ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ ಬೌನ್ಸ್‌ ನಿಗ್ರಹಕ್ಕೆ ಅಸ್ತ್ರ?

ಕೇಂದ್ರ ಹಣಕಾಸು ಸಚಿವಾಲಯದಿಂದ ಪರಿಶೀಲನೆ
Last Updated 9 ಅಕ್ಟೋಬರ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚೆಕ್‌ ಬೌನ್ಸ್ ಆದಾಗ, ಚೆಕ್ ನೀಡಿದ ವ್ಯಕ್ತಿಯ ಬೇರೆ ಖಾತೆಗಳಿಂದ ಹಣ ಕಡಿತ ಮಾಡುವ ಹಾಗೂ ಮುಂದೆ ಆ ವ್ಯಕ್ತಿ ಹೊಸ ಖಾತೆ ತೆರೆಯುವುದನ್ನು ನಿರ್ಬಂಧಿಸುವ ಸಾಧ್ಯತೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಪರಿಶೀಲನೆ ನಡೆಸಿದೆ.

ನ್ಯಾಯಾಂಗ ವ್ಯವಸ್ಥೆಗೆ ಹೊರೆಯಾಗಿ ಪರಿಣಮಿಸಿರುವ ಚೆಕ್ ಬೌನ್ಸ್‌ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶ ಸಚಿವಾಲಯದ ಈ ಕ್ರಮದ ಹಿಂದೆ ಇದೆ. ಚೆಕ್ ಬೌನ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ಬಗ್ಗೆ ಚರ್ಚಿಸಲು ಸಚಿವಾಲಯ ಈಚೆಗೆ
ನಡೆಸಿದ ಸಭೆಯಲ್ಲಿ ಈ ಕ್ರಮಗಳು ಮಾತ್ರವಲ್ಲದೆ, ಇನ್ನೂ ಹಲವು ಸಲಹೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ವ್ಯಕ್ತಿಯೊಬ್ಬ ನೀಡಿದ ಚೆಕ್ ಬೌನ್ಸ್ ಆದ ಸಂದರ್ಭದಲ್ಲಿ, ಆತನ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಮೊದಲು ಆತನ ಬೇರೆ ಬ್ಯಾಂಕ್‌ ಖಾತೆಗಳಿಂದ ಹಣ ಕಡಿತ ಮಾಡಿ, ಅದನ್ನು ಚೆಕ್‌ ಮೊತ್ತಕ್ಕೆ ಸರಿಹೊಂದಿಸಲು ಯತ್ನಿಸುವ ಸಲಹೆ ಕೂಡ ಬಂದಿದೆ.

ಚೆಕ್ ಬೌನ್ಸ್‌ ಆದಾಗ ಅದನ್ನು ಸಾಲ ಮರುಪಾವತಿಗೆ ವಿಫಲವಾಗುವುದಕ್ಕೆ ಸಮ ಎಂದು ಪರಿಗಣಿಸಿ, ಆ ಬಗ್ಗೆ ಸಾಲದ ಮಾಹಿತಿ ದಾಖಲಿಸುವ ಕಂಪನಿಗಳಿಗೆ ತಿಳಿಸುವುದು. ಹೀಗೆ ಮಾಹಿತಿ ನೀಡಿ, ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವಂತೆ ಮಾಡುವ ಸಲಹೆ ಕೂಡ ಸಭೆಯಲ್ಲಿಬಂದಿದೆ ಎಂದು ಗೊತ್ತಾಗಿದೆ. ಈ ಸಲಹೆಗಳನ್ನು ಒಪ್ಪಿಕೊಳ್ಳುವ ಮೊದಲು ಕಾನೂನಿನ ಅಡಿ ಇವು ಎಷ್ಟು ಸರಿ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕ್ರಮಗಳು ದೇಶದಲ್ಲಿ ವಾಣಿಜ್ಯ ವಹಿವಾಟು ನಡೆಸುವುದನ್ನು ಕೂಡ ಇನ್ನಷ್ಟು ಸುಲಲಿತ ಆಗಿಸಲಿವೆ ಎಂದು ಹೇಳಲಾಗಿದೆ. ಅಲ್ಲದೆ, ಖಾತೆಯಲ್ಲಿ ಕಡಿಮೆ ಹಣ ಇದ್ದಾಗಲೂ, ಉದ್ದೇಶಪೂರ್ವಕವಾಗಿ ಹೆಚ್ಚಿನ ಮೊತ್ತಕ್ಕೆ ಚೆಕ್ ನೀಡುವ ಪರಿಪಾಠಕ್ಕೆ ಕಡಿವಾಣ ಬೀಳುತ್ತದೆ ಎಂಬ ನಿರೀಕ್ಷೆ ಇದೆ.

ದೇಶದ ಎಲ್ಲ ಬ್ಯಾಂಕ್‌ಗಳಲ್ಲಿನ ದತ್ತಾಂಶವನ್ನು ಒಂದೆಡೆ ಕ್ರೋಢೀಕರಿಸಿ ಈ ಕೆಲಸ ಮಾಡಲು ಸಾಧ್ಯವಿದೆ ಎಂದು ಮೂಲಗಳು ವಿವರಿಸಿವೆ.

ಕೋರ್ಟ್ ಅಸಮಾಧಾನ: ಚೆಕ್‌ ಬೌನ್ಸ್‌ಗೆ ಸಂಬಂಧಿಸಿದ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿ ಬಾಕಿ ಇದ್ದಿದ್ದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ದೇಶದಾದ್ಯಂತ ಬಾಕಿ ಇರುವ ಅಂದಾಜು 35 ಲಕ್ಷ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಕ್ರಮಗಳನ್ನು ಸೂಚಿಸಲು ಸಮಿತಿಯೊಂದನ್ನು ರಚಿಸಿತ್ತು.

ಚೆಕ್‌ ಬೌನ್ಸ್‌ ಪ್ರಕರಣಗಳ ವಿಚಾರಣೆಗೆ ಹೆಚ್ಚುವರಿ ನ್ಯಾಯಾಲಯಗಳ ಅಗತ್ಯವಿದೆ ಎಂಬುದನ್ನು ‘ತಾತ್ವಿಕವಾಗಿ ಒಪ್ಪುವುದಾಗಿ’ ಕೇಂದ್ರವು ಹೇಳಿತ್ತು. ಪ್ರಕರಣಗಳ ತ್ವರಿತ ವಿಲೇವಾರಿಗೆ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಬೇಕು, ಮೂಲಸೌಕರ್ಯವನ್ನು ಹೆಚ್ಚಿಸಬೇಕು ಎಂದು ಸಮಿತಿಯು ಶಿಫಾರಸಿನಲ್ಲಿ ಹೇಳಿತ್ತು.

ಚೆಕ್‌ ಬೌನ್ಸ್ ಪ್ರಕರಣಗಳು ತ್ವರಿತವಾಗಿ ಇತ್ಯರ್ಥ ಆಗುವಂ ತಾಗಬೇಕು ಎಂಬ ಬೇಡಿಕೆಯನ್ನು ಉದ್ಯಮ ವಲಯದ ಸಂಘಟನೆಗಳು ಕೂಡ ಇರಿಸಿವೆ.

ಚೆಕ್‌ ಬೌನ್ಸ್‌ ಆದಲ್ಲಿ, ಅದಕ್ಕೆ ಕಾರಣನಾದ ವ್ಯಕ್ತಿಗೆ ಬ್ಯಾಂಕಿನಿಂದ ಹಣ ಹಿಂಪಡೆಯಲು ಕೆಲವು ದಿನಗಳವರೆಗೆ ನಿರ್ಬಂಧ ಹೇರಬೇಕು. ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ 90 ದಿನಗಳಲ್ಲಿ ಇತ್ಯರ್ಥಪಡಿಸಲು ಅಗತ್ಯ ಕಾನೂನು ರೂಪಿಸಬೇಕು ಎಂದು ಉದ್ಯಮ ವಲಯದ ಸಂಘಟನೆ ಪಿಎಚ್‌ಡಿಸಿಸಿಐ ಈಚೆಗೆ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT