ಭಾನುವಾರ, ಫೆಬ್ರವರಿ 5, 2023
21 °C

ಯಶಸ್ವಿ ನಿರ್ವಹಣೆಗೆ ಹೂಡಿಕೆ ಲೆಕ್ಕಾಚಾರ

ರಾಜೇಶ್ ಕುಮಾರ್ ಟಿ.ಆರ್. Updated:

ಅಕ್ಷರ ಗಾತ್ರ : | |

‘ನಿಶ್ಚಿತ ಠೇವಣಿ (ಎಫ್.ಡಿ.) ಇಟ್ಟರೆ ಹಣ ಸುರಕ್ಷಿತ... ಅಯ್ಯೋ ಕಷ್ಟ ಕಾಲಕ್ಕೆ ಆಗೋ ಚಿನ್ನ ತೆಗೆದುಕೊಳ್ಳೋದು ಅದಕ್ಕಿಂತ ಬೆಸ್ಟ್ ಅಲ್ವಾ...?’ ಹೀಗೆ ವಿವಿಧ ಹೂಡಿಕೆಗಳ ಬಗ್ಗೆ ಜನಸಾಮಾನ್ಯರು ತಮ್ಮದೇ ಅನುಭವದ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಆದರೆ ಯಾವುದೇ ಹೂಡಿಕೆ ಮಾಡುವಾಗ ‘ಹೂಡಿಕೆ ಲೆಕ್ಕಾಚಾರ’ ಬಹಳ ಮುಖ್ಯ. ಯಾವ ಹೂಡಿಕೆ ಎಷ್ಟು ಲಾಭ ಕೊಡುತ್ತದೆ ಎಂಬ ಅಂದಾಜು ಮಾಡಿ ಹೂಡಿಕೆ ಮಾಡಿದಾಗ ಮಾತ್ರ ಸಂಪತ್ತು ವೃದ್ಧಿಯಾಗುತ್ತದೆ. ಈ ಲೇಖನದಲ್ಲಿ ಹೂಡಿಕೆ ಕ್ಯಾಲ್ಕ್ಯುಲೇಟರ್ (INVESTMENT CALCULATOR) ಬಗ್ಗೆ ತಿಳಿದುಕೊಳ್ಳೋಣ.

ಏನಿದು ಹೂಡಿಕೆ ಕ್ಯಾಲ್ಕ್ಯುಲೇಟರ್?: ಯಾವ ಹೂಡಿಕೆ ಎಷ್ಟು ಲಾಭ ತಂದುಕೊಡುತ್ತದೆ ಎಂದು ಲೆಕ್ಕಾಚಾರ ಮಾಡುವ ಸಾಧನವೇ ಹೂಡಿಕೆ ಕ್ಯಾಲ್ಕ್ಯುಲೇಟರ್. ಇಷ್ಟೇ ಅಲ್ಲ, ಎಷ್ಟು ಅವಧಿಗೆ ಹೂಡಿಕೆ ಮಾಡಬೇಕು, ಎಷ್ಟು ಹೂಡಿಕೆ ಮಾಡಬೇಕು, ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ... ಹೀಗೆ ಎಲ್ಲ ಅಂದಾಜುಗಳನ್ನು ಹೂಡಿಕೆ ಕ್ಯಾಲ್ಕ್ಯುಲೇಟರ್ ಒದಗಿಸಿಕೊಡುತ್ತದೆ. ಈ ಮೂಲಕ ಹೂಡಿಕೆ ಗುರಿ ತಲುಪಲು ನೆರವಾಗುತ್ತದೆ.

ಬ್ಯಾಂಕಿಂಗ್, ಮ್ಯೂಚುವಲ್ ಫಂಡ್ ಮತ್ತು ಇನ್ನಿತರ ಹೂಡಿಕೆಗೆ ಸಂಬಂಧಿಸಿದ ಹಲವು ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಕ್ಯಾಲ್ಕ್ಯುಲೇಟರ್ ಲಭ್ಯವಿರುತ್ತದೆ. ಎಕ್ಸೆಲ್ ಶೀಟ್‌ ಬಳಕೆ ಗೊತ್ತಿದ್ದಲ್ಲಿ ಅದನ್ನು ಕೂಡ ಹೂಡಿಕೆ ಲೆಕ್ಕಾಚಾರಕ್ಕೆ ಬಳಸಬಹುದು.

ಒಳಗೊಳ್ಳುವ ಅಂಶಗಳು: ಆರಂಭಿಕವಾಗಿ ಎಷ್ಟು ಹೂಡಿಕೆ ಮಾಡುತ್ತೀರಿ, ನಿರೀಕ್ಷಿತ ಲಾಭಾಂಶ, ಹೂಡಿಕೆ ಅವಧಿ, ಬೆಲೆ ಏರಿಕೆ ಲೆಕ್ಕಾಚಾರ, ಹೆಚ್ಚುವರಿ ಹೂಡಿಕೆ ಹೀಗೆ ಹಲವು ಅಂಶಗಳನ್ನು ಹೂಡಿಕೆ ಕ್ಯಾಲ್ಕ್ಯುಲೇಟರ್‌ ಒಳಗೊಳ್ಳುತ್ತದೆ.

ಉದಾಹರಣೆ ಸಹಿತ ವಿವರಣೆ:

ಮೇಲಿನ 1ನೇ ಪಟ್ಟಿಯಲ್ಲಿರುವಂತೆ ನಿಮ್ಮ ಈಗಿನ ವಯಸ್ಸು 20 ವರ್ಷ ಆಗಿದ್ದು, ನಿಮಗೆ 60 ವರ್ಷ ವಯಸ್ಸಾಗುವವರೆಗೆ ಹೂಡಿಕೆ ಮಾಡುತ್ತೀರಿ ಎಂದು ಭಾವಿಸೋಣ. ಪ್ರತಿ ತಿಂಗಳು ₹ 500 ಹೂಡಿಕೆ ಮಾಡುತ್ತೀರಿ, ವರ್ಷದಿಂದ ವರ್ಷಕ್ಕೆ ಹೂಡಿಕೆ ಮೊತ್ತ ಶೇ 5ರಷ್ಟು ಹೆಚ್ಚಳ ಮಾಡುತ್ತೀರಿ ಎಂದುಕೊಳ್ಳೋಣ. ಅಂದರೆ ಮೊದಲನೇ ವರ್ಷ ₹ 500 ಹೂಡಿಕೆ ಮಾಡಿದರೆ, ಎರಡನೇ
ವರ್ಷ ₹ 525 ಹೂಡಿಕೆ ಮಾಡುತ್ತೀರಿ, ಮೂರನೆಯ ವರ್ಷದಲ್ಲಿ ₹ 525ರ ಶೇ 5ರಷ್ಟನ್ನು ಮತ್ತೆ ಹೆಚ್ಚಳ ಮಾಡಿಕೊಳ್ಳುತ್ತೀರಿ (ಅಂದರೆ, ₹ 551.25) ಎಂದು ತಿಳಿಯೋಣ. ಹೂಡಿಕೆಯು ಇದೇ ರೀತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಸಾಗುತ್ತದೆ. ಇದಕ್ಕೆ ಶೇ 5ರಷ್ಟು ಹಣದುಬ್ಬರ ಲೆಕ್ಕಾಚಾರವನ್ನು ಸೇರಿಸೋಣ. ಹೀಗೆ ಮಾಡಿದಾಗ ಬೇರೆ ಬೇರೆ ಹೂಡಿಕೆಗಳಲ್ಲಿ ಯಾವ ಲಾಭ ಸಿಗುತ್ತದೆ ಎನ್ನುವುದನ್ನು ಲೆಕ್ಕಾಚಾರ ಮಾಡೋಣ.

ಮೇಲಿನ ಹೂಡಿಕೆ ಕ್ಯಾಲ್ಕ್ಯುಲೇಟರ್ 1ನೇ ಪಟ್ಟಿಯಲ್ಲಿರುವ ನಿಯಮಗಳನ್ನು ಒಳಗೊಂಡು ಲೆಕ್ಕಾಚಾರ ಮಾಡಿದಾಗ ಎರಡನೇ ಪಟ್ಟಿಯಲ್ಲಿರುವಂತೆ, 20ನೇ ವರ್ಷದಿಂದ 60 ವರ್ಷ ವಯಸ್ಸಿನವರೆಗೆ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿ ಶೇ 5ರಷ್ಟು ಬಡ್ಡಿ ಲಾಭ ಪಡೆದರೆ ನಿಮ್ಮ ಬಳಿ ₹ 16,82,566 ಹಣವಿರುತ್ತದೆ. ಅದೇ ಅವಧಿಗೆ ಚಿನ್ನದ ಮೇಲೆ ಹೂಡಿಕೆ ಮಾಡಿ ಶೇ 10ರಷ್ಟು ಲಾಭ ಸಿಕ್ಕರೆ ₹ 53,58,116 ನಿಮ್ಮ ಬಳಿ ಇರುತ್ತದೆ. ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಿ ಶೇ 15ರಷ್ಟು ಲಾಭ ಪಡೆದರೆ ₹2,21,58,439 ದೊರಕುತ್ತದೆ. ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಶೇ 20ರಷ್ಟು ಲಾಭ ಸಿಕ್ಕರೆ ₹10,81,61,644 ದಕ್ಕುತ್ತದೆ. ಆದರೆ
ಹಣದುಬ್ಬರವನ್ನು ಪರಿಗಣಿಸಿದಾಗ ನಿಮ್ಮ ಒಟ್ಟು ಹೂಡಿಕೆ ಹಣ ಅರ್ಧದಷ್ಟು ಮೌಲ್ಯ ಕಳೆದುಕೊಳ್ಳುವುದು ಕೂಡ ಕಂಡುಬರುತ್ತದೆ. ಹಾಗಾಗಿ ಹೂಡಿಕೆ ಮಾಡುವಾಗ ಹಣದುಬ್ಬರದ ಅಂದಾಜು ಮಾಡಿಕೊಳ್ಳಬೇಕು.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು