ಮಂಗಳವಾರ, ಮಾರ್ಚ್ 31, 2020
19 °C

ಎಲೆ ಹಚ್ಚುವ ಕಿರು ಉದ್ಯಮ!

ಮಾಲತಿ ಹೆಗಡೆ Updated:

ಅಕ್ಷರ ಗಾತ್ರ : | |

Deccan Herald

ವಸಂತಮಾಸದಲ್ಲಿ ಮುತ್ತುಗದ ಎಲೆ ಚಿಗುರುತ್ತಿದ್ದರೆ, ಧಾರವಾಡದ ಸಮೀಪದ ದೇವರ ಹುಬ್ಬಳ್ಳಿಯಲ್ಲಿರುವ ಕೆಲ ಮಹಿಳೆಯರ ಕಣ್ಣೆಲ್ಲ ಚಿಗುರುವ ಎಲೆಯ ಮೇಲಿರುತ್ತದೆ. ಅರೆ, ಮುತ್ತುಗದ ಗಿಡ ಚಿಗುರುವುದಕ್ಕೂ, ಮಹಿಳೆಯರಿಗೂ ಏನು ಸಂಬಂಧ... ಹೀಗೆ ಪ್ರಶ್ನೆ ಹಾಕಿಕೊಂಡು ಹುಡುಕಿ ಹೊರಟರೆ, ಆ ಊರಿನ ಮಹಿಳೆಯರೇ ನಿರ್ವಹಿಸುವ ‘ಪತ್ರಾವಳಿ’ ಎಂಬ ಎಲೆ ಹಚ್ಚುವ ಪರಿಸರ ಸ್ನೇಹಿ ಕಿರು ಉದ್ಯಮವೊಂದು ತೆರೆದುಕೊಳ್ಳುತ್ತದೆ. ಪ್ಲಾಸ್ಟಿಕ್ ತಟ್ಟೆಗಳ ಅಬ್ಬರದ ಈ ದಿನಗಳಲ್ಲೂ, ಎಲೆ ಹಚ್ಚುವಂತಹ ಕಾಯಕವನ್ನು ಗ್ರಾಮದ ಭೂರಹಿತ ಮಹಿಳೆಯರು ಪುಟ್ಟ ಉದ್ಯಮವನ್ನಾಗಿಸಿಕೊಂಡಿದ್ದಾರೆ.

ದೇವರ ಹುಬ್ಬಳ್ಳಿಯಲ್ಲಿ ಆರು ನೂರು ಮನೆಗಳಿವೆ ಅವುಗಳಲ್ಲಿ ಸುಮಾರು ಮುನ್ನೂರು ಮನೆಗಳಲ್ಲಿ ಈ ಎಲೆ ಹಚ್ಚುವ ಪ್ರಕ್ರಿಯೆ ಕಾಯಂ ಆಗಿರುತ್ತದೆ. ಅದಕ್ಕೆ ಕಾರಣವೂ ಇದೆ. ಈ ಹಳ್ಳಿಯಲ್ಲಿ ಹೆಚ್ಚು ಕೃಷಿ ಕೂಲಿ ಕಾರ್ಮಿಕರಿದ್ದಾರೆ. ವರ್ಷವಿಡೀ ಕೂಲಿ ಕೆಲಸ ಸಿಗುವುದು ಕಷ್ಟ. ಅಂಥ ಪರಿಸ್ಥಿತಿಯಲ್ಲಿ ‘ಒಂದಿಷ್ಟು ಆದಾಯ ತಂದುಕೊಡುತ್ತದೆ’ ಎಂಬ ಕಾರಣಕ್ಕೆ ಈ ಎಲೆ ಹಚ್ಚುವ ಪತ್ರಾವಳಿ ವೃತ್ತಿಗೆ ಕಟ್ಟುಬಿದ್ದಿದ್ದಾರೆ. ‘ಮನ್ಯಾಗ ಒಣಗಿದ ಮುತ್ತುಗದೆಲೆ ಇತ್ತಂದ್ರ ನಮಗ ರೊಕ್ಕಿದ್ದಂಗರಿ. ಬಿಡುವಾದಾಗ ಹಚ್ಚಿದರ ಸಾಕು… ವಾರದಾಗ ಎರಡ ಸಲಾ ನಮ್ಮೂರಿಗೇ ಬಂದು ಖರೀದಿ ಮಾಡುವ ಹುಬ್ಬಳ್ಳಿಯ ವ್ಯಾಪಾರಿಗಳಿಗೆ ಹಾಕಿ ರೊಕ್ಕಾ ಗಳಿಸಿಕೊಳ್ಳಬಹುದು’ ಎನ್ನುತ್ತಾರೆ ಅಲ್ಲಿಯ ಮಹಿಳೆಯರು.

ಎಲೆ ಸಂಗ್ರಹಿಸುವ ಸಂಕಷ್ಟ
ಮಹಿಳೆಯರು ಬೇಸಿಗೆಯಲ್ಲಿ ಗುಡ್ಡ ಬೆಟ್ಟ ಕಾಡುಗಳಲ್ಲಿ ಅಲೆಯುತ್ತಾ ಮುತ್ತುಗದ ಎಲೆಗಳನ್ನು ಸಂಗ್ರಹಿಸುತ್ತಾರೆ. ಕಲಘಟಗಿ, ಆಸಘಟ್ಟ, ತಡಸ ತಾವರಗೇರಿ, ಮುಂಡಗೋಡು, ನೀರಸಾಗರ ಸೇರಿದಂತೆ ಬೇರೆ ಬೇರೆ ಹಳ್ಳಿಗಳಿಂದಲೂ ಎಲೆಗಳನ್ನು ಸಂಗ್ರಹಿಸುತ್ತಾರೆ. ಜಾತ್ರೆ, ಮದುವೆಗಳಿಗೆ ತೆರಳಿದಾಗಲೂ ಇವರ ಕಣ್ಣುಗಳು ಸದಾ ಮುತ್ತುಗದ ಎಲೆಗಳನ್ನರಸುತ್ತಲೇ ಇರುತ್ತವೆ. ತಮ್ಮ ಬಳಿ ಯಾವಾಗಲೂ ಹಳೆಯದೊಂದು ಕತ್ತರಿಸಿದ ಸೀರೆ ಇಟ್ಟುಕೊಂಡಿರುತ್ತಾರೆ. ಎಲ್ಲಾದರೂ ಮುತ್ತುಗದ ಮರ ಕಂಡರೆ ಮೂರು ಎಲೆಗಳಿರುವಂತೆ ಎಲೆಗಳನ್ನು ಕಿತ್ತು ನೀಟಾಗಿ ಸೀರೆಯ ಮೇಲೆ ಜೋಡಿಸಿ ಗಂಟು ಕಟ್ಟಿಯೇ ಹೊರಡುತ್ತಾರೆ.

‘ಎಲೆ ಸಂಗ್ರಹಿಸುವ ಧಾವಂತದಲ್ಲಿ ಮುಳ್ಳು ತರಚುತ್ತದೆ. ಒಮ್ಮೊಮ್ಮೆ ಬಿದ್ದು ಗಾಯಗಳಾಗುತ್ತವೆ. ಹಾವು ಚೇಳಿನ ಕಡಿತಕ್ಕೊಳಗಾಗಿದ್ದೂ ಇದೆ’ ಎನ್ನುವ ಮಹಿಳೆಯರು, ಕಷ್ಟಕ್ಕಂಜಿ ಈ ಕಾಯಕದಿಂದ ಹಿಂದೆ ಸರಿದಿಲ್ಲ. ಸಂದರ್ಭ ಬಂದರೆ, ಮರವನ್ನೇರಿಯೂ ಎಲೆ ಬಿಡಿಸಿಕೊಳ್ಳುವಂತಹ ನೈಪುಣ್ಯವಿದೆ ಅವರಲ್ಲಿ. 

ಎಲೆ ಹಚ್ಚುವವರ ಬದುಕು
ದೇವರಹುಬ್ಬಳ್ಳಿಯಲ್ಲಿಯೇ ಹುಟ್ಟಿ ಬೆಳೆದ ರೇಣುಕಾ, ಮನೆಯಲ್ಲಿದ್ದ ಮಹಿಳೆಯರು ಎಲೆ ಹಚ್ಚುತ್ತಿದ್ದನ್ನು ನೋಡಿ ಆ ಕೆಲಸ ಕಲಿತರು. ಹತ್ತು ವರ್ಷದಿಂದಲೇ ಎಲೆ ಹಚ್ಚಲು ಆರಂಭಿಸಿದರು. ‘ಮದುವೆಯಾದ ನಂತರ ಭೂರಹಿತ ಕುಟುಂಬಕ್ಕೆ ಸೇರಿದೆ. ಎಲೆ ಹಚ್ಚುವ ಕೌಶಲ ಬದುಕಿಗೆ ಆಧಾರವಾಯಿತು’ ಎನ್ನುತ್ತಾರೆ ಅವರು. ‘ಚಿಕ್ಕವರಿದ್ದಾಗ ರೂಪಾಯಿಗೊಂದು ಕಟ್ಟು ಇತ್ತು. ಈಗ ನೂರು ರೂಪಾಯಿಗೆ ಮಾರುತ್ತಿದ್ದೇವೆ. ಆದರೂ ನಮ್ಮ ಜೀವನ ಮಟ್ಟ ಸುಧಾರಿಸಿಲ್ಲ. ಎಲೆ ಹಚ್ಚುವ ಶ್ರಮಕ್ಕೆ ನೂರು ರೂಪಾಯಿ ಕಡಿಮೆಯೇ. ಆದರೆ ಇದನ್ನು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಎಲೆಗಳನ್ನು ಸಂಗ್ರಹಿಸುವುದಕ್ಕಾಗಿ ಓಡಾಡುವ ಖರ್ಚೇ ಖರ್ಚು. ಚೆನ್ನಾಗಿ ಒಣಗಿಸಿದ ಎಲೆ ಒಂದು ವರ್ಷದವರೆಗೂ ಕೆಡುವುದಿಲ್ಲ. ಬಿಡುವಿದ್ದಾಗ ಎಲೆ ಹಚ್ಚಿಗಳಿಸಬಹುದು. ಇದೇ ಕಾರಣಕ್ಕೆ ನಾನು ವೃತ್ತಿ ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ ರೇಣುಕಾ. ‘ಎರಡು ವರ್ಷಗಳ ಹಿಂದೆ ಕೂಲಿಗೆಂದು ಪರ ಊರಿಗೆ ಹೋದ ಪತಿ ಹಿಂತಿರುಗಿಲ್ಲ. ನಾಲ್ಕು ಮಕ್ಕಳ ವಿದ್ಯಾಭ್ಯಾಸ ಮಾಡಿಸಲು, ಹೊಟ್ಟೆ ತುಂಬಿಸಿಕೊಳ್ಳಲು ಎಲೆ ಹಚ್ಚುವ ಕಾಯಕ ನೆರವಾಗಿದೆ’ ಎನ್ನುತ್ತಾ ಕಣ್ಣೀರೊರೆಸಿಕೊಳ್ಳುತ್ತಾರೆ ಅವರು.

ಗಂಡ, ಮಗನನ್ನು ಕಳೆದುಕೊಂಡು ಕಡು ಕಷ್ಟದಲ್ಲಿ ಬದುಕುತ್ತಿರುವ ವೃದ್ಧೆ ಭೀಮವ್ವ ‘ಸರ್ಕಾರದವರು ರೇಷನ್ ಕೊಡ್ತಾರೆ. ಉಪ್ಪು, ಹುಣಸೆಹಣ್ಣು ಖರ್ಚಿಗೆ ಎಲೆ ಹಚ್ಚಿದ್ದೇ ರೊಕ್ಕಾ. ಚಕ್ಕಳಾಮಕ್ಕಳಾ ಹಾಕಿ ಒಂದೇ ರೀತಿ ಕುಂತ ಎಲಿ ಹಚ್ಚೋದು ತ್ರಾಸಾಗ್ತದ. ಕೂಲಿ ಕೆಲ್ಸಾ ಮಾಡಾಕ ಶಕ್ತಿ ಸಾಲಂಗಿಲ್ಲ. ಎಲಿ ಹಚ್ಚೋ ಕೆಲ್ಸಾನೇ ನನಗ ಆಧಾರ’ ಎಂದು ನಿಟ್ಟುಸಿರಿಡುತ್ತಾರೆ.

ಉತ್ತಮ ಸಂಪಾದನೆ
ಆಬಾಲವೃದ್ಧರಾದಿಯಾಗಿ ಊರಿನೆಲ್ಲ ಹೆಣ್ಣುಮಕ್ಕಳಿಗೆ ಮುತ್ತುಗದೆಲೆ ತಯಾರಿಸುವ ಕೌಶಲ ಸಿದ್ಧಿಸಿದೆ. ‘ನಮ್ಮೂರಿನ್ಯಾಗ ವರ್ಷಕ್ಕೆ ಒಂದೊಂದು ಮನೆಯವರು ₹ 10 ಸಾವಿರದಿಂದ ₹30 ಸಾವಿರವರೆಗೂ ಊಟದೆಲೆಯಿಂದಲೇ ಸಂಪಾದನೆ ಮಾಡುತ್ತಾರೆ. ಆ ಹಣದಲ್ಲಿ ಮಕ್ಕಳನ್ನು ಓದಿಸಿದ್ದಾರೆ. ಮದುವೆ ಮಾಡಿದವರಿದ್ದಾರೆ ಮನೆ ಕಟ್ಟಿದವರಿದ್ದಾರೆ. ‘ವಾರ್ಷಿಕವಾಗಿ ಇಲ್ಲಿಂದ ಸುಮಾರು ₹20 ಲಕ್ಷ ಮೌಲ್ಯದ ಎಲೆಗಳು ಮಾರಾಟ ಆಗಬಹುದು’ ಎನ್ನುತ್ತಾರೆ ಯಲ್ಲಮ್ಮ. ‘ಕೂಲಿ ಸಿಕ್ಕರೂ ನೂರೈವತ್ತು ರೂಪಾಯಿ ಸಂಬಳ ಸಿಗುವುದು ಸಿಗದಿದ್ದಾಗಲೂ ಮುತ್ತುಗದೆಲೆ ಸಂಗ್ರಹ ಮಾಡಿಕೊಂಡರೆ ಮನೆಯಲ್ಲಿ ಕುಳಿತು ದಿನಕ್ಕೆ ಎರಡು ಕಟ್ಟು ಎಲೆ ಹಚ್ಚಿದರೆ ಅದಕ್ಕಿಂತ ಹೆಚ್ಚು ಗಳಿಸಬಹುದು’ ಎನ್ನುತ್ತಾರೆ ಅಕ್ಕವ್ವ ಬಸವ್ವ.  ಸ್ವಸಹಾಯ ಸಂಘಕ್ಕೆ ಕಟ್ಟುವ ಹಣ, ಸಾಲದ ಕಂತು ಕಟ್ಟುವುದಕ್ಕೆ ಬೇಕಾದ ಹಣ ಜೋಡಿಸಲು ಈ ಗಳಿಕೆ ನೆರವಾಗುತ್ತದೆ ಎನ್ನುತ್ತಾರೆ ಅವರು.

ಮೂವತ್ತು ವರ್ಷಗಳಿಂದ ಈ ಊರಿಗೆ ನಿರಂತರವಾಗಿ ಎಲೆಗಳನ್ನು ಖರೀದಿಸಲು ಬರುವ ವ್ಯಾಪಾರಿಗಳು, ಎಲೆ ಹಚ್ಚುವ ಮಹಿಳೆಯರು ಆರ್ಥಿಕ ತೊಂದರೆ ಎಂದು ಹೇಳಿದರೆ ಅವರಿಗೆ ‘ಮುಂಗಡ ಹಣ’ ಕೊಡುತ್ತಾರೆ. ಆ ಹಣದ ಮೌಲ್ಯಕ್ಕೆ ಬೇಕಾಗುವಷ್ಟು ಪತ್ರಾವಳಿಯ ಕಟ್ಟನ್ನು ಮರುವಾರಕೊಟ್ಟು ಸಾಲ ತೆಗೆದುಕೊಂಡವರು ಋಣಮುಕ್ತರಾಗುತ್ತಾರೆ.

ಸಂಪೂರ್ಣ ಮಾನವ ಶ್ರಮದಲ್ಲಿ ತಯಾರಾಗುವ ಮುತ್ತುಗದ ಎಲೆಗಳು ಉಣ್ಣುವವರ ಆರೋಗ್ಯಕ್ಕೆ ಹಿತವಾಗುತ್ತವೆ. ಹಾಗೆಯೇ, ಪತ್ರಾವಳಿ ತಯಾರಿಸುವ ಬಡಹೆಣ್ಣುಮಕ್ಕಳ ಹೊಟ್ಟೆ ತುಂಬಿಸುತ್ತದೆ. ಇದು ಅಪ್ಪಟ ಪರಿಸರ ಸ್ನೇಹಿ. ಏಕೆಂದರೆ, ಉಂಡು ಬಿಸಾಡಿದ ಪತ್ರಾವಳಿ ಕಳಿತು ಗೊಬ್ಬರವಾಗಿ ಭೂಮಿಯನ್ನು ಫಲವತ್ತಾಗಿಸುತ್ತದೆ. ಮಣ್ಣಿನಲ್ಲಿ ಕರಗಲು ನೂರಾರು ವರ್ಷ ತೆಗೆದುಕೊಳ್ಳುವ ಪ್ಲಾಸ್ಟಿಕ್ ತಟ್ಟೆಗಳ ಬದಲು ಇಂಥ ಪತ್ರಾವಳಿಗಳನ್ನು ಬಳಸಿ, ಇಂಥ ಮಹಿಳೆಯರಿಗೂ ನೆರವಾಬಹುಬುದಲ್ಲವೇ ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)