ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಉದ್ಯಮ: ಶೇ 3.8ರಷ್ಟು ಬೆಳವಣಿಗೆ ನಿರೀಕ್ಷೆ

Published 16 ಫೆಬ್ರುವರಿ 2024, 16:03 IST
Last Updated 16 ಫೆಬ್ರುವರಿ 2024, 16:03 IST
ಅಕ್ಷರ ಗಾತ್ರ

ಮುಂಬೈ: 2023–24ನೇ ಹಣಕಾಸು ವರ್ಷದಲ್ಲಿ ದೇಶದ ತಂತ್ರಜ್ಞಾನ ಉದ್ಯಮವು ಶೇ 3.8ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಐ.ಟಿ ಉದ್ಯಮ ಸಂಘಟನೆ ನಾಸ್ಕಾಂ ಅಂದಾಜಿಸಿದೆ.

2022–23ನೇ ಹಣಕಾಸು ವರ್ಷದಲ್ಲಿ ಉದ್ಯಮದ ವರಮಾನವು ₹20 ಲಕ್ಷ ಕೋಟಿ ಆಗಿತ್ತು. ಈ ಹಣಕಾಸು ವರ್ಷದಲ್ಲಿ ₹21 ಲಕ್ಷ ಕೋಟಿಗೆ ತಲುಪಲಿದೆ ಎಂದು  ನಾಸ್ಕಾಂನ ವಾರ್ಷಿಕ ವರದಿ ತಿಳಿಸಿದೆ.

ಹಾರ್ಡ್‌ವೇರ್‌ ಹೊರತುಪಡಿಸಿ ಉದ್ಯಮದ ವರಮಾನವು ₹16.52 ಲಕ್ಷ ಕೋಟಿ ಆಗಲಿದೆ. ದೇಶೀಯ ವರಮಾನವು ಶೇ 5.9ರಷ್ಟು ಏರಿಕೆಯಾಗಲಿದೆ ಎಂದು ಹೇಳಿದೆ. 

2023ರಲ್ಲಿ ದೇಶೀಯ ಮಟ್ಟದ ಬೆಳವಣಿಗೆ ಹೊರತಾಗಿಯೂ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ವಲಯದ ಖರ್ಚು ಶೇ 50ರಷ್ಟು ಹಾಗೂ ತಂತ್ರಜ್ಞಾನ ಒಪ್ಪಂದ ಶೇ 6ರಷ್ಟು ಇಳಿಕೆಯಾಗಿದೆ ಎಂದು ವರದಿ ಹೇಳಿದೆ.

‘ಎಲ್ಲಾ ಅಡೆತಡೆಗಳ ನಡುವೆಯೂ ಐ.ಟಿ ವಲಯದ ಪಾಲಿಗೆ ಇದು ಬೆಳವಣಿಗೆಯ ವರ್ಷವಾಗಿದೆ. ಐ.ಟಿ ರಫ್ತು ಸೇವೆ ಮಂದಗತಿಯಲ್ಲಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ವ್ಯವಹಾರವು ಗಣನೀಯವಾಗಿ ಏರಿಕೆ ಕಂಡಿದೆ’ ಎಂದು ನಾಸ್ಕಾಂ ಅಧ್ಯಕ್ಷೆ ದೇವಜಾನಿ ಘೋಷ್ ತಿಳಿಸಿದ್ದಾರೆ.

2024–25ನೇ ಹಣಕಾಸು ವರ್ಷದಲ್ಲಿ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಎಂಜಿನಿಯರಿಂಗ್‌ ಮತ್ತು ಅಭಿವೃದ್ಧಿ ವಲಯವು ಶೇ 48ರಷ್ಟು ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯಿಂದಾಗಿ ಐ.ಟಿ ವಲಯದಲ್ಲಿ ಸಾವಿರಾರು ಉದ್ಯೋಗಗಳು ಕಡಿತವಾಗುತ್ತಿವೆ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಆದರೆ, ಕಳೆದ ವರ್ಷ ದೇಶದಲ್ಲಿ ಹೊಸದಾಗಿ 60 ಸಾವಿರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿದ್ದು, ಈ ವಲಯದ ಉದ್ಯೋಗಿಗಳ ಸಂಖ್ಯೆ 5.43 ಕೋಟಿಗೆ ತಲುಪಿದೆ ಎಂದು ವಿವರಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ 6.50 ಲಕ್ಷಕ್ಕೂ ಹೆಚ್ಚು ಐ.ಟಿ ಉದ್ಯೋಗಿಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT