ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಲಾಭ ಶೇ 43ರಷ್ಟು ಏರಿಕೆ

Last Updated 22 ಅಕ್ಟೋಬರ್ 2021, 16:26 IST
ಅಕ್ಷರ ಗಾತ್ರ

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿಯ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 43ರಷ್ಟು ಏರಿಕೆ ಕಂಡಿದೆ. ಕಂಪನಿಯು ₹ 13,680 ಕೋಟಿ ಲಾಭ ದಾಖಲಿಸಿದೆ. ಕಂಪನಿಯ ಪ್ರತಿ ಷೇರು ₹ 20.88ರಷ್ಟು ನಿವ್ವಳ ಲಾಭ ತಂದುಕೊಟ್ಟಿದೆ.

ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 9,567 ಕೋಟಿ ಲಾಭ ಗಳಿಸಿತ್ತು. ಈ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ₹ 1.91 ಲಕ್ಷ ಕೋಟಿಗೆ ತಲುಪಿದೆ. ರಿಲಯನ್ಸ್‌ ಕಂಪನಿಯು ನಾಲ್ಕು ಬಗೆಯ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ತೈಲ–ರಾಸಾಯನಿಕ ಉದ್ಯಮ, ಚಿಲ್ಲರೆ ವಹಿವಾಟು ಮತ್ತು ಇ–ವಾಣಿಜ್ಯ ಉದ್ಯಮ, ಜಿಯೊ ಒಳಗೊಂಡ ಡಿಜಿಟಲ್ ಸೇವಾ ಉದ್ಯಮ, ನವ ಇಂಧನ ಉದ್ಯಮದಲ್ಲಿ ಕಂಪನಿಯ ವಹಿವಾಟುಗಳು ವಿಸ್ತರಿಸಿಕೊಂಡಿವೆ.

ಕೈಗೆಟಕುವ ಬೆಲೆಗೆ ಸ್ಮಾರ್ಟ್‌ಫೋನ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶದಿಂದ ಗೂಗಲ್ ಕಂಪನಿ ಜೊತೆ ಕೆಲಸ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ದೀಪಾವಳಿ ಹೊತ್ತಿಗೆ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ ಎಂದು ರಿಲಯನ್ಸ್‌ ತಿಳಿಸಿದೆ. ಕಂಪನಿಯ ಚಿಲ್ಲರೆ ವಹಿವಾಟು ಉದ್ಯಮವು ಕೋವಿಡ್‌ಗೂ ಮೊದಲಿನ ಮಟ್ಟವನ್ನು ದಾಟಿದೆ.

ಜಿಯೊ ಲಾಭ ಶೇ 23.48ರಷ್ಟು ಹೆಚ್ಚಳ

ರಿಲಯನ್ಸ್‌ ಇಂಡಸ್ಟ್ರೀಸ್ ಸಮೂಹಕ್ಕೆ ಸೇರಿರುವ ಜಿಯೊ ಪ್ಲಾಟ್‌ಫಾರ್ಮ್ಸ್‌ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹ 3,728 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿ ಗಳಿಸಿದ್ದ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಲಾಭದಲ್ಲಿ ಶೇಕಡ 23.48ರಷ್ಟು ಏರಿಕೆ ಆಗಿದೆ.

ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 3,019 ಕೋಟಿ ಲಾಭ ಗಳಿಸಿತ್ತು. ಈ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ₹ 23,222 ಕೋಟಿಗೆ ತಲುಪಿದೆ. ದೂರಸಂಪರ್ಕ ಸೇವೆ ಒದಗಿಸುವ ಜಿಯೊ ಮತ್ತು ಅದಕ್ಕೆ ಸಂಬಂಧಿಸಿದ ಹಲವು ಆ್ಯಪ್‌ಗಳು ಜಿಯೊ ಪ್ಲಾಟ್‌ಫಾರ್ಮ್ಸ್‌ ಕಂಪನಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT