ಶನಿವಾರ, ಜನವರಿ 18, 2020
26 °C

ಹಣಕಾಸು ಸೇವೆ ‘ರಿಯಲ್‌ಮಿ ಪೈಸಾ’ಗೆ ಚಾಲನೆ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ನಾಲ್ಕನೇ ಅತಿದೊಡ್ಡ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿರುವ ರಿಯಲ್‌ಮಿ, ಈಗ ಹಣಕಾಸು ಸೇವಾ ವಲಯ ಪ್ರವೇಶಿಸಿದ್ದು, ಉಳಿತಾಯ, ಸಾಲ, ಪಾವತಿ ಮತ್ತು ಮ್ಯೂಚುವಲ್‌ ಫಂಡ್‌ ಸೇವೆಗಳನ್ನು ಒಂದೆಡೆಯೇ ಒದಗಿಸುವ ಸೇವೆಗೆ ಚಾಲನೆ ನೀಡಿದೆ.

ಸ್ಮಾರ್ಟ್‌ಫೋನ್‌ನಲ್ಲಿಯೇ ಸಮಗ್ರ ಸ್ವರೂಪದ ಹಣಕಾಸು ಸೇವೆ ಒದಗಿಸುವ ಮೊದಲ ಮೊಬೈಲ್‌ ಕಂಪನಿ ಇದಾಗಿದೆ. ಹಣಕಾಸು ಸೇವೆಗಳನ್ನು ಒದಗಿಸುವ ಉದ್ದೇಶದಿಂದ (realme PaySa) ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ. ಸದ್ಯಕ್ಕೆ ಪ್ರಾಯೋಗಿಕ ಹಂತದಲ್ಲಿ ಇರುವ ಈ ಸೇವೆಯು ಕೆಲ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.

 ‘ಹದಿನೆಂಟು ತಿಂಗಳಲ್ಲಿ ಸ್ಮಾರ್ಟ್‌ಫೋನ್‌ ಗ್ರಾಹಕರ ಮನಗೆದ್ದಿರುವ ಕಂಪನಿಯು ಈಗ ಹಣಕಾಸು ಸೇವೆಗಳನ್ನು ಪಡೆಯಲು ಗ್ರಾಹಕರು ಎದುರಿಸುವ ಅಡೆತಡೆಗಳನ್ನೆಲ್ಲ ನಿವಾರಿಸಲಿದೆ’ ಎಂದು ರಿಯಲ್‌ಮಿ ಇಂಡಿಯಾದ ಸಿಇಒ ಮಾಧವ್‌ ಸೇಠ್‌ ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ‘ಗ್ರಾಹಕರು ಬಯಸುವ ಹಣಕಾಸು ಸೇವೆಗಳನ್ನು ಅಗ್ಗದ ದರದಲ್ಲಿ, ಸರಳ ಸ್ವರೂಪದಲ್ಲಿ ಮತ್ತು ತ್ವರಿತವಾಗಿ ಒದಗಿಸುವುದು ನಮ್ಮ ಧ್ಯೇಯವಾಗಿದೆ’ ಎಂದು ಹೇಳಿದ್ದಾರೆ.

ವ್ಯಕ್ತಿಗಳಿಗೆ ₹ 1 ಲಕ್ಷದವರೆಗೆ ಮತ್ತು ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ₹ 5 ಲಕ್ಷದವರೆಗೆ ಇಲ್ಲಿ ಡಿಜಿಟಲ್‌ ಸಾಲ ದೊರೆಯಲಿದೆ. ಬಡ್ಡಿ ದರವು ಶೇ 14ರಿಂದ ಶೇ 36ರಷ್ಟು ಇರಲಿದೆ. ದೇಶದಾದ್ಯಂತ ಈ ಸಾಲ ಸೌಲಭ್ಯ ದೊರೆಯಲಿದೆ.

ಹಳೆ ಮತ್ತು ಹೊಸ ಸ್ಮಾರ್ಟ್‌ಫೋನ್‌ಗಳ ಸ್ಕ್ರೀನ್‌ ಹಾಳಾಗುವುದಕ್ಕೆ ವಿಮೆ ಸೌಲಭ್ಯವನ್ನೂ ಕಲ್ಪಿಸಲಿದೆ. ಹಣಕಾಸು ಸೇವೆಗಳಾದ ವೈಯಕ್ತಿಕ ಸಾಲಗಳಿಗಾಗಿ ಅರ್ಲಿ ಸ್ಯಾಲರಿ, ‘ಎಂಎಸ್‌ಎಂಇ’ ಸಾಲಕ್ಕೆ ಲೆಂಡಿಂಗ್‌ ಕಾರ್ಟ್‌, ಸಾಲ ಮರುಪಾವತಿ ವರದಿ ಒದಗಿಸಲು ಕ್ರೆಡಿಟ್ ಮಂತ್ರಿ ಮತ್ತು ವಿಮೆ ಸೇವೆಗಾಗಿ ಐಸಿಐಸಿಐ ಲೋಂಬಾರ್ಡ್‌ ಜತೆ ಒಪ್ಪಂದ ಮಾಡಿಕೊಂಡಿದೆ’ ಎಂದು ರಿಯಲ್‌ಮಿ ಪೈಸಾ ಮುಖ್ಯಸ್ಥ ವರುಣ್‌ ಶ್ರೀಧರ್‌ ಹೇಳಿದರು.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ತೆರಳಿದ್ದರು)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು