ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ ವಿರುದ್ಧ ತನಿಖೆಗೆ ‘ಸೆಬಿ’ ಚಾಲನೆ

ಆಡಳಿತ ಮಂಡಳಿಯಿಂದ ವಿವರಣೆ ಕೇಳಿದ ‘ಬಿಎಸ್‌ಇ’
Last Updated 23 ಅಕ್ಟೋಬರ್ 2019, 13:52 IST
ಅಕ್ಷರ ಗಾತ್ರ

ನವದೆಹಲಿ : ಹೂಡಿಕೆದಾರರ ಮೇಲೆ ಪ್ರಭಾವ ಬೀರುವ ಬೆಲೆ ಸೂಕ್ಷ್ಮ ಮಾಹಿತಿಯನ್ನು ಇನ್ಫೊಸಿಸ್ ಆಡಳಿತ ಮಂಡಳಿಯು ಬಹಿರಂಗಪಡಿಸದ ಮತ್ತು ಕಾರ್ಪೊರೇಟ್‌ ಆಡಳಿತದ ವೈಫಲ್ಯ ಕುರಿತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತನಿಖೆಗೆ ಚಾಲನೆ ನೀಡಿದೆ.

ಕಂಪನಿಯ ಷೇರುಗಳಿಗೆ ಸಂಬಂಧಿಸಿದಂತೆ ಒಳಗಿನವರೇ ವಹಿವಾಟು ನಡೆಸಿರುವ ಸಾಧ್ಯತೆ ಕುರಿತೂ ತನಿಖೆ ನಡೆಸಲಿದೆ.

ಕಂಪನಿಯಲ್ಲಿ ನಡೆದ ಅಕ್ರಮಗಳನ್ನು ಬಯಲಿಗೆ ಎಳೆದವರು ಮಾಡಿರುವ ಗಂಭೀರ ಸ್ವರೂಪದ ಆರೋಪಗಳ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ಕಾರ್ಪೊರೇಟ್‌ ಆಡಳಿತದ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದಿರುವುದನ್ನು ‘ಸೆಬಿ’ ಗಂಭೀರವಾಗಿ ಪರಿಗಣಿಸಿದೆ.

ಕಂಪನಿಯ ಷೇರುಗಳ ವಹಿವಾಟಿನ ವಿವರಗಳನ್ನು ಕಲೆ ಹಾಕಲು ‘ಸೆಬಿ’, ಷೇರುಪೇಟೆಗಳಿಗೆ ಕೇಳಿಕೊಂಡಿದೆ. ಪ್ರಮುಖ ಮಾಹಿತಿ ಬಹಿರಂಗಪಡಿಸದಿರುವುದಕ್ಕೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಲೂ ಉದ್ದೇಶಿಸಿದೆ.

ಕಂಪನಿಯ ಉನ್ನತ ಅಧಿಕಾರಿಗಳು ಮತ್ತಿತರನ್ನು ಕರೆಯಿಸಿ ಅವರಿಂದ ವಿವರಗಳನ್ನು ಪಡೆಯಲೂ ‘ಸೆಬಿ’ ಮುಂದಾಗಬಹುದು. ತನಿಖೆಯಲ್ಲಿನ ಪ್ರಗತಿ ಆಧರಿಸಿ, ಲೆಕ್ಕಪತ್ರ ಹಾಗೂ ಇತರ ಹಣಕಾಸು ವಿಷಯಗಳ ಜತೆ ವ್ಯವಹರಿಸಿದ ನಿರ್ದೇಶಕ ಮಂಡಳಿಯ ಕೆಲ ಸದಸ್ಯರಿಂದಲೂ ಮಾಹಿತಿ ಪಡೆಯಬಹುದು.

ಈ ಪ್ರಕರಣದಲ್ಲಿ ಸ್ವತಂತ್ರ ನಿರ್ದೇಶಕರು ನಿರ್ವಹಿಸಿದ ಪಾತ್ರವನ್ನೂ ಪರಿಶೀಲನೆಗೆ ಒಳಪಡಿಸಬಹುದು. ಆರೋಪಗಳು ಕೇಳಿ ಬರುತ್ತಿದ್ದಂತೆ ಸಕಾಲದಲ್ಲಿ ಮಾಹಿತಿ ಬಹಿರಂಗಪಡಿಸಲು ಇವರು ಒತ್ತಡ ಹೇರದಿರಲು ಕಾರಣವೇನು ಎನ್ನುವುದನ್ನೂ ‘ಸೆಬಿ’ ತಿಳಿಯಲು ಬಯಸಿದೆ.

ವಿವರ ಕೇಳಿದ ಬಿಎಸ್‌ಇ: ವರಮಾನ ಮತ್ತು ಲಾಭದ ಪ್ರಮಾಣ ಹೆಚ್ಚಿಸಲು ಕಂಪನಿಯ ಉನ್ನತಾಧಿಕಾರಿಗಳು ನೀತಿ ಬಾಹಿರ ವಿಧಾನ ಅನುಸರಿಸುತ್ತಿರುವ ಬಗ್ಗೆ ಸಲ್ಲಿಸಲಾದ ದೂರುಗಳನ್ನು ಬಹಿರಂಗಪಡಿಸದಿರುವುದಕ್ಕೆ ಕಾರಣ ಏನು ಎನ್ನುವುದಕ್ಕೆ ವಿವರಣೆ ನೀಡಬೇಕು ಎಂದು ಮುಂಬೈ ಷೇರುಪೇಟೆಯು (ಬಿಎಸ್‌ಇ) ಕಂಪನಿಯ ಆಡಳಿತ ಮಂಡಳಿಗೆ ಕೇಳಿಕೊಂಡಿದೆ.

ಅಕ್ರಮಗಳನ್ನು ಬಯಲಿಗೆ ಎಳೆದವರು ಬರೆದಿರುವ ಸೆಪ್ಟೆಂಬರ್‌ 20ರ ದಿನಾಂಕ ಹೊಂದಿರುವ ಪತ್ರವನ್ನು ಅಕ್ಟೋಬರ್‌ 10ಕ್ಕೆ ಲೆಕ್ಕಪತ್ರ ಸಮಿತಿಗೆ ಸಲ್ಲಿಸಲಾಗಿದೆ ಎಂದು ಕಂಪನಿಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದರು. ಕಂಪನಿಯ ನಿರ್ದೇಶಕರೊಬ್ಬರು ಸೆಪ್ಟೆಂಬರ್‌ 30ಕ್ಕೆ ಇದೇ ಬಗೆಯ ದೂರು ಸ್ವೀಕರಿಸಿದ್ದರು ಎನ್ನುವ ಮಾಹಿತಿಯೂ ನಿಲೇಕಣಿ ಅವರ ಹೇಳಿಕೆಯಲ್ಲಿ ಉಲ್ಲೇಖವಾಗಿದೆ.

ಈ ಎರಡೂ ದೂರುಗಳನ್ನು ಕಂಪನಿಯ ಕಾರ್ಯನಿರ್ವಾಹಕಯೇತರ ನಿರ್ದೇಶಕ ಮಂಡಳಿ ಸದಸ್ಯರ ಗಮನಕ್ಕೆ ಅಕ್ಟೋಬರ್‌ 11ಕ್ಕೆ ತರಲಾಗಿತ್ತು. ಅದೇ ದಿನ ಕಂಪನಿಯು ತನ್ನ ದ್ವಿತೀಯ ತ್ರೈಮಾಸಿಕದ ಹಣಕಾಸು ಸಾಧನೆಯನ್ನೂ ಪ್ರಕಟಿಸಿತ್ತು.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮ 30ರ ಅನ್ವಯ ಈ ದೂರನ್ನು ಬಹಿರಂಗಪಡಿಸಬೇಕಾಗಿತ್ತು.

ಅಕ್ರಮ ಬಯಲಿಗೆ ಎಳೆದವರು ಮಾಡಿದ ಆರೋಪಗಳನ್ನು ಬಹಿರಂಗಪಡಿಸದಿರಲು ಏನು ಕಾರಣ ಎಂದು ಷೇರುಪೇಟೆಯು ಇನ್ಫೊಸಿಸ್‌ನಿಂದ ವಿವರಣೆ ಬಯಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT