ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ | ಎಂ.ಎಫ್‌ ಹೂಡಿಕೆಯಲ್ಲಿ ಹೆಚ್ಚು ಗಳಿಕೆ ಹೇಗೆ?

Published 4 ಮಾರ್ಚ್ 2024, 0:32 IST
Last Updated 4 ಮಾರ್ಚ್ 2024, 0:32 IST
ಅಕ್ಷರ ಗಾತ್ರ
ಮ್ಯೂಚುಯಲ್ ಫಂಡ್ ಹೂಡಿಕೆಯಲ್ಲಿ ಎಸ್ಐಪಿ ಹೂಡಿಕೆ ವಿಧಾನ (ವ್ಯವಸ್ಥಿತ ಹೂಡಿಕೆ ಯೋಜನೆ) ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. 2022-23ನೇ ಆರ್ಥಿಕ ವರ್ಷದಲ್ಲಿ ಎಸ್ಐಪಿ ಮೂಲಕ ಜನರು ಮ್ಯೂಚುಯಲ್ ಫಂಡ್‌ನಲ್ಲಿ ₹1.5 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ. ಎಸ್ಐಪಿ ಹೂಡಿಕೆ ಮೂಲಕ ಹೂಡಿಕೆದಾರ ಇನ್ನಷ್ಟು ಲಾಭ ಗಳಿಸಲು ನೆರವಾಗುವ ಕೆಲವು ಸೂತ್ರಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. 

ಎಸ್ಐಪಿ ಅಂದರೆ ಏನು?:

ಎಸ್ಐಪಿ ಎನ್ನುವುದು ಸಂಪತ್ತು ಸೃಷ್ಟಿಗೆ ಇರುವ ಒಂದು ಉತ್ತಮ ಮಾರ್ಗ. ಎಸ್ಐಪಿ ಹೂಡಿಕೆ ಮೂಲಕ ಯಾರೂ ಧುತ್ತೆಂದು ಶ್ರೀಮಂತರಾಗಲು ಸಾಧ್ಯವಿಲ್ಲ. ಸಂಪತ್ತಿನೆಡೆಗೆ ನಿಧಾನಗತಿಯ ನಡಿಗೆ ಎನ್ನುವ ಲೆಕ್ಕಾಚಾರವನ್ನು ಯಾರು ನಂಬಿ ಹೂಡಿಕೆ ಮಾಡುತ್ತಾರೋ ಅವರನ್ನು ಇದು ಕೈಹಿಡಿದು ನಡೆಸುತ್ತದೆ.

ಎಸ್ಐಪಿ ಅಂದರೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ನಿರ್ದಿಷ್ಟ ಮ್ಯೂಚುಯಲ್ ಫಂಡ್‌ನಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ವಿಧಾನ. ಉದಾಹರಣೆಗೆ ‘ಎ’ ಎನ್ನುವ ಮ್ಯೂಚುಯಲ್ ಫಂಡ್‌ನಲ್ಲಿ ₹2 ಸಾವಿರ ಹಾಕಲು ನಿರ್ಧರಿಸಿ ಎಸ್‌ಐಪಿ ಮೂಲಕ ಹೂಡಿಕೆ ಆರಂಭಿಸಿದರೆ ಪ್ರತಿ ತಿಂಗಳು ಆ ಫಂಡ್‌ನಲ್ಲಿ ₹2 ಸಾವಿರ ಹೂಡುತ್ತಾ ಸಾಗಬೇಕಾಗುತ್ತದೆ.

ಎಸ್ಐಪಿ ವಿಧಾನದ ಹೂಡಿಕೆಗೆ ದೊಡ್ಡ ಮೊತ್ತದ ಹಣ ಬೇಡ: ಮ್ಯೂಚುಯಲ್ ಫಂಡ್ ಎಸ್ಐಪಿ ಹೂಡಿಕೆಗೆ ದೊಡ್ಡ ಮೊತ್ತದ ಹಣ ಬೇಕಿಲ್ಲ. ಕನಿಷ್ಠ ₹100, ₹500 ರಿಂದಲೂ ಎಸ್ಐಪಿ ಹೂಡಿಕೆ ಮಾಡಬಹುದು. ಇಲ್ಲವೆ ಕೆಲವು ಸಾವಿರಗಳಲ್ಲಿ, ಕೆಲ ಲಕ್ಷಗಳಲ್ಲಿ ಹೂಡಿಕೆ ಮಾಡಬೇಕು ಎಂದರೆ ಅದಕ್ಕೂ ಅವಕಾಶವಿದೆ. ನಿಮ್ಮ ಗಳಿಕೆ ಹೆಚ್ಚಾದಂತೆ ಹೂಡಿಕೆ ಮೊತ್ತ ಹೆಚ್ಚಿಸಿಕೊಳ್ಳಬಹುದು. ಒಂದೊಮ್ಮೆ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿಲ್ಲ; ಒಂದು ತಿಂಗಳು ಹೂಡಿಕೆ ಸಾಧ್ಯವಿಲ್ಲ ಎಂದರೆ ಎಸ್ಐಪಿಯನ್ನು ನಿಲ್ಲಿಸಬಹುದು (ಸ್ಕಿಪ್ ಮಾಡಬಹುದು). ಇದಕ್ಕೆ ಯಾವುದೇ ದಂಡ ಕಟ್ಟಬೇಕಾಗಿ ಬರುವುದಿಲ್ಲ.

ಮ್ಯೂಚುಯಲ್ ಫಂಡ್‌ನಲ್ಲಿ ಚಕ್ರಬಡ್ಡಿಯ ಲಾಭ: ಮ್ಯೂಚುಯಲ್ ಫಂಡ್‌ನಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿದಾಗ ಚಕ್ರಬಡ್ಡಿಯ ಲಾಭ ಪಡೆಯಬಹುದು. ಎಸ್ಐಪಿಯಲ್ಲಿ ಸಮಯವೇ ನಿಮ್ಮ ಸಂಪತ್ತು. ಹೆಚ್ಚು ಕಾಲ ಹೂಡಿಕೆ ಮಾಡಿದಾಗ ದುಡ್ಡೇ ನಿಮಗೆ ದುಡಿದು ಕೊಡುತ್ತದೆ. ಉದಾಹರಣೆಗೆ ನೀವು ಮುಂದಿನ 20 ವರ್ಷಗಳ ಕಾಲ ಪ್ರತಿ ತಿಂಗಳು ₹1 ಸಾವಿರ ಎಸ್ಐಪಿ ಮಾಡಲಿದ್ದು, ಶೇ 12ರಷ್ಚು ಲಾಭಾಂಶ ನಿರೀಕ್ಷೆ ಮಾಡುತ್ತೀರಿ ಎಂದುಕೊಳ್ಳಿ. ಆಗ ನಿಮ್ಮ ಹೂಡಿಕೆ ಮತ್ತು ಗಳಿಕೆ ಸೇರಿ ₹9.9 ಲಕ್ಷ ಆಗಿರುತ್ತದೆ. ಇದೇ ಹೂಡಿಕೆಯನ್ನು 20 ವರ್ಷಗಳ ಬದಲಿಗೆ 25 ವರ್ಷಗಳಿಗೆ ವಿಸ್ತಿರಿಸಿದ್ದೀರಿ ಎಂದುಕೊಳ್ಳಿ. ಆಗ ನಿಮ್ಮ ಹೂಡಿಕೆ ಮತ್ತು ಗಳಿಕೆ ಸೇರಿ ₹18.8 ಲಕ್ಷ ಸಿಗುತ್ತದೆ.

ಎಸ್ಐಪಿ ಹೂಡಿಕೆ ತಪ್ಪಿಸಿದರೆ ನಷ್ಟ ಜಾಸ್ತಿ: ಎಸ್ಐಪಿ ಮೂಲಕ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಯಾವುದೋ ಒಂದು ತಿಂಗಳ ಹಣ ಇಲ್ಲ ಎನ್ನುವ ಕಾರಣಕ್ಕೆ ಎಸ್ಐಪಿಯನ್ನು ತಪ್ಪಿಸುವುದು ಅಥವಾ ನಿಲ್ಲಿಸುವುದು ಮಾಡಬಾರದು. ಹೀಗೆ ಮಾಡಿದರೆ ದೀರ್ಘಾವಧಿಯಲ್ಲಿ ಸಂಪತ್ತು ಗಳಿಕೆ ಮೇಲೆ ಪರಿಣಾಮ ಉಂಟಾಗುತ್ತದೆ.

ಉದಾಹರಣೆಗೆ ನೀವು ಈಕ್ವಿಟಿ ಮ್ಯೂಚುಯಲ್ ಫಂಡ್‌ವೊಂದರಲ್ಲಿ 20 ವರ್ಷಗಳ ಕಾಲ ಪ್ರತಿ ತಿಂಗಳು ₹15 ಸಾವಿರ ಹೂಡಿಕೆ ಮಾಡಲು ನಿರ್ಧರಿಸಿದ್ದು, ಶೇ 12ರಷ್ಟು ಲಾಭ ನಿರೀಕ್ಷೆ ಮಾಡಿದ್ದೀರಿ ಎಂದು ಭಾವಿಸಿ. ಆಗ 20 ವರ್ಷಗಳ ನಿಮ್ಮ ಒಟ್ಟು ಹೂಡಿಕೆ ಮೊತ್ತ ₹36 ಲಕ್ಷಗಳಾಗಿದ್ದು ಒಟ್ಟು ಹೂಡಿಕೆ ಮತ್ತು ಗಳಿಕೆ ಹಣ ಸೇರಿ ನಿಮಗೆ ₹1.5 ಕೋಟಿ ಸಿಕ್ಕಿರುತ್ತದೆ.

ಒಂದೊಮ್ಮೆ ನೀವು 20 ವರ್ಷಗಳ ಹೂಡಿಕೆ ಅವಧಿಯಲ್ಲಿ ಪ್ರತಿವರ್ಷ ಒಂದೊಂದು ಎಸ್ಐಪಿ ತಪ್ಪಿಸಿದ್ದರೆ ಹೂಡಿಕೆ ಮೊತ್ತ ₹33.2 ಲಕ್ಷ ಆಗಿರುತ್ತದೆ. ಅಂದರೆ ಹೂಡಿಕೆ ಮೊತ್ತದಲ್ಲಿ ₹2.8 ಲಕ್ಷ ಕಡಿಮೆ ಆಗಿರುತ್ತದೆ. ಹೀಗಿರುವಾಗ ನಿಮಗೆ ₹1.5 ಕೋಟಿ ಸಿಗುವ ಜಾಗದಲ್ಲಿ ₹1.1 ಕೋಟಿ ಮಾತ್ರ ಸಿಗುತ್ತದೆ. 20 ವರ್ಷಗಳ ಅವಧಿಯಲ್ಲಿ ₹40 ಲಕ್ಷ ಕಡಿಮೆ ಸಿಗುತ್ತದೆ. ಹಾಗಾಗಿ ಎಸ್ಐಪಿಗಳನ್ನು ತಪ್ಪಿಸುವಾಗ ಎಚ್ಚರಿಕೆಯಿಂದ ನಿರ್ಧಾರ ಮಾಡಬೇಕಿದೆ.

ಎಸ್ಐಪಿ ಮೂಲಕ ಹೆಚ್ಚು ಗಳಿಸುವುದು ಹೇಗೆ?: ಮ್ಯೂಚುಯಲ್ ಫಂಡ್‌ವೊಂದರಲ್ಲಿ 20 ವರ್ಷಗಳ ಕಾಲ ಪ್ರತಿ ತಿಂಗಳು ₹5 ಸಾವಿರ ಹೂಡಿಕೆ ಮಾಡಿದರೆ ಶೇ 12ರಷ್ಟು ಲಾಭಾಂಶದ ಲೆಕ್ಕಾಚಾರದಲ್ಲಿ ಅಸಲು ಮತ್ತು ಗಳಿಕೆ ಸೇರಿ ₹50 ಲಕ್ಷ ಸಿಗುತ್ತದೆ.

ಆದರೆ, ಹೂಡಿಕೆ ವಿಧಾನದಲ್ಲಿ ಸಣ್ಣ ಮೊತ್ತದ ಹೆಚ್ಚಳ ಮಾಡುತ್ತಾ ಹೋದರೆ ಸುಮಾರು ₹1 ಕೋಟಿ ಮೊತ್ತವನ್ನು ನೀವು ಗಳಿಸಬಹುದು. ನಿಮ್ಮ ಮಾಸಿಕ ಹೂಡಿಕೆ ಮೊತ್ತವನ್ನು ಪ್ರತಿವರ್ಷ ಶೇ 10ರಷ್ಟು ಹೆಚ್ಚಳ ಮಾಡುತ್ತಾ ಹೋದರೆ ಇದು ಸಾಧ್ಯವಾಗುತ್ತದೆ.

ಅಂದರೆ ಒಂದನೇ ವರ್ಷದಲ್ಲಿ ನೀವು ಪ್ರತಿ ತಿಂಗಳು ₹5 ಸಾವಿರ ಎಸ್ಐಪಿ ಮಾಡಿದರೆ ಎರಡನೇ ವರ್ಷ ಪ್ರತಿ ತಿಂಗಳು ₹5,500 ಎಸ್ಐಪಿ ಮಾಡುತ್ತೀರಿ. ಮೂರನೇ ವರ್ಷ ಪ್ರತಿ ತಿಂಗಳು ₹6,050 ಹೂಡಿಕೆ ಮಾಡುತ್ತಾ ಹೋಗುತ್ತೀರಿ. ಹೀಗೆ 20 ವರ್ಷಗಳ ಕಾಲ ಮಾಡಿದಾಗ ₹1 ಕೋಟಿ ಗಳಿಕೆ ಸಾಧ್ಯವಾಗುತ್ತದೆ. ಹೀಗೆ ಎಸ್ಐಪಿಯನ್ನು ಹೆಚ್ಚಿಸುತ್ತಾ ಹೋಗುವುದಕ್ಕೆ ಸ್ಟೇಪ್ ಅಪ್‌ ಎಸ್ಐಪಿ ಎನ್ನುತ್ತಾರೆ. 

ದಾಖಲೆ ಮಟ್ಟಕ್ಕೆ ಜಿಗಿದ ಸೂಚ್ಯಂಕಗಳು

ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೇ ವಾರವೂ ಗಳಿಕೆ ದಾಖಲಿಸಿದ್ದು, ದಾಖಲೆ ಮಟ್ಟದ ಜಿಗಿತ ಕಂಡಿವೆ.

ಮಾರ್ಚ್ 2ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಗಳಿಕೆ ದಾಖಲಿಸಿವೆ. 73,806 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.91ರಷ್ಟು ಹೆಚ್ಚಳವಾಗಿದೆ. 22,378 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.75ರಷ್ಟು ಜಿಗಿದಿದೆ. ಜಿಡಿಪಿ ದರದಲ್ಲಿ ಸಕಾರಾತ್ಮಕ ಬೆಳವಣಿಗೆ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಉತ್ಸಾಹ, ಬಡ್ಡಿದರ ಇಳಿಕೆ ನಿರೀಕ್ಷೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ. ವಲಯವಾರು ಸೂಚ್ಯಂಕಗಳ ಪ್ರಗತಿಯಲ್ಲಿ ನಿಫ್ಟಿ ಬ್ಯಾಂಕಿಂಗ್ ಸೂಚ್ಯಂಕ
ಶೇ 1.04, ನಿಫ್ಟಿ ಫೈನಾನ್ಸ್ ಶೇ 0.83, ನಿಫ್ಟಿ ಎಫ್‌ಎಂಸಿಜಿ ಶೇ 0.24, ನಿಫ್ಟಿ ಎನರ್ಜಿ ಶೇ 0.49, ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.63 , ನಿಫ್ಟಿ ಆಟೊ ಶೇ 1.55 ಮತ್ತು ನಿಫ್ಟಿ ಲೋಹ ವಲಯ
ಶೇ 3.6ರಷ್ಟು ಜಿಗಿದಿವೆ. ನಿಫ್ಟಿ ಐಟಿ ಶೇ 1.16, ನಿಫ್ಟಿ ಫಾರ್ಮಾ ಶೇ 0.75, ನಿಫ್ಟಿ ಮಾಧ್ಯಮ ವಲಯ ಶೇ 5.04ರಷ್ಟು ಕುಸಿದಿವೆ.

ನಿಫ್ಟಿಯಲ್ಲಿ ಎಲ್ ಆ್ಯಂಡ್‌ ಟಿ ಶೇ 7.8, ಟಾಟಾ ಸ್ಟೀಲ್ ಶೇ 6.63, ಟಾಟಾ ಮೋಟರ್ಸ್ ಶೇ 5.47, ಟಾಟಾ ಕನ್ಸ್ಯೂಮರ್ ಶೇ 4.02, ಇಂಡಸ್ಇಂಡ್ ಬ್ಯಾಂಕ್ ಶೇ 3.06, ಜೆಎಸ್‌ಡಬ್ಲ್ಯು ಸ್ಟೀಲ್ ಶೇ 2.87, ಐಸಿಐಸಿಐ ಬ್ಯಾಂಕ್ ಶೇ 2.21ರಷ್ಟು ಹೆಚ್ಚಳವಾಗಿವೆ.

ಅಪೋಲೊ ಹಾಸ್ಪಿಟಲ್ಸ್ ಶೇ 9.42, ಬಜಾಜ್ ಆಟೊ ಶೇ 4.55, ಏಷಿಯನ್ ಪೇಂಟ್ಸ್ ಶೇ 4.53, ಟೆಕ್ ಮಹಿಂದ್ರ ಶೇ 3.85 , ವಿಪ್ರೊ ಶೇ 2.5, ಐಷರ್ ಮೋಟರ್ಸ್ ಶೇ 1.78ರಷ್ಟು ಕುಸಿದಿವೆ.

ಮುನ್ನೋಟ: ಮಾರ್ಚ್ 20ರಂದು ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿ ದರ ನಿಗದಿಯ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ದೇಶೀಯವಾಗಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದು ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ. ಅನಿಶ್ಚಿತತೆಯ ನಡುವೆಯೂ ಅಲ್ಪಾವಧಿಯಲ್ಲಿ ಷೇರು ಮಾರುಕಟ್ಟೆ ಮತ್ತಷ್ಟು ಜಿಗಿಯುವ ಸಾಧ್ಯತೆಯಿದೆ. 

 (ಲೇಖಕ: ಚಾರ್ಟರ್ಡ್ ಅಕೌಂಟೆಂಟ್) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT