ಎನ್ಎಂಪಿಟಿಯಲ್ಲಿ ಸೌರ ವಿದ್ಯುತ್ ಸ್ವಾವಲಂಬನೆ

ಮಂಗಳೂರು: ದೇಶದ ಬೃಹತ್ ಬಂದರುಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ನವಮಂಗಳೂರು ಬಂದರಿಗೆ (ಎನ್ಎಂಪಿಟಿ) ಈಗ ವಿದ್ಯುತ್ ಖರೀದಿ ಅಗತ್ಯವೇ ಇಲ್ಲ. ಇಲ್ಲಿ ದೈನಂದಿನ ಅಗತ್ಯಗಳಿಗೆ ಬೇಕಾದ ಶೇ 95ರಷ್ಟು ವಿದ್ಯುತ್ ಅನ್ನು ಸ್ವಂತವಾಗಿ ಸೌರಶಕ್ತಿಯಿಂದ ಉತ್ಪಾದಿಸಲಾಗುತ್ತಿದೆ.
ಸೌರ ವಿದ್ಯುತ್ ಉತ್ಪಾದನೆಯ ಮೂಲಕ ಸಂಪೂರ್ಣ ಸ್ವಾವಲಂಬಿಯಾದ ಎನ್ಎಂಪಿಟಿಗೆ ‘ಗ್ರೀನ್ ಪೋರ್ಟ್’ ಮಾನ್ಯತೆಯೂ ಸಿಕ್ಕಿದೆ. ನಿತ್ಯ ಇಲ್ಲಿ ಸೌರ ಶಕ್ತಿಯಿಂದ ಒಟ್ಟು 20 ಸಾವಿರ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇಲ್ಲಿ ಒಂದು ದಿನಕ್ಕೆ ಅಗತ್ಯವಿರುವ ವಿದ್ಯುತ್ 24 ಸಾವಿರ ಯೂನಿಟ್. ಅಂದರೆ ಸದ್ಯ ಕೇವಲ ನಾಲ್ಕು ಸಾವಿರ ಯೂನಿಟ್ಗಾಗಿ ಮಾತ್ರ ಬೇರೆ ಮೂಲಗಳನ್ನು ಅವಲಂಬಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಸಂಪೂರ್ಣ ಸ್ವಾವಲಂಬಿಯಾಗಿ ಶೇ 100ರಷ್ಟು ಯಶಸ್ಸು ಸಾಧಿಸುವ ನಿರೀಕ್ಷೆಯಲ್ಲಿದೆ.
5.19 ಮೆಗಾವಾಟ್ ಸಾಮರ್ಥ್ಯ: ಸದ್ಯಕ್ಕೆ 5.19 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಬಾಷ್ ನ್ಯೂ ಕಂಪನಿಯು ಬಂದರಿನ ಕಾರ್ಮಿಕರ ವಸತಿ ನಿಲಯದ ಸಮೀಪ 4 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಿದೆ.
ಉಳಿದಂತೆ ಮೇಲ್ಚಾವಣಿಯಲ್ಲಿ ಪ್ಯಾನೆಲ್ ಅಳವಡಿಸುವ ಮೂಲಕ 350 ಕಿಲೋ ವಾಟ್ ಹಾಗೂ 840 ಕಿಲೋ ವಾಟ್ ವಿದ್ಯುತ್ ಪಡೆಯಲಾಗುತ್ತಿದೆ. ದೇಶದ ಎಲ್ಲ ಬಂದರುಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡುವಂತೆ ಕೇಂದ್ರ ಸರ್ಕಾರದಿಂದ ಸೂಚನೆ ಇರುವುದರಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.
ವಿದ್ಯುತ್ ಸ್ವಾವಲಂಬಿ: ‘ಸೌರ ವಿದ್ಯುತ್ ಉತ್ಪಾದನೆಯ ಮೂಲಕ ನವಮಂಗಳೂರು ಬಂದರು ಸ್ವಾವಲಂಬಿಯಾಗಿದೆ. ನಿತ್ಯ ಇಲ್ಲಿ 20 ರಿಂದ 21 ಸಾವಿರ ಯೂನಿಟ್ಗಳಷ್ಟು ವಿದ್ಯುತ್ ಅನ್ನು ಸೌರ ಶಕ್ತಿಯ ಮೂಲಕವೇ ಪಡೆಯಲಾಗುತ್ತಿದೆ’ ಎಂದು ಎನ್ಎಂಪಿಟಿ ಅಧ್ಯಕ್ಷ ಎಂ.ಟಿ. ಕೃಷ್ಣ ಬಾಬು ಹೇಳುತ್ತಾರೆ.
‘ನವ ಮಂಗಳೂರು ಬಂದರು ಪರಿಸರ ಸ್ನೇಹಿ ಕ್ರಮಗಳಿಂದಾಗಿ ದೇಶದಲ್ಲಿಯೇ ಗುರುತಿಸಿಕೊಳ್ಳುವಂತಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ದೇಶದಲ್ಲಿ ಮೊದಲ ಸ್ಥಾನ ಪಡೆದಿದೆ. ಇದೀಗ ಸೌರ ವಿದ್ಯುತ್ ಉತ್ಪಾದಿಸುವ ಮೂಲಕ ಶೇ 95 ರಷ್ಟು ಅಗತ್ಯವನ್ನು ಪೂರೈಸಲಾಗುತ್ತಿದೆ’ ಎಂದು ಹೇಳುತ್ತಾರೆ.
‘ನವ ಮಂಗಳೂರು ಬಂದರನ್ನು ಪರಿಸರ ಸ್ನೇಹಿ ಬಂದರನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲ ಕೆಲಸಗಳು ನಡೆಯುತ್ತಿವೆ. ನಿತ್ಯ 12 ಲಕ್ಷ ಲೀಟರ್ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಆರಂಭಿಸಲಾಗಿದ್ದು, ನೀರಿನ ವಿಷಯದಲ್ಲೂ ಸ್ವಾವಲಂಬನೆ ಸಾಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
**
6 ಮೆ.ವಾ. ಉತ್ಪಾದನೆ
‘ವಿದ್ಯುತ್ ಉಳಿತಾಯಕ್ಕೆ ಸಾಕಷ್ಟು ಒತ್ತು ನೀಡುತ್ತಿರುವ ಎಂಆರ್ಪಿಎಲ್ ಕಂಪನಿಯು ತನ್ನ ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿ, 6 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇನ್ನಷ್ಟು ಸೋಲಾರ್ ವಿದ್ಯುತ್ ಉತ್ಪಾದನೆಯ ನಿಟ್ಟಿನಲ್ಲಿ ಮುಂದಿನ ವರ್ಷ ತೇಲುವ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲಿದೆ’ ಎಂದು ಕಂಪನಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಶೀಲ್ಚಂದ್ರ ಹೇಳುತ್ತಾರೆ.
‘ಎಂಆರ್ಪಿಎಲ್ ತನ್ನ ಕಟ್ಟಡಗಳ ಎಲ್ಲ ಚಾವಣಿಗಳ ಮೇಲೆ ಸೌರ ಫಲಕ ಅಳವಡಿಸಿ, ವಿದ್ಯುತ್ ಉತ್ಪಾದಿಸುತ್ತಿದೆ. ವಿಶ್ವದಲ್ಲೇ ಮೂರನೇ ಅತೀ ದೊಡ್ಡ ಸೌರ ಫಲಕ ಹೊಂದಿದ ಕಂಪನಿ ಎಂಬ ಖ್ಯಾತಿಗೆ ಎಂಆರ್ಪಿಎಲ್ ಪಾತ್ರವಾಗಿದೆ’ ಎಂದು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.