ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಉದ್ಯಮಿಗಳಿಗೆ ದೊರೆಯುವುದೇ ಯಶೋಮಾರ್ಗ

ಪ್ರೇರಣೆಗೆ ವೇದಿಕೆಯಾಗಲಿವೆ ಡೆವಲಪ್‌ಮೆಂಟ್‌ ಡೈಲಾಗ್, ಟೈಕಾನ್‌ ಶೃಂಗಸಭೆ
Last Updated 27 ಜನವರಿ 2020, 10:37 IST
ಅಕ್ಷರ ಗಾತ್ರ

ಹುಬ್ಬಳ್ಳಿಯನ್ನು ವಾಣಿಜ್ಯ ನಗರಿ ಎಂದು ಕರೆಯಲಾಗುತ್ತದೆ. ವಾಣಿಜ್ಯ ಚಟುವಟಿಕೆಗಳೇನೋ ನಡೆಯುತ್ತಿವೆ. ಆದರೆ, ಹೇಳಿಕೊಳ್ಳುವಂತಹ ಬೃಹತ್‌ ಕೈಗಾರಿಕೆಗಳಿಗಾಗಿ ಇಂದಿಗೂ ಕಾಯುವಂತಾಗಿದೆ. ದೇಶದಲ್ಲಿ ಎದುರಾಗಿರುವ ಆರ್ಥಿಕ ಮಂದಗತಿಯಿಂದಾಗಿ ಅವಳಿ ನಗರದಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿಯೂ ಮಂಕು ಕವಿದಿದೆ.

ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ, ಯಶಸ್ವಿ ಉದ್ಯಮಿಗಳ ಯಶೋಗಾಥೆಯ ಪ್ರೇರಣದಾಯಕ ಕತೆಗಳನ್ನು ಬಿಚ್ಚಿಡುವ, ದೊಡ್ಡ ಉದ್ಯಮಿಗಳೊಂದಿಗೆ ಬೆರೆಯುವ ಅವಕಾಶವನ್ನು ಒದಗಿಸುವ ಕೆಲಸವನ್ನು ದೇಶಪಾಂಡೆ ಫೌಂಡೇಷನ್‌ ಹಾಗೂ ಟೈ ಸಂಸ್ಥೆಗಳು ನಿರಂತರವಾಗಿ ದಶಕದಿಂದ ಮಾಡಿಕೊಂಡು ಬಂದಿವೆ. ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಬೇಕಾದ ಡಿಜಿಟಲ್‌ ತಂತ್ರಜ್ಞಾನ, ಸಂಶೋಧನಾ ಚಟುವಟಿಕೆ, ಆರ್ಥಿಕ ನೆರವು, ತಂತ್ರಜ್ಞಾನವನ್ನು ನವ ಉದ್ಯಮಿಗಳಿಗೆ ತಲುಪಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ.

ಇಲ್ಲಿ ನಡೆಯುವ ಚಿಂತನ–ಮಂಥನದಲ್ಲಿ ಹಲವು ಉದ್ಯಮ ಬೆಳವಣಿಗೆಯ ಬಗೆಗೆ ಚರ್ಚೆಗಳಾಗುತ್ತವೆ. ಸಂವಾದ ಕಾರ್ಯಕ್ರಮದಲ್ಲಿ ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗೆಗೂ ಚರ್ಚೆಯಾಗುವ ಸಾಧ್ಯತೆಗಳಿವೆ. ಉದ್ಯಮ ಕ್ಷೇತ್ರಕ್ಕೆ ಹೊಸದಾಗಿ ಕಾಲಿಟ್ಟ ಯುವಕರು, ತಮ್ಮ ಜೀವನದಲ್ಲಿಯೇ ನೋಡಲು ಆಗುವುದಿಲ್ಲ ಎಂದುಕೊಂಡಂತಹ ದಿಗ್ಗಜರು ಭಾಗವಹಿಸುತ್ತಾರೆ. ರತನ್‌ ಟಾಟಾ, ಮೋಹನದಾಸ ಪೈ, ನಾರಾಯಣಮೂರ್ತಿ, ಮಹಮ್ಮದ್‌ ಯೂನೂಸ್, ಬಿ.ಎಂ. ಹೆಗಡೆ, ಸದ್ಗುರು ಜಗ್ಗಿ ವಾಸುದೇವ ಸೇರಿದಂತೆ ಹಲವರು ತಮ್ಮ ಅನುಭವಗಳ ಬುತ್ತಿಯನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

ದೇಶಪಾಂಡೆ ಫೌಂಡೇಷನ್‌ ಸ್ಟಾರ್ಟ್‌ ಅಪ್‌ ಆರಂಭಿಸುವ ಮೂಲಕ ನೂರಾರು ಹೊಸ ಉದ್ಯಮಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ನವೋದ್ಯಮಿ ಸಂತೆಗಳನ್ನು ಆಯೋಜಿಸುವ ಮೂಲಕ ಸಣ್ಣ ಉದ್ಯಮಿಗಳಿಗೂ ಅನುಕೂಲ ಮಾಡಿಕೊಟ್ಟಿದೆ. ಕೌಶಲ ಕೇಂದ್ರದ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ.

ಟೈ ವತಿಯಿಂದ ಪ್ರತಿ ತಿಂಗಳು ಒಂದೊಂದು ವಿಷಯದ ಮೇಲೆ ಉಪನ್ಯಾಸ, ಸ್ಟಾರ್ಟ್‌ ಅಪ್‌ನವರಿಗಾಗಿ ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದ, ಯುವ ಪೀಳಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಮೂರು ತಿಂಗಳ ತರಬೇತಿ, ಪದವೀಧರರಾಗಿ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗುತ್ತಿದೆ.

ಫೆ.1 ಮತ್ತು 2 ರಂದು ದೇಶಪಾಂಡೆ ಫೌಂಡೇಷನ್‌ ವತಿಯಿಂದ ‘ಡೆವಲಪ್‌ಮೆಂಟ್‌ ಡೈಲಾಗ್‌’ ಅನ್ನು ಬಿವಿಬಿ ಎಂಜಿನಿಯರಿಂಗ್‌ ಆಯೋಜಿಸಿದ್ದರೆ, ಟೈ ವತಿಯಿಂದ ಉದ್ಯಮಶೀಲತಾ ಶೃಂಗ ಸಭೆಯನ್ನು ಡೆನಿಸನ್ಸ್‌ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

‘ಜೋಡಣೆ, ನಾವೀನ್ಯಮತ್ತು ಪರಿಣಾಮ ಎನ್ನುವ ಧ್ಯೇಯವಾಕ್ಯದೊಂದಿಗೆ ಡೈಲಾಗ್‌ ಆಯೋಜಿಸಿದ್ದೇವೆ. ಶಿಕ್ಷಣ, ಕೃಷಿ ಮತ್ತು ತಾಂತ್ರಿಕ ಕೌಶಲ ತರಬೇತಿಗೆ ಒತ್ತು ಕೊಡುವುದು ಉದ್ದೇಶವಾಗಿದೆ’ ಎಂದು ದೇಶಪಾಂಡೆ ಫೌಂಡೇಷನ್‌ ಅಧ್ಯಕ್ಷ ಗುರುರಾಜ ದೇಶಪಾಂಡೆ ಹೇಳಿದರು.

ಎಚ್‌ಸಿಎಸ್‌ ಸಂಸ್ಥಾಪಕ ಅಜಯ್‌ ಚೌಧರಿ, ಮಣಿಪಾಲ ಗ್ಲೋಬಲ್‌ ಎಜುಕೇಷನ್‌ ಅಧ್ಯಕ್ಷ ಟಿ.ವಿ. ಮೋಹನದಾಸ ಪೈ, ರೆಡ್‌ಬಸ್‌ ಸಂಸ್ಥಾಪಕ ಫಣೀಂದ್ರ ಸಮಾ ಸೇರಿದಂತೆ ಹಲವರು ತಮ್ಮ ಉದ್ಯಮ ಸ್ಥಾಪನೆ, ಎದುರಿಸಿದ ಸವಾಲುಗಳು, ಸಾಧಿಸಿದ ಯಶಸ್ಸಿನ ಬಗೆಗೆ ಯುವ ಉದ್ಯಮಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಫೆ.2ರಂದು ದೇಶಪಾಂಡೆ ಫೌಂಡೇಷನ್‌ನ ಕೌಶಲ ಕೇಂದ್ರವನ್ನು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಉದ್ಘಾಟಿಸಲಿದ್ದಾರೆ.

ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಟೈಕಾನ್‌ನಲ್ಲಿ ಫೆ.1ರಂದು ಮಹಿಳಾ ಸಮಾವೇಶ ಆಯೋಜಿಸಲಾಗಿದೆ. ಜಾಗ್ರಾನ್ ಪ್ರಕಾಶನ್ ಲಿಮಿಟೆಡ್‌ನ ಅಧ್ಯಕ್ಷೆ ಅಪೂರ್ವ ಪುರೋಹಿತ್, ಗ್ಲೋಬಲ್ ಅಡ್ಜಸ್ಟ್‌ಮೆಂಟ್ಸ್‌ ಫೌಂಡೇಷನ್ ಅಧ್ಯಕ್ಷೆ ಡಾ.ರಂಜಿನಿ ಮಣಿಯನ್, ಜೆಟ್‌ಸೆಟ್‌ ಗೋ ಏವಿಯೇಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಕನಿಕಾ ತೆಕ್ರಿವಾಲ್, ‘ಫೆ.2ರಂದು ಪತಂಜಲಿ ಸ್ಥಾಪಕ ಬಾಬಾ ರಾಮದೇವ್ ಮಾತನಾಡಲಿದ್ದಾರೆ. ಜೆಎಂಆರ್ ಸಮೂಹದ ಸ್ಥಾಪಕ ಜೆ.ಎಂ‌.ರಾವ್, ಟಾಟಾ ಕಾಫಿ ಲಿಮಿಟೆಡ್‌ನ ಅಧ್ಯಕ್ಷ ಹರೀಶ್‌ ಭಟ್‌ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT