ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವ ವಿಮೆ: ಏನಿದು ಸೆಕ್ಷನ್ 45? ಪಾಲಿಸಿದಾರರ ಆಪ್ತ ರಕ್ಷಕನ ಬಗ್ಗೆ ತಿಳಿಯಲೇಬೇಕು

ರಾಜೇಶ್ ಕುಮಾರ್ ಟಿ.ಆರ್. ಅವರ ಹಣಕಾಸು ಸಾಕ್ಷರತೆ ಅಂಕಣ
Published 23 ಜೂನ್ 2024, 20:10 IST
Last Updated 23 ಜೂನ್ 2024, 20:10 IST
ಅಕ್ಷರ ಗಾತ್ರ

ಜೀವ ವಿಮೆ (ಲೈಫ್ ಇನ್ಶೂರೆನ್ಸ್‌) ಖರೀದಿಸಿದರೆ ನಿಜಕ್ಕೂ ವಿಮಾ ಕಂಪನಿಗಳು ಸಂಕಷ್ಟದ ಕಾಲದಲ್ಲಿ ಕ್ಲೇಮ್ ನೀಡುತ್ತವೆಯೇ? ನಮ್ಮ ಮರಣದ ನಂತರ ಕುಟುಂಬದ ಒಳಿತಿಗಾಗಿ ಮಾಡಿಸಿರುವ ಇನ್ಶೂರೆನ್ಸ್ ಕವರೇಜ್ ಮೊತ್ತವನ್ನು ಕೊಡದಿದ್ದರೆ ಏನು ಮಾಡೋದು?

ಜೀವ ವಿಮೆ ಪಡೆಯುವ ಪ್ರತಿಯೊಬ್ಬ ವ್ಯಕ್ತಿಗೂ ಇಂತಹ ಪ್ರಶ್ನೆಗಳು ಕಾಡಿರುತ್ತವೆ. ಆದರೆ, ವಿಮಾ ಕಂಪನಿ ಮತ್ತು ಜೀವ ವಿಮೆಯ ಪಾಲಿಸಿದಾರ ಈ ಇಬ್ಬರ ಹಿತಾಸಕ್ತಿ ಕಾಯಲು ಒಂದು ನಿಯಮವಿದೆ. ಅದೇ 1938ರ ವಿಮಾ ಕಾಯ್ದೆಯ ಸೆಕ್ಷನ್ 45. ಏನಿದು ಕಾಯ್ದೆ? ಇದು ಹೇಗೆ ಉಪಯುಕ್ತವಾಗಿದೆ? ಬನ್ನಿ ವಿವರವಾಗಿ ತಿಳಿಯೋಣ.

ಏನಿದು ಸೆಕ್ಷನ್ 45?

ವಿಮಾ ಬಾಂಡ್‌ನ ಪ್ರತಿ ಅಥವಾ ಕೈಪಿಡಿಯನ್ನು ಕೊನೆಯ ತನಕ ಓದಿದರೆ ವಿಮಾ ಕಾಯ್ದೆಯ ಸೆಕ್ಷನ್ 45ರ ಬಗ್ಗೆ ಅಲ್ಲಿ ಸಾಕಷ್ಟು ವಿವರ ಇರುತ್ತದೆ. ಜೀವ ವಿಮೆ ಪಾಲಿಸಿ ಪಡೆಯುವ ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳಬೇಕಾದ ಅತಿಮುಖ್ಯವಾದ ಮಾಹಿತಿ ಅದು. ಹೌದು. ಈ ಸೆಕ್ಷನ್ ವಿಮೆ ತೆಗೆದುಕೊಂಡಿರುವ ವ್ಯಕ್ತಿಗೆ ಕ್ಲೇಮ್‌ನ ಖಾತರಿ ಒದಗಿಸಿಕೊಡುತ್ತದೆ.

ಸೆಕ್ಷನ್ 45ರ ಪ್ರಕಾರ ಪಾಲಿಸಿ ಪಡೆದ ದಿನದಿಂದ ಮೂರು ವರ್ಷಗಳ ಬಳಿಕ ವಿಮಾ ಕಂಪನಿಯು ಯಾವುದೇ ಕಾರಣ ನೀಡಿ ಇನ್ಶೂರೆನ್ಸ್ ಕ್ಲೇಮ್ ನಿರಾಕರಿಸುವಂತಿಲ್ಲ. ಪಾಲಿಸಿಯ ಮೂರು ವರ್ಷಗಳ ಪ್ರೀಮಿಯಂ ಕಟ್ಟಿದ್ದರೆ ಇನ್ಶೂರೆನ್ಸ್ ಕ್ಲೇಮ್ ಕೊಡಲೇಬೇಕು. ಒಂದೊಮ್ಮೆ ವಂಚನೆ/ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಮಾತ್ರ ಕ್ಲೇಮ್ ನಿರಾಕರಿಸಬಹುದು.

3 ವರ್ಷಗಳ ಒಳಗೆ ಪ್ರಶ್ನಿಸಬಹುದು

ಇನ್ಶೂರೆನ್ಸ್ ಪಡೆದಿರುವ ವ್ಯಕ್ತಿ ವಂಚನೆ ಉದ್ದೇಶಕ್ಕಾಗಿಯೇ ಅದನ್ನು ಪಡೆದಿದ್ದಾನೆ. ಇನ್ಶೂರೆನ್ಸ್ ಹಣ ಪಡೆಯಲು ಸುಳ್ಳು ಮಾಹಿತಿ ಒದಗಿಸಿದ್ದಾನೆ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರೂ ಅದರ ಮಾಹಿತಿ ಮರೆಮಾಚಿದ್ದಾನೆ. ವಯಸ್ಸಿನ ಮಾಹಿತಿಯನ್ನು ತಪ್ಪಾಗಿ ನೀಡಿದ್ದಾನೆ. ಮದ್ಯಪಾನ– ಧೂಮಪಾನದ ಮಾಹಿತಿ ಮುಚ್ಚಿಟ್ಟಿದ್ದಾನೆ. ಅನಾರೋಗ್ಯದ ಬಗ್ಗೆ ಮಾಹಿತಿ ಒದಗಿಸಿಲ್ಲ– ಹೀಗೆ ವಿಮಾ ಕಂಪನಿಗೆ ಯಾವುದೇ ಅನುಮಾನ ಬಂದರೆ ಮೂರು ವರ್ಷದ ಒಳಗೆ ಅದನ್ನು ಕಾನೂನಾತ್ಮಕವಾಗಿ ಪ್ರಶ್ನೆ ಮಾಡಬಹುದು.

ಆದರೆ, ಪಾಲಿಸಿ ಪಡೆದಿರುವ ವ್ಯಕ್ತಿ/ ಆತನ ಸಂಬಂಧಿಗಳು ಆ ಪ್ರಶ್ನೆಗಳಿಗೆ ಸೂಕ್ತ ದಾಖಲೆಗಳೊಂದಿಗೆ ಉತ್ತರ ನೀಡಿದರೆ, ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿಲ್ಲ ಎನ್ನುವುದನ್ನು ನಿರೂಪಿಸಿದರೆ ಕಂಪನಿಯು ನಿರ್ದಿಷ್ಟ ವ್ಯಕ್ತಿಯ ಪಾಲಿಸಿಯನ್ನು ರದ್ದು ಮಾಡುತ್ತೇವೆ ಅಥವಾ ಕ್ಲೇಮ್ ಕೊಡುವುದಿಲ್ಲ ಎಂದು ಹೇಳುವಂತಿಲ್ಲ.

ತಪ್ಪು ಸಾಬೀತಾದರೆ ಪಾಲಿಸಿ ರದ್ದು

ಇನ್ಶೂರೆನ್ಸ್ ಪಾಲಿಸಿ ಪಡೆಯಲು ವ್ಯಕ್ತಿ ತಪ್ಪು ಮಾಹಿತಿ ಒದಗಿಸಿದ್ದಾನೆ. ಜೀವ ವಿಮೆ ಅರ್ಜಿಯಲ್ಲಿ ಮಾಹಿತಿ ಮರೆಮಾಚಿದ್ದಾನೆ ಎನ್ನುವುದು ಮೂರು ವರ್ಷದ ಒಳಗೆ ಕಂಡುಬಂದರೆ ಕಂಪನಿಯು ಪಾಲಿಸಿದಾರನಿಗೆ/ ಸಂಬಂಧಿಗಳಿಗೆ ಈವರೆಗೆ ಕಟ್ಟಿರುವ ವಿಮಾ ಪ್ರೀಮಿಯಂ ಮೊತ್ತವನ್ನು 90 ದಿನಗಳ ಒಳಗೆ ಹಿಂದಿರುಗಿಸಿ ಪಾಲಿಸಿಯನ್ನು ರದ್ದುಪಡಿಸಬಹುದು.

ನೆನಪಿಡಿ

ಇನ್ಶೂರೆನ್ಸ್ ಎನ್ನುವುದು ನಂಬಿಕೆಯ ತಳಹದಿ ಮೇಲೆ ನಿಂತಿರುತ್ತದೆ. ಇನ್ಶೂರೆನ್ಸ್ ಮಾಡಿಸುವಾಗ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡಿ. ಪ್ರೀಮಿಯಂ ತಗ್ಗಿಸುವ ಸಲುವಾಗಿ ಸುಳ್ಳು ಮಾಹಿತಿ ನೀಡಬೇಡಿ. ಸುಳ್ಳು ವಿವರ ಒದಗಿಸಿದರೆ ನಿಮಗೆ ಇನ್ಶೂರೆನ್ಸ್ ಪಾಲಿಸಿ, ಕ್ಲೇಮ್ ಸಿಗದಂತಾಗಬಹುದು. ನೀವು ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಆದರೂ, ನಿಮಗೆ ಇನ್ಶೂರೆನ್ಸ್ ಕಂಪನಿ ಪಾಲಿಸಿ ಕ್ಲೇಮ್ ಕೊಡುತ್ತಿಲ್ಲ ಎಂದರೆ ವಿಮಾ ಕಾಯ್ದೆಯ ಸೆಕ್ಷನ್ 45 ನಿಮ್ಮ ನೆರವಿಗೆ ಬರಲಿದೆ. 

ಮೂರು ವಾರದಿಂದ ಷೇರುಪೇಟೆ ಜಿಗಿತ

ಸತತ ಮೂರು ವಾರಗಳಿಂದ ಷೇರುಪೇಟೆ ಸೂಚ್ಯಂಕಗಳು ಗಳಿಕೆಯ ಹಾದಿಯಲ್ಲಿವೆ.

ಜೂನ್ 21ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಅಲ್ಪ ಪ್ರಮಾಣದ ಗಳಿಕೆ ದಾಖಲಿಸಿವೆ. 77,209 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.28ರಷ್ಟು ಗಳಿಸಿಕೊಂಡಿದೆ. 23,501 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.15ರಷ್ಟು ಜಿಗಿದಿದೆ.

ಜೂನ್ 21ರ ವಹಿವಾಟಿನಲ್ಲಿ ಹೂಡಿಕೆದಾರರು ಒಂದಷ್ಟು ಲಾಭ ಗಳಿಕೆಗೆ ಮುಂದಾದರೂ ವಾರದ ಗಳಿಕೆಗೆ ಹಿನ್ನಡೆಯಾಗಲಿಲ್ಲ. ವಲಯವಾರು ಪ್ರಗತಿಯಲ್ಲಿ ಹಲವು ವಲಯಗಳ ಸೂಚ್ಯಂಕಗಳು ಕುಸಿತ ದಾಖಲಿಸಿವೆ.

ನಿಫ್ಟಿ ವಾಹನ ಮತ್ತು ಎಫ್ಎಂಸಿಜಿ ಗರಿಷ್ಠ ಕುಸಿತ ಕಂಡಿವೆ. ನಿಫ್ಟಿ ವಾಹನ ಸೂಚ್ಯಂಕ ಶೇ 2.61, ಎಫ್ಎಂಸಿಜಿ ಶೇ 2.14, ಫಾರ್ಮಾ ಶೇ 1.97, ಅನಿಲ ಮತ್ತು ತೈಲ ಶೇ 1.88, ಎನರ್ಜಿ ಶೇ 1.44, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.12 ಮತ್ತು ಮಾಧ್ಯಮ ಸೂಚ್ಯಂಕ ಶೇ 0.99ರಷ್ಟು ಇಳಿಕೆಯಾಗಿದೆ. ನಿಫ್ಟಿ ಬ್ಯಾಂಕ್ ಶೇ 3.11, ಫೈನಾನ್ಸ್ ಶೇ 2.38, ಮಾಹಿತಿ ತಂತ್ರಜ್ಞಾನ ಶೇ 1.42 ಮತ್ತು ನಿಫ್ಟಿ ಮೆಟಲ್ ಶೇ 0.7ರಷ್ಟು ಗಳಿಸಿಕೊಂಡಿವೆ.

ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ಹೀರೊ ಮೋಟೊಕಾರ್ಪ್‌ ಶೇ 6.18, ಮಾರುತಿ ಸುಜುಕಿ ಶೇ 5.31, ಅಲ್ಟ್ರಾಟೆಕ್ ಸಿಮೆಂಟ್ ಶೇ 5.12, ಎಲ್ ಆ್ಯಂಡ್‌ ಟಿ ಶೇ 4.17, ಬಜಾಜ್ ಆಟೊ ಶೇ 3.86, ಟೈಟನ್ ಶೇ 3.53, ಸನ್ ಫಾರ್ಮಾ ಶೇ 3.38 ಮತ್ತು ಟಾಟಾ ಮೋಟರ್ಸ್ ಶೇ 3.26ರಷ್ಟು ಕುಸಿದಿವೆ. ಐಸಿಐಸಿಐ ಬ್ಯಾಂಕ್ ಶೇ 4.61, ಎಕ್ಸಿಸ್ ಬ್ಯಾಂಕ್ ಶೇ 4.37, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 4.25, ಅದಾನಿ ಪೋರ್ಟ್ಸ್ ಶೇ 3.87, ಶ್ರೀರಾಮ್ ಫೈನಾನ್ಸ್ ಶೇ 3.49, ಕೋಟಕ್ ಮಹೀಂದ್ರ ಬ್ಯಾಂಕ್ ಶೇ 3.29, ಇನ್ಫೊಸಿಸ್ ಶೇ 2.9 ಮತ್ತು ವಿಪ್ರೊ ಶೇ 2.77ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಮುಂಗಾರು ಮಂದಗತಿಯಲ್ಲಿ ಸಾಗಿರುವುದು ಷೇರುಪೇಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜಿಎಸ್‌ಟಿ ಸಮಿತಿಯ ನಿರ್ಣಯಗಳು ಸಹ ವಿವಿಧ ವಲಯದ ಷೇರುಗಳ ಏರಿಳಿತಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ಉಳಿದಂತೆ ಮುಂಬರುವ ತ್ರೈಮಾಸಿಕ ಫಲಿತಾಂಶಗಳು, ಬಜೆಟ್ ಮಂಡನೆ ಮೇಲೆ ಹೂಡಿಕೆದಾರರು ದೃಷ್ಟಿ ನೆಟ್ಟಿದ್ದಾರೆ.

ರಾಜೇಶ್ ಕುಮಾರ್ ಟಿ.ಆರ್.

ರಾಜೇಶ್ ಕುಮಾರ್ ಟಿ.ಆರ್.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಮೂರು ವಾರದಿಂದ ಷೇರುಪೇಟೆ ಜಿಗಿತ

ಸತತ ಮೂರು ವಾರಗಳಿಂದ ಷೇರುಪೇಟೆ ಸೂಚ್ಯಂಕಗಳು ಗಳಿಕೆಯ ಹಾದಿಯಲ್ಲಿವೆ. ಜೂನ್ 21ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಅಲ್ಪ ಪ್ರಮಾಣದ ಗಳಿಕೆ ದಾಖಲಿಸಿವೆ. 77209 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.28ರಷ್ಟು ಗಳಿಸಿಕೊಂಡಿದೆ. 23501 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.15ರಷ್ಟು ಜಿಗಿದಿದೆ. ಜೂನ್ 21ರ ವಹಿವಾಟಿನಲ್ಲಿ ಹೂಡಿಕೆದಾರರು ಒಂದಷ್ಟು ಲಾಭ ಗಳಿಕೆಗೆ ಮುಂದಾದರೂ ವಾರದ ಗಳಿಕೆಗೆ ಹಿನ್ನಡೆಯಾಗಲಿಲ್ಲ. ವಲಯವಾರು ಪ್ರಗತಿಯಲ್ಲಿ ಹಲವು ವಲಯಗಳ ಸೂಚ್ಯಂಕಗಳು ಕುಸಿತ ದಾಖಲಿಸಿವೆ. ನಿಫ್ಟಿ ವಾಹನ ಮತ್ತು ಎಫ್ಎಂಸಿಜಿ ಗರಿಷ್ಠ ಕುಸಿತ ಕಂಡಿವೆ. ನಿಫ್ಟಿ ವಾಹನ ಸೂಚ್ಯಂಕ ಶೇ 2.61 ಎಫ್ಎಂಸಿಜಿ ಶೇ 2.14 ಫಾರ್ಮಾ ಶೇ 1.97 ಅನಿಲ ಮತ್ತು ತೈಲ ಶೇ 1.88 ಎನರ್ಜಿ ಶೇ 1.44 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.12 ಮತ್ತು ಮಾಧ್ಯಮ ಸೂಚ್ಯಂಕ ಶೇ 0.99ರಷ್ಟು ಇಳಿಕೆಯಾಗಿದೆ. ನಿಫ್ಟಿ ಬ್ಯಾಂಕ್ ಶೇ 3.11 ಫೈನಾನ್ಸ್ ಶೇ 2.38 ಮಾಹಿತಿ ತಂತ್ರಜ್ಞಾನ ಶೇ 1.42 ಮತ್ತು ನಿಫ್ಟಿ ಮೆಟಲ್ ಶೇ 0.7ರಷ್ಟು ಗಳಿಸಿಕೊಂಡಿವೆ. ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ಹೀರೊ ಮೊಟೊಕಾರ್ಪ್‌ ಶೇ 6.18 ಮಾರುತಿ ಸುಜುಕಿ ಶೇ 5.31 ಅಲ್ಟ್ರಾಟೆಕ್ ಸಿಮೆಂಟ್ ಶೇ 5.12 ಎಲ್ ಆ್ಯಂಡ್‌ ಟಿ ಶೇ 4.17 ಬಜಾಜ್ ಆಟೊ ಶೇ 3.86 ಟೈಟನ್ ಶೇ 3.53 ಸನ್ ಫಾರ್ಮಾ ಶೇ 3.38 ಮತ್ತು ಟಾಟಾ ಮೋಟರ್ಸ್ ಶೇ 3.26ರಷ್ಟು ಕುಸಿದಿವೆ. ಐಸಿಐಸಿಐ ಬ್ಯಾಂಕ್ ಶೇ 4.61 ಎಕ್ಸಿಸ್ ಬ್ಯಾಂಕ್ ಶೇ 4.37 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 4.25 ಅದಾನಿ ಪೋರ್ಟ್ಸ್ ಶೇ 3.87 ಶ್ರೀರಾಮ್ ಫೈನಾನ್ಸ್ ಶೇ 3.49 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 3.29 ಇನ್ಫೊಸಿಸ್ ಶೇ 2.9 ಮತ್ತು ವಿಪ್ರೊ ಶೇ 2.77ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಮುಂಗಾರು ಮಂದಗತಿಯಲ್ಲಿ ಸಾಗಿರುವುದು ಷೇರುಪೇಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜಿಎಸ್‌ಟಿ ಸಮಿತಿಯ ನಿರ್ಣಯಗಳು ಸಹ ವಿವಿಧ ವಲಯದ ಷೇರುಗಳ ಏರಿಳಿತಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ಉಳಿದಂತೆ ಮುಂಬರುವ ತ್ರೈಮಾಸಿಕ ಫಲಿತಾಂಶಗಳು ಬಜೆಟ್ ಮಂಡನೆ ಮೇಲೆ ಹೂಡಿಕೆದಾರರು ದೃಷ್ಟಿ ನೆಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT