ಗುರುವಾರ , ನವೆಂಬರ್ 26, 2020
20 °C

ಸಕ್ಕರೆ ಕುರಿತ ತಪ್ಪು ಗ್ರಹಿಕೆ ದೂರ ಮಾಡಬೇಕು: ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಮೂರು ವರ್ಷಗಳಿಂದ ದೇಶದಲ್ಲಿ ಸಕ್ಕರೆ ಬಳಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೀಗಾಗಿ ಸಕ್ಕರೆ ಬಳಕೆಯ ಕುರಿತು ಇರುವ ತಪ್ಪುಗ್ರಹಿಕೆ ಮತ್ತು ಅಳುಕು ನಿವಾರಿಸುವ ಅಗತ್ಯವಿದೆ’ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ಆಹಾರ ಇಲಾಖೆ ಕಾರ್ಯದರ್ಶಿ ಸುಧಾನ್ಶು ಪಾಂಡೆ ಅವರು ಬುಧವಾರ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ (ಐಎಸ್‌ಎಂಎ) ಜಾಲತಾಣ meetha.org ಅನಾವರಣ ಮಾಡಿ ಮಾತನಾಡಿದರು.

‘ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ಕರೆ ಬಳಸುವ ದೇಶವಾಗಿದೆ. ಆದರೆ, ಜಾಗತಿಕವಾಗಿ ಸಕ್ಕರೆಯ ತಲಾವಾರು ಬಳಕೆ ಪ್ರಮಾಣ 23.50 ಕೆ.ಜಿ ಇದ್ದರೆ ಭಾರತದಲ್ಲಿ ತಲಾವಾರು ಸಕ್ಕರೆ ಬಳಕೆ ಪ್ರಮಾಣ 19 ಕೆ.ಜಿಗಳಷ್ಟೇ ಇದೆ’ ಎಂದು ತಿಳಿಸಿದರು.

ದೇಶದಲ್ಲಿ ವಾರ್ಷಿಕವಾಗಿ ಸಕ್ಕರೆ ಬಳಕೆ ಪ್ರಮಾಣ 2.5 ಕೋಟಿ ಟನ್‌ಗಳಿಂದ 2.6 ಕೋಟಿ ಟನ್‌ಗಳಷ್ಟಿದೆ. 2019–20ರ ಸೆಪ್ಟೆಂಬರ್‌ ಅಂತ್ಯಕ್ಕೆ ದೇಶದ ಉತ್ಪಾದನೆ 2.75 ಕೋಟಿ ಟನ್‌ಗಳಷ್ಟಾಗಿದೆ.

‘ವೈಜ್ಞಾನಿಕ ಆಧಾರವಿಲ್ಲದೇ ಸಕ್ಕರೆ ಬಳಕೆಯ ಬಗ್ಗೆ ತಪ್ಪು ಕಲ್ಪನೆಗಳು ಇವೆ. ಈ ರೀತಿಯ ತಪ್ಪು ಮಾಹಿತಿಗಳು ಸತ್ಯಕ್ಕಿಂತಲೂ ಬಹಳ ವೇಗವಾಗಿ ಹರಡುತ್ತವೆ. ಹೀಗಾಗಿ ಸಕ್ಕರೆ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಅಗತ್ಯವಿದೆ. ಇದರಿಂದಾಗಿ ಜನ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿದೆ’ ಎಂದು ಪಾಂಡೆ ಹೇಳಿದ್ದಾರೆ.

‘ಭಾರತದ ಸಕ್ಕರೆಯ ಬಗ್ಗೆ ವಿದೇಶಗಳಲ್ಲಿಯೂ ತಪ್ಪುಗ್ರಹಿಕೆ ಇದೆ. ಭಾರತದ ಸಕ್ಕರೆ ಉದ್ಯಮ ಅಥವಾ ಭಾರತದ ಸಕ್ಕರೆಯು ಬ್ರೆಜಿಲ್‌ ಅಥವಾ ಥಾಯ್ಲೆಂಡಿನ ಸಕ್ಕರೆಗಿಂತ ಉತ್ತಮವಾಗಿಲ್ಲ ಎನ್ನುವಂತೆ ಚಿತ್ರಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಇಸ್ರೇಲ್‌ನಲ್ಲಿ ತಲಾವಾರು ಸಕ್ಕರೆ ಬಳಕೆ 60 ಕೆ.ಜಿಯಷ್ಟಿದೆ. ಒಂದೊಮ್ಮೆ ಸಕ್ಕರೆಯು ಆರೋಗ್ಯಕ್ಕೆ ಹಾನಿಕಾರಕ ಎಂದಾಗಿದ್ದರೆ ಅಭಿವೃದ್ಧಿ ಹೊಂದಿದ ಮತ್ತು ಇತರ ಎಲ್ಲಾ ದೇಶಗಳಲ್ಲಿಯೂ ಅದು ಹಾನಿಕಾರಕವೇ ಆಗಿರಬೇಕು. ಆದರೆ, ಆದರೆ ಅಲ್ಲೆಲ್ಲಾ ಸಕ್ಕರೆ ಬಳಕೆಯು ಜಗತ್ತಿನ ಸರಾಸರಿ ಬಳಕೆ ಪ್ರಮಾಣಕ್ಕಿಂತಲೂ ಹೆಚ್ಚಿಗೆ ಇದೆ’ ಎಂದು ಆಹಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು