ನವದೆಹಲಿ: ತೊಂಬತ್ತರ ದಶಕದ ಆರ್ಥಿಕ ಉದಾರೀಕರಣದ ಬಳಿಕ ದೇಶದ ಜಿಡಿಪಿಗೆ ದಕ್ಷಿಣ ಭಾರತದ ರಾಜ್ಯಗಳು ನೀಡುತ್ತಿರುವ ಕೊಡುಗೆಯ ಪಾಲು ಹೆಚ್ಚಿದೆ ಎಂದು ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ಪ್ರಕಟಿಸಿರುವ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.
ಸಮಿತಿಯ ಸದಸ್ಯ ಸಂಜೀವ್ ಸನ್ಯಾಲ್ ಅವರು, ‘ಭಾರತೀಯ ರಾಜ್ಯಗಳ ಸಾಪೇಕ್ಷ ಆರ್ಥಿಕ ಸಾಧನೆ: 1960–61ರಿಂದ 2023–24’ ಎಂಬ ಶೀರ್ಷಿಕೆಯಡಿ ಈ ಲೇಖನ ಬರೆದಿದ್ದಾರೆ.
ಇದರಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿನ ಸಾಧನೆ ಬಗ್ಗೆ ಪ್ರಸ್ತಾಪಿಸಲಾಗಿದೆ. 2023–24ನೇ ಆರ್ಥಿಕ ವರ್ಷದಲ್ಲಿ ಈ ರಾಜ್ಯಗಳು ದೇಶದ ಜಿಡಿಪಿಯಲ್ಲಿ ಶೇ 30ರಷ್ಟು ಪಾಲು ಹೊಂದಿವೆ ಎಂದು ಉಲ್ಲೇಖಿಸಲಾಗಿದೆ.
1991ಕ್ಕೂ ಮೊದಲ ಈ ರಾಜ್ಯಗಳ ಕೊಡುಗೆ ತೀರಾ ಕಡಿಮೆ ಇತ್ತು. ಆರ್ಥಿಕ ಉದಾರೀಕರಣದ ಬಳಿಕ ಉತ್ತಮ ಸಾಮರ್ಥ್ಯ ತೋರುವಲ್ಲಿ ಮುಂಚೂಣಿಯಲ್ಲಿವೆ. ಇವುಗಳ ತಲಾ ಆದಾಯ ಕೂಡ ದೇಶದ ಸರಾಸರಿಗಿಂತ ಹೆಚ್ಚಿದೆ ಎಂದು ವಿವರಿಸಲಾಗಿದೆ.
ದೆಹಲಿ ಮತ್ತು ಹರಿಯಾಣ ಕೂಡ ಅತಿಹೆಚ್ಚು ತಲಾ ಆದಾಯ ಹೊಂದಿವೆ. ದೆಹಲಿಯು ಇಡೀ ದೇಶದಲ್ಲಿ ಅತಿಹೆಚ್ಚು ತಲಾ ಆದಾಯ ಹೊಂದಿರುವ ಕೀರ್ತಿಗೆ ಭಾಜನವಾಗಿದೆ ಎಂದು ತಿಳಿಸಲಾಗಿದೆ.
Cut-off box - ಪಶ್ಚಿಮ ಬಂಗಾಳ ಸಾಧನೆ ನೀರಸ ಕಳೆದ ದಶಕಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದ ಆರ್ಥಿಕ ಪ್ರಗತಿಯ ಸಾಧನೆ ನೀರಸದಾಯಕವಾಗಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಸಮುದ್ರ ತೀರ ಪ್ರದೇಶ ಹೊಂದಿರುವ ಇತರೆ ರಾಜ್ಯಗಳು ಆರ್ಥಿಕವಾಗಿ ಮೇಲುಗೈ ಸಾಧಿಸಿವೆ ಎಂದು ಲೇಖನದಲ್ಲಿ ವಿವರಿಸಲಾಗಿದೆ. 1960–61ರಲ್ಲಿ ದೇಶದ ಜಿಡಿಪಿಗೆ ಪಶ್ಚಿಮ ಬಂಗಾಳದ ಕೊಡುಗೆ ಶೇ 10.5ರಷ್ಟಿತ್ತು. 2023–24ನೇ ಆರ್ಥಿಕ ವರ್ಷದಲ್ಲಿ ಶೇ 5.6ರಷ್ಟು ಕೊಡುಗೆ ನೀಡಿದೆ ಎಂದು ತಿಳಿಸಿದೆ. 1960–61ರಲ್ಲಿ ಪಶ್ಚಿಮ ಬಂಗಾಳದ ತಲಾ ಆದಾಯವು ರಾಷ್ಟ್ರೀಯ ಸರಾಸರಿಗಿಂತ ಶೇ 127.5ರಷ್ಟು ಹೆಚ್ಚಿತ್ತು. ಇದೇ ಬೆಳವಣಿಗೆ ಕಾಯ್ದುಕೊಳ್ಳಲು ವಿಫಲವಾಗಿದೆ. 2023–24ರಲ್ಲಿ ತಲಾ ಆದಾಯವು ಶೇ 83.7ರಷ್ಟು ಕುಸಿದಿದೆ. ರಾಜಸ್ಥಾನ ಒಡಿಶಾಕ್ಕಿಂತಲೂ ಕಡಿಮೆಯಿದೆ ಎಂದು ವಿವರಿಸಲಾಗಿದೆ.