ಕೌಟುಂಬಿಕ ಉಳಿತಾಯ ಕುಸಿತ

ಬುಧವಾರ, ಏಪ್ರಿಲ್ 24, 2019
27 °C

ಕೌಟುಂಬಿಕ ಉಳಿತಾಯ ಕುಸಿತ

Published:
Updated:
Prajavani

ನವದೆಹಲಿ: ಭಾರತೀಯರ ಕೌಟುಂಬಿಕ ಉಳಿತಾಯ ದರವು 2017–18ರಲ್ಲಿ ಎರಡು ದಶಕಗಳ ಹಿಂದಿನ ಮಟ್ಟಕ್ಕೆ
(ಶೇ 17.2) ಕುಸಿದಿರುವುದರಿಂದ ಆರ್ಥಿಕತೆಯಲ್ಲಿನ ಬಂಡವಾಳ ಹೂಡಿಕೆ ದರವು ಗಮನಾರ್ಹವಾಗಿ ಕಡಿಮೆಯಾಗಿದೆ.

ದೇಶಿ ಬಂಡವಾಳ ಹೂಡಿಕೆ ಪ್ರಮಾಣವು ಕಡಿಮೆಯಾಗಿರುವುದು ಕುಂಠಿತ ಉತ್ಪಾದನೆ, ಭಾರಿ ಯಂತ್ರೋಪಕರಣಗಳ ಆಮದು ಕುಸಿತದಲ್ಲಿ ಪ್ರತಿಫಲನಗೊಳ್ಳುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೌಟುಂಬಿಕ ಉಳಿತಾಯ ಪ್ರಮಾಣವು ಕಡಿಮೆಯಾಗಿರುವುದರಿಂದ ಖಾಸಗಿ ವಲಯಕ್ಕಿಂತ ಸರ್ಕಾರಿ ಸ್ವಾಮ್ಯದ ವಲಯದ ಬೆಳವಣಿಗೆ ಮೇಲೆ ಹೆಚ್ಚಿನ ವ್ಯತಿರಿಕ್ತ ಪರಿಣಾಮ ಕಂಡುಬರುತ್ತಿದೆ. ಕೇಂದ್ರೋದ್ಯಮಗಳು ಇಂತಹ ಉಳಿತಾಯವನ್ನು ಬಹುವಾಗಿ ನೆಚ್ಚಿ
ಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಕೌಟುಂಬಿಕ ಉಳಿತಾಯದ ಅನುಪಾತವು 2017–18ರಲ್ಲಿ ಶೇ 17.2ಕ್ಕೆ ಇಳಿದಿದೆ. 1997–98ರ ನಂತರದ ಅತಿ ಕಡಿಮೆ ದರ ಇದಾಗಿದೆ. 2009–10ರಲ್ಲಿ ಇದು ಗರಿಷ್ಠ ಮಟ್ಟವಾದ ಶೇ 25.2ರಷ್ಟಿತ್ತು.

ಆರ್ಥಿಕತೆಯಲ್ಲಿನ ಒಟ್ಟಾರೆ ಉಳಿತಾಯದಲ್ಲಿ ಕೌಟುಂಬಿಕ ಉಳಿತಾಯದ ಪ್ರಮಾಣವು ಎರಡು ಮೂರಾಂಶದಷ್ಟು ಇದೆ. ಈ ಉಳಿತಾಯ ಪ್ರಮಾಣದ ಕಡಿಮೆ ಇರುವುದರಿಂದ ಬಂಡವಾಳ ಹೂಡಿಕೆಗೆ ವಿದೇಶಿ ಸಾಲವನ್ನು ಅಥವಾ ಚಾಲ್ತಿ ಖಾತೆ ಕೊರತೆಯನ್ನು (ಸಿಎಡಿ) ನೆಚ್ಚಿಕೊಳ್ಳಬೇಕಾಗುತ್ತದೆ.

ಮಧ್ಯಂತರ ಬಜೆಟ್‌ನಲ್ಲಿ ಜನರ ಆದಾಯ ಹೆಚ್ಚಿಸುವ ಯೋಜನೆಗಳಿಗೆ ಹೆಚ್ಚು ಹಣ ನಿಗದಿ ಮಾಡಿರುವುದರಿಂದ 2019–20ನೆ ಹಣಕಾಸು ವರ್ಷದಲ್ಲಿಯೂ ದೇಶಿ ಆರ್ಥಿಕತೆಯ ಬೆಳವಣಿಗೆಯು ಸರಕು ಮತ್ತು ಸೇವೆಗಳ ಬಳಕೆಯನ್ನೇ ಹೆಚ್ಚಾಗಿ ಅವಲಂಬಿಸಿರಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !