ಶುಕ್ರವಾರ, ನವೆಂಬರ್ 22, 2019
19 °C

ಶಾಪಿಂಗ್‌ ಡಯೆಟ್‌!

Published:
Updated:
Prajavani

ನಗರದ ಒತ್ತಡ ಜೀವನ ಶೈಲಿಗೆ ಕಾರಣಗಳು ಹಲವು. ಕೆಲಸ, ಕುಟುಂಬ ಎಂದೆಲ್ಲ ಎಡತಾಕುವ ಮಂದಿ ಮನೆ ನಿರ್ವಹಣೆಯಲ್ಲೇ ಕೆಲವೊಮ್ಮೆ ಹೈರಾಣಾಗಿರುತ್ತಾರೆ. ಕೂಲಂಕುಷವಾಗಿ ಪರಿಶೀಲಿಸಿ ನೋಡಿ. ನೀವು ಯಾವತ್ತೂ ಬಳಸದ ಎಷ್ಟು ವಸ್ತುಗಳನ್ನು ಖರೀದಿಸಿ ವೆಚ್ಚ ಮಾಡಿದ್ದೀರಿ ಎನ್ನುವದು ನಿಮ್ಮ ಅರಿವಿಗೇ ಬರುತ್ತದೆ. ಕೆಲವರು ಬಟ್ಟೆ, ಪರ್ಫ್ಯೂಮ್, ವಾಚ್, ಆಲಂಕಾರಿಕ ಸಾಮಗ್ರಿಗಳು ಇತ್ಯಾದಿಗಳಿಗಾಗಿ ನಿರಂತರವಾಗಿ ಖರ್ಚು ಮಾಡುತ್ತಿರುತ್ತಾರೆ. ಹೆಚ್ಚಿನವರು ಬೋರ್ ಆಯಿತೆಂದು ಅಗತ್ಯವಿಲ್ಲದಿದ್ದರೂ ಶಾಪಿಂಗ್ ಮಾಡುವ ಹವ್ಯಾಸ ಹೊಂದಿರುತ್ತಾರೆ. ಅತಿಯಾಗಿ ಬೇಡದ ವಸ್ತುಗಳ ಮೇಲೆ ಹಣ ಸುರಿಯುವುದು ನಿಮ್ಮ ಆರ್ಥಿಕತೆಯ ಮೇಲೆ ನೀವು ತಂದುಕೊಳ್ಳುವ ಪೆಟ್ಟು. ಅನಗತ್ಯ ವಸ್ತುಗಳ ಅತಿಯಾದ ಖರೀದಿಯ ಸಮಸ್ಯೆಯೆಂದರೆ ಅದು ಹಣದ ಆರ್ಥಿಕ ಶಕ್ತಿಯ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. 

ಕೊಳ್ಳುಬಾಕ ಸಂಸ್ಕೃತಿ

ಯಾವುದೇ ವಸ್ತುವನ್ನು ಇನ್ನೊಬ್ಬರಲ್ಲಿ ಕಂಡಾಗ ಅದರ ಅಗತ್ಯವಿದೆಯೋ ಇಲ್ಲವೋ ಒಟ್ಟಾರೆ ಅದು ನಮಗೆ ಬೇಕಿರುತ್ತದೆ. ಇದನ್ನು ಮನಗಂಡ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ವಿವಿಧ ರೀತಿಯಲ್ಲಿ ಪ್ರಸ್ತುತಪಡಿಸಿ ಆಕರ್ಷಿತರಾಗುವಂತೆ ಮಾಡುತ್ತವೆ. ಆದರೆ ಯಾವುದೇ ಉತ್ಪನ್ನದಲ್ಲಿ ಅಗತ್ಯವಾದ ಕೆಲ ಸೇವೆಗಳಿದ್ದರೆ ಅನಗತ್ಯವಾದ ದುಪ್ಪಟ್ಟು ಅಂಶಗಳಿರುತ್ತವೆ. ಇಂತಹ ದುಬಾರಿ ವಸ್ತುಗಳನ್ನು ಕೊಂಡು ಉಪಯೋಗಿಸುವ ಮೂಲಕ ಧನ್ಯತಾಭಾವ ಪಡೆಯುತ್ತೇವೆ. ಆದರೆ, ಇದರಲ್ಲಿ ಅನಗತ್ಯವಾದ ಸೇವೆಗಳಿಗೂ ಹಣ ನೀಡಿರುತ್ತೇವೆ. ನಾಳೆ ಇನ್ನೊಬ್ಬರ ಕೈಯ್ಯಲ್ಲಿ ಇದಕ್ಕೂ ಉತ್ತಮ ವಸ್ತು ಕಂಡರೆ ನಮ್ಮಲ್ಲಿರುವ ವಸ್ತು ನಿಕೃಷ್ಟವಾಗಿ ಕಾಣುತ್ತದೆ. ಆ ವಸ್ತು ಬೇಕು ಎನಿಸುತ್ತದೆ. ಈಗಿರುವುದು ಮೂಲೆಗುಂಪಾಗುತ್ತದೆ. ಇಂತಹ ಅತಿ ಖರೀದಿಯ ವ್ಯಾಮೋಹ ಇನ್ನಷ್ಟು ಒತ್ತಡಕ್ಕೆ ಕಾರಣವಾಗುವುದಲ್ಲದೆ ಆ ವಸ್ತುಗಳತ್ತಲೇ ಹೆಚ್ಚಿನ ಸಮಯ ಮತ್ತು ಶ್ರಮ ವ್ಯಯವಾಗುತ್ತವೆ.

ಸರಳ ಜೀವನ ಶೈಲಿ ಏಕೆ ಅಗತ್ಯ

ಅಗತ್ಯಕ್ಕಿಂತ ಹೆಚ್ಚಿರುವ ವಸ್ತುಗಳು ಸ್ಥಳವನ್ನು ಆಕ್ರಮಿಸುತ್ತವೆ. ಅವುಗಳ ನಿರ್ವಹಣೆಯೂ ಕಷ್ಟ. ದಿನದ ಬಹುಪಾಲು ಸಮಯ ವಸ್ತುಗಳನ್ನು ಸ್ಚಚ್ಛಗೊಳಿಸುವ, ಒಪ್ಪ–ಓರಣಗೊಳಿಸುವುದರಲ್ಲೇ ಕಳೆದು ಹೋಗಿ ಇತರೆ ಕೆಲಸಗಳೆಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದು ಒತ್ತಡಕ್ಕೂ ಕಾರಣವಾಗುತ್ತದೆ. ಹೆಚ್ಚಿನ ವಸ್ತುಗಳಿದ್ದರೆ ಕೆಲಸ ಹೆಚ್ಚಿರುವಂತೆ ಭಾಸವಾಗಿ ಕಿರಿಕಿರಿ ಎನಿಸುತ್ತದೆ. ಮನೆಯಲ್ಲಿ ಆದಷ್ಟು ಕಡಿಮೆ ವಸ್ತಗಳಿರುವ ಹಾಗೂ ಬಳಸುವ ಸರಳ ಜೀವನ ಶೈಲಿ ಸುಂದರವಾಗಿರುತ್ತದೆ. ನಿರ್ವಹಣೆಯೂ ಸುಲಭ.

ನೀವೊಮ್ಮೆ ನಿಮ್ಮ ಇಡೀ ಮನೆ ಅವಲೋಕಿಸಿ. ಅಲ್ಲಿ ನೀವು ಒಮ್ಮೆಯೂ ಬಳಸದ ಅದೆಷ್ಟೋ ವಸ್ತುಗಳಿರುತ್ತವೆ. ಯಾವುದೋ ಕಾರಣದಿಂದ ಕೊಂಡು ತಂದ ಸರಕುಗಳು ಉಪಯೋಗಕ್ಕೆ ಬಾರದೆ ಮೂಲೆ ಗುಂಪಾಗಿರುತ್ತವೆ. ಸುಖಾಸುಮ್ಮನೆ ಅವುಗಳ ನಿರ್ವಹಣೆ ಮಾಡಬೇಕಿರುತ್ತದೆ. ಬಹುಪಾಲು ಮಹಿಳೆಯರು ಇಂತಹ ನಿರ್ವಹಣೆಯಿಂದಲೇ ಬಳಲುತ್ತಿರುತ್ತಾರೆ. ಆದ್ದರಿಂದ ವಸ್ತುಗಳನ್ನು ಕಡಿಮೆ ಮಾಡಿ, ಕನಿಷ್ಠ ಜೀವನ ಶೈಲಿ ಅಳವಡಿಸಿಕೊಳ್ಳುವುದು ಸೂಕ್ತ. 

ಅನಗತ್ಯ ಅಥವಾ ಹೆಚ್ಚಿನ ವಸ್ತುಗಳು ಮತ್ತು ಪರಿಹಾರ: ಬಳಸದ ವಸ್ತುಗಳನ್ನು ಪಟ್ಟಿಮಾಡಿ. ಬಟ್ಟೆ, ಪಾತ್ರೆಗಳು, ಬ್ಯಾಗು, ವಾಚು, ಆಲಂಕಾರಿಕ  ಸಾಮಗ್ರಿಗಳು ಇತ್ಯಾದಿ. ಅವುಗಳನ್ನು ನಿರ್ಗತಿಕರಿಗೆ, ಅನಾಥಾಶ್ರಮ, ವೃದ್ಧಾಶ್ರಮ, ಕೆಲ ಸಂಸ್ಥೆಗಳಿಗೆ ದಾನ ನೀಡಿ. ಇತ್ತೀಚೆಗೆ ನಗರದ ಕೆಲವೆಡೆಗಳಲ್ಲಿ ರಸ್ತೆ ಬದಿಯಲ್ಲಿ ‘ವಾಲ್ ಆಫ್ ಕೈಂಡ್‌ನೆಸ್’ ಹೆಸರಿನ ಕಪಾಟುಗಳನ್ನು ನಿರ್ಮಿಸಲಾಗಿದೆ. ಅಲ್ಲಿಗೂ ಹೆಚ್ಚಿನ ವಸ್ತುಗಳನ್ನು ನೀಡಬಹುದು. ಹೀಗೆ ಮಾಡುವುದರಿಂದ ಮಾನಸಿಕ ಉಲ್ಲಾಸ ಸಿಗುತ್ತದೆ. ಆ ವಸ್ತುಗಳು ಇನ್ಯಾರದೋ ಅಗತ್ಯ ಗಳನ್ನು ಪೂರೈಸುತ್ತವೆ. ಮನೆಗೆಲಸದ ಒತ್ತಡವೂ ಕಡಿಮೆಯಾಗುತ್ತದೆ.

ಯಾವುದು ಬಹಳ ಮುಖ್ಯ ಎಂಬುದನ್ನು ಗಮನಿಸಿ: ಮೊದಲು ನಿಮ್ಮ ಅಗತ್ಯಗಳೇನು ಎಂಬುದನ್ನು ಅರಿಯಿರಿ. ಅವುಗಳನ್ನು ಆದ್ಯತೆಯ ಮೇರೆಗೆ ಪಟ್ಟಿ ಮಾಡಿ. 

ಬಜೆಟ್ ತಯಾರಿಸಿಕೊಳ್ಳಿ

ತಿಂಗಳಿಗೆ ಇಂತಿಷ್ಟು ಮಾತ್ರ ಖರ್ಚು ಮಾಡುವ ಬದ್ಧತೆಯಿರಲಿ. ಮಾರುಕಟ್ಟೆಗೆ ಲಗ್ಗೆ ಇಡುವ ಟ್ರೆಂಡಿ ಫ್ಯಾಷನ್, ಎಲ್ಲವನ್ನು ಟ್ರೈ ಮಾಡುವ ಗೀಳು ಬೇಡ. ಪ್ರತಿಸಲವೂ ಪಟ್ಟಿಯಲ್ಲಿದ್ದುದನ್ನು ಮಾತ್ರವಲ್ಲದೆ ‘ಚೆನ್ನಾಗಿದೆ, ಟ್ರೈ ಮಾಡೋಣ’ ಎಂದೋ ‘ಹೊಸತು’, ‘ಈಗ ಇನ್ನಷ್ಟು ಪರಿಣಾಮಕಾರಿ’, ‘ಒಂದು ಕೊಂಡರೆ ಇನ್ನೊಂದು ಉಚಿತ’ ಮೊದಲಾದವುಗಳಿಗೆ ಮರುಳಾಗಿ ಒಂದಿಷ್ಟು ಸರಕನ್ನು ಅಷ್ಟು ತುರ್ತಾದ ಅಗತ್ಯವಿಲ್ಲದಿದ್ದರೂ ಖರೀದಿಸುವುದನ್ನು ಸಂಪೂರ್ಣ ನಿಲ್ಲಿಸಿ.

ಖರೀದಿಗೆ ನಗದು ಹಣ ಬಳಸಿ

ಕಾರ್ಡ್ ಬಳಕೆ ಶಾಪಿಂಗ್ ಅನ್ನು ಸುಲಭಗೊಳಿಸಬಹುದು. ಆದರೆ ಹಣ ಖರ್ಚಾಗುವುದೇ ತಿಳಿಯುವುದಿಲ್ಲ. ನಗದು ಹಣ ಬಳಸುವಲ್ಲಿ ಚಿಲ್ಲರೆ ಸಮಸ್ಯೆ, ಜೊತೆಯಲ್ಲೇ ಹಣ ಇರಿಸಿಕೊಂಡು ಓಡಾಡುವುದು ಕಿರಿಕಿರಿ ಎನ್ನಿಸಿ ಅದು ಶಾಪಿಂಗ್ ಅನ್ನು ನಿರ್ಬಂಧಿಸುತ್ತದೆ.

ಖರೀದಿಯನ್ನು ನಿಧಾನಗೊಳಿಸಿ/ಮುಂದೂಡಿ: ಹೊಸದನ್ನು ಕಂಡಾಕ್ಷಣ ಕೊಳ್ಳಬೇಕೆನಿಸುತ್ತದೆ. ಅದರಿಂದಲೇ ಸಂತೋಷವಿದೆ ಎಂದು ಭಾವಿಸುತ್ತೇವೆ. ನೀವು ಖರೀದಿಸಲೇಬೇಕೆಂದಿರುವ ವಸ್ತುವನ್ನು ಕನಿಷ್ಠ ಒಂದು ವಾರ ಮುಂದೂಡಿ. ಬೇಕು–ಬೇಡವನ್ನು ಅಳೆದು ತೂಗಿ ನಿರ್ಧಾರ ಕೈಗೊಳ್ಳಲು ಈ ಸಮಯ ಮಹತ್ವದ ಪಾತ್ರ ವಹಿಸುತ್ತದೆ. ಆಗ ನಿಮಗೆ ಗೊತ್ತಿಲ್ಲದೆ ಅನಗತ್ಯ ವಸ್ತುಗಳು ನಿಮ್ಮಲ್ಲಿ ಶೇಖರಣೆಯಾಗುವುದು ತಪ್ಪುತ್ತದೆ. ಹಣವೂ ಉಳಿಯುತ್ತದೆ. 

ಒತ್ತಡದಿಂದ ಖರೀದಿ ಬೇಡ

ಕೆಲವರು ಬಾಹ್ಯ ಕಾರಣಗಳಿಂದಾಗಿ ಅಗತ್ಯವಿರದ ವಸ್ತುಗಳನ್ನು ಖರೀದಿಸುತ್ತಾರೆ. ಆ ವಸ್ತು ನಿಮಗೆ ಇಷ್ಟವಿಲ್ಲದೆಯೂ ಇರಬಹುದು. ಸ್ನೇಹಿತರು ಅಥವಾ ಸಹೋದ್ಯೋಗಿಗಳ ಬಳಿ ಆ ವಸ್ತುವಿದೆ ಎಂಬ ಕಾರಣಕ್ಕೆ ನೀವೂ ಅದನ್ನು ಖರೀದಿಸಲು ಬಯಸಬಹುದು. ಕೆಲವೊಮ್ಮೆ ಬದಲಾದ ಟ್ರೆಂಡ್ ಕೂಡ ಇದಕ್ಕೆ ಕಾರಣವಾಗುತ್ತದೆ. ಇಂತಹ ಬಯಕೆಯನ್ನು ನಿಯಂತ್ರಿಸುವುದು ಒಳ್ಳೆಯದು. 

ಕಲಾಕೃತಿಗಳನ್ನು ನೀವೇ ತಯಾರಿಸಿ: ಆಲಂಕಾರಿಕ ವಸ್ತುಗಳಿಗಾಗಿ ಅಂಗಡಿಯ ಮೊರೆ ಹೋಗಬೇಡಿ. ಬದಲಿಗೆ ಅನುಪಯುಕ್ತ ವಸ್ತುಗಳಿಂದ ನೀವೇ ತಯಾರಿಸಬಹುದಾದ ಕಲಾಕೃತಿಗಳ ಕಡೆಗೆ ಗಮನ ನೀಡಿ. ಇದು ನಿಮ್ಮಲ್ಲಿನ ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುವುದರ ಜೊತೆಗೆ ಸಮಯ ಮತ್ತು ಹಣವನ್ನು ಉಳಿಸುತ್ತದೆ.

ಇರಲಿ ಶಾಪಿಂಗ್ ಡಯೆಟ್: ಸರಳ ಜೀವನ ಶೈಲಿ ಅನೇಕರಿಗೆ ಋಣಾತ್ಮಕವಾಗಿ ಭಾಸವಾಗುತ್ತದೆ. ಚಿಕ್ಕಚಿಕ್ಕ ವಿಷಯಗಳನ್ನು ಬಲಿ ಕೊಡುತ್ತಿದ್ದೇವೆ ಎಂದು ನಂಬುತ್ತಾರೆ. ಆಧುನಿಕ ಜಗತ್ತಿನಲ್ಲಿ ಲಭ್ಯವಿರುವ ಎಲ್ಲ ಪ್ರಯೋಜನಗಳನ್ನು ಪಡೆಯುತ್ತಿಲ್ಲ ಎಂದು ಕೊರಗುವವರೇ ಹೆಚ್ಚು. ಆದರೆ, ಇದು ಕೇವಲ ಗ್ರಹಿಕೆ. ಕನಿಷ್ಠ ಜೀವನ ಶೈಲಿ ನಿಜಕ್ಕೂ ಜೀವನವನ್ನು ಸುಧಾರಿಸಬಲ್ಲದು. ನೆಮ್ಮದಿಯ ಬದುಕಿಗೆ ವಸ್ತುಗಳ ಸಂಗ್ರಹಣೆ ಮುಖ್ಯವೆನಿಸುವುದಿಲ್ಲ. ದೇಹದ ಆರೋಗ್ಯಕ್ಕೆ ಡಯೆಟ್ ಮಾಡುವ ಹಾಗೆ ಮಾನಸಿಕ ಆರೋಗ್ಯ ಹಾಗೂ ಕೊಳ್ಳುಬಾಕ ಸಂಸ್ಕೃತಿಯಿಂದ ಹೊರತಾಗಿರಲು ‘ಶಾಪಿಂಗ್ ಡಯೆಟ್’ ಅಗತ್ಯ. ಅನಗತ್ಯವಾಗಿ ಕೊಳ್ಳುವುದನ್ನು ನಿಲ್ಲಿಸಿ ಆದಷ್ಟು ಬಳಸಿದ್ದನ್ನೆ ಬಳಸಬಹುದಲ್ಲವೇ.

***

ಬಹಳಷ್ಟು ಜನರು ತಮ್ಮ ಮದುವೆಯ ಸಂದರ್ಭದಲ್ಲಿ ಹೆಚ್ಚು ಖರ್ಚು ಮಾಡುತ್ತಾರೆ. ಮದುವೆ ಪರಸ್ಪರ ಪ್ರೀತಿ, ಸಹಾನುಭೂತಿ ಮತ್ತು ಕಾಳಜಿ ವಹಿಸುವ ಮನಸ್ಸಿನಿಂದ ಕೂಡಿರಬೇಕು. ಆದರೆ ಒಂದು ದಿನದ ಕಾರ್ಯಕ್ರಮಕ್ಕಾಗಿ ಸಾಕಷ್ಟು ಖರ್ಚು ಮಾಡುವ ಪ್ರಚೋದನೆಯನ್ನು ಸೃಷ್ಟಿಸುವ ಬಂಡವಾಳಶಾಹಿ ವ್ಯವಸ್ಥೆಯಿಂದ ಹೊರಬರಬೇಕು. ಆಹಾರ, ಆಲಂಕಾರಿಕ ವಸ್ತುಗಳು ಮತ್ತು ಇನ್ನಿತರ ವಸ್ತುಗಳ ವ್ಯರ್ಥ ಖರೀದಿ ಬೇಡ. ಇದರಿಂದ ಒತ್ತಡ ಉಂಟಾಗುತ್ತದೆ. ಸರಳತೆ ಎಂಬುದು ಒಟ್ಟಾರೆಯಾಗಿ ಒಂದು ಉತ್ಕೃಷ್ಟ ಚಿಂತನೆ ಎಂದು ಭಾವಿಸಬಹುದು. ಕೂಡಿಡುವಿಕೆಯು ಸಮಾಜದಲ್ಲಿನ ಅಸಮಾನತೆಯಿಂದ ಪ್ರಾರಂಭವಾಗುತ್ತದೆ. ಸರಳ ಜೀವನದಿಂದ ಆಳವಾದ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಬಹುದು. ಜೀವನಶೈಲಿ ಬದಲಾವಣೆಯೊಂದಿಗೆ ಬದುಕಲು ಪ್ರಯತ್ನಿಸಬೇಕು.

– ವಿಜಯಶಾಂತಿ, ಉಪನ್ಯಾಸಕಿ

ಪ್ರತಿಕ್ರಿಯಿಸಿ (+)