ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ 25 ವರ್ಷ ಮಕ್ಕಳ ಶಿಕ್ಷಣ ವೆಚ್ಚ ನಿಭಾಯಿಸಲು ಸಾಕು 10 ಸಿರಿವಂತರ ಸಂಪತ್ತು

ಸಂಪತ್ತಿನ ಅಸಮಾನ ಹಂಚಿಕೆಯ ಕುರಿತು ಆಕ್ಸ್‌ಫಮ್‌ ಸಮೀಕ್ಷಾ ವರದಿ
Last Updated 17 ಜನವರಿ 2022, 13:56 IST
ಅಕ್ಷರ ಗಾತ್ರ

ನವದೆಹಲಿ/ದಾವೋಸ್: ಭಾರತದ 10 ಅತ್ಯಂತ ಸಿರಿವಂತರ ಬಳಿ ಇರುವ ಸಂಪತ್ತಿನಿಂದ ಮುಂದಿನ 25 ವರ್ಷಗಳವರೆಗೆ ದೇಶದ ಮಕ್ಕಳ ಶಾಲೆ ಮತ್ತು ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಹಣ ಒದಗಿಸಬಹುದು ಎಂದುಆಕ್ಸ್‌ಫ್ಯಾಮ್‌ ಇಂಡಿಯಾ ವರದಿ ಹೇಳಿದೆ.

ವಿಶ್ವ ಆರ್ಥಿಕ ವೇದಿಕೆಯ ದಾವೋಸ್‌ ಶೃಂಗದ ಮೊದಲ ದಿನವಾದ ಸೋಮವಾರ ಆಕ್ಸ್‌ಫ್ಯಾಮ್‌ ಇಂಡಿಯಾ ಸಂಸ್ಥೆಯು ಸಂಪತ್ತಿನ ಅಸಮಾನ ಹಂಚಿಕೆಯ ಕುರಿತಾದ ತನ್ನ ವಾರ್ಷಿಕ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಭಾರತದ ಶತಕೋಟ್ಯಧಿಪತಿಗಳ ಸಂಪತ್ತು ಮೌಲ್ಯವು ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಎರಡು ಪಟ್ಟಿಗಿಂತ ಹೆಚ್ಚು ಏರಿಕೆ ಆಗಿದೆ. ದೇಶದಲ್ಲಿನ ಶತಕೋಟ್ಯಧಿಪತಿಗಳ ಸಂಖ್ಯೆಯು 142ಕ್ಕೆ ತಲುಪಿದೆ.

ಶ್ರೀಮಂತಿಕೆಯ ಏಣಿಯ ಮೇಲ್ಭಾಗದಲ್ಲಿನ ಶೇಕಡ 10ರಷ್ಟು ಜನರ ಬಳಿ ದೇಶದ ಒಟ್ಟು ಸಂಪತ್ತಿನ ಶೇಕಡ 45ರಷ್ಟು ಕ್ರೂಢೀಕೃತವಾಗಿದೆ. ಶ್ರೀಮಂತಿಕೆಯ ಏಣಿಯ ತಳಭಾಗದಲ್ಲಿ ಇರುವ ಶೇ 50ರಷ್ಟು ಜನರ ಬಳಿ ಇರುವುದು ಶೇ 6ರಷ್ಟು ಸಂಪತ್ತು ಮಾತ್ರ.

ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸುರಕ್ಷತೆಯ ಮೇಲೆ ಸರ್ಕಾರ ಮಾಡುವ ವೆಚ್ಚವು ಕಡಿಮೆಯಾದ ಹೊತ್ತಿನಲ್ಲಿಯೇ ಆರೋಗ್ಯ ಮತ್ತು ಶಿಕ್ಷಣದ ಖಾಸಗೀಕರಣ ಕೂಡ ಹೆಚ್ಚಾಯಿತು. ಹೀಗಾಗಿಯೇ ಕೋವಿಡ್‌–19 ಸಾಂಕ್ರಾಮಿಕದಿಂದ ರಕ್ಷಣೆ ಪಡೆಯಲು ಬೇಕಾದ ಸವಲತ್ತುಗಳಿಂದ ಜನಸಾಮಾನ್ಯರು ವಂಚಿತರಾದರು ಎಂದು ವರದಿಯು ಹೇಳಿದೆ.

ವರಮಾನ ಸೃಷ್ಟಿಸುವ ಪ್ರಾಥಮಿಕ ಮೂಲಗಳ ಬಗ್ಗೆ ಮರುಚಿಂತನೆ ಮಾಡುವಂತೆ ವರದಿಯು ಸರ್ಕಾರಕ್ಕೆ ಮನವಿ ಮಾಡಿದೆ. ಹೆಚ್ಚು ಪ್ರಗತಿಪರ ತೆರಿಗೆ ವಿಧಾನ ಅಳವಡಿಸಿಕೊಳ್ಳುವಂತೆ ಮತ್ತು ಶ್ರೀಮಂತರ ಬಳಿ ಸಂಪತ್ತು ಕ್ರೊಢೀಕರಣ ಆಗುತ್ತಿರುವುದಕ್ಕೆ ತೆರಿಗೆ ವಿಧಾನದಲ್ಲಿ ಇರುವ ಸಾಂಸ್ಥಿಕ ಸಮಸ್ಯೆಗಳನ್ನು ಪರಿಶೀಲಿಸುವಂತೆ ವರದಿಯು ಸಲಹೆ ನೀಡಿದೆ.

* ದೇಶದ 10 ಜನ ಅತ್ಯಂತ ಸಿರಿವಂತರು ದಿನಕ್ಕೆ ತಲಾ ₹ 7 ಕೋಟಿ ಖರ್ಚು ಮಾಡಿದರೆ ಅವರ ಬಳಿ ಈಗ ಇರುವ ಸಂಪತ್ತು ಖಾಲಿಯಾಗಲು 84 ವರ್ಷಗಳು ಬೇಕಾಗಲಿವೆ. ಸಿರಿವಂತರು ಮತ್ತು ಅತಿ ಸಿರಿವಂತರಿಗೆ ವಿಧಿಸುವ ಸಂಪತ್ತು ತೆರಿಗೆಯಿಂದ ವಾರ್ಷಿಕವಾಗಿ ಬರುವ ₹ 5.79 ಲಕ್ಷ ಕೋಟಿಯಿಂದ ಸರ್ಕಾರದ ಆರೋಗ್ಯ ಬಜೆಟ್‌ಅನ್ನು ಶೇ 271ರಷ್ಟು ಹೆಚ್ಚಿಸಬಹುದು

* ಅತ್ಯಂತ ಸಿರಿವಂತರಾದ ಶೇಕಡ 10ರಷ್ಟು ಜನರ ಮೇಲೆ ಶೇ 1ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿದರೆ ಬರುವ ವರಮಾನದಿಂದ, 17.7 ಲಕ್ಷ ಹೆಚ್ಚುವರಿ ಆಮ್ಲಜನಕ ಸಿಲಿಂಡರ್‌ ಪೂರೈಸಬಹುದು

* 98 ಸಿರಿವಂತ ಕುಟುಂಬಗಳ ಮೇಲೆ ಹೆಚ್ಚುವರಿಯಾಗಿ ತಲಾ ಶೇ 1ರಷ್ಟು ಸಂಪತ್ತು ತೆರಿಗೆ ವಿಧಿಸಿದರೆ ಅದರಿಂದ ಬರುವ ಮೊತ್ತದಿಂದ ಆಯುಷ್ಮಾನ್‌ ಭಾರತ್‌ ಯೋಜನೆಗೆ ಏಳು ವರ್ಷಕ್ಕೂ ಹೆಚ್ಚು ಕಾಲ ಹಣ ಪೂರೈಸಬಹುದು

* ಭಾರತದ 142 ಸಿರಿವಂತರ ಬಳಿ ಇರುವ ಸಂಪತ್ತಿನ ಒಟ್ಟು ಮೌಲ್ಯವು ₹ 53 ಲಕ್ಷ ಕೋಟಿ. ಇವರ ಪೈಕಿ 98 ಸಿರಿವಂತರ ಬಳಿ ಇರುವ ಸಂಪತ್ತಿನ ಮೌಲ್ಯವು ದೇಶದ 55.5 ಕೋಟಿ ಜನರ ಬಳಿ ಇರುವ ಒಟ್ಟು ಸಂಪತ್ತಿಗೆ (₹ 49 ಲಕ್ಷ ಕೋಟಿ) ಸಮ

* ₹ 10 ಕೋಟಿಗೂ ಅಧಿಕ ಆದಾಯ ಹೊಂದಿರುವವರಿಗೆ ಶೇ 2ರಷ್ಟು ತೆರಿಗೆ ವಿಧಿಸಿದರೆ ಅದರಿಂದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಬಜೆಟ್‌ ಅನುದಾನವನ್ನು ಶೇ 121ರಷ್ಟು ಹೆಚ್ಚಿಸಬಹುದು

* ಮೊದಲ 100 ಸಿರಿವಂತರ ಸಂಪತ್ತನ್ನು ಒಟ್ಟುಗೂಡಿಸಿದರೆ ಸಿಗುವ ಮೊತ್ತದಿಂದ, ಮಹಿಳೆಯರಿಗಾಗಿ ಸ್ವಸಹಾಯ ಗುಂಪುಗಳನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಗೆ ಮುಂದಿನ 365 ವರ್ಷಗಳವರೆಗೆ ಹಣ ನೀಡಬಹುದು

* ಭಾರತದಲ್ಲಿನ 98 ಅತಿಶ್ರೀಮಂತ ಕುಟುಂಬಗಳ ಮೇಲೆ ವಿಧಿಸುವ ಶೇ 4ರಷ್ಟು ಸಂಪತ್ತು ತೆರಿಗೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಎರಡು ವರ್ಷಗಳಿಗೂ ಹೆಚ್ಚು ಅವಧಿಗೆ ಬೇಕಾದ ಹಣ ಸಿಗುತ್ತದೆ

* ಭಾರತದಲ್ಲಿನ 98 ಶತಕೋಟ್ಯಧಿಪತಿಗಳ ಸಂಪತ್ತಿನ ಮೇಲಿನ ಶೇ 1ರಷ್ಟು ತೆರಿಯಿಂದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಒಟ್ಟು ವಾರ್ಷಿಕ ವೆಚ್ಚವನ್ನು ನಿಭಾಯಿಸಬಹುದು. ಇವರ ಸಂಪತ್ತಿನ ಮೇಲೆ ಶೇ 4ರಷ್ಟು ತೆರಿಗೆಯಿಂದ 17 ವರ್ಷಗಳವರೆಗೆ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ವೆಚ್ಚಗಳನ್ನು ನಿಭಾಯಿಸಬಹುದು ಅಥವಾ ಆರು ವರ್ಷಗಳವರೆಗೆ ಸಮಗ್ರ ಶಿಕ್ಷಣ ಅಭಿಯಾನ ನಡೆಸಬಹುದು.

* ಅಂತೆಯೇ, 98 ಶತಕೋಟ್ಯಧಿಪತಿಗಳ ಮೇಲಿನ ಶೇ 4ರಷ್ಟು ತೆರಿಗೆಯಿಂದ ಪೋಷಣ್‌ 2.0 ಯೋಜನೆಗೆ ಹಣಕಾಸಿನ ನೆರವು ಒದಗಿಸಬಹುದು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT