ಸರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ

7
5 ತಿಂಗಳಲ್ಲಿ ದಿನದ ವಹಿವಾಟಿನಲ್ಲಿ ಸೂಚ್ಯಂಕದ ಗರಿಷ್ಠ ಏರಿಕೆ

ಸರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಕರಡಿ ಕುಣಿತಕ್ಕೆ ಅವಕಾಶ ಕೊಡದೆ, ಸತತ ಆರನೇ ವಾರದಲ್ಲಿಯೂ ಗೂಳಿ ಅತಿ ವೇಗದಿಂದ ಓಡುತ್ತಿದೆ. ಇದರಿಂದ ದಿನವೂ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) ಸೋಮವಾರ 442 ಅಂಶಗಳಷ್ಟು ಜಿಗಿತ ಕಂಡು ಸರ್ವಕಾಲಿಕ ಗರಿಷ್ಠ ಮಟ್ಟವಾದ 38,694 ರಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 134 ಅಂಶ ಹೆಚ್ಚಾಗಿ 11,691 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಐದು ತಿಂಗಳಲ್ಲಿ ದಿನದ ವಹಿವಾಟೊಂದರಲ್ಲಿ ಸೂಚ್ಯಂಕಗಳ ಗರಿಷ್ಠ ಏರಿಕೆ ಇದಾಗಿದೆ.

ಬ್ಯಾಂಕಿಂಗ್‌, ವಿದ್ಯುತ್‌ ಮತ್ತು ಲೋಹ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು.

ಅಮೆರಿಕದ ಆರ್ಥಿಕತೆಯ ಹಿತರಕ್ಷಣೆ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಹಂತ ಹಂತವಾಗಿ ಬಡ್ಡಿದರ ಏರಿಕೆ ಮಾಡುವುದೇ ಒಳಿತು ಎಂದು ಅಮೆರಿಕದ ಫೆಡರಲ್‌ ರಿಸರ್ವ್‌ನ ಅಧ್ಯಕ್ಷ ಜೆರೋಮ್‌ ಪಾವೆಲ್‌ ಹೇಳಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ವಹಿವಾಟಿಗೆ ಉತ್ತೇಜನ ನೀಡಿದೆ.

ಕರೆನ್ಸಿ ‘ಯುವಾನ್‌‘ ಸ್ಥಿರಗೊಳಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾ ಘೋಷಿಸಿದೆ. ಇದು ಸಹ ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಸ್ಪಂದನೆಗೆ ಕಾರಣವಾಯಿತು ಎಂದು ತಜ್ಞರು ಹೇಳಿದ್ದಾರೆ.

ಶುಕ್ರವಾರದ ವಹಿವಾಟಿನಲ್ಲಿ ಅಮೆರಿಕದ ಎಸ್‌ಆ್ಯಂಡ್‌ಪಿ 500 ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಇದು ಸೋಮವಾರ ಜಾಗತಿಕ ಷೇರುಪೇಟೆಗಳಲ್ಲಿ ಉತ್ತಮ ಚಟುವಟಿಕೆಗೆ ನೆರವಾಯಿತು.

ದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಖರೀದಿಸುತ್ತಿರುವುದು ಹಾಗೂ ವಿದೇಶಿ ಬಂಡವಾಳ ಒಳಹರಿವು ಹೆಚ್ಚಾಗುತ್ತಿರುವುದು ಸೂಚ್ಯಂಕವನ್ನು ಏರಿಕೆ ಕಾಣುವಂತೆ ಮಾಡಿವೆ.

ರಿಯಲ್‌ ಎಸ್ಟೇಟ್‌ ಹೊರತುಪಡಿಸಿ ಉಳಿದೆಲ್ಲಾ ವಲಯಗಳಲ್ಲಿಯೂ ಉತ್ತಮ ಖರೀದಿ ವಹಿವಾಟು ನಡೆಯಿತು.

ಭಾರ್ತಿ ಏರ್‌ಟೆಲ್‌ ಷೇರು ಶೇ 3.64 ರಷ್ಟು ಗರಿಷ್ಠ ಏರಿಕೆ ಕಂಡರೆ, ಸನ್‌ ಫಾರ್ಮಾ ಷೇರು ಶೇ 1.25 ರಷ್ಟು ಇಳಿಕೆಯಾಗಿದೆ.

ಹೂಡಿಕೆ ವಿವರ

* ₹ 905 ಕೋಟಿ – ಶುಕ್ರವಾರದ ದೇಶಿ ಸಾಂಸ್ಥಿಕ ಹೂಡಿಕೆ

* ₹ 76 ಕೋಟಿ – ಶುಕ್ರವಾರ ವಿದೇಶಿ ಬಂಡವಾಳ ಹೊರಹರಿವು

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !