ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ ಅಂಕಣ: ಮ್ಯೂಚುವಲ್ ಫಂಡ್‌ ಬಗ್ಗೆ ಮಾಹಿತಿ

Published 11 ಜೂನ್ 2024, 23:44 IST
Last Updated 11 ಜೂನ್ 2024, 23:44 IST
ಅಕ್ಷರ ಗಾತ್ರ

ಮಂಜುನಾಥ ಜೆ., ಚಿತ್ರದುರ್ಗ.

ಪ್ರ

ನಾನು ಸರ್ಕಾರಿ ನೌಕರ. ವಯಸ್ಸು 30 ವರ್ಷ. ಸೇವೆಗೆ ಸೇರಿ 4 ವರ್ಷವಾಗಿದೆ. ನಾನು ಮ್ಯೂಚುವಲ್ ಫಂಡ್‌ನಲ್ಲಿ ಪ್ರತಿ ತಿಂಗಳು ₹5,000ದ ವರೆಗೆ 15ರಿಂದ 20 ವರ್ಷಗಳ ಕಾಲ ಹೂಡಿಕೆ ಮಾಡುವ ಯೋಜನೆ ಇದೆ. ನನಗೆ ಉತ್ತಮ ಆದಾಯ ಸಿಗಬಹುದಾದ ಉಳಿತಾಯ ಯೋಜನೆಯ ಬಗ್ಗೆ ಸಲಹೆ ನೀಡಿ.

ನಿಮ್ಮ ಹೂಡಿಕೆಯ ವಿಚಾರಕ್ಕೆ ಸಂಬಂಧಪಟ್ಟು ಅನೇಕ ಅವಕಾಶಗಳಿವೆ. ಅಲ್ಲದೆ, ಹೂಡಿಕೆಯ ಅವಧಿ ದೀರ್ಘವಾದಂತೆ ಸಿಗುವ ಆದಾಯ ಅಥವಾ ಗಳಿಕೆ ಉತ್ತಮವಾಗುತ್ತದೆ. ನಿಮ್ಮ ಸೇವಾವಧಿಯಲ್ಲಿ ಇನ್ನೂ ಮುಂದಿನ 30 ವರ್ಷಗಳ ಕಾಲ ಸುದೀರ್ಘ ಹೂಡಿಕೆಗೆ ಅವಕಾಶ ಇದೆ. ನೀವು ಅಂದಾಜಿಸಿದಂತೆ 20 ವರ್ಷಗಳ ಕಾಲ ನಿರಂತರ ಹೂಡಿಕೆ ಮಾಡಿದಾಗ ನಿಮ್ಮ ಹೂಡಿಕೆಯ ಅಸಲು ಮೊತ್ತ ಸುಮಾರು ₹12 ಲಕ್ಷ ಆಗಿರುತ್ತದೆ. ಯಾವುದೇ ಆರ್ಥಿಕ ಅಪಾಯ ಇಲ್ಲದ ರೆಕರಿಂಗ್ ಡೆಪಾಸಿಟ್‌ನಲ್ಲಿ ಇದೇ ಮೊತ್ತವನ್ನು ಪ್ರತಿ ತಿಂಗಳೂ ಹೂಡಿಕೆ ಮಾಡಿದರೆ ಇಪ್ಪತ್ತು ವರ್ಷಗಳ ಕೊನೆಗೆ ಅಂದಾಜು ₹29 ಲಕ್ಷ ಸಿಗುತ್ತದೆ. 

ಆದರೆ, ಇದೇ ಮೊತ್ತವನ್ನು ಈಕ್ವಿಟಿ ವಿಭಾಗದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ಷೇರು ಮಾರುಕಟ್ಟೆ ಏರಿಳಿತಕ್ಕೆ ಅನುಗುಣವಾಗಿ ಮೌಲ್ಯ ವರ್ಧಿಸುತ್ತದೆ. ಉದಾಹರಣೆಗೆ ಮುಂದಿನ 20 ವರ್ಷಗಳ ಹೂಡಿಕೆ ಅವಧಿಯಲ್ಲಿ ಪ್ರತಿವರ್ಷ ವಾರ್ಷಿಕವಾಗಿ ಸರಾಸರಿ ಶೇ 10, 15, 20, 25 ವೃದ್ಧಿಯಾದರೆ ನಿಮ್ಮ ₹12 ಲಕ್ಷದ ಹೂಡಿಕೆಯ ಅಂದಾಜು ಮೌಲ್ಯವು ಕ್ರಮವಾಗಿ ₹38 ಲಕ್ಷ, ₹75 ಲಕ್ಷ , ₹1.58 ಕೋಟಿ ಹಾಗೂ ₹3.43 ಕೋಟಿ ಆಗುತ್ತದೆ.

ಈಕ್ವಿಟಿ ಲಾರ್ಜ್ ಕ್ಯಾಪ್, ಈಕ್ವಿಟಿ ಬ್ಯಾಲನ್ಸ್ಡ್, ಈಕ್ವಿಟಿ ಫ್ಲೆಕ್ಸಿ ಕ್ಯಾಪ್, ಈಕ್ವಿಟಿ ಸೇವಿಂಗ್ಸ್ ಇತ್ಯಾದಿ ವಿಭಾಗದ ಫಂಡ್‌ಗಳನ್ನು ಆಯ್ಕೆ ಮಾಡಿ. ಇವುಗಳ ಆರ್ಥಿಕ ಅಪಾಯದ ಗುಣಾಂಶ ಒಂದರಿಂದ ಒಂದಕ್ಕೆ ವ್ಯತ್ಯಾಸ ಇರುತ್ತದೆ. ಅದಕ್ಕೆ ಅನುಗುಣವಾಗಿ ಸಿಗುವ ಲಾಭವೂ ವ್ಯತ್ಯಾಸವಾಗುತ್ತದೆ. ನೀವು ನಿಖರವಾದ ಫಂಡ್‌ಗಳ ಆಯ್ಕೆಗೆ ಪರಿಣತ ಫಂಡ್ ಸಲಹೆಗಾರರನ್ನು ಸಂಪರ್ಕಿಸಿ. ಇದಲ್ಲದೆ ಗೋಲ್ಡ್ ಫಂಡ್‌ಗಳಲ್ಲೂ ಹೂಡಿಕೆ ಮಾಡಬಹುದು. ಪ್ರತಿವರ್ಷ ಆದಾಯ ಹೆಚ್ಚಿದಂತೆ ಶೇ 10ರಂತೆ ನಿಮ್ಮ ಹೂಡಿಕೆ ಮೊತ್ತವನ್ನು ಹೆಚ್ಚಿಸಿ ಮತ್ತಷ್ಟು ಮೌಲ್ಯ ವೃದ್ಧಿಸಬಹುದು.  

ನಿಮಗೆ ನಿರಂತರ ಹೂಡಿಕೆ ಮಾಡುವ ಯೋಜನೆ ಇದ್ದರೆ, ಷೇರುಪೇಟೆಯಲ್ಲೂ ಉತ್ತಮ ಕಂಪನಿಗಳ ಷೇರುಗಳಲ್ಲಿ ನಿಗದಿತ ಮೊತ್ತ ನಿರಂತರ ಹೂಡಿಕೆ ಮಾಡಬಹುದು. ಇಂತಹ ಷೇರುಗಳನ್ನು ಆಯ್ಕೆ ಮಾಡುವ ಮುನ್ನ ಉತ್ತಮ ಆಡಳಿತ, ಏರುತ್ತಿರುವ ವ್ಯವಹಾರ ಹಾಗೂ ಲಾಭ, ಮುಂದಿನ ವರ್ಷಗಳ ದೀರ್ಘ ಯೋಜನೆ ಇರುವ ಕಂಪನಿಗಳಿಗೆ ಪ್ರಾಶಸ್ತ್ಯ ಕೊಡಿ. ನಿಮ್ಮ ಆರ್ಥಿಕ ಚೌಕಟ್ಟು ಮೀರಿ ವ್ಯವಹರಿಸದಿರಿ ಮತ್ತು ದೀರ್ಘಕಾಲದ ಹೂಡಿಕೆ ಮೇಲೆ ಭರವಸೆ ಕಳೆದುಕೊಳ್ಳಬೇಡಿ.

ಸಿದ್ದರಾಮ ಇಕ್ಕಳಕಿ, ಕಲಬುರಗಿ.  

ಪ್ರ

ಕಳೆದ ಒಂದು ವರ್ಷದಿಂದ ನಾನು ಮತ್ತು ನನ್ನ 20  ಗೆಳೆಯರು ಸೇರಿ ಒಂದು ಒಪ್ಪಂದದ ಅನ್ವಯ ಪ್ರತಿ ತಿಂಗಳು ಪ್ರತಿಯೊಬ್ಬರು ₹5,000 ಪಾವತಿಸಿ, ಒಟ್ಟಾಗಿ ₹1 ಲಕ್ಷ  ಕೂಡಿಸಿಕೊಂಡು ತಿಂಗಳಿಗೊಮ್ಮೆ ಯಾರಿಗೆ ಅವಶ್ಯಕತೆ ಇರುತ್ತದೆಯೋ ಅವರಿಗೆ ಕೊಡುತ್ತಾ ಇದ್ದೇವೆ. ನಾವು ಎಲ್ಲ ಸ್ನೇಹಿತರು ಬೇರೆ ಬೇರೆ ಊರುಗಳಲ್ಲಿ ಇರುವುದರಿಂದ ಹಣದ ವಹಿವಾಟು ಯುಪಿಐ ಮೂಲಕ ಪ್ರತಿ ತಿಂಗಳು ನನ್ನ ವೈಯಕ್ತಿಕ ಬ್ಯಾ೦ಕ್ ಉಳಿತಾಯ ಖಾತೆಗೆ ಜಮಾ ಮಾಡಿ ಹಾಗೆ ಅದೇ ಖಾತೆಯಿಂದ ಯುಪಿಐ ಮೂಲಕ ಅವಶ್ಯಕತೆ ಇರುವ ಸ್ನೇಹಿತರಿಗೆ ವರ್ಗಾಯಿಸುತ್ತಿದ್ದೇನೆ. ಈ ಕಾರಣ ನನ್ನ ಖಾತೆಯಲ್ಲಿ ಪ್ರತಿ ತಿಂಗಳು ₹2 ಲಕ್ಷ ಯುಪಿಐ ಮೂಲಕ ವ್ಯವಹಾರ ನಡೆಯುತ್ತಿದೆ. ಇದರಿಂದ ನನಗೆ ಮುಂದೆ ತೆರಿಗೆ ಇಲಾಖೆಯಿಂದ ಏನಾದರೂ ತೆರಿಗೆ ಸಂಬಂಧಿತ ಸಮಸ್ಯೆ ಬರಬಹುದಾ? ಪ್ರಸ್ತುತ ನಾನು ಯಾವುದೇ ಉದ್ಯೋಗ ಮಾಡುತ್ತಿಲ್ಲ.

ಉತ್ತರ: ನೀವು ನೀಡಿರುವ ಮಾಹಿತಿಯಂತೆ ನಿಮ್ಮ ಆರ್ಥಿಕ ವ್ಯವಹಾರ ಬಹುತೇಕ ಚಿಟ್ ಫಂಡ್ ವ್ಯವಹಾರದಂತೆ ಕಂಡು ಬರುತ್ತಿದೆ. ಇಂತಹ ವ್ಯವಹಾರವನ್ನು ಕಾನೂನಿನ ಅನ್ವಯ ನಿಯಂತ್ರಿಸಲಾಗುತ್ತದೆ. ಭಾರತದಲ್ಲಿ ಚಿಟ್ ಫಂಡ್ ನಿಯಮ ಜಾರಿಯಲ್ಲಿದ್ದು, ಇದಕ್ಕೆ ಸಂಬಂಧಿತ ಕಾಯ್ದೆಗಳನ್ನು ರಾಜ್ಯ ಸರ್ಕಾರಗಳು ರಿಜಿಸ್ಟ್ರಾರ್ ಅನ್ನು ನೇಮಿಸಿ ನಿಯಂತ್ರಿಸುತ್ತವೆ. ಈ ಸಂಬಂಧ ಅವರಿಂದ ಅಗತ್ಯವುಳ್ಳ ನೋಂದಣಿ ಪಡೆದು ಲೆಕ್ಕ ಪತ್ರಗಳನ್ನೂ ನಿಭಾಯಿಸಬೇಕಾಗುತ್ತದೆ. ಇದರ ಭಾಗವಾಗಿ ಸಂಸ್ಥೆಯ ಹೆಸರಲ್ಲಿ ಅಗತ್ಯ ದಾಖಲೆಗಳೊಡನೆ ಮಾನ್ಯತೆ ಪಡೆದ ಬ್ಯಾಂಕ್‌ಗಳ ಮೂಲಕ ವ್ಯವಹರಿಸುವುದು ಸೂಕ್ತ.

ಯಾವುದೇ ಸಂದರ್ಭದಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾಗುವ ಇಂತಹ ವ್ಯವಹಾರಗಳು ಮುಂದೆ ದೊಡ್ಡ ಮಟ್ಟಕ್ಕೆ ನಿಧಾನವಾಗಿ ವರ್ಧಿಸುತ್ತವೆ. ಆಗ ಸಮಸ್ಯೆ ಆರಂಭವಾಗುತ್ತದೆ. ಹೀಗಾಗಿ ಇಂತಹ ವ್ಯವಹಾರಗಳನ್ನು ಸಾರ್ವಜನಿಕರೊಂದಿಗೆ ಮಾಡುವಾಗ ವೈಯಕ್ತಿಕ ಬ್ಯಾಂಕ್ ಖಾತೆ ಬಳಸಿ ಮಾಡುವ ಬದಲು, ಅಧಿಕೃತ ಮಾನ್ಯತೆ ಪಡೆದು ನಿಮ್ಮ ಆಡಳಿತ ನಿಯಮದ ಭಾಗವಾಗಿ ಸಂಸ್ಥೆಯ ಹೆಸರಲ್ಲೇ ಖಾತೆ ತೆರೆದು ವ್ಯವಹರಿಸಿ. ಇದು ವ್ಯವಹಾರದಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಡುತ್ತದೆ.  

ಇನ್ನು ನಿಮ್ಮ ಆದಾಯ ತೆರಿಗೆಗೆ ಸಂಬಂಧಿಸಿದ ವಿಚಾರವಾಗಿ ಹೇಳುವುದಾದರೆ, ನೀವು ಪ್ರತಿ ತಿಂಗಳೂ ₹2 ಲಕ್ಷ ಮೊತ್ತ ಸಂಗ್ರಹಿಸುತ್ತಿದ್ದೀರಿ. ಇದು ವಾರ್ಷಿಕವಾಗಿ ₹24 ಲಕ್ಷ. ಕ್ರಮೇಣ ಈ ಮೊತ್ತವನ್ನು ನಿಮ್ಮ ಸಂಸ್ಥೆಯ ಹೆಸರಲ್ಲೇ ಬ್ಯಾಂಕ್ ಖಾತೆ ತೆರೆದು ವ್ಯವಹರಿಸಿ. ವೈಯಕ್ತಿಕ ವ್ಯವಹಾರವನ್ನು ಸಂಸ್ಥೆಯ ಆರ್ಥಿಕ ವ್ಯವಹಾರದೊಡನೆ ಬೆರೆಸುವುದು ನಿಮಗೂ- ಸಂಸ್ಥೆಗೂ ಸಮಸ್ಯೆಯಾಗಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ನಿಮಗೆ ಬಂದ ಮೊತ್ತವನ್ನು ‘ನಿಮ್ಮ ಆದಾಯ’ ಎಂದು ಯಾಕೆ ಪರಿಗಣಿಸಬಾರದು ಎಂದು ಆದಾಯ ತೆರಿಗೆ ಇಲಾಖೆ ಪ್ರಶ್ನಿಸಿದರೆ ಅದಕ್ಕೆ ಸಮರ್ಪಕ ಉತ್ತರ ನೀಡಲು ಸಾಕಷ್ಟು ಸಮಜಾಯಿಷಿ ನೀಡಬೇಕಾಗುತ್ತದೆ. 

ಪ್ರಸ್ತುತ ನೀವು ಯಾವುದೇ ಉದ್ಯೋಗ ಹೊಂದಿರದಿದ್ದರೂ, ನಿಮ್ಮ ವೈಯಕ್ತಿಕ ಖಾತೆಯಲ್ಲಿ ವ್ಯವಹಾರವಾಗುತ್ತಿರುವ ಕಾರಣ ತೆರಿಗೆ ಇಲಾಖೆಯಿಂದ ನೋಟಿಸ್ ಬರದಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT