ಪೇಟೆಯಲ್ಲಿ ಮತ್ತೆ ಮಾರಾಟ ಒತ್ತಡ: 550 ಅಂಶ ಕುಸಿತ ಕಂಡ ಸೂಚ್ಯಂಕ

7

ಪೇಟೆಯಲ್ಲಿ ಮತ್ತೆ ಮಾರಾಟ ಒತ್ತಡ: 550 ಅಂಶ ಕುಸಿತ ಕಂಡ ಸೂಚ್ಯಂಕ

Published:
Updated:

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 550 ಅಂಶಗಳ ಕುಸಿತ ಕಂಡಿತು.

ಅಮೆರಿಕದ ಡಾಲರ್ ಎದುರು ರೂಪಾಯಿ ವಿನಿಮಯ ದರವು ಇದೇ ಮೊದಲ ಬಾರಿಗೆ 73ರ ಗಡಿ ದಾಟಿರುವುದು, ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ವಿದೇಶಿ ಬಂಡವಾಳದ ಹೊರಹರಿವಿನಿಂದಾಗಿ ಪೇಟೆಯಲ್ಲಿ ಮತ್ತೆ ಮಾರಾಟ ಒತ್ತಡ ಕಂಡು ಬಂದಿತು.

ಬೆಳಗಿನ ವಹಿವಾಟಿನಲ್ಲಿ ದುರ್ಬಲ ಆರಂಭ ಕಂಡ ಸೂಚ್ಯಂಕವು, ವಹಿವಾಟಿನ ಉದ್ದಕ್ಕೂ ನಿರಂತರವಾಗಿ ಕುಸಿಯುತ್ತಲೇ ಸಾಗಿತ್ತು. 36 ಸಾವಿರ ಅಂಶಗಳಿಂದ ಕೆಳಗೆ ಇಳಿಯಿತು. ದಿನದಂತ್ಯದಲ್ಲಿ 550 ಅಂಶಗಳಷ್ಟು ಕುಸಿತ ಕಂಡು 35,975 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ಯಲ್ಲಿಯೂ ಕೂಡ ನಕಾರಾತ್ಮಕ ಚಲನೆ ಕಂಡು ಬಂದಿತು. ದಿನದಂತ್ಯದಲ್ಲಿ 150 ಅಂಶಗಳಿಗೆ ಎರವಾಗಿ 10,843 ಅಂಶಗಳಿಗೆ ಕುಸಿದಿತ್ತು.

ಹಣಕಾಸು ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಕೈಗೊಂಡ ಕ್ರಮಗಳ ಫಲವಾಗಿ ಸೂಚ್ಯಂಕವು ಸೋಮವಾರ 299 ಅಂಶಗಳಷ್ಟು ಚೇತರಿಕೆ ಕಂಡಿತ್ತು.

ಕಾದು ನೋಡುವ ತಂತ್ರ: ಭಾರತೀಯ ರಿಸರ್ವ್‌ ಬ್ಯಾಂಕ್ ಇದೇ ಶುಕ್ರವಾರ ತನ್ನ ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆ ಪ್ರಕಟಿಸಲಿರುವುದರಿಂದ ಹೂಡಿಕೆದಾರರು ಎಚ್ಚರಿಕೆಯ ಧೋರಣೆ ತಳೆದಿದ್ದಾರೆ.

ಹಣಕಾಸು ನೀತಿ ಸಮಿತಿಯು (ಎಂಪಿಸಿ) ಶೇ 0.25ರಷ್ಟು ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸುವ ನಿರೀಕ್ಷೆ ಇದೆ.

 ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 85 ಡಾಲರ್‌ಗೆ ತಲುಪಿದೆ. ಡಾಲರ್‌ ಎದುರು ರೂಪಾಯಿ ಬೆಲೆ 43 ಪೈಸೆ ಕುಸಿದಿದೆ. ಏಷ್ಯಾದ ಇತರ ಮಾರುಕಟ್ಟೆಗಳಲ್ಲಿನ ನಕಾರಾತ್ಮಕ ವಹಿವಾಟು ಕೂಡ ಷೇರುಪೇಟೆಯಲ್ಲಿ ನಿರುತ್ಸಾಹ ಮೂಡಿಸಿವೆ.

‘ಐಎಲ್‌ ಆ್ಯಂಡ್‌ ಎಫ್‌ಎಸ್‌’ ಎದುರಿಸುತ್ತಿರುವ ಸಾಲ ಮರುಪಾವತಿ ಬಿಕ್ಕಟ್ಟು ಬಗೆಹರಿಸಲು ಕೇಂದ್ರ ಸರ್ಕಾರ ದೃಢ ನಿರ್ಧಾರ ಕೈಗೊಂಡಿದ್ದರೂ ಮಾರುಕಟ್ಟೆಯಲ್ಲಿ ಮಾರಾಟ ಒತ್ತಡ ಮುಂದುವರೆದಿದೆ.

ವಾಹನ ತಯಾರಿಕೆ ಮತ್ತು ಐ.ಟಿ ಸಂಸ್ಥೆಗಳ ಷೇರುಗಳ ಬೆಲೆಗಳೂ ಕುಸಿತ ಕಾಣುತ್ತಿವೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಷೇರು ಬೆಲೆ ಶೇ 6.66 ಮತ್ತು ಟಿಸಿಎಸ್‌ ಶೇ 4.14ರಷ್ಟು ಕುಸಿತ ಕಂಡವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !