ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಸಾಲಕ್ಕೆ ರೆಪೊ ದರಯಾರಿಗೆಷ್ಟು ಅನುಕೂಲ?

Last Updated 17 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಅ ಕ್ಟೋಬರ್ 1 ರಿಂದ ರೆಪೊ ಬಡ್ಡಿ ದರದ ಲೆಕ್ಕಾಚಾರದಲ್ಲಿ ಸಾಲ ಮಂಜೂರು ಮಾಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್ ಬಿಐ) ಸುತ್ತೋಲೆ ಹೊರಡಿಸಿದೆ. ಇದರಿಂದಾಗಿ ಮುಂದಿನ ತಿಂಗಳ ಆರಂಭದಿಂದ ಗೃಹ, ವಾಹನ ಖರೀದಿ ಅಥವಾ ವೈಯಕ್ತಿಕ ಸಾಲಗಳ ಬಡ್ಡಿದರಗಳು ಇಳಿಕೆಯಾಗುವ ನಿರೀಕ್ಷೆಯಿದೆ. ಸಾಲ ಪಡೆಯುವ ಗ್ರಾಹಕನಿಗೆ ಬಡ್ಡಿ ಇಳಿಕೆಯ ಲಾಭ ವರ್ಗಾವಣೆ ಮಾಡುವಲ್ಲಿ ಬ್ಯಾಂಕ್‌ಗಳು ಮಂದಗತಿಯ ಧೋರಣೆ ಅನುಸರಿಸುತ್ತಿವೆ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಆರ್‌ಬಿಐ ಈ ಗಟ್ಟಿ ನಿರ್ಧಾರ ಕೈಗೊಂಡಿದೆ. ಈ ಹೊತ್ತಿನಲ್ಲಿ ರೆಪೊ ಲೆಕ್ಕಾಚಾರದಿಂದ ಯಾರಿಗೆ ಅನುಕೂಲ. ಯಾರಿಗೆ ಅನನುಕೂಲ ಎನ್ನುವ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

ಅಕ್ಟೋಬರ್‌ನಿಂದ ಹೀಗಿರುತ್ತೆ ಬಡ್ಡಿ ದರ: ಮುಂದಿನ ತಿಂಗಳಿನಿಂದ ಅನ್ವಯವಾಗುವಂತೆ ರೆಪೊ ದರ, 3 ಅಥವಾ 6 ತಿಂಗಳ ಟ್ರೆಷರಿ ಬಿಲ್ ಆದಾಯ ಇಲ್ಲವೆ ಫೈನಾನ್ಶಿಯಲ್ ಇಂಡಿಯಾ ಬೆಂಚ್ ಮಾರ್ಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಬಿಐಎಲ್ ) ಪ್ರಕಟಿಸುವ ಬಡ್ಡಿ ದರದಂತೆ ಬ್ಯಾಂಕ್‌ಗಳು ಸಾಲಗಳಿಗೆ ಬಡ್ಡಿ ವಿಧಿಸಬೇಕು ಎಂದು ಆರ್‌ಬಿಐ ತಿಳಿಸಿದೆ.

ಏನಿದು ರೆಪೊ, ರೆಪೊ ದರದ ಸಾಲ
ಆರ್‌ಬಿಐ, ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ಆರ್‌ಬಿಐ ಪ್ರಕಟಿಸುವ ರೆಪೊ ದರಕ್ಕೆ ಅನುಗುಣವಾಗಿ ಸಾಲದ ಬಡ್ಡಿ ದರಗಳನ್ನು ನಿಗದಿ ಮಾಡುವುದಕ್ಕೆ ರೆಪೊ ದರದ ಸಾಲ ಎಂದು ಕರೆಯಬಹುದು.

