ಶನಿವಾರ, ಮೇ 30, 2020
27 °C

ಕೊರೊನಾ ಕಂಟಕ: ಆದಾಯ ತೆರಿಗೆ ರಿಟರ್ನ್‌ ಗಡುವು ವಿಸ್ತರಣೆಗೆ ಸುಗ್ರೀವಾಜ್ಞೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತೆರಿಗೆ ಪಾವತಿ ವಿಳಂಬಕ್ಕೆ ಅವಕಾಶ ಕಲ್ಪಿಸುವುದಾಗಿ ಈ ಹಿಂದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದ ಹೇಳಿಕೆಗೆ ಪೂರಕವಾಗಿ ಕೇಂದ್ರ ಸರ್ಕಾರ ಮಂಗಳವಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದಾಯ ತೆರಿಗೆ, ಜಿಎಸ್‌ಟಿ, ಕಸ್ಟಮ್ಸ್‌ ಮತ್ತು ಕೇಂದ್ರೀಯ ಅಬಕಾರಿ ಸುಂಕ ಪಾವತಿಗೆ ಜೂನ್ 30ರವರೆಗೆ ಗಡುವು ವಿಸ್ತರಿಸಲಾಗಿದೆ.

'ತೆರಿಗೆ ಪದ್ಧತಿ ಮತ್ತು ಇತರ ಕಾನೂನುಗಳು (ಕೆಲ ನಿಯಮಗಳ ವಿನಾಯ್ತಿ) ಸುಗ್ರೀವಾಜ್ಞೆ 2020'ಕ್ಕೆ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದಾರೆ. ಕೊರೊನಾ ವೈರಸ್ ಸೋಂಕು ನಿರ್ವಹಣೆಗೆಂದು ಸ್ಥಾಪಿಸಿರುವ 'ಪಿಎಂ-ಕೇರ್ಸ್‌' ನಿಧಿಗೆ ನೀಡುವ ದೇಣಿಗೆಗೆ ಸಂಪೂರ್ಣ ತೆರಿಗೆ ವಿನಾಯ್ತಿ ನೀಡುವ ವಿಚಾರವೂ ಸುಗ್ರೀವಾಜ್ಞೆಯಲ್ಲಿದೆ.

'ಒಟ್ಟು ಆದಾಯದಲ್ಲಿ ಶೇ 10ರಷ್ಟನ್ನು ಕಡಿತಗೊಳಿಸಬೇಕು ಎನ್ನುವ ನಿಯಮವೂ ಪಿಎಂ-ಕೇರ್ಸ್‌ ನಿಧಿಗೆ ನೀಡುವ ದೇಣಿಗೆಗೆ ಅನ್ವಯವಾಗುವುದಿಲ್ಲ' ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

2018-19ರ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮತ್ತು ಆಧಾರ್‌ಗೆ ಪಾನ್‌ ಕಾರ್ಡ್‌ ಲಿಂಕ್ ಮಾಡುವ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ. 

ಆದಾಯ ತೆರಿಗೆ ಕಾಯ್ದೆಯ '80ಸಿ' ನಿಯಮದ ಅನ್ವಯ (ಎಲ್‌ಐಸಿ, ಪಿಪಿಎಫ್, ಎನ್‌ಎಸ್‌ಸಿ ಇತ್ಯಾದಿ) 2019-20ರ ಆರ್ಥಿಕ ವರ್ಷದಲ್ಲಿ ತೆರಿಗೆ ವಿನಾಯ್ತಿ ಪಡೆಯಲು ಜೂನ್ 30ರವರೆಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಅಬಕಾರಿ ಸುಂಕವನ್ನು ಮಾರ್ಚ್‌, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಾಕಿಯುಳಿಸಿಕೊಂಡವರಿಗೂ, ಜೂನ್ 30ರವರೆಗೆ ಗಡುವು ವಿಸ್ತರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು