ಮಂಗಳವಾರ, ಸೆಪ್ಟೆಂಬರ್ 28, 2021
22 °C

ಆರ್ಥಿಕ ಚೇತರಿಕೆಯ ಭರವಸೆ; ಸೆನ್ಸೆಕ್ಸ್‌ 873 ಅಂಶ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಆರ್ಥಿಕ ಚೇತರಿಕೆಯ ಭರವಸೆಯಿಂದಾಗಿ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ವಹಿವಾಟು ಜೋರಾಗಿತ್ತು. ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 873 ಅಂಶ ಜಿಗಿತ ಕಂಡಿತು.

ಸಕಾರಾತ್ಮಕ ವಹಿವಾಟಿನ ಪ್ರಭಾವದಿಂದ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 2.30 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಷೇರುಪೇಟೆಯ ಬಂಡವಾಳ ಮೌಲ್ಯವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 240 ಲಕ್ಷ ಕೋಟಿಗೆ ತಲುಪಿದೆ.

ಸೆನ್ಸೆಕ್ಸ್‌ನಲ್ಲಿ ಟೈಟಾನ್‌ ಕಂಪನಿಯ ಷೇರು ಶೇ 3.89ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ಎಚ್‌ಡಿಎಫ್‌ಸಿ, ನೆಸ್ಲೆ ಇಂಡಿಯಾ, ಇಂಡಸ್‌ಇಂಡ್‌ ಬ್ಯಾಂಕ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಭಾರ್ತಿ ಏರ್‌ಟೆಲ್‌ ಮತ್ತು ಎಸ್‌ಬಿಐ ಷೇರುಗಳ ಬೆಲೆಯೂ ಹೆಚ್ಚಾಗಿದೆ.

ಸದ್ಯದ ಏರುಮುಖ ಚಲನೆಯು  ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಈಗ ಬರುತ್ತಿರುವ ಹೊಸ ಹೂಡಿಕೆದಾರರಿಗೆ ಇದು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್‌. ರಂಗನಾಥನ್‌ ಹೇಳಿದ್ದಾರೆ.

ಜಿಎಸ್‌ಟಿ ಸಂಗ್ರಹ, ವಾಹನ ಮಾರಾಟ ಮತ್ತು ಇ–ವೇ ಬಿಲ್‌ನಂತಹ ಪ್ರಮುಖ ಆರ್ಥಿಕ ಸೂಚಕಗಳು ಜುಲೈನಲ್ಲಿ ಉತ್ತಮ ಬೆಳವಣಿಗೆ ಕಂಡಿವೆ. ಕಾರ್ಪೊರೇಟ್‌ ಗಳಿಕೆಯು ಆರೋಗ್ಯಕರವಾಗಿದೆ ಎನ್ನುವುದನ್ನು ಇವು ಸೂಚಿಸುತ್ತಿವೆ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಯೋಜನಾ ಮುಖ್ಯಸ್ಥ ವಿನೋದ್‌ ಮೋದಿ ಹೇಳಿದ್ದಾರೆ.

ಹಣಕಾಸು ವಲಯವನ್ನು ಹೊರತುಪಡಿಸಿ, ಜೂನ್‌ ತ್ರೈಮಾಸಿಕದಲ್ಲಿ ಕಂಪನಿಗಳ ಇದುವರೆಗಿನ ಫಲಿತಾಂಶಗಳು ಉತ್ತೇಜನಕಾರಿ ಆಗಿದ್ದು, ಬಹುಪಾಲು ಕಂಪನಿಗಳು ನಿರೀಕ್ಷೆಯನ್ನೂ ಮೀರಿ ಗಳಿಕೆ ಕಂಡಿವೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡದ ನಡುವೆಯೂ ಸೂಚ್ಯಂಕವನ್ನು ಕುಸಿಯದಂತೆ ತಡೆದಿದೆ ಎಂದಿದ್ದಾರೆ.

ಬಿಎಸ್‌ಇ ಟೆಲಿಕಾಂ, ಎಫ್‌ಎಂಸಿಜಿ, ವಾಹನ, ಬ್ಯಾಂಕ್‌, ಹಣಕಾಸು ಮತ್ತು ತಂತ್ರಜ್ಞಾನ ವಲಯಗಳು ಶೇ 1.70ರವರೆಗೂ ಏರಿಕೆ ಕಂಡಿವೆ. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 0.23ರವರೆಗೂ ಏರಿಕೆ ಕಂಡಿವೆ.

ಬ್ರೆಂಟ್‌ ಕಚ್ಚಾತೈಲ ದರವು ಶೇ 0.80ರಷ್ಟು ಹೆಚ್ಚಾಗಿದ್ದು ಒಂದು ಬ್ಯಾರಲ್‌ಗೆ 73.47 ಡಾಲರ್‌ಗಳಿಗೆ ತಲುಪಿದೆ.

16 ಸಾವಿರದ ಗಡಿ ದಾಟಿದ ನಿಫ್ಟಿ: ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿಯು ಇದೇ ಮೊದಲ ಬಾರಿಗೆ 16 ಸಾವಿರದ ಗಡಿ ದಾಟಿತು. ಮಂಗಳವಾರದ ವಹಿವಾಟಿನಲ್ಲಿ 245 ಅಂಶ ಏರಿಕೆಯೊಂದಿಗೆ 16,130 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು