ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ಆದಾಯಕ್ಕೆ ‘ಟಿಡಿಎಸ್‌’ ವಿನಾಯ್ತಿ ಮಿತಿ ಹೆಚ್ಚಳ

ಬ್ಯಾಂಕ್, ಅಂಚೆ ಠೇವಣಿ: ಸಿಬಿಡಿಟಿ ಅಧಿಸೂಚನೆ ಪ್ರಕಟ
Last Updated 23 ಮೇ 2019, 15:56 IST
ಅಕ್ಷರ ಗಾತ್ರ

ನವದೆಹಲಿ: ₹ 5 ಲಕ್ಷದವರೆಗೆ ತೆರಿಗೆಗೆ ಒಳಪಡುವ ಆದಾಯ ಹೊಂದಿದ ಹಿರಿಯ ನಾಗರಿಕರು, ಇನ್ನು ಮುಂದೆ ಬ್ಯಾಂಕ್‌ ಠೇವಣಿಯ ಬಡ್ಡಿ ಆದಾಯಕ್ಕೆ ಮೂಲದಲ್ಲಿಯೇ ತೆರಿಗೆ ಕಡಿತದಿಂದ (ಟಿಡಿಎಸ್‌) ವಿನಾಯ್ತಿ ಪಡೆಯಬಹುದು.

ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ 15ಎಚ್‌ ಅರ್ಜಿ ನಮೂನೆ (Form 15H) ಸಲ್ಲಿಸಿ ‘ಟಿಡಿಎಸ್‌’ನಿಂದ ವಿನಾಯ್ತಿ ಪಡೆಯಬಹುದು ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಅಧಿಸೂಚನೆ ಹೊರಡಿಸಿದೆ. ಇದಕ್ಕೂ ಮೊದಲು ‘ಟಿಡಿಎಸ್‌’ ವಿನಾಯ್ತಿ ಮಿತಿಯು ₹ 2.5 ಲಕ್ಷ ಇತ್ತು.

ಮಧ್ಯಂತರ ಬಜೆಟ್‌ನಲ್ಲಿನ ಘೋಷಣೆ ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ‘ಸಿಬಿಡಿಟಿ’,ಯು ‘ಫಾರ್ಮ್‌ 15ಎಚ್‌’ಗೆ ತಿದ್ದುಪಡಿ ತರುವ ಅಧಿಸೂಚನೆ ಹೊರಡಿಸಿದೆ.

2019–20ರ ಬಜೆಟ್‌ನಲ್ಲಿ, ₹ 5 ಲಕ್ಷದವರೆಗೆ ತೆರಿಗೆಗೆ ಒಳಪಡುವ ವಾರ್ಷಿಕ ಆದಾಯ ಹೊಂದಿರುವವರಿಗೆ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲಾಗಿದೆ. ಇದರಿಂದ ಮಧ್ಯಮ ವರ್ಗದ 3 ಕೋಟಿ ತೆರಿಗೆದಾರರಿಗೆ ಪ್ರಯೋಜನ ಲಭಿಸಲಿದೆ.

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್‌ 87ಎ ಅನ್ವಯ ರಿಯಾಯ್ತಿ ಪಡೆದ ನಂತರ ತೆರಿಗೆ ಪಾವತಿಸುವ ಅಗತ್ಯ ಇಲ್ಲದ ತೆರಿಗೆದಾರರಿಂದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅರ್ಜಿ ನಮೂನೆ 15ಎಚ್‌ ಸ್ವೀಕರಿಸಬೇಕಾಗುತ್ತದೆ.

60 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರು, ಹಣಕಾಸು ವರ್ಷದ ಆರಂಭದಲ್ಲಿ ಬ್ಯಾಂಕ್‌ ಮತ್ತು ಅಂಚೆ ಇಲಾಖೆಗೆ ಅರ್ಜಿ ನಮೂನೆ 15ಎಚ್ ಸಲ್ಲಿಸಿ, ತಮ್ಮ ಠೇವಣಿಗೆ ಪಾವತಿಸುವ ಬಡ್ಡಿ ವರಮಾನಕ್ಕೆ ಮೂಲದಲ್ಲಿಯೇ ತೆರಿಗೆ ಕಡಿತ ಮಾಡದಂತೆ ಕೋರಬಹುದು.

ವರ್ಷಕ್ಕೆ ₹ 5 ಲಕ್ಷದವರೆಗೆ ಆದಾಯ ಹೊಂದಿದವರಿಗೆ ತೆರಿಗೆ ಪರಿಹಾರ ಒದಗಿಸಲು ‘ಸೆಕ್ಷನ್‌ 87ಎ’ರಲ್ಲಿನ ರಿಯಾಯ್ತಿಯನ್ನು ₹ 2,500 ರಿಂದ ₹ 12,500ಕ್ಕೆ ಹೆಚ್ಚಿಸಲಾಗಿದೆ. ₹ 5 ಲಕ್ಷದವರೆಗೆ ಆದಾಯ ಹೊಂದಿದವರು ಯಾವುದೇ ತೆರಿಗೆಪಾವತಿಸಬೇಕಾಗಿಲ್ಲ.

ಹೊಸ ತಿದ್ದುಪಡಿ ಜಾರಿಗೆ ಬಂದಿರದಿದ್ದರೆ, ₹ 5 ಲಕ್ಷದವರೆಗೆ ಆದಾಯ ಹೊಂದಿದವರ ಬ್ಯಾಂಕ್‌ ಠೇವಣಿಯ ಆದಾಯಕ್ಕೆ ಮೂಲದಲ್ಲಿಯೇ ತೆರಿಗೆ (ಟಿಡಿಎಸ್‌) ಕಡಿತವಾಗುತ್ತಿತ್ತು. ಇಂತಹ ‘ಟಿಡಿಎಸ್‌’ ಮರಳಿ ಪಡೆಯಲು ತೆರಿಗೆ ರಿಟರ್ನ ಸಲ್ಲಿಸಬೇಕಾಗುತ್ತಿತ್ತು. ‘ಸಿಬಿಡಿಟಿ’ ತಂದಿರುವ ಬದಲಾವಣೆಯಿಂದ ತೆರಿಗೆದಾರರು ಮರುಪಾವತಿಗೆ ರಿಟರ್ನ್‌ ಸಲ್ಲಿಸುವ ಅಗತ್ಯ ಉದ್ಭವಿಸುವುದಿಲ್ಲ. ಇಂತಹ ರಿಟರ್ನ್ಸ್‌ಗಳನ್ನು ಪರಿಶೀಲಿಸಿ ಮರು ಪಾವತಿ ಪ್ರಕ್ರಿಯೆಯ ವೆಚ್ಚದಲ್ಲಿಯೂ ಉಳಿತಾಯ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT