ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಸೋಮವಾರ ಮತ್ತೊಂದು ಐತಿಹಾಸಿಕ ಕುಸಿತ ಕಂಡಿದೆ.ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು 21 ಪೈಸೆಯಷ್ಟು ಇಳಿಕೆಯಾಗಿ 71.21ರಂತೆ ಮಾರಾಟವಾಯಿತು.
ಈ ವರ್ಷದಲ್ಲಿ ಇದುವರೆಗೆ ರೂಪಾಯಿ ಮೌಲ್ಯ ಶೇ 11 ರಷ್ಟು ಇಳಿಕೆಯಾಗಿದೆ. ಏಷ್ಯಾದಲ್ಲಿಯೇ ಅತ್ಯಂತ ಗರಿಷ್ಠ ಕುಸಿತ ಕಂಡ ಕರೆನ್ಸಿಯಾಗಿದೆ.
ತೈಲ ದರ ಏರಿಕೆ ಪರಿಣಾಮ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿರುವುದು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಅಮೆರಿಕವು ಇರಾನ್ ಮೇಲೆ ನಿರ್ಬಂಧ ಹೇರುವುದರಿಂದ ತೈಲ ಪೂರೈಕೆ ಕಡಿಮೆ ಆಗಲಿದೆ ಎನ್ನುವ ಆತಂಕದಿಂದಾಗಿ 15 ದಿನಗಳಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ಗೆ 7 ಡಾಲರ್ಗಳಷ್ಟು ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ. ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ ₹ 29.35 ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್ಗೆ 78 ಡಾಲರ್ಗೆ (₹ 5,538ಕ್ಕೆ) ಏರಿಕೆಯಾಗಿದೆ.
ಇಂಧನ ದರ ಏರಿಕೆ: ರೂಪಾಯಿ ಮೌಲ್ಯ ಕುಸಿತದ ಕಾರಣಕ್ಕೆ ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗರಿಷ್ಠ ಮಟ್ಟದಲ್ಲಿ ಏರಿಕೆಯಾಗುತ್ತಿವೆ.
ಬೆಂಗಳೂರಿನಲ್ಲಿ ಆಗಸ್ಟ್ 1 ರಿಂದ ಸೆಪ್ಟೆಂಬರ್ 3ರವರೆಗೆ ಪೆಟ್ರೋಲ್ ದರ ₹ 3.2 ಮತ್ತು ಡೀಸೆಲ್ ದರ ₹ 3.52ರಷ್ಟು ಏರಿಕೆಯಾಗಿವೆ.
ನವದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿ ಲೀಟರಿಗೆ ಕ್ರಮವಾಗಿ 31 ಪೈಸೆ ಮತ್ತು 39 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ₹ 79.15 ಮತ್ತು ಡೀಸೆಲ್ ₹ 71.15 ರಂತೆ ಮಾರಾಟವಾಗಿವೆ. ಆಗಸ್ಟ್ 16 ರಿಂದ ಪೆಟ್ರೋಲ್ ದರ ಲೀಟರಿಗೆ ₹ 2 ಮತ್ತು ಡೀಸೆಲ್ ದರ ಲೀಟರಿಗೆ ₹ 2.42 ರಷ್ಟು ಹೆಚ್ಚಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.