ಬುಧವಾರ, ನವೆಂಬರ್ 13, 2019
22 °C

ಆರ್ಥಿಕ ಬಿಕ್ಕಟ್ಟು, ತಿನ್ನದಿರಿ ಪೆಟ್ಟು

Published:
Updated:
Prajavani

ಆರ್ಥಿಕ ಹಿಂಜರಿತದ ಸಮಯದಲ್ಲಿ ಹಣಕಾಸು ನಿರ್ವಹಣೆಗೆ ಅತಿ ಹೆಚ್ಚು ಒತ್ತು ನೀಡುವುದು ಅವಶ್ಯಕ . ಇಲ್ಲವಾದರೆ ‘ಬರಗಾಲದಲ್ಲಿ ಅಧಿಕ ಮಾಸ’ ಎಂಬಂತಹ ಸ್ಥಿತಿ ಬಂದುಬಿಡುತ್ತದೆ. ಆರ್ಥಿಕತೆ ಮಂದಗತಿಯಲ್ಲಿದ್ದಾಗ ಹಣಕಾಸು, ಹೂಡಿಕೆ, ಲಾಭ ಗಳಿಕೆ ವಿಚಾರಗಳಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು. ಮುಂದಾಲೋಚನೆ ಇಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡರೆ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಆರ್ಥಿಕ ಹಿಂಜರಿತ ಇರುವಾಗ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ.

ಸಾಲ ಬೇಕೆ ಬೇಡವೇ ಯೋಚಿಸಿ ನಿರ್ಧರಿಸಿ: ಆರ್ಥಿಕತೆ ಸರಿಯಾದ ದಿಕ್ಕಿನಲ್ಲಿದ್ದಾಗ ಗೃಹ, ವಾಹನ ಅಥವಾ ಇನ್ಯಾವುದೇ ರೀತಿಯ ಸಾಲ ತೆಗೆದುಕೊಂಡರೆ ಅಡ್ಡಿಯಿಲ್ಲ. ಆದರೆ, ಆರ್ಥಿಕ ಪ್ರಗತಿ ಕುಂಠಿತವಾದಾಗ ಹೊಸದಾಗಿ ಸಾಲ ಮಾಡುವಾಗ ಮುಂದಾಲೋಚನೆ ಬಹಳ ಮುಖ್ಯ. ಮುಗ್ಗಟ್ಟಿನ ಸಮಯದಲ್ಲಿ ಉದ್ಯೋಗ ಸೃಷ್ಟಿಗೆ ಪೆಟ್ಟು ಬೀಳುವ ಜತೆಗೆ, ಉದ್ಯೋಗ ಕಡಿತವೂ ಆಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೂ ಈ ಬಿಸಿ ತಟ್ಟಿದರೆ ಆರ್ಥಿಕ ತುರ್ತು ಎದುರಾಗುತ್ತದೆ. ಆಗ ನಿಮ್ಮ ಉಳಿತಾಯದ ಹಣವನ್ನೆಲ್ಲಾ ಸಾಲ ಮರುಪಾವತಿಗೆ ತೊಡಗಿಸಬೇಕಾಗುತದೆ.

ಸಾಲ ಖಾತರಿಗೆ ಸಹಿ; ದುಡುಕಬೇಡಿ: ಆರ್ಥಿಕ ಹಿಂಜರಿತ ಇರುವಾಗ ಬೇರೆಯವರ ಸಾಲಕ್ಕೆ ಖಾತರಿ ಸಹಿ ಹಾಕಲು ಹೋಗಬೇಡಿ. ಸಾಲ ಪಡೆದವರು ಅದನ್ನು ಮರುಪಾವತಿ ಮಾಡದಿದ್ದರೆ ಸಂಕಷ್ಟದ ಸಮಯದಲ್ಲಿ ನೀವು ಅದನ್ನು ಮರುಪಾವತಿ ಮಾಡಬೇಕಾಗಿ ಬರುತ್ತದೆ.

ಆರ್ಥಿಕತೆ ನಿಧಾನಗತಿಯಲ್ಲಿದ್ದಾಗ ಉದ್ಯೋಗ ಕಡಿತವಾಗುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ನೀವು ಸಾಲದ ಖಾತರಿ ಸಹಿ ಹಾಕಿರುವ ವ್ಯಕ್ತಿಯೂ ಉದ್ಯೋಗ ಕಳೆದುಕೊಂಡರೆ ಆ ಸಾಲದ ಹೊರೆ ಅನಗತ್ಯವಾಗಿ ನಿಮ್ಮ ಮೇಲೆ ಬರುತ್ತದೆ. ಆತ್ಮೀಯ ಸ್ನೇಹಿತರು, ಸಂಬಂಧಿಕರು ಸಾಲದ ಖಾತರಿ ಪತ್ರಕ್ಕೆ ಸಹಿ ಹಾಕುವಂತೆ ಕೇಳಬಹುದು. ಆಗಲೂ ಕೂಡ ಅಳೆದು ತೂಗಿ ನಿಮಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯ ಎನ್ನುವುದಾದರೆ ಮಾತ್ರ ಸಹಿ ಹಾಕಿ.

ತುರ್ತು ಅಲ್ಲದ ಅಗತ್ಯ ಮುಂದೂಡಿ: ನೀವು ಒಂದೆರಡು ವರ್ಷದ ಹಿಂದೆ ಫ್ಲ್ಯಾಟ್ ಖರೀದಿಸಿದ್ದು ಈ ವರ್ಷ ಉಳಿತಾಯದ ದುಡ್ಡಲ್ಲಿ ಒಳಾಂಗಣ ವಿನ್ಯಾಸ ಮಾಡುವ ಬಗ್ಗೆ ಯೋಚಿಸುತ್ತಿರಬಹುದು. ಆದರೆ, ಇಂತಹ ತುರ್ತು ಅಲ್ಲದ ಕೆಲಸಗಳನ್ನು ಸಾಧ್ಯವಾದಷ್ಟು ಮುಂದೂಡಿ. ಹೀಗೆ ಮಾಡಿದಾಗ ಉದ್ಯೋಗ ಕಡಿತ, ವೇತನ ಕಡಿತದಂತಹ ಸಮಸ್ಯೆಗಳಿಂದ ಉಂಟಾಗುವ ನಗದು ಕೊರತೆಯನ್ನು ನೀವು ಸಾಧ್ಯವಾಗುವಷ್ಟರ ಮಟ್ಟಿಗೆ ತಗ್ಗಿಸಬಹುದು.

ಸುರಕ್ಷಿತ ಹೂಡಿಕೆಗಳತ್ತ ಗಮನವಿರಲಿ: ಆರ್ಥಿಕ ಹಿಂಜರಿಕೆ ಇರುವಾಗ ಸುರಕ್ಷಿತ ಹಣಕಾಸು ಸಾಧನಗಳಲ್ಲಿ ಮಾತ್ರ ಹೂಡಿಕೆ ಮಾಡಿ. ಅಪಾಯ ಹೆಚ್ಚಿರುವ ಕಡೆ ಹೂಡಿಕೆ ಮಾಡಬೇಕಾದರೆ ಏರಿಳಿತಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮ್ಮಲ್ಲಿದೆಯೇ ಎನ್ನಿವುದನ್ನು ಪ್ರಶ್ನಿಸಿಕೊಂಡು ಮುನ್ನಡೆಯಿರಿ. ಹಣ ದುಪ್ಪಟ್ಟು ಮಾಡುವ ಸ್ಕೀಂಗಳು, ವಿಪರೀತ ಬಡ್ಡಿ ಲಾಭ ನೀಡುವುದಾಗಿ ಹೇಳುವ ಕಂಪನಿಗಳನ್ನು ನಂಬಬೇಡಿ.

ಉದ್ಯೋಗದಾತರ ವಿಶ್ವಾಸ ಉಳಿಸಿಕೊಳ್ಳಿ: ಸಂಕಷ್ಟದ ಕಾಲದಲ್ಲಿ ದೊಡ್ಡ ದೊಡ್ಡ ಕಂಪನಿಗಳೇ ಆರ್ಥಿಕ ಒತ್ತಡಕ್ಕೆ ಸಿಲುಕುತ್ತವೆ. ಈ ವೇಳೆ ಉದ್ಯೋಗ ಕಡಿತ, ಸೌಲಭ್ಯ ಕಡಿತ, ಬೋನಸ್ ಕಡಿತದಂತಹ ನಿರ್ಧಾರಗಳು ನಿರೀಕ್ಷಿತ. ಪ್ರತಿಕೂಲ ಪರಿಸ್ಥಿತಿಯಲ್ಲೂ ನೀವು ಪ್ರಸ್ತುತರಾಗಬೇಕಾದರೆ ಸಣ್ಣಪುಟ್ಟ ಅನನುಕೂಲಗಳ ಜತೆ ಹೊಂದಾಣಿಕೆ ಮಾಡಿಕೊಂಡು ಕಂಪನಿಯ ಏಳ್ಗೆಗೆ ಶ್ರಮಿಸಿ. ಹೀಗೆ ಮಾಡಿದಾಗ ಕಂಪನಿಯು ನಿಮ್ಮ ಪ್ರಾಮಾಣಿಕ ಪ್ರಯತ್ನವನ್ನು ಕಡೆಗಣಿಸುವ ಸಾಧ್ಯತೆ ಕಡಿಮೆ ಇರುತ್ತದೆ.

ಉತ್ತೇಜನಾ ಕ್ರಮ: ಸ್ಪಂದಿಸಿದ ಪೇಟೆ

ಎರಡು ವಾರಗಳಿಂದ ನಿರಂತರ ಕುಸಿತ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಮತ್ತೆ ಚೇತರಿಕೆಯ ಹಾದಿಗೆ ಮರಳಿವೆ. ನಿಧಾನಗತಿಯಲ್ಲಿ ಸಾಗಿರುವ ಆರ್ಥಿಕತೆಗೆ ಬಲ ತುಂಬಲು ಕೇಂದ್ರ ಸರ್ಕಾರ ಉತ್ತೇಜನಾ ಕ್ರಮಗಳನ್ನು ಘೋಷಿಸಿದ ಪರಿಣಾಮ ಪೇಟೆಯಲ್ಲಿ ಉತ್ಸಾಹ ಕಂಡುಬಂದಿದೆ. 37,332 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.72 ರಷ್ಟು ಏರಿಕೆ ದಾಖಲಿಸಿದೆ. ನಿಫ್ಟಿ (50 ) ಸಹ ಶೇ 1.79 ರಷ್ಟು ಏರಿಕೆ ಕಂಡು 11,023 ಅಂಶಗಳಲ್ಲಿ ವಹಿವಾಟು ಮುಗಿಸಿದೆ.

ವಲಯವಾರು: ‘ನಿಫ್ಟಿ’ ವಲಯವಾರು ಪ್ರಗತಿಯಲ್ಲಿ ರಿಯಲ್ ಎಸ್ಟೇಟ್, ಫಾರ್ಮಾ ಹಾಗೂ ಎಫ್‌ಎಂಸಿಜಿ ವಲಯಗಳು ಕ್ರಮವಾಗಿ ಶೇ 9.26, ಶೇ 3.75 ಮತ್ತು ಶೇ 3.54 ರಷ್ಟು ಏರಿಕೆ ಕಂಡು ಮುಂಚೂಣಿಯಲ್ಲಿವೆ.

ಗಳಿಕೆ: ನಿಫ್ಟಿ (50) ಯಲ್ಲಿ ಬ್ರಿಟಾನಿಯಾ ಶೇ 9.60, ಬಿಪಿಸಿಎಲ್ ಶೇ 7.92, ಜೀ ಎಂಟರ್‌ಟೇನ್‌ಮೆಂಟ್ ಶೇ 6.92, ಇಂಡಸ್ ಇಂಡ್ ಬ್ಯಾಂಕ್ ಶೇ 6.65, ಐಷರ್ ಮೋಟರ್ಸ್ ಶೇ 5.70, ಸನ್ ಫಾರ್ಮಾ ಶೇ 5.69 ಬಜಾಜ್ ಫೈನಾನ್ಸ್ ಶೇ 4.95, ಟಾಟಾ ಮೋಟರ್ಸ್ ಶೇ 4.91, ಅಲ್ಟ್ರಾಟೆಕ್ ಸಿಮೆಂಟ್ ಶೇ 4.74 ರಷ್ಟು ಗಳಿಸಿಕೊಂಡಿವೆ.

ಇಳಿಕೆ: ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ (3.37), ಹೀರೊ ಮೋಟೊ ಕಾರ್ಪ್ (3.14), ಏರ್‌ಟೆಲ್ (-2.69), ಕೋಟಕ್ (2.40), ಮಾರುಕಿ ಸುಜುಕಿ (2.33), ರಿಲಯನ್ಸ್ (1.79) ಮತ್ತು ಕೋಲ್ ಇಂಡಿಯಾ (1.76)ರಷ್ಟು ಇಳಿಕೆ ಕಂಡಿವೆ.

ನೆಸ್ಲೆ ಇಂಡಿಯಾ ಸೇರ್ಪಡೆ: ಸೆಪ್ಟೆಂಬರ್ 27 ರಿಂದ ನಿಫ್ಟಿ (50) ಪಟ್ಟಿಗೆ ಎಫ್‌ಎಂಸಿಜಿ ಕಂಪನಿ ನೆಸ್ಲೆ ಇಂಡಿಯಾ ಸೇರ್ಪಡೆಗೊಳ್ಳಲಿದೆ. ನೆಸ್ಲೆ ಸೇರ್ಪಡೆ ಹಿನ್ನೆಲೆಯಲ್ಲಿ 2 ವರ್ಷಗಳಿಂದ ನಿಫ್ಟಿ (50) ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಹೊರಬೀಳಲಿದೆ.

ವಾರದ ಬೆಳವಣಿಗಳು: ಹತ್ತು ಸರ್ಕಾರಿ ಬ್ಯಾಂಕ್‌ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಸಜ್ಜು, ಜಿಡಿಪಿ ದರ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ (ಶೇ 5), ಆಗಸ್ಟ್‌ನಲ್ಲಿ ಕಾರು ಮಾರಾಟ ಕುಂಠಿತ, ಸರ್ಕಾರದ ಬೊಕ್ಕಸಕ್ಕೆ ಆರ್‌ಬಿಐ ನಿಂದ ₹ 1.76 ಲಕ್ಷ ಕೋಟಿ ಹೆಚ್ಚುವರಿ ನಿಧಿ ವರ್ಗಾವಣೆ.

ಮುನ್ನೋಟ: ತಯಾರಿಕಾ ಸೂಚ್ಯಂಕ (ಪಿಎಂಐ), ತಯಾರಿಕಾ ವಲಯದ ಪ್ರಮುಖ ಎಂಟು ಕೈಗಾರಿಕೆಗಳ ಪ್ರಗತಿ ದತ್ತಾಂಶ, ಪಾವತಿ ಸಮತೋಲನ ಮಾಹಿತಿ, ಚಾಲ್ತಿ ಖಾತೆ ದತ್ತಾಂಶ ಸೇರಿ ಪ್ರಮುಖ ಅಂಕಿ-ಅಂಶಗಳು ಈ ವಾರ ಹೊರಬೀಳಲಿವೆ. ಈ ಎಲ್ಲಾ ಅಂಶಗಳು ಪೇಟೆಯ ಚಲನೆ ನಿರ್ಧರಿಸಲಿವೆ. ಇದರ ಜತೆಗೆ, ಜಿಡಿಪಿ ದರ ಕುಸಿತ ಸಹ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿದೆ. ಕಳೆದ ವಾರ ಮಧ್ಯಮ ಕ್ರಮಾಂಕದ ಷೇರುಗಳ ಖರೀದಿಯಲ್ಲಿ ಉತ್ಸಾಹ ಕಂಡುಬಂದಿದೆ. ಪ್ರಸ್ತುತ ವಾರ ಆಯ್ದ ಉತ್ತಮ ಕಂಪನಿಗಳಲ್ಲಿ ಖರೀದಿಸುವ ಬಗ್ಗೆ ಹೂಡಿಕೆದಾರರು ಗಮನಹರಿಸಿದರೆ ಅನುಕೂಲ.

(ಲೇಖಕ, ’ಇಂಡಿಯನ್‌ಮನಿಡಾಟ್‌ಕಾಂ’ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರತಿಕ್ರಿಯಿಸಿ (+)