ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಬಿಎಫ್‌ಸಿ’ಗೆ ನೆರವು: ಆರ್‌ಬಿಐ ನಿರ್ಧಾರಕ್ಕೆ ಅಸೋಚಾಂ ಶ್ಲಾಘನೆ

ಆರ್‌ಬಿಐ ನಿರ್ಧಾರಕ್ಕೆ ‘ಅಸೋಚಾಂ’ ಶ್ಲಾಘನೆ
Last Updated 21 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸಾಲ ನೀಡಿಕೆ ಪ್ರಮಾಣ ಹೆಚ್ಚಿಸುವ ಬ್ಯಾಂಕ್‌ಗಳಿಗೆ ಉತ್ತೇಜನ ನೀಡುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ಧಾರವನ್ನು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು (ಅಸೋಚಾಂ) ಶ್ಲಾಘಿಸಿದೆ.

ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡಿರುವ ಅನುಮತಿಯಿಂದ, ಡಿಸೆಂಬರ್‌ ತಿಂಗಳಾಂತ್ಯದವರೆಗೆ ‘ಎನ್‌ಬಿಎಫ್‌ಸಿ’ಗಳಿಗೆ ₹ 50 ಸಾವಿರ ಕೋಟಿಗಳಿಂದ ₹ 60 ಸಾವಿರ ಕೋಟಿಗಳವರೆಗೆ ಹೆಚ್ಚುವರಿ ಸಾಲ ಸೌಲಭ್ಯ ದೊರೆಯಲಿದೆ. ಇದರಿಂದ ಹಣಕಾಸು ಮಾರುಕಟ್ಟೆಯಲ್ಲಿ ಉದ್ಭವಿಸಿರುವ ನಗದುತನದ ಸಮಸ್ಯೆ ದೂರವಾಗಲಿದೆ.

ಅತಿದೊಡ್ಡ ‘ಎನ್‌ಬಿಎಫ್‌ಸಿ’ ಸಾಲದ ಸುಳಿಗೆ ಸಿಲುಕಿದ್ದರಿಂದ ಬಂಡವಾಳ ಪೇಟೆಯಲ್ಲಿ ಉಂಟಾಗಿದ್ದ ನಗದುತನದ ಕೊರತೆಯ ಬಿಕ್ಕಟ್ಟು ದೂರವಾಗಲಿದೆ. ಸಂಪತ್ತು ಮತ್ತು ಸಾಲದ ಅಸಮತೋಲನದ ಸಮಸ್ಯೆಯು, ದೀರ್ಘಾವಧಿಗೆ ಸಾಲ ನೀಡುವ ಗೃಹ ಹಣಕಾಸು ಮತ್ತು ಮೂಲ ಸೌಕರ್ಯ ಯೋಜನೆಗಳಿಗೆ ನೆರವು ನೀಡುವ ‘ಎನ್‌ಬಿಎಫ್‌ಸಿ’ಗೆ ಮಾತ್ರ ಹೆಚ್ಚು ಅನ್ವಯವಾಗುತ್ತದೆ ಎಂದು ‘ಅಸೋಚಾಂ’ ವಿಶ್ಲೇಷಿಸಿದೆ.

2 ರಿಂದ 5 ವರ್ಷಗಳ ಅವಧಿಯ ಅಲ್ಪಾವಧಿ ಮತ್ತು ಸ‌ಣ್ಣ ಪ್ರಮಾಣದ ಸಾಲ ನೀಡಿಕೆ ಪ್ರಕರಣಗಳಲ್ಲಿ ಸಂಪತ್ತು ಮತ್ತು ಸಾಲದ ಅಸಮತೋಲನವು ದೊಡ್ಡ ಸಮಸ್ಯೆಯಾಗುವುದಿಲ್ಲ.

ಇತ್ತೀಚಿನ ಕೆಲ ವರ್ಷಗಳಲ್ಲಿ ‘ಎನ್‌ಬಿಎಫ್‌ಸಿ’ಗಳು ಗಮನಾರ್ಹ ಪ್ರಗತಿ ದಾಖಲಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಣ್ಣ ಮತ್ತು ಮಧ್ಯಮ ಗಾತ್ರದ ‘ಎನ್‌ಬಿಎಫ್‌ಸಿ’ಗಳ ಭವಿಷ್ಯದ ಪ್ರಗತಿಗೆ ಪ್ರತ್ಯೇಕ ಮರು ಹಣಕಾಸು ಸೌಲಭ್ಯ ಒದಗಿಸುವ ಅಗತ್ಯ ಹೆಚ್ಚಿಗೆ ಇದೆ’ ಎಂದೂ ‘ಅಸೋಚಾಂ’ ಹೇಳಿದೆ.

ಹೆಚ್ಚಿನ ನಿರೀಕ್ಷೆ ಸಲ್ಲ: ‘ಎನ್‌ಬಿಎಫ್‌ಸಿ’ ಗಳಿಗೆ ಬಂಡವಾಳದ ಹರಿವು ಹೆಚ್ಚಿಸಿದ ಆರ್‌ಬಿಐ ನಿರ್ಧಾರ ತಡವಾಗಿ ಪ್ರಕಟವಾಗಿದ್ದು, ಅದರಿಂದ ಹೆಚ್ಚಿನದನ್ನೇನೂ ನಿರೀಕ್ಷಿಸುವಂತಿಲ್ಲ’ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಗೃಹ ಮತ್ತು ವಾಹನ ಖರೀದಿಗೆ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನ ದೊರೆಯುವುದಿಲ್ಲ. ಕಿರು ಹಣಕಾಸು ಸಾಲ ಮತ್ತು ಗೃಹೋಪಯೋಗಿ ಸಲಕರಣೆ ಖರೀದಿಸಲು ಸಾಲ ನೀಡುವ ಸಂಸ್ಥೆಗಳಿಗೆ ಮಾತ್ರ ಲಾಭದಾಯಕವಾಗಿರಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್ ಆ್ಯಂಡ್‌ ಫೈನಾನ್ಸಿಯಲ್‌ ಸರ್ವಿಸಸ್‌ ಸಾಲ ಮರುಪಾವತಿಸದ ಬಿಕ್ಕಟ್ಟಿಗೆ ಸಿಲುಕಿದ್ದರಿಂದ ‘ಎನ್‌ಬಿಎಫ್‌ಸಿ’ಗಳ ಷೇರುಗಳ ಬೆಲೆ ತೀವ್ರವಾಗಿ ಕುಸಿತ ಕಂಡಿದ್ದವು. ಇದರಿಂದ ಷೇರುಪೇಟೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT