ಮಂಗಳವಾರ, ಜುಲೈ 5, 2022
27 °C
ಎಂಜಿನಿಯರಿಂಗ್‌ ರಫ್ತು ಉತ್ತೇಜನ ಮಂಡಳಿ ಹೇಳಿಕೆ

ಉಕ್ಕಿನ ಬೆಲೆ ಶೇ 15ರವರೆಗೆ ಇಳಿಕೆ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯು ಶೇಕಡ 10ರಿಂದ ಶೇ 15ರವರೆಗೂ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಎಂಜಿನಿಯರಿಂಗ್‌ ರಫ್ತು ಉತ್ತೇಜನ ಮಂಡಳಿ (ಇಇಪಿಸಿ) ಸೋಮವಾರ ಹೇಳಿದೆ.

ಕೆಲವು ಉಕ್ಕು ಉತ್ಪನ್ನಗಳ ರಫ್ತಿನ ಮೇಲೆ ಸುಂಕ ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮಂಡಳಿಯ ಭಾರತದ ಅಧ್ಯಕ್ಷ ಮಹೇಶ್‌ ದೇಸಾಯಿ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ. ‘ಎಂಜಿನಿಯರಿಂಗ್‌ ಸರಕುಗಳ ತಯಾರಕರು ಮತ್ತು ರಫ್ತುದಾರರಿಗೆ ಇದರಿಂದ ಪ್ರಯೋಜನ ಆಗಲಿದೆ. ದೇಶಿ ಕಂಪನಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಆಗಲು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ಉಕ್ಕು ಉದ್ಯಮದಲ್ಲಿ ಬಳಸುವ ಕೋಕಿಂಗ್‌ ಕಲ್ಲಿದ್ದಲು ಮತ್ತು ಫೆರಾನಿಕಲ್‌ ಮೇಲಿನ ಆಮದು ಸುಂಕವನ್ನು ಸರ್ಕಾರ ತೆಗೆದುಹಾಕಿದೆ. ಅಲ್ಲದೆ, ಕಬ್ಬಿಣದ ಅದಿರು ರಫ್ತು ಸುಂಕವನ್ನು ಶೇ 50ಕ್ಕೆ ಹೆಚ್ಚಿಸಿದೆ.

‘ಉಕ್ಕಿನ ಕಚ್ಚಾ ಸಾಮಗ್ರಿಗಳ ಆಮದು ಸುಂಕ ಕೈಬಿಡುವ ನಿರ್ಧಾರದಿಂದ ದೇಶಿ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಕಡಿಮೆ ಆಗಲಿದೆ. ಕಬ್ಬಿಣದ ಅದರಿನ ರಫ್ತು ಸುಂಕ ಹೆಚ್ಚಳದಿಂದ ದೇಶದಲ್ಲಿ ಲಭ್ಯತೆಯು ಸುಧಾರಿಸಲಿದೆ’ ಎಂದು ದೇಸಾಯಿ ಹೇಳಿದ್ದಾರೆ.

‘ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡಿರುವುದರಿಂದ ಸರಕು ಸಾಗಣೆ ವೆಚ್ಚ ಕಡಿಮೆ ಆಗಲಿದೆ’ ಎಂದು ಹೇಳಿದ್ದಾರೆ. ‘ಟಿಎಂಟಿ ಬಾರ್‌ಗಳ ಬೆಲೆಯು ಈಗಾಗಲೇ ಇಳಿಕೆ ಕಾಣಲು ಆರಂಭವಾಗಿದೆ’ ಎಂದು ಆಲ್‌ ಇಂಡಿಯಾ ಇಂಡಕ್ಷನ್‌ ಫರ್ನೇಸಸ್‌ ಅಸೋಸಿಯೇಷನ್‌ (ಎಐಐಎಫ್‌ಎ) ಪ್ರಧಾನ ಕಾರ್ಯದರ್ಶಿ ಕಮಲ್‌ ಅಗರ್‌ವಾಲ್‌ ಹೇಳಿದ್ದಾರೆ.

‘ಟಿಎಂಟಿ ಬಾರ್ ಬೆಲೆಯು ಸೋಮವಾರ ಪ್ರತಿ ಟನ್‌ಗೆ ₹ 52 ಸಾವಿರದಂತೆ ಮಾರಾಟ ಆಗಿದೆ. ಭಾನುವಾರ ಪ್ರತಿ ಟನ್‌ಗೆ ₹ 57 ಸಾವಿರ ಇತ್ತು. ಅಂದರೆ ಪ್ರತಿ ಟನ್‌ಗೆ ₹ 5 ಸಾವಿರ ಇಳಿಕೆ ಆಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಉಕ್ಕಿನ ಗಟ್ಟಿಗಳು ಮತ್ತು ಸರಳುಗಳ ಬೆಲೆಯು ಪ್ರತಿ ಟನ್‌ಗೆ ₹ 5 ಸಾವಿರದಷ್ಟು ಕಡಿಮೆ ಆಗಿದೆ. ಉಕ್ಕಿನ ಗಟ್ಟಿ ಬೆಲೆಯು ₹ 50 ಸಾವಿರ ಮತ್ತು ಸರಳುಗಳ ಬೆಲೆಯು ₹ 51 ಸಾವಿರ ಇದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.