ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌‌ಭತ್ತ, ಬೇಳೆಕಾಳು ಬಿತ್ತನೆ ಕುಂಠಿತ

Published 19 ಜನವರಿ 2024, 15:52 IST
Last Updated 19 ಜನವರಿ 2024, 15:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ಈ ಬಾರಿಯ ರಾಬಿ ಋತುವಿನಲ್ಲಿ (ಚಳಿಗಾಲದ ಬಿತ್ತನೆ) ಭತ್ತ ಮತ್ತು ಬೇಳೆಕಾಳು ಬಿತ್ತನೆ ಪ್ರದೇಶವು ಕಡಿಮೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಅಂಶ–ಅಂಶಗಳು ತಿಳಿಸಿವೆ.

ಆದರೆ ಮೆಕ್ಕೆಜೋಳ, ಜೋಳ, ಜವೆಗೋಧಿ ಹಾಗೂ ಎಣ್ಣೆಕಾಳುಗಳ ಬಿತ್ತನೆ ಪ್ರದೇಶವು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಳವಾಗಿದೆ. 

ಹಿಂದಿನ ವರ್ಷ 162.66 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೇಳೆಕಾಳುಗಳ ಬಿತ್ತನೆಯಾಗಿತ್ತು. ಈ ಬಾರಿ 155.13 ಲಕ್ಷ ಹೆಕ್ಟೇರ್‌ಗೆ ಕುಸಿದಿದೆ. ಅದರಲ್ಲೂ ಕಡಲೆ, ಉದ್ದು, ಹೆಸರು ಬಿತ್ತನೆ ಪ್ರದೇಶ ಕುಗ್ಗಿದೆ.

ಆದರೆ, ರೈತರು ಹೆಚ್ಚಿನ ಪ್ರದೇಶದಲ್ಲಿ ಚೆನ್ನಂಗಿ ಬೇಳೆ (ಮಸೂರ್‌ ದಾಲ್‌) ಬಿತ್ತನೆ ಮಾಡಿದ್ದಾರೆ. ಹಿಂದಿನ ವರ್ಷ 18.46 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 19.51 ಲಕ್ಷ ಹೆಕ್ಟೇರ್‌ಲ್ಲಿ ಬಿತ್ತನೆಯಾಗಿದೆ. 

ಕಳೆದ ವರ್ಷ 29.33 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಈ ಬಾರಿ 28.25 ಲಕ್ಷ ಹೆಕ್ಟೇರ್‌ನಲ್ಲಿ ನಾಟಿಯಾಗಿದೆ. ಹಿಂದಿನ ವರ್ಷ 108.82 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿದ್ದು, ಈ ಬಾರಿ 109.88 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ದೇಶದಲ್ಲಿ ಈ ಬಾರಿ ರಾಬಿ ಅವಧಿಯ ಬಿತ್ತನೆ ಕೊಂಚ ಕಡಿಮೆಯಾಗಿದೆ. ಹಿಂದಿನ ವರ್ಷ 689.09 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 687.18 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಸಚಿವಾಲಯದ ಅಂಕಿಅಂಶ ತಿಳಿಸಿವೆ.

wheat grain isolated on white background
wheat grain isolated on white background

340 ಲಕ್ಷ ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆ

ದೇಶದಲ್ಲಿ ರಾಬಿ ಋತುವಿನಲ್ಲಿ 340.08 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗೋಧಿ ಬಿತ್ತನೆಯಾಗಿದ್ದು ಉತ್ಪಾದನೆಯೂ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಉತ್ತರ‍ಪ್ರದೇಶ ಮಧ್ಯಪ್ರದೇಶ ಮತ್ತು ಪಂಜಾಬ್‌ನಲ್ಲಿ ಅತಿಹೆಚ್ಚಾಗಿ ಬೆಳೆಯಲಾಗುತ್ತದೆ.   2022–23ರ ಬೆಳೆ ವರ್ಷದಲ್ಲಿ (ಜುಲೈ-ಜೂನ್) ಒಟ್ಟು 337.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಹಾಗಾಗಿ ಉತ್ಪಾದನೆಯೂ ಹೆಚ್ಚಳವಾಗಲಿದೆ’ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್‌ ಮುಂಡಾ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ದೇಶದಲ್ಲಿ 2022–23ರ ಬೆಳೆ ವರ್ಷದಲ್ಲಿ 110.55 ದಶಲಕ್ಷ ಟನ್‌ ಹಾಗೂ 2021–22ರಲ್ಲಿ 107.7 ದಶಲಕ್ಷ ಟನ್‌ ಉತ್ಪಾದನೆಯಾಗಿತ್ತು. 2023–24ರಲ್ಲಿ 114 ದಶಲಕ್ಷ ಟನ್‌ ಗೋಧಿ ಉತ್ಪಾದನೆಯಾಗಲಿದೆ ಎಂದು ಭಾರತೀಯ ಆಹಾರ ನಿಗಮ ಅಂದಾಜಿಸಿದೆ.  ‘ಪಂಜಾಬ್‌ ಮತ್ತು ಹರಿಯಾಣದ ಶೇ 70ರಷ್ಟು ಪ್ರದೇಶದಲ್ಲಿ ಈ ಬಾರಿ ರೈತರು ಹವಾಮಾನಕ್ಕೆ ಹೊಂದಿಕೊಳ್ಳುವಂತಹ ತಳಿಗಳನ್ನು ಬಿತ್ತನೆ ಮಾಡಿದ್ದಾರೆ. ಇಲ್ಲಿಯವರೆಗೂ ಬೆಳೆ ನಷ್ಟವಾದ ವರದಿಯಾಗಿಲ್ಲ. ಶೀತ ಹವಾಮಾನವು ಗೋಧಿ ಫಸಲಿಗೆ ಪೂರಕವಾಗಿದೆ’ ಎಂದು ಕೇಂದ್ರ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT