ಭಾನುವಾರ, ಸೆಪ್ಟೆಂಬರ್ 15, 2019
27 °C

ವಾಣಿಜ್ಯ ಪುರವಣಿಯ ಪ್ರಶ್ನೋತ್ತರಗಳು

Published:
Updated:

ತಳವಾರ, ಊರುಬೇಡ

ಸಣ್ಣ ವ್ಯಾ‍ಪಾರಿ. ಕಳೆದ 5 ವರ್ಷಗಳಿಂದ ₹ 6 ಲಕ್ಷ ಉಳಿತಾಯ ಮಾಡಿದ್ದೇನೆ. ಬ್ಯಾಂಕ್ ಆಗಲಿ ಸಂಘ ಸಂಸ್ಥೆಗಳಲ್ಲಿ ತೊಡಗಿಸದೆ, ನನ್ನಲ್ಲಿಯೇ ಇಟ್ಟುಕೊಂಡಿದ್ದೇನೆ. ಮಾರ್ಗದರ್ಶನ ನೀಡಿರಿ.

ಉತ್ತರ: ನೀವು 21ನೇ ಶತಮಾನದಲ್ಲಿದ್ದು, ಇಷ್ಟೊಂದು ಬ್ಯಾಂಕ್‌ಗಳಿರುವಾಗ ದೊಡ್ಡ ಮೊತ್ತ ಮನೆಯಲ್ಲಿಯೇ ಇರಿಸಿಕೊಂಡಿರುವುದು ಸೋಜಿಗ! ಇದರಿಂದ ಕನಿಷ್ಠ ವಾರ್ಷಿಕ ₹ 4,000 ರಿಂದ 5,000 ಬಡ್ಡಿ ಪಡೆಯಬಹುದಾಗಿತ್ತು. ತಕ್ಷಣ ಮನೆಗೆ ಸಮೀಪದ ಬ್ಯಾಂಕಿನಲ್ಲಿ ₹ 6 ಲಕ್ಷ ನೀವು ನಿಮ್ಮ ಹೆಂಡತಿಯ ಹೆಸರಿನಲ್ಲಿ, 5 ವರ್ಷಗಳ ಅವಧಿಗೆ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರಿ. ಅದೇ ರೀತಿ ಅದೇ ಬ್ಯಾಂಕಿನಲ್ಲಿ ಒಂದು ಉಳಿತಾಯ ಖಾತೆಯನ್ನು ತೆರೆದು, ಉಳಿಸುವ ಹಣ ಪ್ರತೀ ವಾರ ಈ ಖಾತೆಗೆ ಜಮಾ ಮಾಡುತ್ತಾ ಬನ್ನಿ. ₹10,000 ದಾಟುತ್ತಲೇ 5 ವರ್ಷಗಳ ಠೇವಣಿ ಮಾಡಿರಿ. ಮನೆಯಲ್ಲಿ ನಗದು ರೂಪದಲ್ಲಿ ಹಣ ಇಟ್ಟುಕೊಂಡರೆ ಅದು ಖರ್ಚಾಗುವ ಸಂಭವವಿದೆ. ಜೊತೆಗೆ ಏನೂ ವರಮಾನ ಬರುವುದಿಲ್ಲ. ಬ್ಯಾಂಕ್ ವ್ಯವಹಾರ ತಕ್ಷಣ ಪ್ರಾರಂಭಿಸಿರಿ.  ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

***
ಸಿದ್ಧಗಂಗಯ್ಯ, ಚಿತ್ರದುರ್ಗ

ನಾನು ಡಿಗ್ರಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದೇನೆ. ವಾರ್ಷಿಕ ವರಮಾನ ₹ 22 ಲಕ್ಷ. ತೆರಿಗೆ ಉಳಿಸಲು ವಿಧಾನ ತಿಳಿಸಿರಿ.

ಉತ್ತರ: ತೆರಿಗೆ ಉಳಿಸಲು ಸೆಕ್ಷನ್ 80C ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಪಿ.ಪಿ.ಎಫ್.ನಲ್ಲಿ ತೊಡಗಿಸಿರಿ. ಸೆಕ್ಷನ್ 80CCD (1B) ಆಧಾರದ ಮೇಲೆ ಗರಿಷ್ಠ ವಾರ್ಷಿಕ ₹  50,000 ಹೂಡಿಕೆ ಮಾಡಿ. ಒಟ್ಟಿನಲ್ಲಿ ₹ 2 ಲಕ್ಷ ವಾರ್ಷಿಕ ವಿನಾಯಿತಿ ಪಡೆಯಿರಿ. ನೀವು ದೊಡ್ಡ ಸಂಬಳದವರು ಆಗಿರುವುದರಿಂದ  ಗೃಹ ಸಾಲ ಮಾಡಿ ಸ್ವಂತಕ್ಕೆ ಮನೆ ಮಾಡಿಕೊಳ್ಳಿ. ಇಲ್ಲಿ ನೀವು ಸಾಲದ ಬಡ್ಡಿ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. (ಸೆಕ್ಷನ್ 24 B) ಆರೋಗ್ಯ ವಿಮೆ ಮಾಡಿಸಿದ್ದರೆ 80D ಆಧಾರದ ಮೇಲೆ ಕೂಡಾ ವಿನಾಯಿತಿ ಪಡೆಯಬಹುದು. ಒಟ್ಟಿನಲ್ಲಿ ಸ್ಥಿರ ಆಸ್ತಿ ಮೇಲೆ ಹಣ ಹೂಡಿರಿ. ಉಳಿತಾಯಕ್ಕೆ ಹಾಗೂ ತೆರಿಗೆ ಉಳಿಸಲು ಇದು ಉತ್ತಮ ಮಾರ್ಗ.

***

ಹೆಸರು, ಊರು ಬೇಡ

ನಾನು 37 ವರ್ಷಗಳಿಂದ ಖಾಸಗಿ ಒಡೆತನದ ಒಂದು ಅಂಧ ಮಕ್ಕಳ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇನೆ. ನನಗೆ ಸರ್ಕಾರದಿಂದಾಗಲೀ ಸಂಸ್ಥೆಯಿಂದಾಗಲೀ ನಿವೃತ್ತಿಯಿಂದ ಏನೂ ಹಣ ದೊರೆಯಲಿಲ್ಲ. ನಾನು ಒಟ್ಟು ₹ 10 ಲಕ್ಷ ಉಳಿಸಿದ್ದೇನೆ. ಈ ಹಣದಿಂದ ತಿಂಗಳಿಗೆ ₹ 10,000 ಬಡ್ಡಿ ಆದಾಯ ಬರಲು ಹಾಗೂ ಹಣದ ಭದ್ರತೆ ಇರಲು ಮಾರ್ಗದರ್ಶನ ಮಾಡಿರಿ.

ಉತ್ತರ: ಗರಿಷ್ಠ ಶೇ 12 ಬಡ್ಡಿ ದರ ಬಂದಲ್ಲಿ ₹ 10 ಲಕ್ಷಕ್ಕೆ ಒಂದು ತಿಂಗಳಿಗೆ ₹ 10,000 ಬಡ್ಡಿ ಪಡೆಯಬಹುದು. ಭದ್ರವಾದ ಹೂಡಿಕೆಯಲ್ಲಿ ಈ ವರಮಾನ ಸದ್ಯದ ಪರಿಸ್ಥಿತಿಯಲ್ಲಿ ಸಿಗಲಾರದು. ಇಂದಿನ ಎಲ್ಲಾ ಆರ್ಥಿಕ ಸಂಸ್ಥೆಗಳ ಸಮೀಕ್ಷೆ ಮಾಡಿದಾಗ ಅಂಚೆ ಕಚೇರಿ Senior citizen deposit ಮಾತ್ರ ನಿಮಗೆ ಇರುವುದರಲ್ಲಿ ಉತ್ತಮ. ಇಲ್ಲಿ ಶೇ 8.6 ಬಡ್ಡಿ ಬರುತ್ತದೆ ಹಾಗೂ 3 ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದು.

ನಿಮ್ಮ ಹಣ ದ್ವಿಗುಣ ಮಾಡಲು ಹಾಗೂ ತಿಂಗಳಿಗೆ ₹ 10 ಸಾವಿರದಿಂದ ₹ 15 ಸಾವಿರ ಸಿಗುತ್ತದೆ ಎಂದು Speuelation  Invsetment ಬಗ್ಗೆ ಜನರು ಸಲಹೆ ಮಾಡಬಹುದು. ಅದಕ್ಕೆ ಗಮನ ನೀಡಬೇಡಿ. ನೀವು ಜೀವನದಲ್ಲಿ ಸಾಕಷ್ಟು ನೊಂದಿದ್ದೀರಿ. ನಿಮ್ಮ ಜೀವನ ಸಂಜೆ ಸುಖವಾಗಿರಲಿ ಎಂಬುದಕ್ಕಾಗಿ ನಿಮಗೆ ಈ ಕಿವಿಮಾತು ಹೇಳಬಯಸುವೆ.

Post Comments (+)