ರಿಯಲ್‌ ಎಸ್ಟೇಟ್ ಮತ್ತು ಒಟ್ಟಾರೆ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನ ಆಗುತ್ತಿತ್ತು
ಬೊಮನ್ ಇರಾನಿ ಕ್ರೆಡಾಯ್ ಅಧ್ಯಕ್ಷ

‘ಶೇ 7ರಷ್ಟು ಬೆಳೆಯಲಿದೆ ಜಿಡಿಪಿ’:

ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಆರ್‌ಬಿಐ ಶೇ 0.5ರಷ್ಟು ಹೆಚ್ಚಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ಈ ಹಿಂದಿನ ಸಭೆಯಲ್ಲಿ ಜಿಡಿಪಿ ಶೇ 6.5ರಷ್ಟು ಆಗುವ ಅಂದಾಜನ್ನು ಮಾಡಿತ್ತು. ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿಯು ನಿರೀಕ್ಷೆಯನ್ನೂ ಮೀರಿ ಶೇ 7.6ರಷ್ಟು ಬೆಳವಣಿಗೆ ಕಂಡಿದೆ. ಹೀಗಾಗಿ ಆರ್‌ಬಿಐ ಈ ಪರಿಷ್ಕರಣೆ ಮಾಡಿದೆ. ಜಿಡಿಪಿ ಬೆಳವಣಿಗೆಯು ಚೇತರಿಸಿಕೊಂಡಿದ್ದು ಎಲ್ಲರನ್ನು ಬೆರಗಾಗಿಸಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

4 ತಿಂಗಳ ಬಳಿಕ ಗರಿಷ್ಠ ಮಟ್ಟಕ್ಕೇರಿದ ಮೀಸಲು ಸಂಗ್ರಹ:

ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ನಾಲ್ಕು ತಿಂಗಳ ಬಳಿಕ 600 ಬಿಲಿಯನ್‌ ಡಾಲರ್‌ (₹50.05 ಲಕ್ಷ ಕೋಟಿ) ಗಡಿಯನ್ನು ದಾಟಿತು. ಡಿಸೆಂಬರ್ 1ರ ಅಂತ್ಯಕ್ಕೆ ₹50.38 ಲಕ್ಷ ಕೋಟಿಗೆ ತಲುಪಿದೆ. ಮೀಸಲು ಸಂಗ್ರಹವು ಈ ಹಿಂದೆ ಆಗಸ್ಟ್‌ 11ರಂದು 600 ಬಿಲಿಯನ್ ಡಾಲರ್ ಗಡಿ ದಾಟಿತ್ತು. ಮೀಸಲು ಸಂಗ್ರಹವು 604 ಬಿಲಿಯನ್ ಡಾಲರ್‌ ತಲುಪಿದೆ. ಬಾಹ್ಯ ಹಣಕಾಸು ಅಗತ್ಯಗಳನ್ನು ನಿರಾತಂಕವಾಗಿ ಈಡೇರಿಸಿಕೊಳ್ಳುವ ವಿಶ್ವಾಸ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT