ಮುಂಬೈ: ವಿದೇಶಿ ಬಂಡವಾಳದ ಒಳಹರಿವಿನ ಹೆಚ್ಚಳದಿಂದ ದೇಶದ ಷೇರು ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿವೆ.
ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿ ದರ ಕಡಿತದಿಂದಾಗಿ ಇಂಧನ, ಬ್ಯಾಂಕ್, ಆಟೊ ವಲಯದ ಷೇರುಗಳಲ್ಲಿ ಖರೀದಿ ಹೆಚ್ಚಳ ಮತ್ತು ಏಷ್ಯನ್ ಮಾರುಕಟ್ಟೆಯಲ್ಲಿ ನಡೆದ ಸಕಾರಾತ್ಮಕ ವಹಿವಾಟು ಸಹ ಸೂಚ್ಯಂಕಗಳ ಏರಿಕೆಗೆ ಸಹಕಾರಿಯಾದವು.
ಸತತ ಮೂರು ವಹಿವಾಟು ದಿನದಲ್ಲಿನ ಷೇರು ಸೂಚ್ಯಂಕಗಳ ಏರಿಕೆಯಿಂದ ಹೂಡಿಕೆದಾರರ ಸಂಪತ್ತು ₹8.30 ಲಕ್ಷ ಕೋಟಿ ವೃದ್ಧಿಸಿದೆ. ಬಿಎಸ್‌ಇ ಕಂಪನಿಗಳ ನೋಂದಾಯಿತ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್) ₹476 ಲಕ್ಷ ಕೋಟಿಗೆ (5.70 ಟ್ರಿಲಿಯನ್ ಡಾಲರ್) ಮುಟ್ಟಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್ 384 ಅಂಶ ಏರಿಕೆಯಾಗಿ, 84,928ಕ್ಕೆ ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 148 ಅಂಶ ಹೆಚ್ಚಳವಾಗಿ 25,939ಕ್ಕೆ ಸ್ಥಿರಗೊಂಡಿತು.
ಮಹೀಂದ್ರ ಆ್ಯಂಡ್ ಮಹೀಂದ್ರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಹಿಂದುಸ್ತಾನ್ ಯೂನಿಲಿವರ್, ಕೋಟಕ್ ಮಹೀಂದ್ರ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಅದಾನಿ ಪೋರ್ಟ್ಸ್ ಮತ್ತು ಟಾಟಾ ಸ್ಟೀಲ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.
ಏಷ್ಯನ್ ಮಾರುಕಟ್ಟೆಯಲ್ಲಿ ಸೋಲ್ ಮತ್ತು ಶಾಂಘೈ ಸಕಾರಾತ್ಮಕ ವಹಿವಾಟು ನಡೆಸಿವೆ. ಜಾಗತಿಕ ಬ್ರೆಂಟ್ ಕಚ್ಚಾ ತೈಲ ದರವು ಬ್ಯಾರೆಲ್‌ಗೆ ಶೇ 0.09ರಷ್ಟು ಏರಿಕೆಯಾಗಿ, 74.55 ಡಾಲರ್‌ಗೆ (₹6,228) ತಲುಪಿದೆ.