ಬುಧವಾರ, ಆಗಸ್ಟ್ 10, 2022
23 °C

ಹೂಡಿಕೆದಾರರ ಚಿತ್ತ ಭಾರತದತ್ತ: ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಬಗ್ಗೆ ವಿಶ್ವ ಹೊಂದಿದ್ದ ಗ್ರಹಿಕೆಯನ್ನು ತಮ್ಮ ಸರ್ಕಾರದ ಅವಧಿಯಲ್ಲಿ ತಂದ ಸುಧಾರಣಾ ಕ್ರಮಗಳು ಬದಲಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಹೂಡಿಕೆದಾರರು ಮೊದಲೆಲ್ಲ ‘ಭಾರತದಲ್ಲಿ ಏಕೆ ಹೂಡಿಕೆ ಮಾಡಬೇಕು’ ಎಂದು ಪ್ರಶ್ನಿಸುತ್ತಿದ್ದರು. ಆದರೆ ಆರು ವರ್ಷಗಳಲ್ಲಿ ತಂದ ಸುಧಾರಣೆಗಳ ಪರಿಣಾಮವಾಗಿ ಹೂಡಿಕೆದಾರರು ‘ಭಾರತದಲ್ಲಿ ಏಕೆ ಹೂಡಿಕೆ ಮಾಡಬಾರದು’ ಎನ್ನುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ಭಾರತದ ವಾಣಿಜ್ಯೋದ್ಯಮಗಳ ಒಕ್ಕೂಟವಾದ ‘ಅಸೋಚಾಂ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರು ತಿಂಗಳುಗಳ ಹಿಂದೆ ಜಾರಿಗೆ ಬಂದ ಕೃಷಿ ಸುಧಾರಣೆಗಳು ಈಗ ರೈತರಿಗೆ ಲಾಭ ತಂದುಕೊಡಲು ಆರಂಭಿಸಿವೆ ಎಂದರು. ಹಳೆಯ ಹಾಗೂ ಮಹತ್ವ ಕಳೆದುಕೊಂಡಿದ್ದ 1,500 ಕಾನೂನುಗಳನ್ನು ರದ್ದು ಮಾಡಿ, ಕಾಲದ ಅಗತ್ಯಕ್ಕೆ ತಕ್ಕುದಾದ ಹೊಸ ಕಾನೂನುಗಳನ್ನು ಜಾರಿಗೆ ತಂದಿರುವುದು ತಮ್ಮ ಸರ್ಕಾರದ ದೃಷ್ಟಿಕೋನಕ್ಕೆ ಉದಾಹರಣೆ ಎಂದು ಹೇಳಿದರು.

‘ಹಿಂದೆ ಭಾರತದಲ್ಲಿದ್ದ ಭಾರಿ ತೆರಿಗೆ ಪ್ರಮಾಣ, ಕಾನೂನಿನ ಗೋಜಲುಗಳು, ಅಧಿಕಾರಶಾಹಿಯ ವಿಳಂಬ ಧೋರಣೆಯನ್ನು ಉಲ್ಲೇಖಿಸಿ ಹೂಡಿಕೆದಾರರು ಭಾರತದಲ್ಲಿ ಏಕೆ ಹಣ ಹೂಡಬೇಕು ಎಂದು ಕೇಳುತ್ತಿದ್ದರು. ಈಗ ಕಾರ್ಪೊರೇಟ್ ತೆರಿಗೆ ಸ್ಪರ್ಧಾತ್ಮಕವಾಗಿದೆ, ಹೊಸ ಕಾರ್ಮಿಕ ಕಾನೂನುಗಳ ಪಾಲನೆ ಸುಲಭವಾಗಿದೆ, ಹೂಡಿಕೆದಾರರಿಗೆ ರತ್ನಗಂಬಳಿ ಹಾಸಲಾಗಿದೆ. ಇವುಗಳ ಕಾರಣದಿಂದಾಗಿ ಹೂಡಿಕೆದಾರರು, ಭಾರತದಲ್ಲಿ ಏಕೆ ಹೂಡಿಕೆ ಮಾಡಬಾರದು ಎನ್ನುತ್ತಿದ್ದಾರೆ’ ಎಂದು ಪ್ರಧಾನಿಯವರು ಹೇಳಿದರು. ಈಚಿನ ತಿಂಗಳುಗಳಲ್ಲಿ ಆಗಿರುವ ದಾಖಲೆ ಪ್ರಮಾಣದ ವಿದೇಶಿ ಬಂಡವಾಳ ಹೂಡಿಕೆಯನ್ನು ಮೋದಿ ಅವರು ಉಲ್ಲೇಖಿಸಿದರು.

ಇಂದು ಸರ್ಕಾರವು ಖಾಸಗಿ ವಲಯದ ಮೇಲೆ ಇಟ್ಟಿರುವ ವಿಶ್ವಾಸ ಹಾಗೂ ವಿದೇಶಿ ಹೂಡಿಕೆದಾರರಿಗೆ ನೀಡುತ್ತಿರುವ ಪ್ರೋತ್ಸಾಹದ ಕಾರಣದಿಂದಾಗಿ, ಹಿಂದೆ ಭಾರತದ ಬಗ್ಗೆ ಒಲವು ತೋರದಿದ್ದವರೇ ಇಂದು ‘ಭಾರತದಲ್ಲಿ ಏಕೆ ಹೂಡಿಕೆ ಮಾಡಬಾರದು’ ಎಂದು ಕೇಳುವಂತಾಗಿದೆ ಎಂದು ವಿವರಿಸಿದರು. ಭಾರತವು ಆತ್ಮನಿರ್ಭರ ಆಗಲು ಕೈಗಾರಿಕೆಗಳು ತಮ್ಮಿಂದ ಆಗುವ ಎಲ್ಲ ಯತ್ನಗಳನ್ನು ಮಾಡಬೇಕು ಎಂದು ಕರೆ ನೀಡಿದರು.

ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚು ಹಣ ವಿನಿಯೋಗಿಸುವ ಅಗತ್ಯವಿದೆ. ಅಮೆರಿಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಮಾಡುವ ವಿನಿಯೋಗದಲ್ಲಿ ಶೇಕಡ 70ರಷ್ಟು ಮೊತ್ತವು ಖಾಸಗಿ ವಲಯದಿಂದ ಬರುತ್ತದೆ. ಆದರೆ ಭಾರತದಲ್ಲಿ ಶೇಕಡ 70ರಷ್ಟು ಮೊತ್ತವು ಸರ್ಕಾರದಿಂದ ಬರುತ್ತದೆ ಎಂದರು. ಖಾಸಗಿ ವಲಯದಿಂದ ಬರುವ ಪ್ರಮಾಣದಲ್ಲಿ ಹೆಚ್ಚಳ ಆಗಬೇಕಿದೆ. ಕೃಷಿ, ರಕ್ಷಣೆ, ಬಾಹ್ಯಾಕಾಶ, ಇಂಧನ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಹೆಚ್ಚು ಸಂಶೋಧನೆ, ಅಭಿವೃದ್ಧಿ ಕಾರ್ಯ ಆಗಬೇಕಿದೆ ಎಂದರು.

ಟಾಟಾ ಸಮೂಹಕ್ಕೆ ಶತಮಾನದ ಉದ್ದಿಮೆ ಪ್ರಶಸ್ತಿ
ನವದೆಹಲಿ:
ಅಸೋಚಾಂ ನೀಡುವ ‘ಶತಮಾನದ ಉದ್ದಿಮೆ’ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿ, ಟಾಟಾ ಟ್ರಸ್ಟ್‌ಗಳ ಅಧ್ಯಕ್ಷ ರತನ್ ಟಾಟಾ ಅವರಿಗೆ ಪ್ರದಾನ ಮಾಡಿದರು. ರತನ್ ಟಾಟಾ ಅವರು ಟಾಟಾ ಸಮೂಹದ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಿದರು.

ದೇಶದ ಅಭಿವೃದ್ಧಿಯಲ್ಲಿ ಟಾಟಾ ಸಮೂಹದ ಕೊಡುಗೆ ಪ್ರಮುಖವಾದುದು ಎಂದು ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಕೋವಿಡ್–19 ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಮುಂದೆ ನಿಂತು ದೇಶವನ್ನು ಮುನ್ನಡೆಸಿದವರು ಮೋದಿ ಎಂದು ರತನ್ ಟಾಟಾ ಮೆಚ್ಚುಗೆ ವ್ಯಕ್ತಪಡಿಸಿದರು.

ಮೋದಿ ಅವರ ನಾಯಕತ್ವದ ಬಗ್ಗೆ ಪ್ರಶಂಸೆಯ ಮಾತು ಆಡಿದ ರತನ್ ಟಾಟಾ ‘ನಾವೆಲ್ಲ ಒಟ್ಟಾಗಿ ನಿಂತು ನೀವು ಹೇಳಿದ್ದನ್ನು, ಮಾಡಿದ್ದನ್ನು, ತೋರಿಸಿದ್ದನ್ನು ಅನುಕರಿಸಿದರೆ, ಈ ಪ್ರಧಾನಿ ಏನನ್ನೋ ಮಾಡಲು ಸಾಧ್ಯ ಎಂದರು; ಅದನ್ನು ಮಾಡಿ ತೋರಿಸಿದರು ಎಂದು ಇಡೀ ವಿಶ್ವವೇ ನಮ್ಮತ್ತ ನೋಡಿ ಹೇಳುವ ಸಂದರ್ಭವೊಂದು ಬಂದೇ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು