ಸಗಟು ಹಣದುಬ್ಬರ ಇಳಿಕೆ

7
ಚಿಲ್ಲರೆ ಹಣದುಬ್ಬರದ ಆತಂಕ ಬೇಡ: ಬ್ಯಾಂಕ್‌ ಆಫ್‌ ಅಮೆರಿಕ ಮೆರ್ರಿಲ್‌ ಲಿಂಚ್‌

ಸಗಟು ಹಣದುಬ್ಬರ ಇಳಿಕೆ

Published:
Updated:

ನವದೆಹಲಿ: ಆಹಾರ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಆಗುತ್ತಿರುವುದರಿಂದ ಸಗಟು ಹಣದುಬ್ಬರವು ಜುಲೈನಲ್ಲಿ ಶೇ 5.09ಕ್ಕೆ ತಗ್ಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಜೂನ್‌ನಲ್ಲಿ ಶೇ 5.77 ರಷ್ಟಿತ್ತು. 2017ರ ಜುಲೈನಲ್ಲಿ ಸಗಟು ಹಣದುಬ್ಬರ ಶೇ 1.88ರಷ್ಟಿತ್ತು.

‘ಸದ್ಯದ ಪರಿಸ್ಥಿತಿ ಗಮನಿಸಿದರೆ ಪ್ರಾಥಮಿಕ ಸರಕುಗಳ ದರವು ಇಳಿಮುಖವಾಗಿರಲಿದೆ. 2018ರ ಆಗಸ್ಟ್‌ನಲ್ಲಿ ತರಕರಿ, ಸಕ್ಕರೆ, ಹಣ್ಣು, ಬೇಳೆಕಾಳು ಮತ್ತು ಒರಟುಧಾನ್ಯಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ಆಹಾರೇತರ ಉತ್ಪನ್ನಗಳ ಬೆಲೆಯು ಶೇ 3.81 ರಿಂದ ಶೇ 3.96ಕ್ಕೆ ಏರಿಕೆಯಾಗಿದೆ. ಇಂಧನ, ವಿದ್ಯುತ್‌ ಮತ್ತು ತಯಾರಿಕಾ ಉತ್ಪನ್ನಗಳ ಬೆಲೆಯು ಶೇ 4.26 ರಿಂದ ಶೇ 18.10ಕ್ಕೆ ಹೆಚ್ಚಾಗಿವೆ.

ಹಣದುಬ್ಬರದ ಆತಂಕ ಬೇಡ: ಭಾರತದಲ್ಲಿ ಚಿಲ್ಲರೆ ಹಣದುಬ್ಬರದ ಏರುಮುಖ ಚಲನೆ ಅಂತ್ಯವಾಗಿದೆ. ಆಗಸ್ಟ್‌ನಲ್ಲಿ ಶೇ 4ಕ್ಕಿಂತಲೂ ಕೆಳಕ್ಕಿಳಿಯುವ ಸಾಧ್ಯತೆ ಇದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕ ಮೆರ್ರಿಲ್‌ ಲಿಂಚ್‌ (ಬಿಒಎಫ್‌–ಎಎಂಎಲ್‌) ಹೇಳಿದೆ.

ಇನ್ನು, ಹಣದುಬ್ಬರ ಏರಿಕೆಯ ಅಪಾಯ ಇಲ್ಲ. ಆರ್ಥಿಕತೆಯ ಮೂಲತತ್ವವು ಗರಿಷ್ಠ ಹಣದುಬ್ಬರಕ್ಕೆ ಅವಕಾಶ ಕೊಡುವುದಿಲ್ಲ ಎಂದು ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಜುಲೈ ತಿಂಗಳ ಚಿಲ್ಲರೆ ಹಣದುಬ್ಬರ 9 ತಿಂಗಳ ಕನಿಷ್ಠ ಮಟ್ಟವಾದ ಶೇ 4.17ಕ್ಕೆ ಇಳಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 3.8ಕ್ಕೆ ತಗ್ಗಲಿದೆ. ಏಕೆಂದರೆ ಆಹಾರ ಉತ್ಪನ್ನಗಳ ಬೆಲೆಯಲ್ಲಿ ನಿತ್ಯವೂ ಇಳಿಕೆ ಕಂಡುಬರುತ್ತಿದೆ ಎಂದು ಹೇಳಿದೆ.

ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಆರ್‌ಬಿಐ ನಿರೀಕ್ಷೆಗಿಂತಲೂ ಕಡಿಮೆ ಮಟ್ಟದಲ್ಲಿ ಇರುವುದರಿಂದ ಅಕ್ಟೋಬರ್‌ನಲ್ಲಿ ನಡೆಯುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !