ಜಿಎಸ್‌ಟಿ ತಂದರೂ ಪೆಟ್ರೋಲ್ ದರ ಇಳಿಯದು

7
ಕೇಂದ್ರದ ಅಧಿಕಾರಿಯೊಬ್ಬರಿಂದ ಮಾಹಿತಿ

ಜಿಎಸ್‌ಟಿ ತಂದರೂ ಪೆಟ್ರೋಲ್ ದರ ಇಳಿಯದು

Published:
Updated:

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ವ್ಯಾಪ್ತಿಗೆ ತಂದರೆ, ಗರಿಷ್ಠ ಶೇ 28ರ ತೆರಿಗೆ ದರದ ಜತೆಗೆ ಸ್ಥಳೀಯ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಅನ್ವಯವಾಗುವ ಸಾಧ್ಯತೆ ಇದೆ.

ಜಿಎಸ್‌ಟಿಯ ಗರಿಷ್ಠ ತೆರಿಗೆ ದರ ಮತ್ತು ವ್ಯಾಟ್‌ ಒಳಗೊಂಡ ತೆರಿಗೆ ಮೊತ್ತವು, ಈ ಎರಡೂ ತೈಲೋತ್ಪನ್ನಗಳ ಮೇಲೆ ಸದ್ಯಕ್ಕೆ ಕೇಂದ್ರ ಸರ್ಕಾರ ವಿಧಿಸುವ ಎಕ್ಸೈಸ್‌ ಸುಂಕ ಮತ್ತು ರಾಜ್ಯಗಳ ವ್ಯಾಟ್ ಒಳಗೊಂಡಿರುವ ತೆರಿಗೆ ಹೊರೆಯಷ್ಟೇ ಇರಲಿದೆ.

ವಿಶ್ವದ ಯಾವುದೇ ದೇಶದಲ್ಲಿಯೂ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಶುದ್ಧ ಜಿಎಸ್‌ಟಿ ಅಂದರೆ ಬರೀ ಜಿಎಸ್‌ಟಿ ಒಂದನ್ನೇ ಹೇರಲಾಗಿಲ್ಲ. ಭಾರತದಲ್ಲಿಯೂ ಇದು ಜಿಎಸ್‌ಟಿ ಮತ್ತು ವ್ಯಾಟ್‌ ಒಳಗೊಂಡಿರಲಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವರು ಜಿಎಸ್‌ಟಿ ಜಾರಿ ಪ್ರಕ್ರಿಯೆಯಲ್ಲಿ ಮೊದಲಿನಿಂದಲೂ ಭಾಗಿಯಾಗಿದ್ದಾರೆ.

ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ರಾಜಕೀಯ ನಿರ್ಧಾರವಾಗಿರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಸಹಮತಕ್ಕೆ ಬರಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇಂಧನಗಳ ಮೇಲೆ ಸದ್ಯಕ್ಕೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಎಕ್ಸೈಸ್‌ ಸುಂಕದ ಜತೆ ರಾಜ್ಯಗಳು ವ್ಯಾಟ್‌ ವಿಧಿಸುತ್ತಿವೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ, ನಿರ್ದಿಷ್ಟ ಸರಕು ಅಥವಾ ಸೇವೆ ಮೇಲಿನ ತೆರಿಗೆ ಹೊರೆಯು 2017ರ ಜುಲೈ 1ರ ಮುಂಚಿನ ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಹೊರೆಗೆ ಸಮಾನವಾಗಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇದೇ ಕಾರಣಕ್ಕೆ ಜಿಎಸ್‌ಟಿ ದರಗಳನ್ನು ನಾಲ್ಕು ಹಂತಗಳಲ್ಲಿ ಶೇ 5,12,18 ಮತ್ತು ಸಶೇ 28ರಂತೆ ವಿಂಗಡಿಸಲಾಗಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಮೇಲಿನ ಸದ್ಯದ ತೆರಿಗೆ ಹೊರೆಯು, ಈಗಾಗಲೇ ಜಿಎಸ್‌ಟಿಯ ಗರಿಷ್ಠ ದರದ ಹೊರೆಯನ್ನೂ ಮೀರಿದೆ. ಒಂದು ವೇಳೆ ಇಂಧನಗಳನ್ನು ಶೇ 28ರ ಜಿಎಸ್‌ಟಿ ವ್ಯಾಪ್ತಿಗೆ ಮಾತ್ರ ತಂದರೆ, ಅದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ಪ್ರಮಾಣದಲ್ಲಿ ವರಮಾನ ನಷ್ಟ ಉಂಟಾಗಲಿದೆ.

ಈ ಬಾಬತ್ತಿನಲ್ಲಿ ರಾಜ್ಯಗಳಿಗೆ ಉಂಟಾಗುವ ನಷ್ಟ ಭರ್ತಿ ಮಾಡಿಕೊಡುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ. ಹೀಗಾಗಿ, ಗರಿಷ್ಠ ಜಿಎಸ್‌ಟಿ ಜತೆಗೆ ರಾಜ್ಯಗಳ ವ್ಯಾಟ್‌ ವಿಧಿಸಲು ಅವಕಾಶ ಮಾಡಿಕೊಡಬಹುದು. ಇದು, ಸದ್ಯದ ತೆರಿಗೆ ಹೊರೆ ಮೀರದಂತೆ ನೋಡಿಕೊಳ್ಳಬೇಕಾಗುತ್ತದೆ.

ದುಬಾರಿ ಇಂಧನ ದರಕ್ಕೆ ಜಿಎಸ್‌ಟಿ ಅನ್ವಯಿಸುವುದು ದಿವ್ಯ ಔಷಧ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಅದರಿಂದ ಹೆಚ್ಚಿನ ಬದಲಾವಣೆ ಏನೂ ಕಂಡು ಬರಲಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚುವರಿ ವ್ಯಾಟ್‌ ಅಥವಾ ಸುಂಕ ವಿಧಿಸದೇ ಶೇ 28ರಷ್ಟು ಶುದ್ಧ ಜಿಎಸ್‌ಟಿಗೆ ಮಾತ್ರ ಅಂಟಿಕೊಂಡರೆ ಮಾತ್ರ ಬೆಲೆಗಳು ಕೆಲಮಟ್ಟಿಗೆ ಅಗ್ಗವಾಗಲಿವೆ.

ಹದಿನೈದು ದಿನಗಳ ಹಿಂದೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದ ಇಂಧನ ಬೆಲೆ ಇತ್ತೀಚಿಗೆ ಕಡಿಮೆಯಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅಗ್ಗವಾಗುತ್ತಿರುವುದೇ ಇದಕ್ಕೆ ಕಾರಣ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !