ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ಭೇಟಿಗೂ ಮೊದಲು ಇರಲಿ ಪ್ರವಾಸ ವಿಮೆ

Last Updated 18 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನನ್ನ ಸೋದರ ಸೊಸೆ ಕಳೆದ ವರ್ಷ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಟುಸ್ಕಾನ್‌ನಲ್ಲಿನ ವಿಶ್ವವಿದ್ಯಾಲಯ ಆಕೆಗೆ ವಿಮೆ ಪಾಲಿಸಿಯನ್ನು ಮಾಡಿಸಿರಲೇ ಬೇಕು ಎಂದು ಹೇಳಿತು. ಏಕೆಂದರೆ ಅಲ್ಲಿಗೆ ಯಾರೇ ವಿದೇಶಗಳಿಂದ ಅಧ್ಯಯನಕ್ಕೆ ಬಂದರೂ ವಿಮೆ ಮಾಡಿಸಿಕೊಂಡಿರುವುದು ಕಡ್ಡಾಯವಾಗಿತ್ತು. ನನ್ನ ಸಂಬಂಧಿ ವಿಮೆ ಪಾಲಿಸಿಗಾಗಿ 11 ಸಾವಿರ ಡಾಲರ್‌ ಅನ್ನು ಪ್ರೀಮಿಯಂ ಮೊತ್ತವಾಗಿ ಪಾವತಿ ಮಾಡಬೇಕಾಯಿತು. ಅಧ್ಯಯನದ ಅವಧಿಯಲ್ಲಿ ಜೀವವಿಮೆಯನ್ನು ಈ ಪಾಲಿಸಿ ಒಳಗೊಂಡಿತ್ತು. ಒಂದು ವೇಳೆ ವಿದೇಶಕ್ಕೆ ಹೋಗುವುದಕ್ಕಿಂತ ಮೊದಲೇ ವಿಮೆಯನ್ನು ಮಾಡಿಸಿಕೊಂಡಿದ್ದರೆ ಆಕೆ ಕೇವಲ ₹20 ಸಾವಿರ ಮಾತ್ರ ಪಾವತಿ ಮಾಡಬೇಕಾಗಿ ಬರುತಿತ್ತು.

ಇದನ್ನೊಂದು ನಿರ್ಲಕ್ಷ್ಯ ಎಂದೆನ್ನಿ. ಇಲ್ಲವೇ ಹೊರದೇಶಗಳಿಗೆ ಹೋಗುವವರಿಗೆ ಎದುರಾಗುವ ಸಮಸ್ಯೆ ಎಂದೆನ್ನಿ. ವಿದೇಶಕ್ಕೆ ಹೋಗುವ ಪ್ರವಾಸಿಗರು ಮೊದಲೇ ವಿಮೆ ಮಾಡಿಸಿಕೊಳ್ಳದೇ ಇರುವ ತಪ್ಪು ಮಾಡುತ್ತಾರೆ. ಇಂದು ಸಾಕಷ್ಟು ಜನರು ವಿದೇಶಗಳಿಗೆ ಅಧ್ಯಯನ, ವ್ಯವಹಾರ, ಪ್ರವಾಸಿ ಸ್ಥಳ ವೀಕ್ಷಣೆಗೆ ಹೋಗುತ್ತಲೇ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಪ್ರವಾಸಿ ವಿಮೆ ಅಗತ್ಯದ ಒಂದು ಅಂಶವಾಗಿ ಕಂಡುಬರುತ್ತದೆ. ಏಕೆಂದರೆ ಏನಾದರೂ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾದರೆ ವಿಮೆ ಮಾಡಿಸಿಕೊಳ್ಳದೇ ಇದ್ದರೆ ನಮ್ಮದೇ ಜೇಬಿಗೆ ಕತ್ತರಿ ಬೀಳುವುದು ಖಂಡಿತ.

ಸಾಕಷ್ಟು ಜನರು ಪ್ರವಾಸ ವಿಮೆ ಮಾಡಿಸಿಕೊಳ್ಳುವುದು ವ್ಯರ್ಥ ಎಂದೇ ಭಾವಿಸುತ್ತಾರೆ. ಅದಕ್ಕಾಗಿ ಏಕೆ ಹಣ ವ್ಯಯಿಸಬೇಕು ಎಂದುತಿಳಿದುಕೊಂಡಿರುತ್ತಾರೆ. ಅದರಲ್ಲೂ ಕಡಿಮೆ ಅವಧಿ ವಿದೇಶ ಪ್ರವಾಸ ಮಾಡುವವರಂತೂ ಇದರ ಬಗ್ಗೆ ಸ್ವಲ್ಪವೂ ಯೋಚಿಸುವುದೇ ಇಲ್ಲ.

ಸಾಕಷ್ಟು ಜನರು ಪ್ರವಾಸಿ ವಿಮೆ ಕೇವಲ ವೈದ್ಯಕೀಯ ವೆಚ್ಚಗಳನ್ನು ಮಾತ್ರವೇ ಭರಿಸುತ್ತದೆ ಎಂದು ತಪ್ಪು ತಿಳಿದುಕೊಂಡಿರುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದು ಕಡಿಮೆ ಇರುತ್ತದೆ. ಆದರೆ ಇದರಿಂದ ಇರುವ ಅನುಕೂಲಗಳು ಬಹಳಷ್ಟು. ವಿಮಾನ ವಿಳಂಬವಾದರೆ, ಬ್ಯಾಗೇಜ್ ಮತ್ತು ಪಾಸ್‌ಪೋರ್ಟ್ ಕಳೆದುಹೋದರೆ ಇಲ್ಲವೇ ಮೃತಪಟ್ಟರೂ ಪ್ರವಾಸಿ ವಿಮೆಯಿಂದ ಲಾಭಗಳಿವೆ.

ಇದೆಲ್ಲದರಿಂದ ಹಣಕಾಸು ದೃಷ್ಟಿಯಿಂದಲೂ ಪ್ರವಾಸಿ ವಿಮೆ ಖರೀದಿ ಮಾಡುವುದು ಜಾಣತನವಾಗುತ್ತದೆ. ಇದರಿಂದ ವಿದೇಶ ಪ್ರವಾಸ ದುಃಸ್ವಪ್ನವಾಗಿ ಕಾಡುವುದು ತಪ್ಪುತ್ತದೆ. ನೀವು ಮತ್ತು ನಿಮ್ಮ ಕುಟುಂಬ ಪ್ರವಾಸಿ ವಿಮೆ ಮಾಡಿಸಿಕೊಳ್ಳುವ ಮೊದಲು ಕೆಲವು ಅಂಶಗಳನ್ನು ತಿಳಿದುಕೊಂಡಿರಲೇ ಬೇಕಾಗುತ್ತದೆ.

ಪ್ರೀಮಿಯಂ ಪಾಲಿಸಿಯ ಪ್ರೀಮಿಯಂ ಮೊತ್ತವು ನೀವು ಕೈಗೊಳ್ಳುವ ದೇಶದ ದೂರ, ವಯಸ್ಸು, ಪ್ರವಾಸ ಅವಧಿ ಹಾಗೂ ಯಾವ ರೀತಿಯ ಪ್ರವಾಸ ಎಂಬುದನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ಏಷ್ಯಾದ ಒಳಗೆ ಪ್ರವಾಸ ಕೈಗೊಳ್ಳುತ್ತಿದ್ದರೆ ನಿಮ್ಮ ಪ್ರೀಮಿಯಂ ಮೊತ್ತವು ಅಮೆರಿಕ ಇಲ್ಲವೇ ಕೆನಡಾದಲ್ಲಿ ಇರವುದಕ್ಕಿಂತಲೂ ಕಡಿಮೆಯಾಗಿರುತ್ತದೆ. ಇದಕ್ಕೆಅಮೆರಿಕದಲ್ಲಿ ದೊರೆಯುವ ವೈದ್ಯಕೀಯ ಸೇವೆಗಳು ಮತ್ತು ಇತರ ದೇಶಗಳ ಸೇವೆಗಳಲ್ಲಿನ ವ್ಯತ್ಯಾಸ ಪ್ರಮುಖ ಕಾರಣವಿರಬಹುದು.

ಇನ್ನು ವಯಸ್ಸಿನ ಮೇಲೂ ಮೊತ್ತ ಹೆಚ್ಚು ಕಡಿಮೆಯಾಗುತ್ತದೆ. ವ್ಯವಹಾರಿಕ ಉದ್ದೇಶದ ಒಂದು ತಿಂಗಳ ವಿದೇಶ ಪ್ರವಾಸಕ್ಕೆ 25 ವರ್ಷದ ವ್ಯಕ್ತಿಗೆ ತಗಲುವ ಪ್ರೀಮಿಯಂ ಮೊತ್ತವು 50 ವರ್ಷದ ವ್ಯಕ್ತಿ ಪಾವತಿಸುವ ಮೊತ್ತಕ್ಕಿಂತಲೂ ಕಡಿಮೆ.ಹೆಚ್ಚು ಅವಧಿಗೆ ‍ಪ್ರವಾಸ ಕೈಗೊಳ್ಳುವವರು ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗುತ್ತದೆ.

ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆಂದೇ ಕೆಲವು ನಿರ್ದಿಷ್ಟ ವಿಮಾ ಯೋಜನೆಗಳಿವೆ.ಬಜಾನ್‌ ಅಲಯನ್ಸ್‌ ಸಿಲ್ವರ್‌, ಗೋಲ್ಡ್‌ ಮತ್ತು ಪ್ಲಾಟಿನಂ ಹೆಸರಿನ ವಿಮಾ ಪಾಲಿಗಳನ್ನು ನೀಡುತ್ತಿದೆ. ಇವುಗಳು 50 ಸಾವಿರ, 2 ಲಕ್ಷ ಮತ್ತು 5 ಲಕ್ಷ ಅಮೆರಿಕನ್ ಡಾಲರ್‌ ವಿಮೆಯನ್ನು ಒಳಗೊಂಡಿರುತ್ತವೆ.

ಯಾವ ಉದ್ದೇಶದ ಭೇಟಿ: ಪ್ರೀಮಿಯಂ ಮೊತ್ತವು ಯಾವ ಉದ್ದೇಶ ಭೇಟಿ ಎಂಬುದನ್ನೂ ಅವಲಂಬಿಸಿರುತ್ತದೆ. ಇದು ಮೋಜಿನ ಪ್ರವಾಸ ಇಲ್ಲವೇ ವ್ಯವಹಾರಿಕ ಭೇಟಿಯಾಗಿರಬಹುದು. ಮೋಜಿನ ಪ್ರವಾಸದ ಪಾಲಿಸಿಗಳು ಸಾಮಾನ್ಯವಾಗಿ ಒಂದು ಸಮಯದ್ದಾಗಿರುತ್ತವೆ. ಅದೇ ವ್ಯವಹಾರದ ಭೇಟಿಯಾಗಿದ್ದರೆ ಒಂದು ವರ್ಷದ ಅವಧಿಗೆ ನೀಡಲಾಗುತ್ತದೆ. ಈ ಅವಧಿಯಲ್ಲಿ ಪಾಲಿಸಿದಾರ ಹಲವು ಬಾರಿ ಸ್ವದೇಶಕ್ಕೆ ಬಂದು ಹೋಗುತ್ತಿದ್ದರೂ ಪದೇ ಪದೇ ಪಾಲಿಸಿ ಮಾಡಿಸಿಕೊಳ್ಳಬೇಕಾಗಿಲ್ಲ. ಆದರೆ ಇದಕ್ಕೆ ಕೆಲವುನಿಬಂಧನೆಗಳಿವೆ. ಒಮ್ಮೆ ಪ್ರವಾಸದ ಅವಧಿಯು 30 ರಿಂದ 45 ದಿನಗಳನ್ನು ಮೀರುವಂತಿಲ್ಲ.

ಯಾವ ರಿಸ್ಕ್‌ಗಳನ್ನು ಒಳಗೊಳ್ಳುತ್ತದೆ: ಹೆಚ್ಚಿನ ಎಲ್ಲಾ ಪ್ರವಾಸ ವಿಮೆಗಳು ಆಸ್ಪತ್ರೆಗೆ ದಾಖಲಾಗುವುದರ ವೆಚ್ಚವನ್ನು ಒಳಗೊಂಡಿರುತ್ತವೆ. ಇದು ಅನಾರೋಗ್ಯಕ್ಕೊಳಗಾದ ಕಾರಣ ಇಲ್ಲವೇ ಅಪಘಾತದಿಂದ ಆಗಿರಬಹುದು. ಇಂತಹ ಸಂದರ್ಭದಲ್ಲಿ ಪಾಲಿಸಿಯು ‘ಮೆಡಿಕ್ಲೇಮ್‌ ಪಾಲಿಸಿ’ಯಾಗಿ ಕೆಲಸ ಮಾಡುತ್ತದೆ. ಇದಲ್ಲದೆ ಪ್ರವಾಸಿಗ ಮೃತಪಟ್ಟರೆ ಸ್ವದೇಶಕ್ಕೆ ಸ್ಥಳಾಂತರ (ತುರ್ತು ಸಂದರ್ಭದಲ್ಲಿ) ಪಾರ್ಥಿವ ಶರೀರದ ರವಾನೆಗೆ ಪಾಲಿಸಿ ನೆರವಾಗುತ್ತದೆ.

ವೈದ್ಯಕೀಯಯೇತರ ಪಾಲಿಸಿಗಳಾದ ಲಗೇಜ್‌ ಮತ್ತು ಪಾಸ್‌ಪೋರ್ಟ್‌ ಕಳೆದುಹೋದರೆ, ಕಳವು, ಪ್ರವಾಸ ರದ್ದು, ಹವಾಮಾನ ಬದಲಾವಣೆಯಿಂದ ಮತ್ತು ಭಯೋತ್ಪಾದನಾ ಕೃತ್ಯದಿಂದ ವಿಮಾನ ರದ್ದಾದರೆ ಪಾಲಿಸಿ ರಕ್ಷಣೆ ಸಿಗುತ್ತದೆ. ಟಾಟಾ ಎಐಜಿ ಟ್ರಾವೆಲ್‌ ಗಾರ್ಡ್‌ ಗೋಲ್ಡ್‌ ಪಾಲಿಸಿಯಲ್ಲಿ ವಿಮಾನ ಪ್ರಯಾಣಿಕರನ್ನು ಅಪಹರಣಕಾರರು ವಶದಲ್ಲಿಟ್ಟುಕೊಂಡ ಪ್ರತಿ 24 ಗಂಟೆಗೆ 100 ಅಮೆರಿಕನ್‌ ಡಾಲರ್ ಅನ್ನು ಯಾತನಾ ಭತ್ಯೆಯಾಗಿ ನೀಡಲಾಗುತ್ತದೆ. ಎಚ್‌ಡಿಎಫ್‌ಸಿ ಎರ್ಗೊ ಗೋಲ್ಡ್‌ ಪ್ಲಾನ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಚೆಕಿಂಗ್‌ ಆದ ಲಗೇಜ್‌ ಕಳೆದುಹೋದರೆ 1000 ಅಮೆರಿಕನ್ ಡಾಲರ್ ಅನ್ನು ನೀಡಲಾಗುತ್ತದೆ. ಟಾಟಾ ಎಐಜಿ ಟ್ರಾವೆಲ್ ಗಾರ್ಡ್‌ನಲ್ಲಿ ವಿದೇಶಕ್ಕೆ ಹೋದ ವೇಳೆ ಭಾರತದಲ್ಲಿನ ನಿಮ್ಮ ಮನೆಯಲ್ಲಿ ದರೋಡೆಯಾದರೆ ₹2 ಲಕ್ಷ ನೀಡುವ ಅವಕಾಶವಿದೆ.

ಯಾವುದೇ ಪ್ರವಾಸ ವಿಮೆಯನ್ನು ಖರೀದಿ ಮಾಡುವ ಮೊದಲು ಸಾಕಷ್ಟು ಮಾಹಿತಿ ಪಡೆದು, ನಿಬಂಧನೆಗಳನ್ನು ಓದಿದರೆ ಒಳ್ಳೆಯದು. ಹೆಚ್ಚು ಹೆಚ್ಚು ಹಣ ವ್ಯಯಿಸಿ ಆಸೆಯಿಂದ ವಿದೇಶ ಪ್ರವಾಸ ಮಾಡಿ ತೊಂದರೆಗೊಳಗಾದರೆ ಪಾಲಿಸಿಯಿಂದ ಸ್ವಲ್ಪಮಟ್ಟಿನ ನೆರವಾಗುತ್ತದೆ.

ಯಾವುದಕ್ಕೆ ಪ್ರವಾಸ ವಿಮೆ ಅನ್ವಯಿಸಲ್ಲ
* ಈಗಾಗಲೇ ಇದ್ದ ಕಾಯಿಲೆ ಉಲ್ಬಣಿಸಿ ಆಸ್ಪತ್ರೆಗೆ ದಾಖಲಾದರೆ
* ಯುದ್ಧ, ಆತ್ಮಹತ್ಯೆಗೆ ಯತ್ನ
* ಮಾದಕವ್ಯಸನ, ಮದ್ಯಪಾನ ಮಾಡಿ ವಾಹನ ಚಾಲನೆ
* ಬಿಸಿಗಾಳಿ ಬಲೂನ್‌ನಿಂದ ಮೇಲೆರಿ ಅವಘಡ ಸಂಭವಿಸಿದರೆ
* ಬಂಗಿ ಜಂಪ್ ಮತ್ತು ಗೂಳಿಕಾಳಗದಿಂದ ತೊಂದರೆಯಾದರೆ

(ಲೇಖಕ: ಮಾಜಿ ಬ್ಯಾಂಕರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT