ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Published : 30 ಡಿಸೆಂಬರ್ 2025, 19:31 IST
Last Updated : 30 ಡಿಸೆಂಬರ್ 2025, 19:31 IST
ಫಾಲೋ ಮಾಡಿ
Comments
ಪ್ರ

ನಾನು 76 ವರ್ಷ ವಯಸ್ಸಿನ ನಿವೃತ್ತ ನೌಕರ. ನನಗೆ ಪ್ರತಿ ತಿಂಗಳು ಪಿಂಚಣಿ ಬರುತ್ತಿದೆ. ನಾನು ಕೇಳಿರುವ ಪ್ರಕಾರ, ಹಿರಿಯ ನಾಗರಿಕರಿಗೆ
ಸಾಮಾನ್ಯವಾಗಿ ಮುಂಗಡ ತೆರಿಗೆ ಪಾವತಿ ಅನ್ವಯಿಸು ವುದಿಲ್ಲ. ಆದರೆ, ನನ್ನ ಆದಾಯದಲ್ಲಿ ಪಿಂಚಣಿಯ ಜೊತೆಗೆ ಷೇರುಗಳ ಮಾರಾಟ, ಮ್ಯೂಚುವಲ್ ಫಂಡ್‌ಗಳ ಮಾರಾಟ ಹಾಗೂ ಬ್ಯಾಂಕ್ ಠೇವಣಿಗಳಿಂದ ಬರುವ ಬಡ್ಡಿ ಆದಾಯವೂ ಸೇರಿವೆ.

ಪ್ರಸ್ತುತ ಆರ್ಥಿಕ ವರ್ಷದಲ್ಲಿ, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಮಾರಾಟದಿಂದ ನನಗೆ ಸುಮಾರು ₹5 ಲಕ್ಷದಷ್ಟು ದೀರ್ಘಾವಧಿ ಬಂಡವಾಳ ಲಾಭ ದೊರೆತಿದೆ. ಬಡ್ಡಿ ಆದಾಯವೂ ಇದೆ. ಈ ಹಂತದಲ್ಲಿ ನನಗೆ ಮುಂಗಡ ತೆರಿಗೆ ಪಾವತಿ ಅನ್ವಯಿಸುತ್ತದೆಯೇ? ಹಿರಿಯ ನಾಗರಿಕರಿಗೆ ಮುಂಗಡ ತೆರಿಗೆ ವಿನಾಯಿತಿ ಪಿಂಚಣಿ ಆದಾಯಕ್ಕಷ್ಟೇ ಸೀಮಿತವೇ? ಷೇರು, ಮ್ಯೂಚುವಲ್ ಫಂಡ್ ಮತ್ತು ಬಡ್ಡಿ ಆದಾಯಕ್ಕೂ ಅನ್ವಯಿಸುತ್ತದೆಯೇ? ಇಂತಹ ಆದಾಯ ಇರುವ ಹಿರಿಯ ನಾಗರಿಕರು ಮುಂಗಡ ತೆರಿಗೆ ಪಾವತಿಸ
ದಿದ್ದಲ್ಲಿ, ಬಡ್ಡಿ ಅಥವಾ ದಂಡ ವಿಧಿಸುವ ಸಾಧ್ಯತೆ ಇದೆಯೇ?

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 207ರ ಪ್ರಕಾರ ಹಿರಿಯ ನಾಗರಿಕರಿಗೆ (60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಿಗೆ) ಮುಂಗಡ ತೆರಿಗೆ ಪಾವತಿಯ ವಿಷಯದಲ್ಲಿ ವಿಶೇಷ ವಿನಾಯಿತಿ ನೀಡಲಾಗಿದೆ. ಈ ನಿಯಮದ ಪ್ರಕಾರ ಯಾವುದೇ ಹಿರಿಯ ನಾಗರಿಕರಿಗೆ ವ್ಯಾಪಾರ ಅಥವಾ ವೃತ್ತಿಯಿಂದ ಆದಾಯವಿಲ್ಲದಿದ್ದರೆ, ಅವರು ಮುಂಗಡ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ನೀವು ಹಿರಿಯ ನಾಗರಿಕ ಆಗಿರುವುದರಿಂದ, ನಿಮ್ಮ ಆದಾಯವು ಮುಖ್ಯವಾಗಿ ಪಿಂಚಣಿ, ಷೇರುಗಳ ಮಾರಾಟದಿಂದ ಉಂಟಾದ ದೀರ್ಘಾವಧಿ ಬಂಡವಾಳ ಲಾಭ, ಮ್ಯೂಚುವಲ್ ಫಂಡ್‌ಗಳ ವಿಲೇವಾರಿಯಿಂದ ದೊರಕುವ ಆದಾಯ ಹಾಗೂ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ಆದಾಯವನ್ನು ಒಳಗೊಂಡಿದೆ. ಇವುಗಳೆಲ್ಲವೂ ವ್ಯಾಪಾರ ಅಥವಾ ವೃತ್ತಿ ಆದಾಯಗಳಲ್ಲ. ಆದ್ದರಿಂದ, ಹಿರಿಯ ನಾಗರಿಕರಿಗೆ ನೀಡಿರುವ ವಿನಾಯಿತಿಯ ಪ್ರಕಾರ ನಿಮಗೆ ಮುಂಗಡ ತೆರಿಗೆ ಪಾವತಿ ಅನಿವಾರ್ಯ
ಎದುರಾಗುವುದಿಲ್ಲ.

ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ – ಮುಂಗಡ ತೆರಿಗೆ ವಿನಾಯಿತಿ ಇದ್ದರೂ, ಅಂತಿಮ ತೆರಿಗೆ ಪಾವತಿ ಜವಾಬ್ದಾರಿ ಇದ್ದೇ ಇದೆ. ಅಂದರೆ, ಆರ್ಥಿಕ ವರ್ಷದ ಅಂತ್ಯದಲ್ಲಿ ನಿಮ್ಮ ಒಟ್ಟು ಆದಾಯದ ಮೇಲೆ ಲೆಕ್ಕ ಹಾಕಿದ ತೆರಿಗೆಯನ್ನು ಆದಾಯ ತೆರಿಗೆ ವಿವರ ಸಲ್ಲಿಸುವಾಗ
ಪಾವತಿಸಬೇಕಾಗುತ್ತದೆ.

ಪ್ರ

ನಾನು 62 ವರ್ಷ ವಯಸ್ಸಿನ, ಪಿಂಚಣಿ ಪಡೆಯುತ್ತಿರುವ ವ್ಯಕ್ತಿ. ನನ್ನ ಆದಾಯದ ಮೂಲಗಳು ಮುಖ್ಯವಾಗಿ ಸರ್ಕಾರಿ ಪಿಂಚಣಿ ಹಾಗೂ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ. ವಿವರ ಸಲ್ಲಿಕೆ ವೇಳೆ ಪಿಂಚಣಿಯ ಮೇಲಿನ ತೆರಿಗೆಯನ್ನು ಸರಿಯಾಗಿ ಲೆಕ್ಕ ಹಾಕಲಾಗಿದ್ದು ಅದಕ್ಕೆ ಸಂಬಂಧಿಸಿದ ತೆರಿಗೆ ಕಡಿತವೂ ಆಗಿದೆ. ಆದರೆ, ಕೆಲವು ಬ್ಯಾಂಕ್ ಠೇವಣಿಗಳ ಬಡ್ಡಿ ಆದಾಯದ ಮೇಲೆ ಮೂಲದಲ್ಲೇ ತೆರಿಗೆ ಕಡಿತ ಆಗಿಲ್ಲ ಮತ್ತು ಈ ಬಡ್ಡಿ ಆದಾಯದ ಒಂದು ಭಾಗವು ನನ್ನ ಆದಾಯ ತೆರಿಗೆ ವಿವರ ಸಲ್ಲಿಸುವ ಸಂದರ್ಭದಲ್ಲಿ ಪರಿಗಣಿಸಲ್ಪಟ್ಟಿಲ್ಲ.

ಈ ಮಾಹಿತಿಯನ್ನು ಈಗ ಗಮನಿಸಿದ್ದು, ಈಗಾಗಲೇ ಸಂಬಂಧಿತ ಆರ್ಥಿಕ ವರ್ಷದ ಆದಾಯ ತೆರಿಗೆ ವಿವರ ಸಲ್ಲಿಸಲಾಗಿದೆ. ಈ ಪರಿಸ್ಥಿತಿಯಲ್ಲಿ, ನಾನು ನನ್ನ ಆದಾಯ ತೆರಿಗೆ ವಿವರವನ್ನು ಸರಿಪಡಿಸಲು ಸಾಧ್ಯವೇ? ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಸರಿಯಾಗಿ ದಾಖಲಿಸಿ, ಬಾಕಿ ಇರುವ ತೆರಿಗೆಯನ್ನು ಪಾವತಿಸುವ ಮೂಲಕ ನನ್ನ ತೆರಿಗೆ ವಿವರ‌‌‌ ಸರಿಪಡಿಸಬಹುದೇ? ಆದಾಯ ತೆರಿಗೆ ವಿವರ ಪರಿಷ್ಕರಣೆಗೆ ಕಾನೂನಿನ ಪ್ರಕಾರ ಇರುವ ಕಾಲಾವಧಿ ಎಷ್ಟು? ಈಗ ಪರಿಷ್ಕೃತ ವಿವರ ಸಲ್ಲಿಸುವಾಗ ನಾನು ಯಾವ ಕ್ರಮಗಳನ್ನು ಪಾಲಿಸಬೇಕು? ಬಾಕಿ ತೆರಿಗೆ ಅಥವಾ ದಂಡವನ್ನು ತಪ್ಪಿಸಲು ಅಥವಾ ಕಡಿಮೆ ಮಾಡಲು ಯಾವುದೇ ವಿಶೇಷ ಮುನ್ನೆಚ್ಚರಿಕೆ ಕ್ರಮಗಳಿವೆಯೇ?

 ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಈಗಾಗಲೇ ಸಲ್ಲಿಸಿರುವ ಆದಾಯ ತೆರಿಗೆ ವಿವರಗಳಲ್ಲಿ ತಪ್ಪುಗಳಿದ್ದಲ್ಲಿ ಅಥವಾ ಆದಾಯ ಘೋಷಿಸಲು ಬಿಟ್ಟುಹೋಗಿದ್ದಲ್ಲಿ ಅದನ್ನು ಪರಿಷ್ಕೃತ ವಿವರ ಸಲ್ಲಿಸುವ ಮೂಲಕ ಸರಿಪಡಿಸುವ ಅವಕಾಶ ಇದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139(5) ಪ್ರಕಾರ, ಸಂಬಂಧಿತ ಆರ್ಥಿಕ ವರ್ಷದ ಅಂತ್ಯದಿಂದ 31 ಡಿಸೆಂಬರ್ ತನಕ ಅಥವಾ ಅಸೆಸ್ಮೆಂಟ್ ಪೂರ್ಣಗೊಳ್ಳುವ ಮೊದಲು, ಪರಿಷ್ಕೃತ ವಿವರ ಸಲ್ಲಿಸಲು ಅವಕಾಶ ಇದೆ. ಉದಾಹರಣೆಗೆ, ಆರ್ಥಿಕ ವರ್ಷ 2024–25ಕ್ಕೆ ಸಂಬಂಧಿಸಿದ ವಿವರವನ್ನು 2025ರ ಡಿಸೆಂಬರ್‌ 31ರವರೆಗೆ ಪರಿಷ್ಕರಿಸಬಹುದು.

ನಿಮ್ಮ ವಿಚಾರದಲ್ಲಿ, ಬ್ಯಾಂಕ್ ಠೇವಣಿಗಳ ಬಡ್ಡಿ ಆದಾಯದ ಒಂದು ಭಾಗ ವಿವರದಲ್ಲಿ ಘೋಷಣೆ ಆಗದಿದ್ದರೆ, ಅದನ್ನು ಪರಿಷ್ಕೃತ ವಿವರದಲ್ಲಿ ಸೇರಿಸಿ ಸರಿಯಾದ ಒಟ್ಟು ಆದಾಯವನ್ನು ಮತ್ತೆ ಘೋಷಿಸಿ. ಅದಕ್ಕೆ ಅನುಗುಣವಾಗಿ ಬಾಕಿ ಇರುವ ತೆರಿಗೆಯನ್ನು ಲೆಕ್ಕ ಹಾಕಿ ಪರಿಷ್ಕೃತ ವಿವರದಲ್ಲಿ ಸಲ್ಲಿಸಿ. ಸ್ವಯಂಪ್ರೇರಿತವಾಗಿ ತಪ್ಪನ್ನು ತಿದ್ದುಪಡಿ ಮಾಡಿ ತೆರಿಗೆಯನ್ನು ಪಾವತಿಸಿದಲ್ಲಿ ಸಾಮಾನ್ಯವಾಗಿ ದಂಡದ ಸಮಸ್ಯೆ ಎದುರಾಗುವುದಿಲ್ಲ. ಮುಂದಿನ ವರ್ಷ ಮುನ್ನೆಚ್ಚರಿಕೆಯ ಕ್ರಮವಾಗಿ, ಫಾರಂ 26ಎ ಎಸ್ ಮತ್ತು ಎಐಎಸ್ ಅನ್ನು ಪರಿಶೀಲಿಸಿ, ಟಿಡಿಎಸ್ ಆಗಿರದ ಆದಾಯವೂ ಸೇರಿ ಎಲ್ಲಾ ಆದಾಯಗಳು ವಿವರದಲ್ಲಿ ಸರಿಯಾಗಿ ಒಳಗೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಒಟ್ಟಿನಲ್ಲಿ, ನೀವು ಪರಿಷ್ಕೃತ ವಿವರ ಸಲ್ಲಿಸುವ ಮೂಲಕ ನಿಮ್ಮ ತೆರಿಗೆ ಮಾಹಿತಿಯನ್ನು ಕಾನೂನಿನ ಚೌಕಟ್ಟಿನೊಳಗೆ ಸರಿಪಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT