ಗುರುವಾರ , ಫೆಬ್ರವರಿ 20, 2020
29 °C

ಹೂಡಿಕೆಗೆ ಸುಸ್ಥಿರತೆಯ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಯಾವುದೇ ಜವಾಬ್ದಾರಿಯುತ ಹೂಡಿಕೆದಾರನು ಸುಸ್ಥಿರತೆಯ ಬಗ್ಗೆ ಯಾಕೆ ಚಿಂತನೆ ನಡೆಸಬೇಕು ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಚಾರಿತ್ರಿಕವಾಗಿ ಹೇಳುವುದಾದರೆ, ಹಿಂದೆಲ್ಲ ಉದ್ದಿಮೆಯಲ್ಲಿ ದೀರ್ಘಾವಧಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಂಥ ನಿರ್ಧಾರಗಳಿಂದ ಏನೇನು ಪರಿಣಾಮಗಳಾಗಬಹುದು ಎಂಬ ಬಗ್ಗೆ ಅಷ್ಟಾಗಿ ಚಿಂತನೆಗಳು ನಡೆಯುತ್ತಿರಲಿಲ್ಲ. ಬದಲಿಗೆ, ಕಂಪನಿಗಳು ತಮ್ಮ ವೆಚ್ಚದ ಬಗ್ಗೆ ಮಾತ್ರ ಚಿಂತಿಸುತ್ತಿದ್ದವು. ಗ್ರಾಹಕರೂ ಅಷ್ಟೇ, ತಮ್ಮ ಲಾಭದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರೇ ವಿನಾ ಯಾವುದೇ ಉತ್ಪನ್ನದ ತಯಾರಿಕೆಯಿಂದ ಉಂಟಾಗುವ ಇಂಗಾಲದ ಹೆಜ್ಜೆ ಗುರುತು (ಕಾರ್ಬನ್‌ ಫುಟ್‌ಪ್ರಿಂಟ್‌), ಉದ್ದಿಮೆಯು ಹೊರಸೂಸುವ ತ್ಯಾಜ್ಯ ಮುಂತಾದ ವಿಚಾರಗಳ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ.

ಆದರೆ, ಈಗ ಸಮಾಜದ ಚಿಂತನೆಯ ಹಾದಿ ಬದಲಾಗುತ್ತಿದೆ. ಯಾವುದೇ ಸರಕಿನ ತಯಾರಿಕೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಉದ್ದಿಮೆ ಹಾಗೂ ಸಮಾಜದ ಮಧ್ಯೆ ಚರ್ಚೆಗಳು ನಡೆಯುತ್ತವೆ. ಯಾವುದೇ ವಸ್ತುವಿನ ತಯಾರಿಕೆಗೆ ಸಮಾಜ ಹಾಗೂ ಭೂಮಿಯು ತೆರಬೇಕಾದ ಬೆಲೆ ಏನು ಎಂಬ ಬಗ್ಗೆಯೂ ಚಿಂತನೆಗಳು ನಡೆಯುತ್ತವೆ. ಇದರ ಪರಿಣಾಮವಾಗಿ ಗ್ರಾಹಕರು, ಸರ್ಕಾರ, ನಿಯಂತ್ರಣ ಸಂಸ್ಥೆಗಳು, ಷೇರುದಾರರು ಹಾಗೂ ಒಟ್ಟಾರೆ ಸಮಾಜವು ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಳುವಂತಾಗಿದೆ. ಕಂಪನಿಗಳನ್ನು ಹೇಗೆ ಮುನ್ನಡೆಸಲಾಗುತ್ತದೆ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿಜವಾಗಿಯೂ ಗಮನ ಹರಿಸಲಾಗಿದೆಯೇ ಎಂಬುದನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಭಾರತದಲ್ಲೇ ಈ ನಿಟ್ಟಿನಲ್ಲಿ ಆಗಿರುವ ಒಂದೆರಡು ಬೆಳವಣಿಗೆಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಬಹುದಾಗಿದೆ. ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹವಾಗುಣವು ಅಪಾಯಕಾರಿ ಮಟ್ಟಕ್ಕೆ ಕುಸಿದ ಪರಿಣಾಮ ವಾಹನ ಉದ್ದಿಮೆ ಸೇರಿದಂತೆ ಮಾಲಿನ್ಯಕ್ಕೆ ಕಾರಣವಾದ ಕ್ಷೇತ್ರಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕೆಲವು ಮಾಲಿನ್ಯಕಾರಕ ಉದ್ದಿಮೆಗಳ ವಿರುದ್ಧ ಜನರು ಪ್ರತಿಭಟನೆ ನಡೆಸಿದ ಕಾರಣ ಅವುಗಳನ್ನು ಮುಚ್ಚುವುದು ಅನಿವಾರ್ಯವಾಯಿತು.

ಆರೋಗ್ಯದ ಮೇಲೆ ಆಗುವ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಂಡ ಸಮಾಜವು ಸಾವಯವ ಹಾಗೂ ಅಯುರ್ವೇದ ಉತ್ಪನ್ನಗಳತ್ತ ಗಮನಹರಿಸಲು ಆರಂಭಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ಪ್ರವಾಹ ಅಥವಾ ಬೇರೆ ರೀತಿಯ ಅನಾಹುತಗಳು ಸಂಭವಿಸಿ, ಆಸ್ತಿಪಾಸ್ತಿಗೆ ಹಾನಿಯಾಗಿ, ವಿಮೆ ಕಂಪನಿಗಳೂ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಯಿತು.

ಒಟ್ಟಿನಲ್ಲಿ, ಪರಿಸರದ ಬಗೆಗಿನ ಸಮಾಜದ ಧೋರಣೆಯು ನಿರೀಕ್ಷೆಗೂ ವೇಗದಲ್ಲಿ ಬದಲಾಗುತ್ತಿದೆ ಎಂಬುದು ನಿಜ. ಹವಾಮಾನ ಬದಲಾವಣೆ, ಅಸಮಾನತೆ ಹಾಗೂ ಜನಸಂಖ್ಯಾ ಸ್ಫೋಟದಿಂದಾಗಿ ಅನೇಕ ಸವಾಲುಗಳನ್ನು ಎದುರಿಸುವಂತಾಗಿದೆ. ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕಂಪನಿಗಳು ಭವಿಷ್ಯದಲ್ಲಿ ಲಾಭ ಮಾಡಿಕೊಳ್ಳಬಲ್ಲವು. ಈ ವಿಚಾರಗಳನ್ನು ಕಡೆಗಣಿಸುವ ಸಂಸ್ಥೆಗಳು ಹಿಂದೆ ಉಳಿಯುವುದು ಅನಿವಾರ್ಯವಾಗಲಿದೆ. ಅಷ್ಟೇ ಅಲ್ಲ, ಇಂಥವುಗಳು ಸಮಾಜ ಮತ್ತು ಗ್ರಾಹಕರಿಂದ ದೂರ ಉಳಿಯುವುದರ ಜತೆಗೆ ನಿಯಂತ್ರಣ ಪ್ರಾಧಿಕಾರಗಳು ಅಥವಾ ಸರ್ಕಾರದಿಂದ ದಂಡನೆಗೆ ಒಳಗಾಗಲಿವೆ.

ಸುಸ್ಥಿರತೆಯ ಸವಾಲುಗಳನ್ನು ಹೂಡಿಕೆದಾರರು ಎದುರಿಸುವುದು ಹೇಗೆ. ಹೂಡಿಕೆಯಲ್ಲಿರುವ ಅಪಾಯ ಮತ್ತು ಬರಬಹುದಾದ ಆದಾಯಗಳ ನಡುವಣ ಲೆಕ್ಕಾಚಾರವು ಮಾರುಕಟ್ಟೆ ಪಂಡಿತರಿಗೆ ಅರ್ಥವಾಗುವಂಥದ್ದು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಇಷ್ಟೇ ಲೆಕ್ಕಾಚಾರ ಮಾಡಿದರೆ ಸಾಕಾಗುವುದಿಲ್ಲ. ಇವುಗಳ ಜೊತೆಗೆ ಸುಸ್ಥಿರತೆಯ ಬಗ್ಗೆಯೂ ಚಿಂತಿಸಬೇಕಾಗಿದೆ. ಇದು ಒಟ್ಟಾರೆ ಹೂಡಿಕೆಗೆ ಪ್ರಗತಿಪರತೆ ಮತ್ತು ಸಮಗ್ರತೆಯನ್ನು ತಂದುಕೊಡುತ್ತದೆ.

ಮೌಲ್ಯಯುತವಾದ ಉತ್ಪನ್ನಗಳನ್ನು ನೀಡುವುದು ನಿಧಿ ನಿರ್ವಾಹಕರಿಗೆ ( ಫಂಡ್‌ ಮ್ಯಾನೇಜರ್‌) ಸವಾಲಾಗಿ ಪರಿಣಮಿಸಿದೆ. ಸುಸ್ಥಿರವಾಗಿ ನಿರ್ವಹಿಸಿದ ವ್ಯವಹಾರಗಳನ್ನು ಗುರುತಿಸುವುದು, ಪರಿಸರ ಮತ್ತು ಸಾಮಾಜಿಕ ಬದಲಾವಣೆಯ ಅಪಾಯ ಮತ್ತು ಅವಕಾಶಗಳ ಬಗ್ಗೆ ಅರಿತುಕೊಳ್ಳುವುದು ಹಾಗೂ ಕಂಪನಿಯ ನೀತಿ ಮತ್ತು ಆಡಳಿತದಲ್ಲಿ ಅದಕ್ಕೆ ಅನುಗುಣವಾದ ಬದಲಾವಣೆಗಳನ್ನು ಮಾಡುವುದೇ ಇದಕ್ಕಿರುವ ಪರಿಹಾರವಾಗಿದೆ.

ಹೂಡಿಕೆ ವ್ಯವಸ್ಥಾಪಕರು ಪರಿಸರ, ಸಮಾಜ ಮತ್ತು ಆಡಳಿತ (ಇಎಸ್‌ಜಿ) ವ್ಯವಸ್ಥೆಯನ್ನು ಸಮಗ್ರವಾಗಿ ಜಾರಿಮಾಡುತ್ತಾರೆ ಎಂಬುದನ್ನು ‘ಇಎಸ್‌ಜಿ’ ಕಾರ್ಯಸೂಚಿಯು ಖಚಿತಪಡಿಸಿಕೊಳ್ಳುತ್ತದೆ. ಪ್ರತಿಯೊಂದು ಸಂಸ್ಥೆ ಹೇಗೆ ಸುಸ್ಥಿರ ವ್ಯವಸ್ಥೆಗೆ ಹೊಂದಿಕೊಂಡಿದೆ ಅಥವಾ ಈ ವ್ಯವಸ್ಥೆಗೆ ಅದು ಹೇಗೆ ಒಗ್ಗಿಕೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶಕ್ಕಾಗಿ ಈ ಕಾರ್ಯಸೂಚಿಯನ್ನು ಬಳಸಲಾಗುತ್ತದೆ.

‘ಇಎಸ್‌ಜಿ’ ಎಂಬ ಮೂರು ಅಂಶಗಳನ್ನು ವಿಶಾಲ ದೃಷ್ಟಿಯಿಂದ ವಿಶ್ಲೇಷಿಸಲಾಗಿದೆ. ಈ ಒಂದೊಂದು ಅಂಶವೂ ತನ್ನೊಳಗೆ ಇನ್ನೂ ಅನೇಕ ವಿಚಾರಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ‘ಹವಾಮಾನ ಬದಲಾವಣೆ’ ಎಂಬುದು ಪರಿಸರಕ್ಕೆ ಸಂಬಂಧಿಸಿದ ವಿಚಾರ ಎಂಬುದು ಸ್ಪಷ್ಟ. ಆದರೆ, ಪಳೆಯುಳಿಕೆ ಇಂಧನದ ಬಳಕೆಯಿಂದ ಆಗುವ ಮಾಲಿನ್ಯವು ಸಾಮಾಜಿಕ ಪರಿಣಾಮವನ್ನು ಸಹ ಉಂಟುಮಾಡುತ್ತದೆ. ಹವಾಮಾನ ವೈಪರೀತ್ಯವು ಜನಜೀವನದ ಮೇಲೆ ನೇರ ಪರಿಣಾಮ ಉಂಟುಮಾಡುತ್ತಿದೆ. ಸುಸ್ಥಿರತೆಯ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯನ್ನು ನೋಡಿದರೆ, ಜವಾಬ್ದಾರಿಯುತ ಹೂಡಿಕೆ ಹಾಗೂ ‘ಇಎಸ್‌ಜಿ’ ವಿಶ್ಲೇಷಣೆಗಳು ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿವೆ ಎಂಬುದು ಅಚ್ಚರಿಯ ವಿಚಾರವಲ್ಲ.

ಗ್ರಾಹಕರು ಹಾಗೂ ಫಲಾನುಭವಿಗಳನ್ನು ಗಮನದಲ್ಲಿಟ್ಟುಕೊಂಡು, ಹೂಡಿಕೆದಾರರು ‘ಇಎಸ್‌ಜಿ’ ವಿಚಾರವನ್ನು ತಮ್ಮ ಜವಾಬ್ದಾರಿ ಎಂಬಂತೆ ನಿಭಾಯಿಸಿದ್ದಾರೆಯೇ ಎಂಬುದನ್ನು ನಿರ್ಣಯಿಸುವಲ್ಲಿ ಮಾರುಕಟ್ಟೆಯ ಬೇಡಿಕೆ ಹಾಗೂ ನಿಯಂತ್ರಣ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ವಾಸ್ತವದಲ್ಲಿ ಇಎಸ್‌ಜಿ ವಿಶ್ಲೇಷಣೆಯು ದೀರ್ಘಾವಧಿಯ ಕೆಲವು ಕಠಿಣ ವಿಚಾರಗಳನ್ನು ಮೊದಲೇ ಕಂಡುಕೊಳ್ಳಲು ಹೆಚ್ಚುವರಿ ಮಸೂರದ (ಲೆನ್ಸ್‌) ರೂಪದಲ್ಲಿ ಕೆಲಸ ಮಾಡುತ್ತದೆ.

ಒಟ್ಟಿನಲ್ಲಿ, ಹೂಡಿಕೆದಾರರಿಗೆ ಸುಸ್ಥಿರ ಹೂಡಿಕೆಯು ಹೊಸ ಅವಕಾಶಗಳನ್ನು ಕಲ್ಪಿಸುವಂತಾದರೆ ಸಮಾಜದ ದೃಷ್ಟಿಯಿಂದ ಇದು ಹೆಚ್ಚು ವಿಸ್ತಾರ ಮತ್ತು ಮಹತ್ವದ ವಿಚಾರವಾಗಿದೆ. ಆ ಕಾರಣಕ್ಕಾಗಿಯೇ ಜವಾಬ್ದಾರಿಯುತ ಹೂಡಿಕೆದಾರರು ಸುಸ್ಥಿರ ಹಣಕಾಸು ವಿಚಾರದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲೇಬೇಕಾಗಿದೆ.

(ಲೇಖಕ: ಆ್ಯಕ್ಸಿಸ್‌ ಮ್ಯೂಚುವಲ್‌ ಫಂಡ್‌ನ ಸಿಇಒ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು