ಬುಧವಾರ, ಡಿಸೆಂಬರ್ 8, 2021
27 °C

‘ಪೇಟಿಎಂ ಮನಿ’ಯಲ್ಲಿ ಷೇರು ವಹಿವಾಟು

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಪತ್ತು ನಿರ್ವಹಣಾ ಕ್ಷೇತ್ರದಲ್ಲಿ 2022ರ ವೇಳೆಗೆ ಅತಿದೊಡ್ಡ ಪಾಲನ್ನು ಹೊಂದುವ ಗುರಿಯೊಂದಿಗೆ ‘ಪೇಟಿಎಂ ಮನಿ’ ತನ್ನ ಮೂಲಕ ಷೇರುಗಳನ್ನು ನೇರವಾಗಿ ಖರೀದಿ ಮಾಡುವ ಅವಕಾಶ ಕಲ್ಪಿಸಿದೆ. ಆಯ್ದ ಬಳಕೆದಾರರಿಗೆ ಈ ಸೌಲಭ್ಯವು ಈಗಾಗಲೇ ಸಿಗುತ್ತಿದೆ.

‘ಪೇಟಿಎಂ ಮನಿ’ ಆ್ಯಪ್‌ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಅವಕಾಶವನ್ನು ವರ್ಷಗಳಿಂದ ನೀಡಲಾಗುತ್ತಿದೆ. ಹಾಗೆಯೇ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್‌) ಹೂಡಿಕೆ ಮಾಡುವ ಅವಕಾಶವನ್ನೂ ಇದು ನೀಡುತ್ತಿದೆ. ಈ ಮೊದಲೇ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುತ್ತಿದ್ದವರು, ಪೇಟಿಎಂ ಮನಿ ಮೂಲಕವೇ ಆ ಹೂಡಿಕೆ ಮುಂದುವರಿಸುವ ಅವಕಾಶವು ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆ ಇದೆ.

‘ನಮ್ಮ ವೇದಿಕೆಯ ಮೂಲಕ ಡಿಮ್ಯಾಟ್‌ ಖಾತೆ ತೆರೆದು, ಷೇರು ಖರೀದಿ–ಮಾರಾಟ ಮಾಡಲು ಎರಡು ಲಕ್ಷಕ್ಕಿಂತ ಹೆಚ್ಚು ಜನ ಉತ್ಸುಕರಾಗಿದ್ದಾರೆ’ ಎಂದು ಪೇಟಿಎಂ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಸ್ಮಾರ್ಟ್‌ಫೋನ್‌ ಬಳಕೆ ಭಾರತದಲ್ಲಿ ಈಗ ಹೆಚ್ಚಾಗಿದೆ. ಜನ ಈಗ ಹಣಕಾಸು ಸೇವೆಗಳನ್ನು ತಮ್ಮ ಸ್ಮಾರ್ಟ್‌ಫೋನ್‌ ಮೂಲಕವೇ ಪಡೆದುಕೊಳ್ಳುತ್ತಿದ್ದಾರೆ. ಮ್ಯೂಚುವಲ್‌ ಫಂಡ್‌ಗಳು ಹಾಗೂ ಷೇರುಗಳಲ್ಲಿ ಜನ ಹೂಡಿಕೆ ಮಾಡುವುದನ್ನು ಹೆಚ್ಚಿಸುವುದು ನಮ್ಮ ಗುರಿ. ಎಲ್ಲ ಆರ್ಥಿಕ ವರ್ಗಗಳಿಗೆ ಸೇರಿದ ಜನ ತಮ್ಮ ಕುಟುಂಬದ ಆದಾಯವನ್ನು ಷೇರು ಮಾರುಕಟ್ಟೆಗಳಲ್ಲಿ, ಮ್ಯೂಚುವಲ್‌ ಫಂಡ್‌ಗಳಲ್ಲಿ, ಎನ್‌ಪಿಎಸ್‌ನಲ್ಲಿ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡುವಂತೆ ಆಗಬೇಕು’ ಎಂದು ಪೇಟಿಎಂ ಹೇಳಿದೆ.

‘ಡಿಮ್ಯಾಟ್‌ ಖಾತೆ ತೆರೆಯುವ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್‌ ಆಗಿದೆ’ ಎಂದು ಕಂಪನಿ ಹೇಳಿಕೊಂಡಿದೆ. ಇಷ್ಟದ ಕಂಪನಿಯ ಷೇರುಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಯ (ಎಸ್‌ಐಪಿ) ಮೂಲಕ ಹೂಡಿಕೆ ಮಾಡುವ ಅವಕಾಶ ಕೂಡ ಇದರಲ್ಲಿ ಲಭ್ಯವಿದೆ.

ಲಾಕ್‌ಡೌನ್‌ ಅವಧಿಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಡಿಮ್ಯಾಟ್‌ ಖಾತೆಗಳನ್ನು ತೆರೆಯಲಾಗಿದ್ದು, ಜನ ತಮ್ಮ ಉಳಿತಾಯದ ಹಣವನ್ನು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂಬ ವರದಿಗಳು ಇವೆ. ಆದರೆ, ವಿವಿಧ ಆ್ಯಪ್‌ಗಳ ಮೂಲಕ ನೇರವಾಗಿ ಷೇರುಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ವೈಯಕ್ತಿಕ ಹಣಕಾಸು ಸಲಹೆಗಾರರು ಒಂದೆರಡು ಕಿವಿಮಾತುಗಳನ್ನು ಹೇಳುತ್ತಾರೆ.

‘ಷೇರು ಮಾರುಕಟ್ಟೆ ಹಾಗೂ ಅರ್ಥ ವ್ಯವಸ್ಥೆಯ ಮೂಲಭೂತ ಅರಿವು ಇಲ್ಲದಿದ್ದರೆ ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದು ಸರಿಯಲ್ಲ. ಆದರೆ, ಹಲವರು ಇಂದು ಆ ಕೆಲಸ ಮಾಡುತ್ತಿದ್ದಾರೆ. ನೀವು ಹೂಡಿಕೆ ಮಾಡುತ್ತಿರುವ ಕಂಪನಿ ಹಾಗೂ ಆ ಕಂಪನಿಯು ಪ್ರತಿನಿಧಿಸುವ ಉದ್ಯಮ ವಲಯದ ಬಗ್ಗೆ ಒಂದಿಷ್ಟು ಅರಿತುಕೊಂಡೇ ಹೂಡಿಕೆ ಮಾಡಿ’ ಎಂದು ವೈಯಕ್ತಿಕ ಹಣಕಾಸು ಮಾರ್ಗದರ್ಶಕಿ ಪ್ರೀತಾ ವಾಲಿ ಹೇಳಿದರು.

‘ತೀರಾ ಈಚೆಗೆ ಷೇರು ಮಾರುಕಟ್ಟೆ ಪ್ರವೇಶ ಮಾಡಿದವರು ಮಾರ್ಚ್‌ ತಿಂಗಳ ನಂತರ ಹಣ ಬೆಳೆದಿದ್ದನ್ನು ಮಾತ್ರ ಕಂಡಿದ್ದಾರೆ. ಮಾರುಕಟ್ಟೆ ಕುಸಿದು, ಹಣ ಕಳೆದುಕೊಳ್ಳುವುದನ್ನು ಅವರು ಕಂಡಿಲ್ಲ. ಷೇರು ಖರೀದಿ–ಮಾರಾಟವು ತಕ್ಷಣ ಹಣ ಮಾಡಲು ಇರುವ ಮಾರ್ಗ ಎಂದು ಹಲವರು ಭಾವಿಸಿರಬಹುದು. ಆದರೆ ವಾಸ್ತವ ಹಾಗಿಲ್ಲ. ಈಕ್ವಿಟಿಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಬೇಕು. ಬೇರೆ ಯಾವುದೋ ಉದ್ಯೋಗದಲ್ಲಿ ತೊಡಗಿಸಿಕೊಂಡು ಷೇರು ಟ್ರೇಡಿಂಗ್ ಕೆಲಸ ಮಾಡುವುದು ಸೂಕ್ತವಲ್ಲ’ ಎಂದು ಪ್ರೈಮ್‌ ಇನ್ವೆಸ್ಟರ್‌ನ ಸಹಸ್ಥಾಪಕಿ ವಿದ್ಯಾ ಬಾಲಾ ಕಿವಿಮಾತು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು