ಭಾನುವಾರ, ಮಾರ್ಚ್ 7, 2021
31 °C

ನಿವೃತ್ತಿ: ಉಳಿತಾಯ ಪ್ರವೃತ್ತಿ ಕಡಿಮೆ

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಮುಂಬೈ: ದುಡಿಯುವ ವ್ಯಕ್ತಿಗಳ ಪೈಕಿ ಶೇ 33ರಷ್ಟು ಜನರು ಮಾತ್ರ ನಿವೃತ್ತಿ ಬದುಕಿನ ಅಗತ್ಯಗಳಿಗಾಗಿ ಉಳಿತಾಯ ಮಾಡುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ತಕ್ಷಣದ ಹಣಕಾಸು ಅಗತ್ಯಗಳು ಮತ್ತು ನಿವೃತ್ತ ಬದುಕಿನ ನಿರ್ವಹಣೆಗೆ ಅಗತ್ಯ ಇರುವ ಹಣದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದಿರುವ ಕಾರಣಕ್ಕೆ ಬಹುತೇಕರು  ಉಳಿತಾಯ ಮಾಡಲು ಮುಂದಾಗುವುದಿಲ್ಲ  ಎಂದು ಎಚ್‌ಎಸ್‌ಬಿಸಿ ನಡೆಸಿದ ‘ನಿವೃತ್ತಿಯ ಭವಿಷ್ಯ’ ಕುರಿತ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಉಳಿತಾಯ ಮಾಡಲು ಸಾಧ್ಯವಿಲ್ಲದ ಕಾರಣಕ್ಕೆ ತಮ್ಮ ವೃದ್ಧಾಪ್ಯದ ದಿನಗಳನ್ನು ದುಡಿಮೆಯಿಂದ ನಿವೃತ್ತಿ ಎಂದೇನು ಹಲವರು ಪರಿಗಣಿಸಿಲ್ಲ. 60 ವರ್ಷಗಳ ನಂತರವೂ ಇನ್ನೂ ಕೆಲ ವರ್ಷ ದುಡಿಯಬೇಕಾಗಬಹುದು ಎಂದೇ ಶೇ 69ರಷ್ಟು ಜನರು ಭಾವಿಸಿದ್ದಾರೆ.

‘ಅನೇಕರಿಗೆ ನಿವೃತ್ತಿಯ ನಂತರದ ಬದುಕು ದೀರ್ಘವಾಗಿರುತ್ತದೆ. ಅದೊಂದು ವ್ಯಕ್ತಿಯ ಬದುಕಿನಲ್ಲಿನ ಮಹತ್ವದ ಘಟ್ಟವೂ ಆಗಿರುತ್ತದೆ. ವ್ಯಕ್ತಿಗೆ ವಯಸ್ಸಾದಂತೆ ಆತನ ಅಗತ್ಯಗಳೂ ಬದಲಾಗುತ್ತವೆ. ಅವುಗಳ ಹಣಕಾಸು ಪರಿಣಾಮಗಳೂ ಭಿನ್ನವಾಗಿರುತ್ತವೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಸಂಪತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥ ರಾಮಕೃಷ್ಣನ್‌ ಎಸ್‌ ಹೇಳಿದ್ದಾರೆ.

ಎಚ್‌ಎಸ್‌ಬಿಸಿ ಪರವಾಗಿ ಇಪ್ಸೊಸ್‌ ಸಂಸ್ಥೆಯು ಭಾರತವೂ ಸೇರಿದಂತೆ 16 ದೇಶಗಳಲ್ಲಿ ಈ ಸಮೀಕ್ಷೆ ನಡೆಸಿದೆ. ದುಡಿಯುವ ವರ್ಗದ ಶೇ 56ರಷ್ಟು ಜನರು ಜೀವನ ನಿರ್ವಹಣೆಗೆ ದಿನನಿತ್ಯದ ದುಡಿಮೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಶೇ 53 ರಷ್ಟು ಜನರು ಅಲ್ಪಾವಧಿ ಅಗತ್ಯಗಳಿಗಾಗಿ ಮಾತ್ರ ಉಳಿತಾಯ ಮಾಡುತ್ತಾರೆ.

ಭವಿಷ್ಯದ ಬದುಕಿನ ಅಗತ್ಯಗಳನ್ನು ಈಡೇರಿಸಲು ಉಳಿತಾಯ ಮಾಡುವ ಬದಲಿಗೆ ಇಂದಿನ ಬದುಕನ್ನು ಅನುಭವಿಸಲು ಹಣ ವೆಚ್ಚ ಮಾಡಲು ತಾವು ಆದ್ಯತೆ ನೀಡುವುದಾಗಿ  ಶೇ 45ರಷ್ಟು ಜನರು ಹೇಳಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು