ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ನಿರುದ್ಯೋಗ ಇಳಿಮುಖ: ಸಿಎಂಐಇ ಮಾಹಿತಿ

ಅನ್‌ಲಾಕ್‌ ಪ್ರಕ್ರಿಯೆ ನಂತರ ಸಮಸ್ಯೆಯಿಂದ ಹೊರಕ್ಕೆ
Last Updated 21 ಅಕ್ಟೋಬರ್ 2020, 17:13 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟವು ದೇಶದ ಇತರ ರಾಜ್ಯಗಳಿಗಿಂತ ವೇಗವಾಗಿ ನಿರುದ್ಯೋಗ ಸಮಸ್ಯೆಯಿಂದ ಹೊರಬರುತ್ತಿದೆ.

ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ನಂತರ, ಆಗಸ್ಟ್‌ನಲ್ಲಿ ರಾಜ್ಯದಲ್ಲಿನ ನಿರುದ್ಯೋಗ ಪ್ರಮಾಣವು ಶೇಕಡ 0.5ಕ್ಕೆ ಇಳಿಕೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ ಅದು ಶೇ 2.4ರಷ್ಟಿತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಕಲೆಹಾಕಿರುವ ಅಂಕಿ–ಅಂಶಗಳು ಹೇಳುತ್ತಿವೆ.

ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಿರುದ್ಯೋಗ ಪ್ರಮಾಣವು ಶೇ 4.55ರಷ್ಟು, ಗುಜರಾತ್‌ನಲ್ಲಿ ಶೇ 3.4ರಷ್ಟು, ತಮಿಳುನಾಡಿನಲ್ಲಿ ಶೇ 5ರಷ್ಟು ಇತ್ತು. ರಾಷ್ಟ್ರ ಮಟ್ಟದಲ್ಲಿನ ನಿರುದ್ಯೋಗ ಪ್ರಮಾಣಕ್ಕೆ (ಶೇ 6.7ರಷ್ಟು) ಹೋಲಿಸಿದರೆ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣವು ಸರಿಸುಮಾರು ಮೂರನೆಯ ಒಂದರಷ್ಟು ಇದೆ. ಕರ್ನಾಟಕಕ್ಕಿಂತ ಕಡಿಮೆ ನಿರುದ್ಯೋಗ ಪ್ರಮಾಣ ದಾಖಲಿಸಿರುವ ರಾಜ್ಯಗಳು ಅಸ್ಸಾಂ (ಶೇ 1.2ರಷ್ಟು), ಛತ್ತೀಸಗಡ (ಶೇ 2ರಷ್ಟು) ಮಾತ್ರ.

ಏಪ್ರಿಲ್‌ ತಿಂಗಳಲ್ಲಿ ಲಾಕ್‌ಡೌನ್‌ ನಿಯಮಗಳು ಕಠಿಣವಾಗಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿನ ನಿರುದ್ಯೋಗ ಪ್ರಮಾಣವು ಶೇ 29.8ರಷ್ಟು ಇತ್ತು. ಆಗ ರಾಷ್ಟ್ರ ಮಟ್ಟದಲ್ಲಿ ನಿರುದ್ಯೋಗ ಪ್ರಮಾಣವು ಶೇ 23.5ರಷ್ಟಿತ್ತು.

ತಯಾರಿಕಾ ವಲಯಕ್ಕಿಂತ ವೇಗವಾಗಿ ಡಿಜಿಟಲ್ ಮತ್ತು ಐ.ಟಿ. ಸೇವಾ ವಲಯದಲ್ಲಿ ಚೇತರಿಕೆ ಕಂಡುಬಂದ ಕಾರಣ, ಕರ್ನಾಟಕದಲ್ಲಿನ ನಿರುದ್ಯೋಗ ಪ್ರಮಾಣವು ಗಣನೀಯವಾಗಿ ಇಳಿದಿದೆ.

‘ಜ್ಞಾನ ಆಧಾರಿತ ವಲಯಗಳಲ್ಲಿ ಕೆಲಸ ಮಾಡುವವರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಕೆಲಸ ಮಾಡಬಲ್ಲರು. ಅವರಿಗೆ ಮಾಹಿತಿ ತಂತ್ರಜ್ಞಾನದ ಕಾರಣದಿಂದಾಗಿ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿವೆ. ಆದರೆ, ಸಾಂಪ್ರದಾಯಿಕ ವಲಯಗಳಲ್ಲಿ ಚೇತರಿಕೆಯು ನಿಧಾನವಾಗಿ ಆಗುತ್ತಿದೆ’ ಎಂದು ತಂತ್ರಜ್ಞಾನ ಸೇವಾ ಸಂಸ್ಥೆ ಕ್ವೆಸ್‌ ಕಾರ್ಪ್‌ನ ಲೋಹಿತ್ ಭಾಟಿಯಾ ಹೇಳಿದರು.

ಆದರೆ, ವಾಸ್ತವವಾಗಿ ನಿರುದ್ಯೋಗ ಪ್ರಮಾಣವು ಈಗ ವರದಿಯಾಗಿರುವ ಪ್ರಮಾಣಕ್ಕಿಂತಲೂ ಜಾಸ್ತಿ ಇದ್ದಿರಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಹಲವರು ತಮ್ಮ ಊರುಗಳಿಗೆ ಮರಳಿದ ಕಾರಣ, ನಿರ್ದಿಷ್ಟ ಪ್ರದೇಶದಲ್ಲಿ ಕೆಲಸಕ್ಕೆ ಲಭ್ಯವಿರುವ ಕಾರ್ಮಿಕರ ಸಂಖ್ಯೆಯೇ ಕಡಿಮೆ ಆಗಿರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT