ಶುಕ್ರವಾರ, ನವೆಂಬರ್ 27, 2020
18 °C
ಆಮದು ನಿಷೇಧ: ದೇಶದಲ್ಲಿ ರಬ್ಬರ್ ದಾಸ್ತಾನು ಇಳಿಮುಖ

ಚೇತರಿಕೆ ಹಾದಿಯಲ್ಲಿ ರಬ್ಬರ್‌ ಬೆಲೆ

ಚಿದಂಬರ‍ಪ್ರಸಾದ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಆರು ತಿಂಗಳಿಂದ ಒಂದೇ ರೀತಿಯಲ್ಲಿ ಉಳಿದಿದ್ದ ರಬ್ಬರ್ ಬೆಲೆ, ಅಕ್ಟೋಬರ್ ಮೊದಲ ವಾರದಿಂದ ಸ್ವಲ್ಪ ಚೇತರಿಕೆಯ ಹಾದಿ ಹಿಡಿದಿದೆ. ವಿದೇಶದಿಂದ ರಬ್ಬರ್‌ ಆಮದು ಸ್ಥಗಿತಗೊಂಡಿದ್ದು, ದೇಶದಲ್ಲಿದ್ದ ರಬ್ಬರ್‌ ದಾಸ್ತಾನು ಮುಗಿದಿದ್ದರಿಂದ ರಬ್ಬರ್‌ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುವಂತಾಗಿದೆ.

ರಬ್ಬರ್‌ ಬೆಲೆಯಲ್ಲಿ ಚೇತರಿಕೆ ಕಾಣದೇ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿತ್ತು. ಕೇಂದ್ರ ಸರ್ಕಾರದ ಸಹಕಾರದಿಂದ ರಬ್ಬರ್‌ ಬೆಳೆಗೆ ಬೆಂಬಲ ಬೆಲೆ ಘೋಷಿಸುವುದಾಗಿ ರಾಜ್ಯ ಸರ್ಕಾರ ಹೇಳಿದ್ದರೂ, ಇದುವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಹಾಕಿದ ಬಂಡವಾಳವೂ ಬರದೇ ಇದ್ದುದರಿಂದ ಹಲವಾರು ಬೆಳೆಗಾರರು ರಬ್ಬರ್‌ ತೋಟಗಳಲ್ಲಿ ಟ್ಯಾಪಿಂಗ್ ಸಹ ಮಾಡದೇ ಹಾಗೆಯೇ ಬಿಟ್ಟಿದ್ದರು. ಇದರಿಂದಾಗಿ ರಬ್ಬರ್‌ ಉತ್ಪಾದನೆಯೂ ಕುಸಿತವಾಗಿತ್ತು.

ಇದೇ ವೇಳೆ ಕಳೆದ ವರ್ಷ ಫೆಬ್ರುವರಿಯಲ್ಲಿ ನಡೆದ ಅಂತರರಾಷ್ಟ್ರೀಯ ರಬ್ಬರ್‌ ಕೌನ್ಸಿಲ್‌ನ ಒಪ್ಪಂದದ ಪ್ರಕಾರ, ಇಂಡೋನೇಷ್ಯಾ, ಮಲೇಷಿಯಾ ಹಾಗೂ ಥೈಲ್ಯಾಂಡ್ ದೇಶಗಳು ಭಾರತಕ್ಕೆ ರಬ್ಬರ್‌ ರಫ್ತು ಮಾಡುವುದು ಕಡಿತಗೊಳಿಸಿವೆ. ಆ ಸಂದರ್ಭದಲ್ಲಿ ಹಲವಾರು ಕಂಪನಿಗಳು ರಬ್ಬರ್‌ ದಾಸ್ತಾನು ಮಾಡಿಕೊಂಡಿದ್ದವು.

ಇದೀಗ ರಬ್ಬರ್‌ ಆಮದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಕಂಪನಿಗಳ ಬಳಿ ಇದ್ದ ದಾಸ್ತಾನು ಮುಗಿಯುತ್ತ ಬಂದಿದೆ. ಹೀಗಾಗಿ ದೇಶದಲ್ಲಿ ರಬ್ಬರ್‌ಗೆ ಬೇಡಿಕೆ ಹೆಚ್ಚಾಗಿದೆ.

ದೇಶದಲ್ಲಿ ಒಟ್ಟು 12 ಲಕ್ಷ ಟನ್ ರಬ್ಬರ್‌ ಉತ್ಪಾದನೆ ಆಗುತ್ತಿದ್ದು, ಈ ಪೈಕಿ ಕರ್ನಾಟಕದಿಂದಲೇ 40 ಸಾವಿರ ಟನ್‌ ರಬ್ಬರ್‌ ಉತ್ಪಾದಿಸಲಾಗುತ್ತಿದೆ. ಆದರೆ ಕಳೆದ ಎರಡು ವರ್ಷಗಳಿಂದ ರಬ್ಬರ್‌ ಬೆಳೆಗಾರರ ನಿರಾಸಕ್ತಿ, ಟ್ಯಾಪಿಂಗ್‌ಗೆ ಕಾರ್ಮಿಕರ ಕೊರತೆಯಿಂದಾಗಿ ರಬ್ಬರ್‌ ಉತ್ಪಾದನೆಯಲ್ಲಿ ಕುಸಿತವಾಗಿದೆ.

ಚೇತರಿಸಿದ ರಬ್ಬರ್ ಬೆಲೆ: ಈ ವರ್ಷದ ಜನವರಿಯವರೆಗೂ ರಬ್ಬರ್‌ ಬೆಲೆಯಲ್ಲಿ ಯಾವುದೇ ಏರಿಕೆ ಕಂಡಿರಲಿಲ್ಲ. ಜನವರಿಯಲ್ಲಿ ಆರ್‌ಎಸ್‌ಎಸ್‌ 4 ರಬ್ಬರ್‌ನ ಬೆಲೆ ₹127–₹130 ರವರೆಗೆ ಇದ್ದರೆ, ಆರ್‌ಎಸ್‌ಎಸ್‌ 5 ರಬ್ಬರ್‌ನ ಬೆಲೆ ₹118–₹123ರವರೆಗೆ ಇತ್ತು. ಫೆಬ್ರುವರಿಯಲ್ಲಿ ರಬ್ಬರ್ ಬೆಲೆ ಸ್ವಲ್ಪ ಕುಸಿತ ಕಂಡಿತ್ತು.

ಕೋವಿಡ್–19 ನಿಂದಾಗಿ ರಬ್ಬರ್ ಸಂಸ್ಕರಣೆ ಘಟಕಗಳು ಬಾಗಿಲು ಹಾಕಿದ್ದರಿಂದ ರಬ್ಬರ್‌ ಅನ್ನು ಕೇಳುವವರೇ ಇಲ್ಲದಾಗಿತ್ತು. ಕೇಂದ್ರ ಸರ್ಕಾರ ಅನ್‌ಲಾಕ್‌ ಮಾರ್ಗಸೂಚಿಯಂತೆ ಆಗಸ್ಟ್‌ನಿಂದ ಕೈಗಾರಿಕಾ ಘಟಕಗಳು ನಿಧಾನವಾಗಿ ಆರಂಭವಾಗಿದ್ದು, ಅಕ್ಟೋಬರ್‌ವರೆಗೆ ಸ್ವಲ್ಪ ಚೇತರಿಕೆ ಕಂಡಿವೆ. ಇದರಿಂದಾಗಿ ಅಕ್ಟೋಬರ್‌ ಮೊದಲ ವಾರವೇ ಆರ್‌ಎಸ್‌ಎಸ್‌ 4 ರಬ್ಬರ್‌ ಬೆಲೆ ₹130 ಹಾಗೂ ಆರ್ಎಸ್‌ಆರ್‌ 5 ನ ಬೆಲೆ ₹124ಕ್ಕೆ ಏರಿಕೆಯಾಗಿತ್ತು.

ಇದೀಗ ರಬ್ಬರ್‌ ಬೆಲೆಯಲ್ಲಿ ಮತ್ತಷ್ಟು ಚೇತರಿಕೆ ಕಾಣುತ್ತಿದೆ. ಶುಕ್ರವಾರ (ಇದೇ 23) ಗುತ್ತಿಗಾರು ಮತ್ತು ಕ್ಯಾಂಪ್ಕೊದಲ್ಲಿ ಆರ್‌ಎಸ್‌ಎಸ್‌ 4ನ ಬೆಲೆ ₹143.50ಕ್ಕೆ ಏರಿದ್ದರೆ, ಆರ್‌ಎಸ್‌ಎಸ್‌ 5 ರಬ್ಬರ್‌ಗೆ ₹121 ದರ ನಿಗದಿಯಾಗಿದೆ. ಪೆರ್ಲದಲ್ಲಿ ಆರ್‌ಎಸ್‌ಎಸ್‌ 4 ರಬ್ಬರ್‌ಗೆ ₹144 ಬೆಲೆ ಇದ್ದು, ಆರ್‌ಎಸ್‌ಎಸ್‌ 5 ರಬ್ಬರ್‌ ₹120ರಂತೆ ಖರೀದಿಯಾಗಿದೆ.

ಆಮದು ಬಂದ್ ಆಗಿದೆ. ದಾಸ್ತಾನಿದ್ದ ರಬ್ಬರ್‌ ಖಾಲಿಯಾಗಿದೆ. ಹೀಗಾಗಿ ರಬ್ಬರ್‌ಗೆ ಬೆಲೆ ಹೆಚ್ಚಾಗಿದೆ. ರಬ್ಬರ್‌ ಸಂಸ್ಕರಣೆ ಘಟಕಗಳು ಪೂರ್ಣವಾಗಿ ಆರಂಭವಾದಲ್ಲಿ ಬೆಲೆ ಮತ್ತಷ್ಟು ಏರಿಕೆ ಆಗಲಿದೆ. ಕರ್ನಲ್ ಶರತ್ ಭಂಡಾರಿ ಅಖಿಲ ಕರ್ನಾಟಕ ರಬ್ಬರ್‌ ಬೆಳೆಗಾರರ ಸಂಘದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು