ಗುರುವಾರ , ಅಕ್ಟೋಬರ್ 28, 2021
19 °C
ಹಣ ಅಕ್ರಮ ವರ್ಗಾವಣೆ ಪ್ರಕರಣ

ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ನ ₹ 700 ಕೋಟಿ ಮೌಲ್ಯದ ಷೇರು ವಹಿವಾಟಿಗೆ ‘ಇ.ಡಿ’ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ಲಿಮಿಟೆಡ್‌ನ (ಕೆಎಸ್‌ಬಿಎಲ್‌) ಸಿಎಂಡಿ ಸಿ. ಪಾರ್ಥಸಾರಥಿ ಮತ್ತು ಇತರರ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ₹ 700 ಕೋಟಿ ಮೌಲ್ಯದ ಷೇರುಗಳನ್ನು ವಹಿವಾಟಿನಿಂದ ಸ್ಥಗಿತಗೊಳಿಸಿರುವುದಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ತಿಳಿಸಿದೆ.

ತೆಲಂಗಾಣ ಪೊಲೀಸರು ಪಾರ್ಥಸಾರತಿ ಅವರನ್ನು ಕಳೆದ ತಿಂಗಳು ಬಂಧಿಸಿದ ಬಳಿಕ ಹೈದರಾಬಾದ್‌ನ ಚಂಚಲಗುಡ ಜೈಲಿನಲ್ಲಿ ಅವರನ್ನು ಇರಿಸಲಾಗಿದೆ.

ಹೈದರಾಬಾದ್‌ನ ಆರು ಕಡೆಗಳಲ್ಲಿ ಹಾಗೂ ಕಾರ್ವೆ ಸಮೂಹ ಕಂಪನಿಗಳಿಗೆ ಸೇರಿದ ವಿವಿಧ ಸ್ಥಳಗಳು ಹಾಗೂ ಪಾರ್ಥಸಾರಥಿ ಅವರ ನಿವಾಸದಲ್ಲಿ ‘ಇ.ಡಿ’ ಸೆಪ್ಟೆಂಬರ್‌ 22ರಂದು ಶೋಧ ಕಾರ್ಯ ನಡೆಸಿತ್ತು.

ಆಸ್ತಿ ದಾಖಲೆಗಳು, ವೈಯಕ್ತಿಕ ದಿನಚರಿಗಳು, ಎಲೆಕ್ಟ್ರಾನಿಕ್ ಸಾಧನಗಳು ಇತ್ಯಾದಿಗಳನ್ನು   ಅಪರಾಧದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ಅಪರಾಧವನ್ನು ಮರೆಮಾಚುವ ಉದ್ದೇಶದಿಂದ ಪಾರ್ಥಸಾರಥಿ ಅವರು ಕಾರ್ವೆ ಸಮೂಹ ಕಂಪನಿಗಳಲ್ಲಿ ಹೊಂದಿರುವ ಷೇರುಗಳನ್ನು ಖಾಸಗಿ ಕಂಪನಿಗಳ ಮೂಲಕ ಮಾರಾಟ ಮಾಡುವ ಪ್ರಯತ್ನ ನಡೆಸಿರುವುದಾಗಿ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ಹೀಗಾಗಿ 2019–20ನೇ ಸಾಲಿನ ಮೌಲ್ಯಮಾಪನದ ಪ್ರಕಾರ ₹ 700 ಕೋಟಿ ಮೌಲ್ಯದ ಷೇರುಗಳನ್ನು ವಹಿವಾಟಿನಿಂದ ತಡೆಹಿಡಿಯುವಂತೆ ಆದೇಶ ನೀಡಿರುವುದಾಗಿ ‘ಇ.ಡಿ’ ಹೇಳಿದೆ.

ಪಾರ್ಥಸಾರಥಿ ಮತ್ತು ಅವರ ಮಕ್ಕಳಾದ ರಜತ್‌ ಪಾರ್ಥಸಾರಥಿ ಮತ್ತು ಅಧಿರಾಜ್‌ ಪಾರ್ಥಸಾರಥಿ ಹಾಗೂ ಅವರ ಕಂಪನಿಗಳು ನೇರ ಮತ್ತು ಪರೋಕ್ಷವಾಗಿ ಕಾರ್ವೆ ಸಮೂಹದ ಈ ಷೇರುಗಳನ್ನು ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.