ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ವಿಮೆ: ಆಕಸ್ಮಿಕಗಳಿಗೆ ಗುರಾಣಿ

VP travel insurance
Last Updated 18 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಪ್ರವಾಸದ ಬಗ್ಗೆ ಯೋಜನೆ ರೂಪಿಸುವುದು ಪ್ರತಿಯೊಬ್ಬರಿಗೂ ಪ್ರಯಾಸದ ಕೆಲಸ. ಹೋಟೆಲ್‌ ಮತ್ತು ಪ್ರವಾಸದ ಟಿಕೆಟ್‌ ಕಾಯ್ದಿರಿಸುವುದು, ಕೆಲವರು ದುಬಾರಿ ಬೆಲೆಯ ಕ್ಯಾಮೆರಾ, ಟ್ರೆಕ್ಕಿಂಗ್‌ ಉಪಕರಣಗಳನ್ನು ತಮ್ಮೊಂದಿಗೆ ಒಯ್ಯಲು ಹೆಚ್ಚಿನ ಹಣ ಹೊಂದಿಸಬೇಕಾಗುತ್ತದೆ. ಪ್ರವಾಸದ ಸಂದರ್ಭದಲ್ಲಿ ಎದುರಾಗುವ ಅನಿರೀಕ್ಷಿತ ಮತ್ತು ಅಹಿತಕರ ಘಟನೆಗಳು ಪ್ರವಾಸದ ಸುಂದರ ಅನುಭವವನ್ನು ಸಂಕಷ್ಟಕ್ಕೆ ದೂಡಬಹುದು. ದೂರದ ಸ್ಥಳಗಳಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಬಹುದು. ಸರಕಿನ ಕಳ್ಳತನ ನಡೆಯಬಹುದು. ಈಗ ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಕೊರೊನಾ ವೈರಸ್‌ ಹಾವಳಿಯಂತಹ ಸಂದರ್ಭಗಳಲ್ಲಿ ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದುಪಡಿಸ ಬೇಕಾಗಬಹುದು. ಈ ಬಗೆಯ ಅಹಿತಕರ ಘಟನೆಗಳು ಪ್ರವಾಸದ ಸಂದರ್ಭದಲ್ಲಿ ಎದುರಾಗಬಹುದು. ಹೀಗಾಗಿ, ವಿಮೆಯಲ್ಲಿ ಹೂಡಿಕೆ ಮಾಡಿದ್ದರೆ ಪ್ರವಾಸದ ಸಂದರ್ಭದಲ್ಲಿ ಎದುರಾಗಬಹುದಾದ ಆಕಸ್ಮಿಕಗಳಿಂದ ಆಗುವ ಹಣಕಾಸಿನ ನಷ್ಟ ಪರಿಹರಿಸಿಕೊಳ್ಳಬಹುದು. ಪ್ರವಾಸಿ ವಿಮೆಯು ಹಣಕಾಸಿನ ಸ್ಥಿರತೆ ಒದಗಿಸುವ ಜತೆ ವಿದೇಶಗಳಲ್ಲೂ ವಿವಿಧ ರೀತಿಯಲ್ಲಿ ನೆರವು ಒದಗಿಸುತ್ತದೆ.

ಇತ್ತೀಚಿನ ಕ್ಲೇಮ್‌ ಟ್ರೆಂಡ್‌ಗಳು

ಇದುವರೆಗಿನ ಆಂತರಿಕ ಮಾಹಿತಿ ಅನ್ವಯ, ಒಟ್ಟಾರೆಯಗಿ 60 ವರ್ಷದ ಮೇಲ್ಪಟ್ಟವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಲೇಮುಗಳನ್ನು ಪಡೆಯುವುದು ಸಾಮಾನ್ಯ. ಆದರೆ, ಶೇಕಡ 40ರಷ್ಟು ಟ್ರಾವೆಲ್‌ ಕ್ಲೇಮ್‌ಗಳನ್ನು ಪ್ರವಾಸಿಗರು ಪಡೆಯುತ್ತಿದ್ದಾರೆ. ಇವರೆಲ್ಲರೂ 20ರಿಂದ 40 ವರ್ಷದವರಾಗಿದ್ದು, ಸರಾಸರಿ ಕ್ಲೇಮ್‌ ಮೊತ್ತವು ₹ 2 ಲಕ್ಷದವರೆಗೆ ಇರುತ್ತದೆ. ಲಕ್ಷಾಂತರ ರೂಪಾಯಿ ಮೊತ್ತದ ಕ್ಲೇಮುಗಳನ್ನು ಪಡೆದಿರುವ ಉದಾಹರಣೆಗಳೂ ಇವೆ. ಈ ವಯಸ್ಸಿನವರೇ ಅತಿ ಹೆಚ್ಚು ಅಪಾಯಕ್ಕೆ ಒಳಗಾಗುತ್ತಿರುವುದು ಸಹ ಇದಕ್ಕೆ ಕಾರಣ. ಈ ವಯಸ್ಸಿನವರು ತಮಗೆ ಏನೂ ಆಗುವುದಿಲ್ಲ ಎನ್ನುವು ಭಾವನೆಯೂ ಬೆಳೆದಿದೆ. ಇನ್ನೊಂದೆಡೆ ಎಲ್ಲ ವಯಸ್ಸಿನ ಸರಾಸರಿ ಮಟ್ಟವನ್ನು ಪರಿಶೀಲಿಸಿದಾಗ ಶೇಕಡ 25ರಷ್ಟು ಒಟ್ಟಾರೆ ಕ್ಲೇಮುಗಳು ವೈದ್ಯಕೀಯ ವೆಚ್ಚಕ್ಕಾಗಿಯೇ ಪಡೆದಿರುವುದು ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿದೆ.

ವಿಮೆ ವ್ಯಾಪ್ತಿ

ವಿದೇಶಗಳಲ್ಲಿ ಸಂಭವಿಸುವ ಅನಾಹುತಗಳ ಬಗ್ಗೆ ವಿಶ್ಲೇಷಣೆ ನಡೆಸಿದರೆ ಪ್ರವಾಸ ಪಾಲಿಸಿ ಬಗ್ಗೆ ಪ್ರತಿಯೊಬ್ಬರು ತಿಳಿವಳಿಕೆ ಪಡೆಯುವುದು ಅಗತ್ಯ. ಪ್ರವಾಸಿ ಪಾಲಿಸಿಯು ಪ್ರಾಥಮಿಕವಾಗಿ ಪ್ರವಾಸದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾದಾಗ ಒಳರೋಗಿಯಾಗಿ ಮತ್ತು ಹೊರರೋಗಿಯಾಗಿ ದಾಖಲಾದ ಸಂದರ್ಭದಲ್ಲಿ ತಗಲುವ ವೆಚ್ಚವನ್ನು ಸರಿದೂಗಿಸುತ್ತದೆ. ಜತೆಗೆ, ವೈಯಕ್ತಿಕ ಅಪಘಾತ ಸೌಲಭ್ಯವನ್ನು ಕಲ್ಪಿಸುತ್ತದೆ. ಮರಣ ಅಥವಾ ಶಾಶ್ವತ ಅಂಗವಿಕಲರಾದ ಸಂದರ್ಭದಲ್ಲಿ ನಿರ್ದಿಷ್ಟ ಹಣಕಾಸಿನ ನೆರವು ನೀಡುತ್ತದೆ. ಒಂದು ವೇಳೆ ಪ್ರವಾಸದ ಸಮಯದಲ್ಲಿ ಗಾಯಗೊಂಡಿದ್ದರೆ ಆಸ್ಪತ್ರೆಯ ವೆಚ್ಚವನ್ನು ಇದು ಭರಿಸುತ್ತದೆ. ವಿಮಾ ಕಂಪನಿಗಳು ದೇಶದಾದ್ಯಂತ ಇರುವ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡಿರುವುದರಿಂದ ಸ್ವದೇಶದಲ್ಲಿ ಪ್ರವಾಸ ಕೈಗೊಂಡಿರುವ ಪ್ರವಾಸಿಗರು ನಗದುರಹಿತ ಸೌಲಭ್ಯವನ್ನು ಆಯಾ ನಗರಗಳಲ್ಲಿನ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದು. ಪ್ರವಾಸಿ ವಿಮೆ ಪಾಲಿಸಿಗಳು ಆಸ್ಪತ್ರೆಯಲ್ಲಿನ ಪ್ರತಿದಿನ ಸೌಲಭ್ಯಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತವೆ.

ಪ್ರವಾಸಿ ಪಾಲಿಸಿಯು ಪ್ರವಾಸಿಗರಿಗೆ ಹಲವು ಬಗೆಗಳಲ್ಲಿ ರಕ್ಷಣೆ ಒದಗಿಸುತ್ತದೆ. ಯೋಜನೆಗಿಂತ ಮುನ್ನವೇ ಪ್ರವಾಸವನ್ನು ಕಡಿತಗೊಳಿಸಿದರೆ ಅದಕ್ಕೆ ತಗುಲಿದ ವೆಚ್ಚವನ್ನು ಪ್ರವಾಸಿ ಪಾಲಿಸಿಯಿಂದ ಪಡೆಯಬಹುದಾಗಿದೆ. ಕುಟುಂಬದಲ್ಲಿನ ಹತ್ತಿರ ಸಂಬಂಧಿ ಸಾವಿಗೀಡಾದ ಸಂದರ್ಭದಲ್ಲಿ ಅಥವಾ ವೈದ್ಯಕೀಯ ತುರ್ತುಪರಿಸ್ಥಿತಿಯಿಂದಾಗಿ ಪ್ರವಾಸವನ್ನು ಮೊಟಕುಗೊಳಿಸಿದ ಸಂದರ್ಭದಲ್ಲಿ ಈ ಪಾಲಿಸಿ ನೆರವಿಗೆ ಬರುತ್ತದೆ. ಹವಾಮಾನ ವೈಪರೀತ್ಯದಿಂದ ವಿಮಾನ ಅಥವಾ ರೈಲ್ವೆ ವಿಳಂಬವಾಗಬಹುದು. ಇದರಿಂದಾಗಿ ಇನ್ನೊಂದು ಸ್ಥಳಕ್ಕೆ ತೆರಳುವುದನ್ನು ರದ್ದುಪಡಿಸಿದ ಸಂದರ್ಭಗಳು ಸಹ ಈ ಪಾಲಿಸಿ ವ್ಯಾಪ್ತಿಗೆ ಒಳಪಡುತ್ತವೆ. ಇದೇ ರೀತಿ ಲಗೇಜುಗಳು ಕಳುವಾಗಿದ್ದರೆ ಅಥವಾ ಆರು ಗಂಟೆಗಳಿಗೂ ಹೆಚ್ಚು ಕಾಲ ಅನಿವಾರ್ಯ ಕಾರಣಗಳಿಂದ ಕೈಸೇರುವುದು ವಿಳಂಬವಾಗಿದ್ದರೆ ಪ್ರವಾಸಿ ವಿಮೆ ಪಾಲಿಸಿಯು ಲಗೇಜಿನ ಮೊತ್ತದ ಮರುಪಾವತಿ ಮಾಡಲಿದೆ.

ಹೆಚ್ಚುವರಿ ವ್ಯಾಪ್ತಿ

ಪ್ರವಾಸಿ ಪಾಲಿಸಿಗಳಲ್ಲಿ ಸಾಹಸ ಕ್ರೀಡೆಗಳಲ್ಲಿ ಸಂಭವಿಸಿರುವ ಅಪಘಾತಗಳೂ ಸೇರುತ್ತವೆ. ಆದರೆ, ಪ್ರವಾಸಿಗರು ಈ ಬಗ್ಗೆ ಎಚ್ಚರವಹಿಸಿ ಪಾಲಿಸಿಯಲ್ಲಿ ಈ ಮಾಹಿತಿ ಇದೆಯೇ ಎನ್ನುವುದನ್ನು ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇದನ್ನು ಹೆಚ್ಚುವರಿಯಾಗಿ ಸೇರಿಸಿರಬಾರದು ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಹಲವು ಯುವಕರು ಇತ್ತೀಚಿನ ದಿನಗಳಲ್ಲಿ ಟ್ರೆಕ್ಕಿಂಗ್‌, ಸ್ಕಿಯಿಂಗ್‌, ವಾಟರ್‌ ರ‍್ಯಾಫ್ಟಿಂಗ್‌, ಸ್ಕೈ ಡೈವಿಂಗ್‌, ಪ್ಯಾರಾಶೂಟ್‌, ಸ್ಕೂಬಾ ಡೈವಿಂಗ್‌ ಮುಂತಾದ ಸಾಹಸ ಕ್ರೀಡೆಗಳನ್ನು ಕೈಗೊಳ್ಳುತ್ತಿದ್ದಾರೆ. ತರಬೇತಿ ಪಡೆದ ವೃತ್ತಿಪರರ ಮಾರ್ಗದರ್ಶನದಲ್ಲಿ ಈ ಸಾಹಸಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಈ ಅಪಾಯಕಾರಿ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರಿಗಾಗಿ ವಿಮೆ ಪಾಲಿಸಿಗಳಿವೆ.

ಪ್ರವಾಸಗಳು ಬದುಕಿಗೆ ಉತ್ಸಾಹ ತುಂಬುತ್ತವೆ. ಆದರೂ, ಅಪಾಯಗಳಿಂದ ಹೊರತಾಗಿಲ್ಲ. ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು. ಪೂರ್ಣ ಪ್ರಮಾಣದ ಪ್ರವಾಸಿ ವಿಮೆಯು, ವೈದ್ಯಕೀಯ ಮತ್ತು ಇತರ ಅಗತ್ಯ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಇದರಿಂದ, 24x7 ಪ್ರವಾಸವು ಸುಗಮವಾಗುತ್ತದೆ. ಜತೆಗೆ, ಸಂಕಷ್ಟಗಳನ್ನು ನಿವಾರಿಸಲು ನೆರವಾಗುತ್ತದೆ.

(ಲೇಖಕಿ: ಬಜಾಜ್‌ ಅಲಯನ್ಸ್‌ ಜನರಲ್‌
ಇನ್ಶುರೆನ್ಸ್‌ನ ಹಿರಿಯ ವ್ಯವಸ್ಥಾಪಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT