ನವದೆಹಲಿ: ಡಾಲರ್ ಎದುರು ರೂಪಾಯಿ ವಿನಿಮಯ ದರವು ದಾಖಲೆ ಪ್ರಮಾಣದಲ್ಲಿ ಕುಸಿಯುವುದಕ್ಕೆ ವಿದೇಶಿ ವಿದ್ಯಮಾನಗಳೇ ಪ್ರಮುಖ ಕಾರಣ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರೂಪಾಯಿ ಬೆಲೆ ಕುಸಿತವು ಆತಂಕಕಾರಿ ಮಟ್ಟದಲ್ಲಿ ಇಲ್ಲ ಎಂದೂ ಸರ್ಕಾರ ಭರವಸೆ ನೀಡಿದೆ. ‘ದಿನಗಳೆದಂತೆ ಬಾಹ್ಯ ವಿದ್ಯಮಾನಗಳ ಪ್ರಭಾವ ಕಡಿಮೆಯಾಗಲಿದೆ. ಈ ಹಂತದಲ್ಲಿ ಕಳವಳ ಪಡಬೇಕಾಗಿಲ್ಲ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.
‘ಷೇರು, ಬಾಂಡ್‌ಗಳಲ್ಲಿನ ವಿದೇಶಿ ಬಂಡವಾಳ ಹೂಡಿಕೆಯ ಹರಿವಿನ ಪ್ರಮಾಣ ಪರಿಗಣಿಸಿದರೆ ರೂಪಾಯಿ ವಿನಿಮಯ ದರವು 60 ರಿಂದ 70ರ ಮಧ್ಯೆ ಸ್ಥಿರಗೊಳ್ಳಲಿದೆ. ವಿದೇಶಿ ಹೂಡಿಕೆದಾರರ ಪಾಲಿಗೆ ಭಾರತದ ಬಂಡವಾಳ ಪೇಟೆ ಈಗಲೂ ಆಕರ್ಷಕವಾಗಿದೆ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
‘ಆಮದುದಾರರಿಂದ ಡಾಲರ್‌ಗೆ ಅತಿಯಾದ ಬೇಡಿಕೆ ಕಂಡು ಬಂದಿದ್ದರಿಂದ ರೂಪಾಯಿ ಬೆಲೆ ಕುಸಿತ ಕಾಣುತ್ತಿದೆ’ ಎಂದು ಆನಂದ್ ರಥಿ ಷೇರ್ಸ್ ಆ್ಯಂಡ್ ಸ್ಟಾಕ್ ಬ್ರೋಕರ್ಸ್‌ನ ಸಂಶೋಧನಾ ವಿಶ್ಲೇಷಕ ಋಷಭ್ ಮರು ಹೇಳಿದ್ದಾರೆ.
‘ಟರ್ಕಿ ಆರ್ಥಿಕ ಬಿಕ್ಕಟ್ಟಿನ ಸುತ್ತ ಆವರಿಸಿಕೊಂಡಿರುವ ಅನಿಶ್ಚಿತತೆ ಮತ್ತು ಡಾಲರ್ ಸೂಚ್ಯಂಕದ ಬಲವರ್ಧನೆಯ ಕಾರಣಕ್ಕೆ ಆಮದುದಾರರು ಡಾಲರ್‌ಗಳ ಖರೀದಿಗೆ ಮುಗಿ ಬಿದ್ದಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚು ಜಾಗರೂಕತೆಯಿಂದ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡುತ್ತಿದೆ. ಈ ವಿಷಯದಲ್ಲಿ ಆರ್‌ಬಿಐ ಆಕ್ರಮಣಕಾರಿ ಧೋರಣೆ ತಳೆಯದಿರುವುದರಿಂದ ಮಾರುಕಟ್ಟೆಯಲ್ಲಿ ದಿಗಿಲು ಕಂಡುಬಂದಿದೆ’ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಪ್ರಮುಖ ವಾಣಿಜ್ಯ ಪಾಲುದಾರ ದೇಶಗಳ ಕರೆನ್ಸಿಗಳ ಜತೆಗಿನ ಡಾಲರ್‌ನ ಮೌಲ್ಯ ಅಳೆಯುವ ‘ಡಾಲರ್ ಸೂಚ್ಯಂಕ’ವು ಗರಿಷ್ಠ ಮಟ್ಟದಲ್ಲಿ ಇರುವುದೂ ವಿಶ್ವದ ಇತರ ಹಲವಾರು ದೇಶಗಳ ಕರೆನ್ಸಿಗಳ ಬೆಲೆ ಕುಸಿಯುವಂತೆ ಮಾಡಿದೆ.
**
ಮೋದಿ ಲೇವಡಿ ಮಾಡಿದ ರಾಹುಲ್
ರೂಪಾಯಿ ಬೆಲೆ ಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡಿದ್ದ ಕಟು ಟೀಕೆಯನ್ನು ನೆನಪಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಈಗೇನು ಹೇಳುವಿರಿ ಎಂದು ಕೆಣಕಿದ್ದಾರೆ.
‘ರೂಪಾಯಿ ಬೆಲೆ ಐತಿಹಾಸಿಕ ಕುಸಿತ ಕಂಡು ಸರ್ವೋಚ್ಚ ನಾಯಕನಲ್ಲಿ ಅವಿಶ್ವಾಸ ವ್ಯಕ್ತಪಡಿಸಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವ ಬಗ್ಗೆ ಸರ್ವೋಚ್ಚ ನಾಯಕ ಹೇಳಿದ ಪಾಠವನ್ನು ಈ ವಿಡಿಯೊದಲ್ಲಿ ನೋಡಿ’ ಎಂದು ಟ್ವೀಟ್ ಮಾಡಿದ್ದಾರೆ.
‘ರೂಪಾಯಿ ಮೌಲ್ಯ ಇದೇ ರೀತಿ ಕುಸಿಯುತ್ತ, ಡಾಲರ್ ಮೌಲ್ಯ ಏರುಗತಿಯಲ್ಲಿದ್ದರೆ ಭಾರತ ಜಾಗತಿಕ ಭೂಪಟದಿಂದಲೇ ಮರೆಯಾಗುತ್ತದೆ. ಅಸ್ತಿತ್ವ ಉಳಿಸಿಕೊಳ್ಳಲು ಉದ್ಯಮಿಗಳು ಹೆಣಗಾಡಬೇಕಾಗುತ್ತದೆ. ಈ ಒತ್ತಡ ನಿಭಾಯಿಸಲು ಕೇಂದ್ರ ಸರ್ಕಾರಕ್ಕೂ
ಕಷ್ಟವಾಗುತ್ತಿದೆ. ರೂಪಾಯಿಯ ಮೌಲ್ಯ ಕುಸಿತಕ್ಕೆ ಆರ್ಥಿಕ ವಿದ್ಯಮಾನಗಳಷ್ಟೇ ಹೊಣೆಯಲ್ಲ. ದೆಹಲಿಯ ಭ್ರಷ್ಟ ರಾಜನೀತಿಯೂ ಕಾರಣವಾಗಿದೆ’ ಎಂದು ಮೋದಿ ಅವರು ಟೀಕಿಸಿದ್ದ ವಿಡಿಯೊವನ್ನು ರಾಹುಲ್ ತಮ್ಮ ಟ್ವೀಟ್‌ಗೆ ಲಗತ್ತಿಸಿದ್ದಾರೆ.
‘ದೇಶ 72ನೆ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿಯೇ ರೂಪಾಯಿ ಬೆಲೆ 70ಕ್ಕೆ ಕುಸಿದಿದೆ. 70 ವರ್ಷಗಳಲ್ಲಿ ಯಾವುದೇ ಸರ್ಕಾರ ಮಾಡದ ಸಾಧನೆಯನ್ನು ಬಿಜೆಪಿ ಸರ್ಕಾರ ಮಾಡಿದೆ’ ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರೂ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.