ರೆಪೊ ಅನುಸರಿಸಲು ಆರ್‌ಬಿಐ ಹೇಳುತ್ತಿರುವುದೇಕೆ: ಪ್ರಸಕ್ತ ವರ್ಷದಲ್ಲಿ ಆರ್‌ಬಿಐ ನಾಲ್ಕು ಬಾರಿ ಒಟ್ಟು 110 ಮೂಲಾಂಶ (ಬೇಸ್ ರೇಟ್) ಕಡಿತಗೊಳಿಸಿದ್ದರೂ ಗ್ರಾಹಕರಿಗೆ ಇದರಿಂದ ಹೆಚ್ಚಿನ ಲಾಭವಾಗಿಲ್ಲ. ರೆಪೊ ದರ 9 ವರ್ಷಗಳ ಕನಿಷ್ಠ ಮಟ್ಟಕ್ಕೆ ತಗ್ಗಿದೆ. ಆದರೆ ಗ್ರಾಹಕರಿಗೆ ಮಾತ್ರ ಸರಾಸರಿ ಸುಮಾರು 29 ಮೂಲಾಂಶ ( ಶೇ 0.29) ದಷ್ಟು ಲಾಭಾಂಶ ಮಾತ್ರ ವರ್ಗಾವಣೆಯಾಗಿದೆ.

ರೆಪೊ ಆಧಾರಿತ ಸಾಲ, ಇಎಂಐ ಮೇಲೆ ಪರಿಣಾಮವೇನ?: ರೆಪೊ ದರಕ್ಕೆ ಅನುಗುಣವಾಗಿ ನೀಡಲಾಗಿರುವ ಸಾಲಗಳ ಬಡ್ಡಿ ದರವನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರು ಮರು ಪರಿಷ್ಕರಿಸಬೇಕು ಎಂದು ಆರ್‌ಬಿಐ ಹೇಳಿದೆ. ಸರಳವಾಗಿ ಹೇಳಬೇಕಾದರೆ ಇವತ್ತು ಆರ್‌ಬಿಐ ರೆಪೊ ದರ ಕಡಿತಗೊಳಿಸಿದರೆ, ಇಂದಿನಿಂದ ಮೂರು ತಿಂಗಳ ಒಳಗಾಗಿ ಗ್ರಾಹಕನಿಗೆ ಅದರ ಲಾಭ ವರ್ಗಾವಣೆಯಾಗಬೇಕು.
ಉದಾಹರಣೆಗೆ ಸೆಪ್ಟೆಂಬರ್ 25 ರಂದು ರೆಪೊ ದರದ ಅನ್ವಯ ಗ್ರಾಹಕ ಸಾಲ ಪಡೆಯುತ್ತಾನೆ ಎಂದು ಭಾವಿಸೋಣ. ಅಕ್ಟೋಬರ್‌ನ ಹಣಕಾಸು ನೀತಿ ಪ್ರಕಟಿಸುವಾಗ ಆರ್‌ಬಿಐ 25 ಮೂಲಾಂಶ ಕಡಿತಗೊಳಿಸುತ್ತದೆ ಎಂದಿಟ್ಟುಕೊಳ್ಳೋಣ. ಈ ಸನ್ನಿವೇಶದಲ್ಲಿ ಡಿಸೆಂಬರ್ ಒಳಗಾಗಿ ಬಡ್ಡಿ ದರ ಕಡಿತದ ಲಾಭವನ್ನು ನಿರ್ದಿಷ್ಟ ಬ್ಯಾಂಕ್‌ ತನ್ನ ಗ್ರಾಹಕನಿಗೆ ವರ್ಗಾಯಿಸಬೇಕಾಗುತ್ತದೆ.

ರೆಪೊಗೆ ವರ್ಗಾವಣೆ ಸಾಧ್ಯವೇ?
ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (marginal cost of funds-based lending rate –MCLR) ಬಡ್ಡಿ ದರಗಳಡಿಯಲ್ಲಿ ಈಗಾಗಲೇ ಸಾಲ ಪಡೆದುಕೊಂಡಿರುವವರು ರೆಪೊಗೆ ವರ್ಗಾಯಿಸಲು ಕೆಲ ನಿಬಂಧನೆಗಳಿವೆ. ನೀವು ಈಗಾಗಲೇ ಮಾಡಿಕೊಂಡಿರುವ ಸಾಲದ ಒಪ್ಪಂದ ಪತ್ರವು ಸಾಲದ ಸಂಪೂರ್ಣ ಅವಧಿಗೆ ಅನ್ವಯಿಸುತ್ತದೆ. ಹೀಗಾಗಿ ರೆಪೊ ಆಧಾರಿತ ಲೆಕ್ಕಾಚಾರಕ್ಕೆ ನಿಮ್ಮ ಬಾಕಿ ಸಾಲವನ್ನು ವರ್ಗಾಯಿಸಿಕೊಳ್ಳಬೇಕಾದರೆ ಬ್ಯಾಂಕ್‌ ಸಂಪರ್ಕಿಸಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು. ಈಗಾಗಲೇ ಪಡೆದಿರುವ ಸಾಲವನ್ನು ರೆಪೊಗೆ ವರ್ಗಾಯಿಸಿಕೊಳ್ಳಲು ಬ್ಯಾಂಕಿಗೆ ಆಡಳಿತಾತ್ಮಕ ಶುಲ್ಕ ಕಟ್ಟಬೇಕಾಗುತ್ತದೆ.

ಆಯ್ಕೆಯಲ್ಲಿ ಇರಲಿ ಎಚ್ಚರಿಕೆ
ಬ್ಯಾಂಕ್‌ನ ಮೂಲಾಂಶ ಕಡಿಮೆ ಇದ್ದರೆ ರೆಪೊ ಬಡ್ಡಿ ದರ ಕಡಿಮೆ ಇರುತ್ತದೆ. ಆದರೆ, ಬ್ಯಾಂಕ್‌ನ ಮೂಲಾಂಶ ಹೆಚ್ಚಿದ್ದರೆ ಬಡ್ಡಿ ದರ ಹೆಚ್ಚಿರುತ್ತದೆ. ಉದಾಹರಣೆಗೆ: ಎಸ್‌ಬಿಐ ಮತ್ತು ಐಡಿಬಿಐ ಈ ಎರಡು ಬ್ಯಾಂಕ್‌ಗಳು ರೆಪೊ ಆಧಾರಿತ ಸಾಲಗಳನ್ನು ಈಗಾಗಲೇ ನೀಡಿವೆ. ಆದರೆ ಎಸ್‌ಬಿಐನ ರೆಪೊ ಆಧಾರಿತ ಸಾಲದ ಬಡ್ಡಿ ಶೇ 7.65 ರಷ್ಟಿದ್ದರೆ, ಐಡಿಬಿಐ ನ ದರ ಶೇ 8.3 ರಷ್ಟಿದೆ. ಇನ್ನು, ಗ್ರಾಹಕನ ಕ್ರೆಡಿಟ್ ಹಿಸ್ಟರಿ (ಋಣ ಚರಿತ್ರೆ) ಸರಿಯಿಲ್ಲದಿದ್ದರೂ ಸಹ ರೆಪೊ ಆಧಾರದಲ್ಲಿ ಸಾಲ ನೀಡುವಾಗ ಬಡ್ಡಿ ದರ ಹೆಚ್ಚಿಸುವ ಅವಕಾಶ ಬ್ಯಾಂಕ್‌ಗಳಿಗಿದೆ. ಹೀಗಾಗಿ ಇಲ್ಲಿ ಎಚ್ಚರಿಕೆಯ ನಿರ್ಧಾರ ಮುಖ್ಯವಾಗುತ್ತದೆ.

ಇಕ್ಕಟ್ಟಿನಲ್ಲಿ ಬ್ಯಾಂಕ್‌ಗಳು
ರೆಪೊ ದರ ಇಳಿಕೆಗೆ ಅನುಸಾರವಾಗಿ ಬಡ್ಡಿದರ ತಗ್ಗಿಸಬೇಕು ಎಂದು ಆರ್‌ಬಿಐ ತಿಳಿಸಿದೆ. ಆದರೆ, ಸಾಲದ ಮೇಲಿನ ಬಡ್ಡಿ ದರ, ಬ್ಯಾಂಕ್‌ನ ಹಣಕಾಸು ಸ್ಥಿತಿಗತಿಯ ಮೇಲೆ ಅವಲಂಬಿತವಾಗಿರಬೇಕಾಗುತ್ತದೆ. ನಿಶ್ಚಿತ ಠೇವಣಿ (ಎಫ್‌ಡಿ) ಮೇಲೆ ನಿಗದಿತ ಮೊತ್ತದ ಬಡ್ಡಿ ಗಳಿಸುವ ನಿರೀಕ್ಷೆಯಲ್ಲಿ ಪಿಂಚಣಿದಾರರು, ಹಿರಿಯ ನಾಗರಿಕರಿರುತ್ತಾರೆ. ಸಾಮಾನ್ಯ ನಾಗರಿಕನಿಗೆ ರೆಪೊ ಆಧಾರದಲ್ಲಿ ಬಡ್ಡಿ ದರ ಏರಿಳಿತವಾಗುತ್ತದೆ, ಹಣದುಬ್ಬರದಿಂದ ಬಡ್ಡಿ ಕಡಿಮೆಯಾಗಿದೆ ಎಂದು ಮನದಟ್ಟು ಮಾಡುವುದು ಸುಲಭದ ಕೆಲಸವಲ್ಲ. ಇದಲ್ಲದೆ ಆರ್‌ಬಿಐ ಒಂದೇ ಬಾರಿಗೆ ಮೂಲಾಂಶದಲ್ಲಿ ಭಾರಿ ಬದಲಾವಣೆ ಮಾಡಿದರೆ ದಿಢೀರ್ ಎಂದು ಏರಿಕೆಯಾಗುವ ಬಡ್ಡಿ ದರದಿಂದ ಗ್ರಾಹಕರನ್ನು ಸಂತೈಸುವುದು ಕಷ್ಟವಾಗಲಿದೆ.

ಇನ್ನು, ರೆಪೊ ಆಧಾರಿತ ಸಾಲ ಮಂಜೂರಾತಿ ಮಾಡುವುದು ಬ್ಯಾಂಕ್‌ಗಳಿಗೆ ಲಾಭದಾಯಕವಲ್ಲ ಎಂದು ಅಮೆರಿಕದ ಹಣಕಾಸು ಸೇವಾ ಕಂಪನಿ ಮೂಡಿಸ್ ಇನ್ವೆಸ್ಟರ್ ಸರ್ವೀಸ್ ಹೇಳಿದೆ. ಈ ನಿರ್ಧಾರವು ಬ್ಯಾಂಕ್‌ಗಳ ಬಡ್ಡಿ ನಿಗದಿ ಅಧಿಕಾರಕ್ಕೆ ಕಡಿವಾಣ ಹಾಕಲಿದೆ. ಜತೆಗೆ ಭವಿಷ್ಯದಲ್ಲಿ ಸುಸ್ತಿ ಸಾಲ ಹೆಚ್ಚಾಗುವ ಸಂಭವವಿದೆ ಎಂದು ವಿಶ್ಲೇಷಿಸಿದೆ.

ಒಟ್ಟಿನಲ್ಲಿ ಸಾಲದ ಮೇಲಿನ ಬಡ್ಡಿ ದರ ನಿಗದಿಯಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಈಗ ಭಾರಿ ಬದಲಾವಣೆಯೊಂದಕ್ಕೆ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಇದರ ಮತ್ತಷ್ಟು ಸಾಧಕ ಬಾಧಕಗಳು ಜನರ ಅರಿವಿಗೆ ಬರಲಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT