ಬುಧವಾರ, ಏಪ್ರಿಲ್ 8, 2020
19 °C
ದಿನದ 2ನೇ ಅತಿದೊಡ್ಡ ಕುಸಿತ; ಕರಗಿದ ₹ 7.62 ಲಕ್ಷ ಕೋಟಿ ಸಂಪತ್ತು

ಷೇರುಪೇಟೆ: ನಿಯಂತ್ರಣಕ್ಕೆ ಬಾರದ ಕರಡಿ ಕುಣಿತ, ಕರಗಿದ ₹7.62 ಲಕ್ಷ ಕೋಟಿ ಸಂಪತ್ತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈ ಷೇರುಪೇಟೆಯಲ್ಲಿನ ಮಹಾ ಕುಸಿತವು ಸೋಮವಾರವೂ ಮುಂದುವರೆಯಿತು. ಶುಕ್ರವಾರವಷ್ಟೇ ಚೇತರಿಕೆ ಕಂಡಿದ್ದ ಪೇಟೆಯು ವಾರದ ಆರಂಭದಲ್ಲಿಯೇ ದೊಡ್ಡ ಮಟ್ಟದಲ್ಲಿ ಮುಗ್ಗರಿಸಿತು.

‘ಕೊರೊನಾ–2’ ವೈರಸ್‌ ಉಂಟು ಮಾಡುತ್ತಿರುವ ಹಾವಳಿಯಿಂದಾಗಿ ವಿಶ್ವದಾದ್ಯಂತ ಆರ್ಥಿಕ, ಸಾಮಾಜಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಇದರಿಂದಾಗಿ ಜಾಗತಿಕ ಆರ್ಥಿಕತೆಯು ಹಿಂಜರಿತಕ್ಕೆ ಒಳಗಾಗುವ ಭೀತಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಏಷ್ಯಾ ಮತ್ತು ಯುರೋಪ್‌ನ ಷೇರುಪೇಟೆಗಳಲ್ಲಿ ವಹಿವಾಟು ಕುಸಿತ ಕಂಡಿತು.

ವಹಿವಾಟು ಸ್ಥಗಿತ: ನ್ಯೂಯಾರ್ಕ್‌ ಷೇರುಪೇಟೆಯಲ್ಲಿ ವಹಿವಾಟು ಆರಂಭದ ಗಂಟೆ ಬಾರಿಸುತ್ತಿದ್ದಂತೆ ಷೇರುಗಳ ಬೆಲೆ ಶೇ 8.1ರಷ್ಟು ಕುಸಿತ ದಾಖಲಿಸಿದವು. ಈ ಕಾರಣಕ್ಕೆ ವಹಿವಾಟನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ನಾಸ್ದಾಕ್‌ ಕಂಪೊಸಿಟ್‌ ಇಂಡೆಕ್ಸ್‌ ಶೇ 6.1ರಷ್ಟು ಕುಸಿತ ಕಂಡಿತು.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು ದಿನದ ಅಂತ್ಯಕ್ಕೆ 2,713 ಅಂಶ ಕುಸಿತ ಕಂಡು, 31,390 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ದಿನವೊಂದರಲ್ಲಿನ ಎರಡನೇ ಅತಿದೊಡ್ಡ ಕುಸಿತ ಇದಾಗಿದೆ.

ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡಲು ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಕಡಿತವೂ ಸೇರಿದಂತೆ ಹೊಸದಾಗಿ ಉತ್ತೇಜನ ಕೊಡುಗೆ ಪ್ರಕಟಿಸಿವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಮಧ್ಯಾಹ್ನ 4 ಗಂಟೆಗೆ ಹಠಾತ್ತಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬಡ್ಡಿ ದರ ಕಡಿತದ ಘೋಷಣೆ ಹೊರ ಬೀಳಲಿದೆ ಎನ್ನುವ ನಿರೀಕ್ಷೆ ಗರಿಗೆದರಿತ್ತು. ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅಂತಹ ಘೋಷಣೆಯನ್ನೇನೂ ಮಾಡಲಿಲ್ಲ.

ಹೂಡಿಕೆದಾರರ ಸಂಪತ್ತು ನಷ್ಟ

ಸೋಮವಾರದ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 7.62 ಲಕ್ಷ ಕೋಟಿ ಕರಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು